Rama Navami: ಬದುಕಿನ ಯಶಸ್ಸಿನಿಂದ ಮನೆಯ ನೆಮ್ಮದಿವರೆಗೆ; ಶ್ರೀರಾಮನನ್ನು ಪೂಜಿಸುವುದರಿಂದ ಸಿಗುವ ಫಲಾಫಲಗಳಿವು
ಭಗವಾನ್ ವಿಷ್ಣುವಿನ ಏಳನೇ ಅವತಾರವಾದ ಶ್ರೀರಾಮನನ್ನು ಪೂಜಿಸುವುದರಿಂದ ಸಾಮಾನ್ಯ ಜನರ ಜೀವನದಲ್ಲಿರುವ ಕಷ್ಟಗಳು ಪರಿಹಾರವಾಗುತ್ತವೆ ಎಂಬ ನಂಬಿಕೆಯಿದೆ. ರಾಮನನ್ನು ಆರೋಗ್ಯ ವೃದ್ಧಿಸಲು, ಜೀವನದಲ್ಲಿ ಯಶಸ್ಸು ಗಳಿಸಲು, ಒತ್ತಡ, ಆತಂಕಗಳನ್ನು ದೂರಮಾಡಿಕೊಳ್ಳಲು ಪೂಜಿಸಲಾಗುತ್ತದೆ. ರಾಮನನ್ನು ಭಕ್ತಿಭಾವದಿಂದ ಪೂಜಿಸುವುದರಿಂದ ಸಿಗುವ ಲಾಭಗಳೇನು ಇಲ್ಲಿದೆ ಓದಿ.

ಹಿಂದೂ ಧರ್ಮದಲ್ಲಿ ಹಲವು ದೇವರುಗಳನ್ನು ಪೂಜಿಸಲಾಗುತ್ತದೆ. ಅವುಗಳಲ್ಲಿ ಶ್ರೀರಾಮನು ಪ್ರಮುಖನಾಗಿದ್ದಾನೆ. ರಾಮ ಭಕ್ತರಿಗೆ ರಾಮ ನವಮಿ ಬಹಳ ಮುಖ್ಯವಾದ ಹಬ್ಬ. ಶ್ರೀರಾಮನು ಅವನ ಆದರ್ಶಗಳಿಂದಲೇ ಜನರ ಮನಸ್ಸಿನಲ್ಲಿ ನೆಲೆಸಿರುವ ದೇವರು. ಅನಾದಿ ಕಾಲದಿಂದಲೂ ಶ್ರೀರಾಮನ ಆದರ್ಶಗಳು ಜನಪ್ರಿಯ. ಶ್ರೀರಾಮನನ್ನು ಪೂಜಿಸುವುದರಿಂದ ಎಲ್ಲಾ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ನಂಬಿಕೆ ಇದೆ. ಧೈರ್ಯ ಸಾಹಸದ ಜೊತೆಗೆ ಕರುಣೆ, ಪ್ರೀತಿ, ಜಗತ್ತಿನ ಎಲ್ಲಾ ಜೀವಿಗಳನ್ನು ಗೌರವಿಸುವ ಗುಣವನ್ನು ಭಗವಾನ್ ರಾಮನಲ್ಲಿ ಎಲ್ಲರೂ ಕಾಣಬಹುದಾಗಿದೆ. ಇದನ್ನು ರಾಮಯಣವನ್ನು ಓದುವುದರ ಮೂಲಕ ತಿಳಿದುಕೊಳ್ಳಬಹುದು. ರಾಮ ನವಮಿಯಂದು ಶ್ರೀರಾಮನನ್ನು ಶೃದ್ಧಾ ಭಕ್ತಿಯಿಂದ ಪೂಜಿಸಲಾಗುತ್ತದೆ. ಜೊತೆಗೆ ಉಪವಾಸ ವ್ರತಾಚರಣೆಗಳನ್ನು ಮಾಡಲಾಗುತ್ತದೆ. ರಾಮನನ್ನು ಭಕ್ತಿಯಿಂದ ಪೂಜಿಸುವುದರಿಂದ ಅನೇಕ ಲಾಭಗಳನ್ನು ಪಡೆದುಕೊಳ್ಳಬಹುದು. ರಾಮನಾಮ ಭಜಿಸುವುದರಿಂದಲೇ ಅದೆಷ್ಟೋ ಕಷ್ಟಗಳು ಪರಿಹಾರವಾಗುತ್ತವೆ. ಶ್ರೀರಾಮ ಜಯರಾಮ ಜಯ ಜಯ ರಾಮ ಎನ್ನುವುದು ಶಾಂತಿ ಮಂತ್ರವಾಗಿದೆ. ಶ್ರೀರಾಮನನ್ನು ಪೂಜಿಸುವುದರಿಂದ ಜೀವನದಲ್ಲಿ ಹಲವು ಧನಾತ್ಮಕ ಬದಲಾವಣೆಗಳನ್ನು ಕಾಣಬಹುದು.
ಶ್ರೀರಾಮನನ್ನು ಶ್ರದ್ಧಾ–ಭಕ್ತಿಯಿಂದ ಪೂಜಿಸುವುದರಿಂದ ಹಲವು ಲಾಭಗಳಿವೆ. ಅಂತಹ ಲಾಭಗಳೇನು ತಿಳಿಯೋಣ.
* ರಾಮನ ಪೂಜೆ ಮಾಡುವುದರಿಂದ ಕುಟುಂಬದಲ್ಲಿ ಪ್ರೀತಿ ಮತ್ತು ಸಾಮರಸ್ಯ ತುಂಬಿರುತ್ತದೆ. ಕುಟುಂಬದ ಎಲ್ಲ ಸದಸ್ಯರ ಮೇಲೂ ತನ್ನ ಆಶೀರ್ವಾದವನ್ನು ರಾಮನು ಕರುಣಿಸುತ್ತಾನೆ ಎಂಬ ನಂಬಿಕೆ ಇದೆ.
* ಶ್ರೀರಾಮನ ಪೂಜೆ ಮಾಡುವುದರಿಂದ ಶಕ್ತಿ, ಬುದ್ಧಿವಂತಿಕೆ ಹೆಚ್ಚಾಗುತ್ತದೆ. ಅದರಲ್ಲೂ ವಿದ್ಯಾರ್ಥಿಗಳಿಗೆ ಬೇಕಾದ ಏಕಾಗ್ರತಾ ಶಕ್ತಿ ಹೆಚ್ಚುತ್ತದೆ.
* ಪ್ರತಿನಿತ್ಯ ರಾಮನನ್ನು ಪೂಜಿಸುವುದರಿಂದ ಮನಸ್ಸಿನ ಆತಂಕಗಳು ದೂರವಾಗಿ, ಧನಾತ್ಮಕ ರೀತಿಯಲ್ಲಿ ಯಶಸ್ಸಿನ ಹಾದಿಯಲ್ಲಿ ಭಕ್ತರನ್ನು ಮುನ್ನಡೆಯುವಂತಾಗುತ್ತದೆ. ಋಣಾತ್ಮಕ ಯೋಚನೆಗಳನ್ನು ದೂರಮಾಡಿ, ಆತ್ಮಸ್ಥೈರ್ಯ ಹೆಚ್ಚಿಸುತ್ತದೆ.
* ರಾಮನನ್ನು ಪೂಜಿಸುವುದರಿಂದ ಅವನ ಅನುಗ್ರಹಕ್ಕೆ ಪಾತ್ರರಾಗುತ್ತಾರೆ. ಆ ಮೂಲಕ ಜೀವನದಲ್ಲಿನ ದುರ್ಗಣಗಳು ದೂರವಾಗಿ ಸತ್ಯ ಮಾರ್ಗದಲ್ಲಿ ನಡೆಯುವಂತೆ ಮಾಡುತ್ತದೆ.
* ಶ್ರೀರಾಮನ ಕೃಪೆಯಿಂದ ಅವನಂತೆಯೇ ಸೌಮ್ಯ ಸ್ವಭಾವ ಅವನ ಭಕ್ತರದ್ದಾಗುತ್ತದೆ. ಛಲ, ಆತ್ಮವಿಶ್ವಾಸ ಹೆಚ್ಚುತ್ತದೆ.
* ರಾಮನನ್ನು ಪೂಜಿಸುವುದರಿಂದ ಆಧ್ಯಾತ್ಮಿಕವಾಗಿ ಪರಿಪೂರ್ಣರಾಗುತ್ತಾರೆ. ಯಾವುದೇ ಆತಂಕ, ಒತ್ತಡ, ಖಿನ್ನತೆಗಳು ಅವರ ಹತ್ತಿರ ಸುಳಿಯಲೂ ಬಿಡುವುದಿಲ್ಲ ಎನ್ನಲಾಗುತ್ತದೆ.
* ಶಾಂತ ಮೂರ್ತಿಯಾದ ರಾಮನನ್ನು ಪೂಜಿಸುವುದರಿಂದ ಕೋಪ ನಿವಾರಣೆಯಾಗಿ ಮನಸ್ಸಿನ ಶಾಂತಿ ಹೆಚ್ಚುತ್ತದೆ. ರಾಮನಂತೆ ಜಗತ್ತಿನ ಎಲ್ಲಾ ಜೀವಿಗಳನ್ನು ಗೌರವಿಸುವ ಭಾವ ಮೂಡುತ್ತದೆ.
* ರಾಮನನ್ನು ಪೂಜಿಸುವುದರಿಂದ ಕಷ್ಟಗಳು ದೂರವಾಗಿ ಜೀವನದಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ.
