ಕನ್ನಡ ಸುದ್ದಿ  /  Astrology  /  Spiritual News Ramadan 2024 What Is Zakat Importance Of Zakat In Ramadan Significance Muslim Religion Smu

Ramadan 2024: ಬಡವರ ಸಂಕಷ್ಟಕ್ಕೆ ಅಭಯ ಒದಗಿಸುವ ʼಜಕಾತ್ʼ, ರಂಜಾನ್‌ ಮಾಸದಲ್ಲಿ ದಾನ ಮಾಡುವುದರ ಮಹತ್ವ ತಿಳಿಯಿರಿ

ಮುಸ್ಮಿಮರ ಪವಿತ್ರ ಹಬ್ಬಗಳಲ್ಲಿ ರಂಜಾನ್‌ ಕೂಡ ಒಂದು. ಇದನ್ನು ಪವಿತ್ರ ಮಾಸ ಎಂದು ಪರಿಗಣಿಸುವ ಮುಸ್ಮಿಮರು ಈ ತಿಂಗಳಲ್ಲಿ ಉಪವಾಸ ವ್ರತ ಕೈಗೊಳ್ಳುತ್ತಾರೆ. ರಂಜಾನ್‌ನಲ್ಲಿ ಜಕಾತ್‌ ಮಹತ್ವವೇನು, ಇದನ್ನು ಆಚರಿಸುವ ಉದ್ದೇಶವೇನು ತಿಳಿಯಿರಿ. (ಬರಹ: ಸಮೀವುಲ್ಲಾ ಉಸ್ತಾದ, ವಿಜಯಪುರ)

ಬಡವರ ಸಂಕಷ್ಟಕ್ಕೆ ಅಭಯ ಒದಗಿಸುವ ʼಜಕಾತ್ʼ
ಬಡವರ ಸಂಕಷ್ಟಕ್ಕೆ ಅಭಯ ಒದಗಿಸುವ ʼಜಕಾತ್ʼ

ರಂಜಾನ್ ಮುಸ್ಲಿಮರ ಪವಿತ್ರ ಮಾಸ. ಪವಿತ್ರ ರೋಜಾ (ಉಪವಾಸ), ಅಲ್ಲಾಹುವಿನ ಸ್ಮರಣೆ ಹಾಗೂ ರಾತ್ರಿ ಸಮಯದಲ್ಲಿ ಪವಿತ್ರ ಕುರಾನ್ ಶ್ಲೋಕಗಳುಳ್ಳ ವಿಶೇಷ ತರಾವ್ಹಿ ನಮಾಜ್ ಹೀಗೆ ಹಲವಾರು ಧಾರ್ಮಿಕ ಆಚರಣೆಗಳ ಮೂಲಕ ಮುಸ್ಲಿಮರು ರಂಜಾನ್ ಮಾಸವನ್ನು ಆಚರಿಸುತ್ತಾರೆ. ಸ್ಥಿತಿವಂತ ಮುಸ್ಲಿಮರಿಗೆ ಕಡ್ಡಾಯ ಕರ್ತವ್ಯವಾಗಿರುವ ಬಡವರಿಗೆ ಸಹಾಯ ಹಸ್ತ ನೀಡುವ ಜಕಾತ್ ಕರ್ತವ್ಯವನ್ನು ಇದೇ ಮಾಸದಲ್ಲಿ ಕೈಗೊಳ್ಳುವುದು ರೂಢಿ. ಏನಿದು ಜಕಾತ್‌?ಇದರ ಮಹತ್ವ, ಆಚರಣೆಯ ಉದ್ದೇಶ ತಿಳಿಯಿರಿ.

ಏನಿದು ಜಕಾತ್‌?

ಇಸ್ಲಾಂ ಧರ್ಮದ ಐದು ಆಧಾರ ಸ್ತಂಭಗಳಲ್ಲಿ ʼಜಕಾತ್' ಸಹ ಒಂದು. ಸ್ಥಿತಿವಂತ ಮುಸ್ಲಿಂರಿಗೆ ಮಾತ್ರ ಕಡ್ಡಾಯವಾಗಿರುವ ಈ ನಿಯಮ ಮಾನವೀಯತೆಗೆ ಇನ್ನೊಂದು ಹೆಸರಾಗಿದೆ. ಸ್ಥಿತಿವಂತರಲ್ಲದ ಮುಸ್ಲಿಮರಿಗೆ ಒಬ್ಬ ಕುಟುಂಬ ಸದಸ್ಯನಂತೆ ಸಹಾಯ ಮಾಡುವುದು, ಅಂದರೆ ದುಡಿಮೆಯ ಒಂದಿಷ್ಟು ಭಾಗವನ್ನು ಸ್ಥಿತಿವಂತರಲ್ಲದ ಮುಸ್ಲಿಂರಿಗೆ ನೀಡುವುದೇ ಜಕಾತ್. ಇದು ಪ್ರತಿಯೊಬ್ಬ ಸ್ಥಿತಿವಂತ ಮುಸ್ಲಿಮರ ಕಡ್ಡಾಯ ಕರ್ತವ್ಯ. ಕಷ್ಟದಲ್ಲಿರುವವರಿಗೆ ಸ್ಪಂದನೆ ಮಾಡುವುದೇ ಜಕಾತ್‌ನ ಮೂಲ ಉದ್ದೇಶವಾಗಿದೆ. ಹಂಚಿ ತಿನ್ನುವ ಮನೋಭಾವವನ್ನು ಜಕಾತ್ ಕಲಿಸುತ್ತದೆ.

ಯಾರೊಬ್ಬರೂ ಹಸಿವೆಯಿಂದ ಮಲಗಬಾರದು, ಯಾರೂ ಸಹ ನೋವು ಅನುಭವಿಸಬಾರದು. ದೇವ ಕರುಣಿಸಿದ ಸಂಪತ್ತು ಇತರರಿಗೂ ಹಂಚಬೇಕು, ಅನೇಕ ಬಡವರಿಗೆ, ವಿಶೇಷಚೇತನರಿಗೆ, ಆರೋಗ್ಯ ಸಮಸ್ಯೆ ಎದುರಿಸುವವರಿಗೆ ದುಡಿಯಲು ಸಾಧ್ಯವಾಗುವುದಿಲ್ಲ. ಅವರಿಗೂ ಸಹ ಜಕಾತ್ ಮೂಲಕ ನೆರವು ನೀಡಲೆಂದೇ ಜಕಾತ್‌ಗೆ ಧಾರ್ಮಿಕ ಕರ್ತವ್ಯದ ಮೊಹರನ್ನು ಇಸ್ಲಾಂ ಧರ್ಮ ನೀಡಿದೆ.

ಜಕಾತ್ ಇಸ್ಲಾಮಿಕ್ ಸಿದ್ಧಾಂತದ ಪ್ರಮುಖ ವ್ಯವಸ್ಥೆಯಾಗಿರುವುದರಿಂದ ಅದು ಮುಸ್ಲಿಂ ಸಮಾಜದ ಆಧ್ಯಾತ್ಮಿಕ ಮತ್ತು ಸಾಮಾಜಿಕ ಜೀವನದಲ್ಲಿ ಸಕ್ರಿಯ ಪಾತ್ರವನ್ನು ವಹಿಸುತ್ತದೆ. ಜಕಾತ್ ಪಾವತಿಯು ಕಡ್ಡಾಯ. ಮಾತ್ರವಲ್ಲದೆ ಒಂದು ಸಂಸ್ಥೆ ಮತ್ತು ವ್ಯವಸ್ಥೆಯಾಗಿ ಜಕಾತ್ ಸಮಾಜದ ಸ್ಥಿರತೆಯ ಪ್ರಮುಖ ಮೂಲವಾಗಿದೆ. ಜಕಾತ್ ವ್ಯವಸ್ಥೆಯು ಸಂಪತ್ತಿನ ಸರಿಯಾದ ವಿತರಣೆಯನ್ನು ಖಚಿತಪಡಿಸುತ್ತದೆ ಮತ್ತು ಸಮಾಜದ ಸಂಪೂರ್ಣ ಸ್ಥಾಪನೆಯ ಮೇಲೆ ವ್ಯಾಪಕ ಪರಿಣಾಮ ಬೀರುತ್ತದೆ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಪವಿತ್ರ ಕುರಾನ್‌ ಸಹ ಈ ಜಕಾತ್ ಕರ್ತವ್ಯವನ್ನು ಬಲವಾಗಿ ಪ್ರತಿಪಾದಿಸಿದೆ. `ದಾನವನ್ನು ಅನುಸರಿಸುವುದು ನಿಜವಾದ ವಿಶ್ವಾಸಿಗಳ ಮತ್ತು ದೇವಭಯವುಳ್ಳವರು' ಎಂದು ಪವಿತ್ರ ಕುರಾನ್‌ ವಾಣಿಯಲ್ಲಿ ಉಲ್ಲೇಖಿಸಲಾಗಿದೆ.

ಜಕಾತ್ ಎನ್ನುವುದು ʼನಿಸಾಬ್ʼ ಎಂದು ಕರೆಯಲ್ಪಡುವ ನಿರ್ದಿಷ್ಟ ಪ್ರಮಾಣದ ಸಂಪತ್ತಿನ ಮಾಲೀಕರಾಗುವ ಪ್ರತಿಯೊಬ್ಬ ಮುಸಲ್ಮಾನನ ಮೇಲೆ ಅಲ್ಲಾಹನು ಅತ್ಯುನ್ನತವಾಗಿ ವಿಧಿಸಿದ ಬಾಧ್ಯತೆಯಾಗಿದೆ. ಒಬ್ಬನ ಸಂಪತ್ತು ಸಮಾನವಾಗಿದ್ದರೆ ಅಥವಾ ಈ ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚಿದ್ದರೆ, ಜಕಾತ್ ಅವನ ಮೇಲೆ ಕಡ್ಡಾಯವಾಗುತ್ತದೆ. ಈ ನಿಸಾಬ್ ನಗದು, ಚಿನ್ನ, ಬೆಳ್ಳಿ, ಸರಕು ಇತ್ಯಾದಿಗಳಲ್ಲಿ 612 ಗ್ರಾಂ ಬೆಳ್ಳಿ ಅಥವಾ 87.48 ಗ್ರಾಂ ಚಿನ್ನಕ್ಕೆ ಸಮಾನವಾಗಿದೆ. ಝಕಾತ್ ಆದಾಯ ಮತ್ತು ಆಸ್ತಿಯ ಮೌಲ್ಯವನ್ನು ಆಧರಿಸಿದೆ. ಅರ್ಹತೆ ಪಡೆದವರಿಗೆ ಸಾಮಾನ್ಯ ಕನಿಷ್ಠ ಮೊತ್ತವು ಮುಸ್ಲಿಮರ ಒಟ್ಟು ಉಳಿತಾಯ ಮತ್ತು ಸಂಪತ್ತಿನ ಶೇ 2.5 ರಷ್ಟು ಆಗಿದೆ.

ಪ್ರತಿಯೊಬ್ಬ ಮುಸ್ಲಿಮರು ಈ ಲೆಕ್ಕಾಚಾರಕ್ಕೆ ಅನುಗುಣವಾಗಿ ತನ್ನ ಸಂಪತ್ತಿನ ಶೇ 2.5 ರಷ್ಟು ಲೆಕ್ಕಾಚಾರ ಮಾಡಿ ಕಷ್ಟದಲ್ಲಿರುವವ ಮುಸ್ಲಿಂರಿಗೆ ಒದಗಿಸಬೇಕು, ಪವಿತ್ರ ರಮಜಾನ್ ಮಾಸದಲ್ಲಿಯೇ ಈ ಕಾರ್ಯವನ್ನು ಕೈಗೊಳ್ಳಬೇಕು. ಹೀಗಾಗಿ ದೇವರು ನೀಡಿದ ಸಂಪತ್ತು ಎಲ್ಲರಿಗೂ ದಕ್ಕಲ್ಲಿ, ಯಾರಿಗೂ ತೊಂದರೆ ಇರದಿರಲಿ ಎಂಬುವುದೇ ಜಕಾತ್ ಆಶಯ.

(This copy first appeared in Hindustan Times Kannada website. To read more like this please logon to kannada.hindustantimes.com)