ರಾಮನಲ್ಲ, ಶಿವಧನಸ್ಸು ಮುರಿದಿದ್ದು ಲಕ್ಷ್ಮಣ; ಲಂಬಾಣಿ ರಾಮಾಯಣ ಹೇಳುವ ಕಥೆಯಿದು; ಅರುಣ್ ಜೋಳದಕೂಡ್ಲಿಗಿ ಬರಹ
ಲಂಬಾಣಿಗಳ ರಾಮಾಯಣದ ಪ್ರಕಾರ ಲಕ್ಷ್ಮಣನೇ ರಾಮಾಯಣಕ್ಕೆ ನಾಯಕ. ಶಿವಧನಸ್ಸು ಮುರಿಯವುದು ಕೂಡ ಲಕ್ಷ್ಮಣ. ಕರ್ನಾಟಕ ವಿವಿ ಪ್ರಕಟಿಸಿರುವ ʼಲಂಬಾಣಿ ರಾಮಾಯಣʼ ಕೃತಿಯ ಬಗ್ಗೆ ಅರುಣ್ ಜೋಳದಕೂಡ್ಲಿಗಿ ಬರಹ ಇಲ್ಲಿದೆ.
ಹಿಂದೂ ಮಹಾಕಾವ್ಯಗಳಲ್ಲಿ ರಾಮಾಯಣಕ್ಕೆ ಅಗ್ರಸ್ಥಾನವಿದೆ. ಮುನ್ನೂರಕ್ಕೂ ಹೆಚ್ಚು ರಾಮಾಯಣಗಳು ಪ್ರಸ್ತುತವಿವೆ. ಮೂಲ ರಾಮಾಯಣವನ್ನು ವಾಲ್ಮೀಕಿ ಮಹರ್ಷಿಗಳು ಬರೆದಿದ್ದಾರೆ ಎನ್ನಲಾಗುತ್ತದೆ. ಆದರೆ ಒಂದೊಂದು ಕಡೆ ಒಂದೊಂದು ರೀತಿಯ ರಾಮಾಯಣ ಕಥೆಗಳನ್ನು ನಾವು ಕೇಳುತ್ತೇವೆ. ಲಂಬಾಣಿಗರು ತಮ್ಮ ಹಾಡಿನ ಮೂಲಕ ಹೇಳುವ ರಾಮಾಯಣದ ಕಥೆಯಲ್ಲಿ ನಾಯಕ ರಾಮನಲ್ಲ, ಬದಲಿಗೆ ಲಕ್ಷ್ಮಣ ರಾಮಾಯಣ ನಾಯಕ. ಈ ಬಗ್ಗೆ ಅರುಣ್ ಜೋಳದಕೂಡ್ಲಿಗಿ ಬರಹ ಇಲ್ಲಿದೆ.
ಅರುಣ್ ಜೋಳದಕೂಡ್ಲಿಗಿ ಬರಹ
ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಕೆಲವು ಗಮನ ಸೆಳೆಯುವ ಪುಸ್ತಕಗಳನ್ನು ಪ್ರಕಟಿಸಿದೆ. ವಿವಿ ಪ್ರಕಟಣೆಯ ʼಲಂಬಾಣಿ ರಾಮಾಯಣʼ ಕೃತಿಯನ್ನು ಗಮನಿಸಿದೆ. ಎ.ಕೆ.ರಾಮಾನುಜನ್ ಮುನ್ನೂರು ರಾಮಾಯಣಗಳು ಲೇಖನದಲ್ಲಿ ಉಲ್ಲೇಖಿಸುವ ಕತೆಯಲ್ಲಿ ರಾಮನ ಮುದ್ರೆ ಕಳಚಿ ಪಾತಾಳಕ್ಕೆ ಬೀಳುತ್ತದೆ. ಅದನ್ನು ತರಲು ಹನುಮ ಬರುತ್ತಾನೆ. ಪಾತಾಳ ರಾಜ ಸಾವಿರಾರು ಉಂಗುರಗಳಿರುವ ಪಾತ್ರೆಯನ್ನು ಹನುಮನಿಗೆ ತೋರಿಸುತ್ತಾನೆ. ಅವೆಲ್ಲಾ ರಾಮನ ಮುದ್ರೆಗಳೇ. ಆಗ ಪಾತಾಳ ರಾಜ ಹೇಳುತ್ತಾನೆ ಇಲ್ಲಿ ಎಷ್ಟು ಉಂಗುರಗಳಿವೆಯೋ ಅಷ್ಟು ರಾಮರು ಇದ್ದಾರೆ. ಅಷ್ಟು ರಾಮರ ಕತೆಗಳಿವೆ' ಎನ್ನುತ್ತಾನೆ. ಹೀಗೆ ಭಾರತದ ಬುಡಕಟ್ಟುಗಳು ತಮ್ಮದೇ ರಾಮಾಯಣಗಳನ್ನು ಕಟ್ಟಿಕೊಂಡಿವೆ.
ಗದಗ ತಾಲೂಕಿನ ಬೆಳದಡಿ ತಾಂಡದ ಕೃಷ್ಣಪ್ಪ ಶಂಕ್ರಪ್ಪ ಪೂಜಾರ ಹಾಡಿದ ʼಲಂಬಾಣಿ ರಾಮಾಯಣʼ ವನ್ನು ಪ್ರೊ.ಡಿ.ಬಿ.ನಾಯಕ ಮತ್ತು ಡಾ.ಹರಿಲಾಲ ಪವಾರ್ ಸಂಪಾದನೆ ಮಾಡಿದ್ದಾರೆ. ಲಂಬಾಣಿ ಸಮುದಾಯ ಕಟ್ಟಿಕೊಂಡ ಈ ರಾಮಾಯಣವೂ ಹಲವು ಕಾರಣಗಳಿಗೆ ವಿಶಿಷ್ಠವಾಗಿದೆ. ಇಲ್ಲಿ ಲಕ್ಷ್ಮಣನೇ ಒಂದರ್ಥದಲ್ಲಿ ನಾಯಕ. ಲಕ್ಷ್ಮಣ ಶಿವಧನಸ್ಸು ಮುರಿದು ತಾನು ಗೆದ್ದ ಸೀತೆಯನ್ನು ಅಣ್ಣ ರಾಮನಿಗೆ ಬಿಟ್ಟುಕೊಡುತ್ತಾನೆ. ಇಲ್ಲಿ ಸೀತೆ ಕಪ್ಪೆರಾಣಿಯ ಮಗಳು. ಸೀತೆ ವನವಾಸದಲ್ಲಿ ಹೆರಿಗೆ ಆಗುವುದು ಲಂಬಾಣಿ ಸಮುದಾಯದ ಗೋಮಲಿಬಾಯಿ, ಪೇಮಲಿಬಾಯಿ ಮತ್ತು ಸೋಮಲಿಬಾಯಿ ಅವರ ಡೇರೆಯಲ್ಲಿ. ಇವರೇ ಹೆರಿಗೆ ಮಾಡಿಸಿಕೊಳ್ಳುತ್ತಾರೆ. ಹೀಗೆ ಹತ್ತಾರು ವಿಶಿಷ್ಟ ಸಂಗತಿಗಳು ಲಂಬಾಣಿ ರಾಮಾಯಣದಲ್ಲಿವೆ. ಆಸಕ್ತರು ಗಮನಿಸಿ.
ಪ್ರಕಟಣೆ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯ
ಇದನ್ನೂ ಓದಿ
ವಿರಹವೇ ರಾಮಾಯಣದ ಸ್ಥಾಯಿ, ಅದಕ್ಕೆ ಅದು ಮಹಾಕಾವ್ಯ: ಪುರುಷೋತ್ತಮ ಬಿಳಿಮಲೆ ಬರಹ
ದಂಡಕಾರಣ್ಯದಲ್ಲಿ ಸೀತೆಯನ್ನು ಕಳಕೊಂಡ ರಾಮ ಆಕೆಯನ್ನು ಹುಡುಕುತ್ತಾ ಹೋಗಿ ಹಂಸ, ಚಿಗುರು, ತಾವರೆ, ದುಂಬಿಗಳನ್ನ ನೀವು ಸೀತೆಯನ್ನು ಕಂಡಿರೇ? ಎಂದು ಕೇಳುತ್ತಾ ಮುಂದುವರಿಯುತ್ತಾನೆ. ಪುರುಷೋತ್ತಮ ಬಿಳಿಮಲೆ ಅವರ ಬರಹ ಓದಿ.