ಭಾದ್ರಪದ ಮಾಸ ಆರಂಭ; ಗಣೇಶ ಚತುರ್ಥಿಯಿಂದ ಈದ್ ಮಿಲಾದ್‌ವರೆಗೆ, ಈ ತಿಂಗಳಲ್ಲಿ ಬರುವ ಪ್ರಮುಖ ಹಬ್ಬ, ಆಚರಣೆಗಳ ಮಾಹಿತಿ ಇಲ್ಲಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಾದ್ರಪದ ಮಾಸ ಆರಂಭ; ಗಣೇಶ ಚತುರ್ಥಿಯಿಂದ ಈದ್ ಮಿಲಾದ್‌ವರೆಗೆ, ಈ ತಿಂಗಳಲ್ಲಿ ಬರುವ ಪ್ರಮುಖ ಹಬ್ಬ, ಆಚರಣೆಗಳ ಮಾಹಿತಿ ಇಲ್ಲಿದೆ

ಭಾದ್ರಪದ ಮಾಸ ಆರಂಭ; ಗಣೇಶ ಚತುರ್ಥಿಯಿಂದ ಈದ್ ಮಿಲಾದ್‌ವರೆಗೆ, ಈ ತಿಂಗಳಲ್ಲಿ ಬರುವ ಪ್ರಮುಖ ಹಬ್ಬ, ಆಚರಣೆಗಳ ಮಾಹಿತಿ ಇಲ್ಲಿದೆ

ಹಿಂದೂ ಧರ್ಮದಲ್ಲಿ ಪ್ರತಿ ಮಾಸಗಳಿಗೂ ಬಹಳ ಪ್ರಾಮುಖ್ಯವಿದೆ. ಈ ಮಾಸಗಳಲ್ಲಿ ಭಾದ್ರಪದ ಮಾಸವೂ ಒಂದು. ಶ್ರಾವಣ ಮುಗಿದು ಇಂದಿನಿಂದ (ಸೆಪ್ಟೆಂಬರ್ 3) ಭಾದ್ರಪದ ಮಾಸ ಆರಂಭವಾಗಿದ್ದು ಈ ತಿಂಗಳಲ್ಲಿ ಬರುವ ಪ್ರಮುಖ ಹಬ್ಬಗಳು, ಆಚರಣೆಗಳ ಪಟ್ಟಿ ಇಲ್ಲಿದೆ.

ಭಾದ್ರಪದ ಮಾಸದಲ್ಲಿ ಬರುವ ಹಬ್ಬ, ಆಚರಣೆಗಳು
ಭಾದ್ರಪದ ಮಾಸದಲ್ಲಿ ಬರುವ ಹಬ್ಬ, ಆಚರಣೆಗಳು

ಹಿಂದೂ ಕ್ಯಾಲೆಂಡರ್‌ನಲ್ಲಿ ಭಾದ್ರಪದ ಮಾಸ ಎಂದರೆ ಆರನೇ ತಿಂಗಳು. ಶ್ರಾವಣ ಮಾಸದ ನಂತರ ಬರುವುದು ಭಾದ್ರಪದ ಮಾಸ. ಈ ತಿಂಗಳು ಹಲವು ಕಾರಣಗಳಿಂದ ಪ್ರಾಮುಖ್ಯ ಪಡೆದಿದೆ. ಭಾದ್ರಪದ ಮಾಸದಲ್ಲಿ ಹಲವು ವಿಶೇಷ ಆಚರಣೆಗಳು, ಹಬ್ಬಗಳು ಬರುತ್ತವೆ. ಮುಸ್ಲಿಂರ ಪವಿತ್ರ ಆಚರಣೆಗಳಲ್ಲಿ ಒಂದಾದ ಈದ್ ಮಿಲಾದ್ ಕೂಡ ಈ ತಿಂಗಳಲ್ಲೇ ಬರುತ್ತದೆ. ಗಣೇಶ ಚತುರ್ಥಿ, ಅನಂತ ಚತುದರ್ಶಿ, ಪಿತೃಪಕ್ಷ ಆರಂಭವಾಗುವುದು ಈ ಮಾಸದಲ್ಲೇ.

2024ರಲ್ಲಿ ಸೆಪ್ಟಂಬರ್ 3 ರಿಂದ ಭಾದ್ರಪದ ಮಾಸ ಆರಂಭವಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಈ ಮಾಸದಲ್ಲಿ ಸೂರ್ಯನು ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. ಹಾಗಾದರೆ ಭಾದ್ರಪದ ಮಾಸದಲ್ಲಿ ಬರುವ ಪ್ರಮುಖ ಆಚರಣೆಗಳ ಬಗ್ಗೆ ತಿಳಿಯೋಣ.

ಭಾದ್ರಪದ ಮಾಸದ ಪ್ರಮುಖ ಹಬ್ಬ, ಆಚರಣೆಗಳು 

ಗಣೇಶ ಚತುರ್ಥಿ, ಸೆಪ್ಟೆಂಬರ್‌ 7: ಈ ವರ್ಷ ಭಾದ್ರಪದ ಮಾಸದಲ್ಲಿ ಬರುವ ಮೊದಲ ಪ್ರಮುಖ ಹಬ್ಬ ಗಣೇಶ ಚತುರ್ಥಿ. ಸೆಪ್ಟೆಂಬರ್ 7 ರಂದು ಗಣೇಶನ ಹಬ್ಬವಿದ್ದು, ಅದಕ್ಕೂ ಮುನ್ನ ದಿನ ಅಂದರೆ ಸೆಪ್ಟೆಂಬರ್ 6 ರಂದು ಗೌರಿ ಹಬ್ಬವಿದೆ. ಗಣೇಶ ಚತುರ್ಥಿ ಭಾರತದಲ್ಲಿ ನಡೆಯುವ ಪ್ರಮುಖ ಹಬ್ಬಗಳಲ್ಲಿ ಒಂದು. ಇದು ಸುಮಾರು 10 ದಿನಗಳ ಕಾಲ ನಡೆಯುವ ಆಚರಣೆ.

ಪರಿವರ್ತಿನಿ ಏಕಾದಶಿ, 14 ಸೆಪ್ಟೆಂಬರ್: ಹಿಂದೂಗಳಲ್ಲಿ ಪ್ರತಿ ತಿಂಗಳು ಬರುವ ಏಕಾದಶಿಗೆ ವಿಶೇಷ ಪ್ರಾಮುಖ್ಯವಿದೆ. ಏಕಾದಶಿಯು ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿದೆ. ಈ ದಿನ ಉಪವಾಸ, ವೃತ ಮಾಡುವ ಮೂಲಕ ಆಚರಿಸಲಾಗುತ್ತದೆ.

ಈದ್‌ಮಿಲಾದ್‌, ಸೆಪ್ಟೆಂಬರ್ 16: ಭಾದ್ರಪದ ಮಾಸದಲ್ಲಿ ಹಿಂದೂಗಳ ಹಬ್ಬ ಮಾತ್ರವಲ್ಲ, ಮುಸ್ಲಿಂರ ಪವಿತ್ರ ಆಚರಣೆಯಾದ ಈದ್ ಮಿಲಾದ್ ಕೂಡ ಬರುತ್ತದೆ. ಸೆಪ್ಟೆಂಬರ್ 16 ರಂದು ಈದ್ ಮಿಲಾದ್ ಇದೆ. ಪ್ರವಾದಿ ಮುಹಮ್ಮದ್ (ಸ) ರವರ ನೆನಪಿಗಾಗಿ ಈದ್-ಎ-ಮಿಲಾದ್-ಉನ್-ನಬಿ ಆಚರಿಸಲಾಗುತ್ತದೆ. ‌

ಅನಂತ ಚತುರ್ದಶಿ, ಸೆಪ್ಟೆಂಬರ್ 17: ಗಣೇಶ ಚತುರ್ಥಿಯ ಕೊನೆಯ ದಿನ, ಅಂದರೆ 10 ದಿನಗಳ ಆಚರಣೆಯ ಗಣೇಶ ಹಬ್ಬದ ಅಂತ್ಯವನ್ನು ಸೂಚಿಸುವ ದಿನವಿದು. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ದಶಿ ತಿಥಿಯನ್ನು ಅನಂತ ಚತುರ್ದಶಿ ಎಂದು ಹೇಳಲಾಗುತ್ತದೆ. ಆ ದಿನ ಅನಂತ ಪದ್ಮನಾಭ ವ್ರತವನ್ನು ಆಚರಿಸಲಾಗುತ್ತದೆ .

ಪಿತೃಪಕ್ಷ, ಸೆಪ್ಟೆಂಬರ್‌ 17: ಸತ್ತವರಿಗೆ ಪಿಂಡದಾನ ಮಾಡುವ ಪದ್ಧತಿ ಹಿಂದೂಗಳಲ್ಲಿ ವಿಶೇಷ. ಪಿತೃಪಕ್ಷವನ್ನು ವಿಶೇಷವಾಗಿ ಪಿಂಡದಾನಕ್ಕೆ ಸಮರ್ಪಿಸಲಾಗಿದೆ. ಈ ವರ್ಷ ಸೆಪ್ಟೆಂಬರ್ 17 ರಿಂದ ಪಿತೃಪಕ್ಷ ಆರಂಭವಾಗುತ್ತದೆ.

ಭಾದ್ರಪದ ಹುಣ್ಣಿಮೆ ಸೆಪ್ಟೆಂಬರ್ 18: ಭಾದ್ರಪದ ಮಾಸದಲ್ಲಿ ಬರುವ ಹುಣ್ಣಿಮೆಗೆ ವಿಶೇಷ ಪ್ರಾಧಾನ್ಯವಿದೆ.ಈ ದಿನ ಕೆಲವರು ಉಪವಾಸ ಮಾಡುತ್ತಾರೆ. ಆ ಮೂಲಕ ದೇವರನ್ನು ಭಜಿಸುತ್ತಾರೆ.

ಇದಲ್ಲದೇ ಭಾದ್ರಪದ ಮಾಸದಲ್ಲಿ ಬಲರಾಮ ಜಯಂತಿ, ಧನ್ವಂತರಿ ಜಯಂತಿ, ವರಾಹ ಜಯಂತಿ, ರಿಷಿ ಪಂಚಮಿ, ವಾಮನ ಜಯಂತಿಯಂತಹ ವಿಶೇಷ ದಿನಗಳೂ ಇವೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.