Konark Sun Temple: ಒಡಿಶಾದ ಕೋನಾರ್ಕ್ ದೇಗುಲದ ಬಗ್ಗೆ ನೀವು ತಿಳಿಯಬೇಕಾದ ಕುತೂಹಲಕಾರಿ ಸಂಗತಿಗಳಿವು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Konark Sun Temple: ಒಡಿಶಾದ ಕೋನಾರ್ಕ್ ದೇಗುಲದ ಬಗ್ಗೆ ನೀವು ತಿಳಿಯಬೇಕಾದ ಕುತೂಹಲಕಾರಿ ಸಂಗತಿಗಳಿವು

Konark Sun Temple: ಒಡಿಶಾದ ಕೋನಾರ್ಕ್ ದೇಗುಲದ ಬಗ್ಗೆ ನೀವು ತಿಳಿಯಬೇಕಾದ ಕುತೂಹಲಕಾರಿ ಸಂಗತಿಗಳಿವು

ಒಡಿಶಾದ ಪುರಿ ಜಿಲ್ಲೆಯ ಕೋನಾರ್ಕ್ ಪಟ್ಟಣದಲ್ಲಿರುವ ಕೋನಾರ್ಕ್ ಸೂರ್ಯ ದೇವಾಲಯ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದ್ದು, ಅದರ ಸೊಗಸಾದ ವಾಸ್ತುಶಿಲ್ಪ ಮತ್ತು ಸಂಕೀರ್ಣವಾದ ಕಲ್ಲಿನ ಕೆತ್ತನೆಗಳಿಗೆ ಹೆಸರುವಾಸಿಯಾಗಿದೆ. ವಾಸ್ತುಶಿಲ್ಪಕ್ಕೆ ಸಂಬಂಧಿಸಿದಂತೆ ಇದು ಭಾರತದ ಅತ್ಯಂತ ಪ್ರಭಾವಶಾಲಿ ದೇವಾಲಯಗಳಲ್ಲಿ ಒಂದಾಗಿದೆ.

ಒಡಿಶಾದ ಕೋನಾರ್ಕ್ ಸೂರ್ಯ ದೇವಾಲಯದ ಕುರಿತು ಪ್ರತಿಯೊಬ್ಬರು ತಿಳಿಯಬೇಕಾದ ಆಸಕ್ತಿದಾಯಕ ವಿಚಾರಗಳಿವು
ಒಡಿಶಾದ ಕೋನಾರ್ಕ್ ಸೂರ್ಯ ದೇವಾಲಯದ ಕುರಿತು ಪ್ರತಿಯೊಬ್ಬರು ತಿಳಿಯಬೇಕಾದ ಆಸಕ್ತಿದಾಯಕ ವಿಚಾರಗಳಿವು

ವಿಶ್ವದಾದ್ಯಂತ ತನ್ನ ಸಂಸ್ಕೃತಿ, ವಿಭಿನ್ನ ಆಚಾರ ವಿಚಾರ, ಸಂಪ್ರದಾಯಗಳಿಗೆ ಹೆಸರುವಾಸಿಯಾಗಿರುವ ದೇಶ ಭಾರತ. ದೇಗುಲಗಳ ಬೀಡು ಎಂದೇ ಕರೆಸಿಕೊಳ್ಳುವ ಭಾರತದ ಉದ್ದಗಲಕ್ಕೂ ಹಿಂದೂ ದೇವತೆಗಳಾದ ಶಿವ, ವಿಷ್ಣು, ದುರ್ಗಾದೇವಿ, ರಾಮ, ಸುಬ್ರಹ್ಮಣ್ಯ, ಗಣಪತಿ, ನಾಗದೇವರು, ಆಂಜನೇಯನಿಗೆ ದೇವಾಲಯಗಳು ಕಾಣಸಿಗುತ್ತವೆ. ಆದರೆ, ಸೂರ್ಯದೇವನಿಗೆ ಅರ್ಪಿತವಾದ ದೇವಾಲಯಗಳು ಭಾರತದಲ್ಲಿ ಇರುವುದು ಬೆರಳೆಣಿಕೆಯಷ್ಟು ಮಾತ್ರ. ಒಡಿಶಾದ ಪುರಿ ಜಿಲ್ಲೆಯ ಕೋನಾರ್ಕ್ ಪಟ್ಟಣದಲ್ಲಿರುವ ಕೋನಾರ್ಕ್ ಸೂರ್ಯ ದೇವಾಲಯವು ಭಾರತದ ಈ ಕೆಲವು ಸೂರ್ಯ ದೇವಾಲಯಗಳಲ್ಲಿ ಒಂದಾಗಿದೆ. ಒಡಿಶಾದ ಪುರಿಯಲ್ಲಿ ಭಾರತದ ಪೂರ್ವ ಕರಾವಳಿಯಲ್ಲಿರುವ ಈ ದೇವಾಲಯವು ರಾಜಧಾನಿ ಭುವನೇಶ್ವರದಿಂದ ಸುಮಾರು 65 ಕಿ.ಮೀ ದೂರದಲ್ಲಿದೆ.

ಜಾಗತಿಕ ಪ್ರಾಮುಖ್ಯತೆಯ ಪಾರಂಪರಿಕ ತಾಣ

ಕೋನಾರ್ಕ್ ಸೂರ್ಯ ದೇವಾಲಯವು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದ್ದು, ಅದರ ಸೊಗಸಾದ ವಾಸ್ತುಶಿಲ್ಪ ಮತ್ತು ಸಂಕೀರ್ಣವಾದ ಕಲ್ಲಿನ ಕೆತ್ತನೆಗಳಿಗೆ ಹೆಸರುವಾಸಿಯಾಗಿದೆ. ವಾಸ್ತುಶಿಲ್ಪಕ್ಕೆ ಸಂಬಂಧಿಸಿದಂತೆ ಇದು ಭಾರತದ ಅತ್ಯಂತ ಪ್ರಭಾವಶಾಲಿ ದೇವಾಲಯಗಳಲ್ಲಿ ಒಂದಾಗಿದೆ.

ಈ ದೇವಾಲಯವನ್ನು ಗಂಗಾ ರಾಜಮನೆತನದ ರಾಜ ನರಸಿಂಹದೇವ 1238-1250 ರ ಸುಮಾರಿಗೆ ಅಭಿವೃದ್ಧಿಪಡಿಸಿದ ಎಂಬುದು ಇತಿಹಾಸಗಳಲ್ಲಿ ಉಲ್ಲೇಖಗೊಂಡಿದೆ. ಶ್ರೀ ಕೃಷ್ಣನ ಪುತ್ರ ಸಾಂಬ ಕೋನಾರ್ಕ್‌ನ ಸೂರ್ಯ ದೇವಾಲಯವನ್ನು ಸೂರ್ಯನಿಗೆ ಗೌರವ ಸಲ್ಲಿಸಲು ನಿರ್ಮಿಸಿದ ಎಂಬುದು ಐತಿಹ್ಯ ಹಾಗೂ ಪುರಾಣಗಳಿಂದ ಬಂದಿರುವ ನಂಬಿಕೆ.

ಸೂರ್ಯ ದೇವಾಲಯಗಳು ಭಾರತದಲ್ಲಿನ ಇತರ ದೇವಾಲಯಗಳಂತೆ ಜನಪ್ರಿಯವಾಗಿಲ್ಲ. ಆದರೆ ಅವು ಹೆಚ್ಚಿನ ಸಾಂಸ್ಕೃತಿಕ ಮತ್ತು ಧಾರ್ಮಿಕ ಮಹತ್ವವನ್ನು ಹೊಂದಿವೆ. ಒಡಿಶಾದ ಕೋನಾರ್ಕ್ ಸೂರ್ಯ ದೇವಾಲಯ, ಗುಜರಾತ್‌ನ ಮೊಧೇರಾ ಸೂರ್ಯ ದೇವಾಲಯ ಮತ್ತು ಕಾಶ್ಮೀರದ ಮಾರ್ತಾಂಡ್ ಸೂರ್ಯ ದೇವಾಲಯ ಭಾರತದಲ್ಲಿನ ಕೆಲವು ಪ್ರಮುಖ ಸೂರ್ಯ ದೇವಾಲಯಗಳಾಗಿವೆ.

ಕಣ್ಮನ ಸೆಳೆಯುವ ವಾಸ್ತುಶಿಲ್ಪ

ಇಡೀ ಕೋನಾರ್ಕ್ ದೇವಾಲಯದ ವಿನ್ಯಾಸ ಸೂರ್ಯನ ರಥದ ರೂಪದಲ್ಲಿ ರಚನೆಯಾಗಿದೆ. ಅಂದವಾಗಿ ಕೆತ್ತಲಾದ ಚಕ್ರಗಳು ಮತ್ತು ನಾಗಾಲೋಟದ ಕುದುರೆಗಳನ್ನು ಹೊಂದಿದೆ. ದೇವಾಲಯದ ವಾಸ್ತುಶಿಲ್ಪವು ಕಳಿಂಗ ಶೈಲಿಯ ವಾಸ್ತುಶಿಲ್ಪಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ದೇವಾಲಯವು ಹಿಂದೂ ಪುರಾಣಗಳ ದೃಶ್ಯಗಳನ್ನು ಚಿತ್ರಿಸುವ ವಿಸ್ತಾರವಾದ ಕಲ್ಲಿನ ಕೆತ್ತನೆಗಳನ್ನು ಸಹ ಒಳಗೊಂಡಿದೆ. ದೇವಾಲಯದಲ್ಲಿ ಬಳಕೆ ಮಾಡಲಾಗಿರುವ 52 ಟನ್ ತೂಕದ ಅಯಸ್ಕಾಂತದ ಅನನ್ಯ ವ್ಯವಸ್ಥೆಯ ಮೂಲಕ ದೇವಾಲಯದಲ್ಲಿರುವ ಮುಖ್ಯ ವಿಗ್ರಹ ತೇಲುವಂತೆ ಮಾಡಲಾಗಿದ್ದು ಮತ್ತೊಂದು ವಿಶೇಷ.

ಕೋನಾರ್ಕ್‌ನಲ್ಲಿ ಖಗೋಳಶಾಸ್ತ್ರಕ್ಕೆ ಪ್ರಾಶಸ್ತ್ಯ

ಸೂರ್ಯನ ಮೊದಲ ಕಿರಣಗಳು ದೇವಾಲಯದ ಮುಖ್ಯ ದ್ವಾರದ ಮೇಲೆ ಬೀಳುವಂತಿದೆ. ಈ ದೇವಾಲಯದ ಪ್ರಮುಖ ಆಕರ್ಷಣೆ ಎಂದರೆ ಅದು ಜಗತ್ತಿನ ಅತಿ ದೊಡ್ಡ, ಗಡಿಯಾರವನ್ನು ಹೋಲುವ ನೆರಳಿನ ಗಡಿಯಾರ (ಸನ್ ಡಯಲ್). ಹೌದು 12 ಜೊತೆ ಚಕ್ರಗಳನ್ನು ಹೊಂದಿರುವ ಈ ನೆರಳಿನ ಗಡಿಯಾರ (ಸನ್ ಡಯಲ್) ಇಂದಿಗೂ ಸಮಯವನ್ನು ನಿಖರವಾಗಿ ಹೇಳುತ್ತದೆ.

(This copy first appeared in Hindustan Times Kannada website. To read more like this please logon to kannada.hindustantimes.com )

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.