ಸಾವಿನ ಭಯ ದೂರಾಗಿ, ಶಿವನ ಕೃಪೆಗೆ ಪಾತ್ರರಾಗಲು ಮಹಾ ಮೃತ್ಯುಂಜಯ ಮಂತ್ರ ಪಠಿಸಿ; ಮಂತ್ರ ಹೇಳುವ ಮುನ್ನ ಈ ಕ್ರಮ ಪಾಲಿಸಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸಾವಿನ ಭಯ ದೂರಾಗಿ, ಶಿವನ ಕೃಪೆಗೆ ಪಾತ್ರರಾಗಲು ಮಹಾ ಮೃತ್ಯುಂಜಯ ಮಂತ್ರ ಪಠಿಸಿ; ಮಂತ್ರ ಹೇಳುವ ಮುನ್ನ ಈ ಕ್ರಮ ಪಾಲಿಸಿ

ಸಾವಿನ ಭಯ ದೂರಾಗಿ, ಶಿವನ ಕೃಪೆಗೆ ಪಾತ್ರರಾಗಲು ಮಹಾ ಮೃತ್ಯುಂಜಯ ಮಂತ್ರ ಪಠಿಸಿ; ಮಂತ್ರ ಹೇಳುವ ಮುನ್ನ ಈ ಕ್ರಮ ಪಾಲಿಸಿ

ಮಹಾಶಿವನ ಆಶೀರ್ವಾದ ಪಡೆಯಲು ಹಾಗೂ ಸಾವಿನ ಭಯದಿಂದ ದೂರವಿರಲು ಮಹಾ ಮೃತ್ಯುಂಜಯ ಮಂತ್ರವು ಬಹಳ ಪ್ರಬಲವಾಗಿದೆ. ಹಿಂದೂ ಧರ್ಮಶಾಸ್ತ್ರಗಳ ಪ್ರಕಾರ ಅತ್ಯಂತ ಶಕ್ತಿಶಾಲಿ ಮಂತ್ರಗಳಲ್ಲಿ ಈ ಮಂತ್ರವು ಒಂದಾಗಿದೆ. ಇದನ್ನು ಯಾವಾಗ, ಹೇಗೆ ಪಠಿಸಬೇಕು ಎಂಬುದನ್ನು ತಿಳಿಯಿರಿ.

ಸಾವಿನ ಭಯ ದೂರಾಗಿ, ಶಿವನ ಕೃಪೆಗೆ ಪಾತ್ರರಾಗಲು ಮಹಾ ಮೃತ್ಯುಂಜಯ ಮಂತ್ರ ಪಠಿಸಿ
ಸಾವಿನ ಭಯ ದೂರಾಗಿ, ಶಿವನ ಕೃಪೆಗೆ ಪಾತ್ರರಾಗಲು ಮಹಾ ಮೃತ್ಯುಂಜಯ ಮಂತ್ರ ಪಠಿಸಿ

ಹಿಂದೂ ಧರ್ಮದಲ್ಲಿ ಗಾಯತ್ರಿ ಮಂತ್ರದಷ್ಟೇ ಅತ್ಯಂತ ಶಕ್ತಿಶಾಲಿ ಮತ್ತೊಂದು ಮಂತ್ರವೆಂದರೆ ಮಹಾ ಮೃತ್ಯುಂಜಯ ಮಂತ್ರ. ಇದು ಸಾವಿನ ಭಯವನ್ನು ಹೋಗಲಾಡಿಸುವ ಹಾಗೂ ಮನುಷ್ಯನ ಆಯಸ್ಸನ್ನು ಹೆಚ್ಚಿಸುವ ಮಂತ್ರ ಎನ್ನಲಾಗುತ್ತದೆ. ಈ ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸುವುದರಿಂದ ಶಿವನ ಕೃಪೆಗೆ ಪಾತ್ರರಾಗಬಹುದು.

ಶಿವನು ಸರ್ವಾಂತರ್ಯಾಮಿ. ಅವನು ಶಕ್ತಿ, ಬುದ್ಧಿವಂತಿಕೆ ಮತ್ತು ದೈವಿಕ ಅನುಗ್ರಹದ ಮೂರ್ತರೂಪವೂ ಆಗಿದ್ದಾನೆ. ಇವನನ್ನು ಸರ್ವಶಕ್ತ ಎಂದೂ ಕರೆಯುತ್ತಾರೆ. ಶಿವನಿಗೆ ನಾಶ ಮಾಡುವ ಶಕ್ತಿಯೂ ಇದೆ. ಆದರೆ ಕಾರಣಕ್ಕೆ ಶಿವ ಕೋಪಕ್ಕೆ ಎಂದಿಗೂ ಗುರಿಯಾಗಬಾರದು.

ಪ್ರತಿದಿನ ಮಹಾ ಮೃತ್ಯುಂಜಯ ಮಂತ್ರ ಪಠಿಸುವುದರಿಂದ ಅಕಾಲಿಕ ಮರಣದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು. ಪರಿಪೂರ್ಣ ಆರೋಗ್ಯಕ್ಕೂ ಇದು ಸಹಕಾರಿ. ಪ್ರತಿದಿನ ಮೃತ್ಯುಂಜಯ ಮಂತ್ರವನ್ನು ಪಠಿಸುವುದರಿಂದ ನಾವು ಶಿವನಿಗೆ ಹತ್ತಿರವಾಗುತ್ತೇವೆ. ಇದರಿಂದ ಅವನ ಆಶೀರ್ವಾದ ಸದಾ ನಮ್ಮ ಮೇಲೆ ಇರುತ್ತದೆ ಎಂಬುದು ನಂಬಿಕೆ. ಇದು ಅತ್ಯಂತ ಪವಿತ್ರ ಮತ್ತು ಶಕ್ತಿಯುತ ಮಂತ್ರವಾಗಿದೆ.

ಮಹಾ ಮೃತ್ಯುಂಜಯ ಮಂತ್ರ

"ಓಂ ತ್ರಯಂಬಕಂ ಯಜಾಮಹೇ,

ಸುಗಂಧಿಂ ಪುಷ್ಟಿವರ್ಧನ,

ಉರ್ವಾರುಕಮಿವ ಬಂಧನನ್,

ಮೃತ್ಯೋರ್ ಮುಕ್ಷೀಯ ಮಾಮೃತಾತ್”.

ಈ ಮಂತ್ರವು ಓಂಕಾರದಿಂದ ಪ್ರಾರಂಭವಾಗುತ್ತದೆ. ಅಕಾಲಿಕ ಸಾವಿನಿಂದ ಮುಕ್ತಿ ಪಡೆಯಲು ಈ ಮಂತ್ರವನ್ನು ಪಠಿಸಬೇಕು.

ʼಮುಕ್ಕಣ್ಣನಾದ ನಿನ್ನನ್ನು ನಾವು ಭಕ್ತಿಯಿಂದ ಪೂಜಿಸುತ್ತೇವೆ. ನೀನು ಜಗತ್ತಿನ ಎಲ್ಲಾ ಜೀವಿಗಳ ರಕ್ಷಕ. ನಮ್ಮ ಜೀವನಕ್ಕೆ ಭಕ್ತಿಯ ಪರಿಮಳವನ್ನು ನೀಡು. ಸಾವಿನ ಭಯದಿಂದ ನಮ್ಮನ್ನು ಹೋಗಲಾಡಿಸುʼ ಎಂದು ಶಿವನನ್ನು ಪ್ರಾರ್ಥಿಸಲಾಗುತ್ತದೆ.

ಎಲ್ಲರೂ ಸಾವಿಗೆ ಹೆದರುವುದು ಸಹಜ. ಸಣ್ಣ ಅವಘಡ ಸಂಭವಿಸಿದರೂ ಎಲ್ಲಿ ಸಾಯುತ್ತೇವೋ ಎಂಬ ಭಯದಲ್ಲಿ ನಿತ್ಯ ಬದುಕುತ್ತಿರುತ್ತೇವೆ. ಆ ಭಯವನ್ನು ಹೋಗಲಾಡಿಸಲು ಈ ಮಂತ್ರ ಉಪಯುಕ್ತವಾಗಿದೆ.

ಮಹಾ ಮೃತ್ಯುಂಜಯ ಮಂತ್ರದ ಪ್ರಯೋಜನಗಳು

ಈ ಮಂತ್ರದ ಪಠಣವು ಪ್ರಚಂಡ ಶಕ್ತಿಯನ್ನು ತರುತ್ತದೆ ಎಂದು ನಂಬಲಾಗಿದೆ. ಈ ಮಂತ್ರವು ಭಕ್ತನ ಆಂತರಿಕ ಶಕ್ತಿಯ ಅರ್ಥವನ್ನು ತಿಳಿಸುತ್ತದೆ. ಮಂತ್ರ ಪಠಿಸುವುದರಿಂದ ನಮ್ಮಲ್ಲಿ ಧೈರ್ಯ ಮೂಡುತ್ತದೆ. ಮಾತ್ರವಲ್ಲ ಪ್ರತಿಕೂಲ ಪರಿಸ್ಥಿತಿಯನ್ನು ಜಯಿಸಲು ಶಕ್ತಿ ಮೂಡುತ್ತದೆ. ದೈವಿಕ ಶಕ್ತಿಯನ್ನು ಪ್ರಚೋದಿಸುತ್ತದೆ. ಈ ಮಂತ್ರವು ನಕಾರಾತ್ಮಕ, ದುಷ್ಟ ಶಕ್ತಿಗಳು, ಅಪಘಾತಗಳು ಮತ್ತು ಅನಾರೋಗ್ಯದಿಂದ ನಮ್ಮನ್ನು ರಕ್ಷಿಸುತ್ತದೆ. ಹುಟ್ಟು ಸಾವಿನ ಬಗ್ಗೆ ಸ್ಪಷ್ಟತೆ ಇರುತ್ತದೆ. ಈ ಮಂತ್ರವನ್ನು ಬಹಳ ಭಕ್ತಿಯಿಂದ ಸ್ಪಷ್ಟವಾಗಿ ಪಠಿಸುವುದರಿಂದ ನೀವು ಸಾವಿನ ಭಯವನ್ನು ಹೊಂದಿರುವುದಿಲ್ಲ.

ಈ ಮಂತ್ರವು ಮನಸ್ಸನ್ನು ಶುದ್ಧಗೊಳಿಸುತ್ತದೆ. ಇದು ನಿಮ್ಮನ್ನು ದೈವಿಕ ಅಂಶ ಕಡೆಗೆ ಕರೆದೊಯ್ಯುತ್ತದೆ. ಈ ಮಂತ್ರವನ್ನು ಪಠಿಸುವಾಗ ಅದರಲ್ಲಿರುವ ಪ್ರತಿಯೊಂದು ಶ್ಲೋಕವನ್ನು ಅರ್ಥಮಾಡಿಕೊಳ್ಳಬೇಕು.

ಈ ಮಂತ್ರದ ಅನುರಣನ ಮತ್ತು ಶಕ್ತಿಗಳು ನಿಮ್ಮ ಹಾಗೂ ದೈವಿಕ ಶಕ್ತಿಯ ನಡುವೆ ಸೇತುವೆಯನ್ನು ಸೃಷ್ಟಿಸುತ್ತವೆ. ನಾವು ಜೀವನದ ಬಗ್ಗೆ ಹೆಚ್ಚು ಅರ್ಥಮಾಡಿಕೊಳ್ಳುತ್ತೇವೆ. ಸಾವಿನ ಭಯ ಕಡಿಮೆಯಾಗುತ್ತದೆ. ನೀವು ಅದರ ಶಕ್ತಿಯನ್ನು ಅರ್ಥಮಾಡಿಕೊಂಡಾಗ, ನಿಮ್ಮೊಳಗಿನ ಭಯವು ತಾನಾಗಿಯೇ ದೂರವಾಗುತ್ತದೆ. ಸಾವನ್ನು ನಿರ್ಭಯವಾಗಿ ಮತ್ತು ಸಂತೋಷದಿಂದ ಸ್ವೀಕರಿಸುತ್ತೇವೆ. ಜೊತೆಗೆ ನಾವು ದೇವರಲ್ಲಿ ಒಂದಾಗುತ್ತೇವೆ.

ಯಾವಾಗ ಪಠಿಸಬೇಕು?

ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸುವಾಗ ಮನಸ್ಸು ಶುದ್ಧವಾಗಿರಬೇಕು. ಭಕ್ತಿ ಮತ್ತು ಸರಿಯಾದ ಉಚ್ಚಾರಣೆಯೊಂದಿಗೆ ಜಪಿಸುವುದು ಮುಖ್ಯ. ಬ್ರಾಹ್ಮಿ ಮುಹೂರ್ತದಲ್ಲಿ ಈ ಮಂತ್ರವನ್ನು ಪಠಿಸುವುದು ಉತ್ತಮ. ಬೆಳಗಿನ ಜಾವ ಮೂರರಿಂದ ಐದು ಗಂಟೆಯೊಳಗೆ ಪಠಿಸುವುದರಿಂದ ಮನಸ್ಸು ನಿರಾಳವಾಗುತ್ತದೆ.

ಮನಸ್ಸನ್ನು ಮಂತ್ರದ ಮೇಲೆ ಕೇಂದ್ರೀಕರಿಸಲು ಶಾಂತ ಮತ್ತು ಪ್ರಶಾಂತ ವಾತಾವರಣವನ್ನು ಆರಿಸಿ. ರುದ್ರಾಕ್ಷ ಮಾಲೆಯೊಂದಿಗೆ ಈ ಮಂತ್ರವನ್ನು ಪಠಿಸುವುದರಿಂದ ನೀವು ದೈವಿಕತೆಗೆ ಹತ್ತಿರವಾಗುತ್ತೀರಿ.

(This copy first appeared in Hindustan Times Kannada website. To read more like this please logon to kannada.hindustantimes.com )

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.