Spiritual News: ತುಳಸಿ ಗಿಡಕ್ಕೆ ಈ ದಿನ ನೀರೆರೆದರೆ ಲಕ್ಷ್ಮೀ ದೇವಿಯ ಉಪವಾಸಕ್ಕೆ ಉಂಟಾಗಲಿದೆ ಭಂಗ; ತುಳಸಿ ಪೂಜೆಗೆ ಸೂಕ್ತ ಸಮಯವೇನು?
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Spiritual News: ತುಳಸಿ ಗಿಡಕ್ಕೆ ಈ ದಿನ ನೀರೆರೆದರೆ ಲಕ್ಷ್ಮೀ ದೇವಿಯ ಉಪವಾಸಕ್ಕೆ ಉಂಟಾಗಲಿದೆ ಭಂಗ; ತುಳಸಿ ಪೂಜೆಗೆ ಸೂಕ್ತ ಸಮಯವೇನು?

Spiritual News: ತುಳಸಿ ಗಿಡಕ್ಕೆ ಈ ದಿನ ನೀರೆರೆದರೆ ಲಕ್ಷ್ಮೀ ದೇವಿಯ ಉಪವಾಸಕ್ಕೆ ಉಂಟಾಗಲಿದೆ ಭಂಗ; ತುಳಸಿ ಪೂಜೆಗೆ ಸೂಕ್ತ ಸಮಯವೇನು?

Holy Basil: ತುಳಸಿ ಗಿಡ ಹಿಂದೂಗಳಿಗೆ ಬಹಳ ಪವಿತ್ರವಾದದ್ದು. ತುಳಸಿ ಪೂಜೆ ಮಾಡುವುದು, ನೀರೆರೆಯುವ ವಿಚಾರದಲ್ಲಿ ಸಾಕಷ್ಟು ಶಾಸ್ತ್ರ ಸಂಪ್ರದಾಯಗಳಿವೆ. ಯಾವ ದಿನ ತುಳಸಿ ಗಿಡಕ್ಕೆ ನೀರೆರೆಯಬೇಕು..? ಯಾವ ಲೋಹದಿಂದ ತಯಾರಿಸಿದ ಪಾತ್ರೆಯನ್ನು ತುಳಸಿ ಪೂಜೆಗೆ ಬಳಸಬೇಕು ಎನ್ನುವುದು ನಮಗೆ ಗೊತ್ತಿರಬೇಕು..? ಇವೆಲ್ಲದರ ಬಗ್ಗೆ ಮಾಹಿತಿ ಇಲ್ಲಿದೆ.

ತುಳಸಿ ಪೂಜೆಗೆ ಸೂಕ್ತ ಸಮಯವೇನು?
ತುಳಸಿ ಪೂಜೆಗೆ ಸೂಕ್ತ ಸಮಯವೇನು? (Pc: Unsplash)

Holy Basil: ಸಾಮಾನ್ಯವಾಗಿ ಪ್ರತಿಯೊಬ್ಬ ಹಿಂದೂವಿನ ಮನೆಯಂಗಳದಲ್ಲಿ ತುಳಸಿ ಗಿಡ ಇರುತ್ತದೆ. ಕೆಲವರಿಗೆ ಮನೆ ಎದುರು ತುಳಸಿ ಗಿಡ ನೆಡಲು ಸ್ಥಳಾವಕಾಶ ಇಲ್ಲವೆಂದರೆ ಕುಂಡದಲ್ಲಿ ತುಳಸಿ ಗಿಡವನ್ನು ಇಟ್ಟು ಪೂಜಿಸುತ್ತಾರೆ. ಸನಾತನ ಧರ್ಮದಲ್ಲಿ ತುಳಸಿ ಗಿಡಕ್ಕೆ ಸಾಕಷ್ಟು ಮಹತ್ವವಿದೆ.

ತುಳಸಿ ಗಿಡದಲ್ಲಿ ಯಾವುದೇ ರೀತಿಯ ನಕಾರಾತ್ಮಕ ಶಕ್ತಿಯು ಇಲ್ಲದ ಕಾರಣ ಇದನ್ನು ಪ್ರತಿಯೊಬ್ಬರು ಪೂಜಿಸುತ್ತಾರೆ. ಯಾರ ಮನೆಯಲ್ಲಿ ತುಳಸಿ ಗಿಡವು ಸಮೃದ್ಧವಾಗಿರುತ್ತದೆಯೋ ಅಂಥ ಮನೆಯಲ್ಲಿ ವಿಷ್ಣು ಹಾಗೂ ಲಕ್ಷ್ಮೀ ದೇವಿಯ ಸಾನಿಧ್ಯವಿದೆ ಎಂಬ ನಂಬಿಕೆಯಿದೆ. ಆದರೆ ತುಳಸಿ ಗಿಡಕ್ಕೆ ನಿತ್ಯ ಪೂಜೆ ಸಲ್ಲಿಸುವ ಮುನ್ನ ನಾವು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಆಗ ಮಾತ್ರ ತುಳಸಿ ಗಿಡಕ್ಕೆ ನಾವು ಸಲ್ಲಿಸಿದ ಪೂಜೆಯ ಫಲ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಹಾಗಾದರೆ ತುಳಸಿ ಗಿಡಕ್ಕೆ ಯಾವ ಸಮಯದಲ್ಲಿ ನೀರೆರೆಯಬೇಕು..? ತುಳಸಿ ಎಲೆಗಳನ್ನು ಯಾವ ದಿನ ಕತ್ತರಿಸಬಾರದು..? ಈ ಎಲ್ಲಾ ವಿಚಾರಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ

ತುಳಸಿಗೆ ಯಾವಾಗ ನೀರು ಅರ್ಪಿಸಬೇಕು..?

ತುಳಸಿ ಗಿಡಕ್ಕೆ ನೀರನ್ನು ಹಾಕುವುದಕ್ಕೂ ಇತರೆ ಗಿಡಗಳಿಗೆ ನೀರು ಹಾಕುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಸೂರ್ಯೋದಯದ ಸಮಯದಲ್ಲಿ ಸ್ನಾನ ಮಾಡಿದ ಬಳಿಕವೇ ತುಳಸಿ ಗಿಡಕ್ಕೆ ನೀರೆರೆಯಬೇಕು. ಹೀಗೆ ಮಾಡಿದರೆ ಮಾತ್ರ ಅಂತಹ ಮನೆಯಲ್ಲಿ ಸಂತೋಷ ಹಾಗೂ ನೆಮ್ಮದಿ ನೆಲೆಸಿರುತ್ತದೆ.

ತುಳಸಿ ಗಿಡಕ್ಕೆ ಭಾನುವಾರ ನೀರೆರೆಯಬಾರದು ಎಂಬ ನಂಬಿಕೆ ಪುರಾಣದಲ್ಲಿದೆ. ಆ ದಿನ ಲಕ್ಷ್ಮೀ ದೇವಿಯು ಉಪವಾಸ ಇರುವುದರಿಂದ ನೀರನ್ನು ಎರೆಯಬಾರದು. ತುಳಸಿ ಗಿಡಕ್ಕೆ ನೀರು ಹಾಕಿದರೆ ಲಕ್ಷ್ಮೀ ದೇವಿಯ ಉಪವಾಸಕ್ಕೆ ಭಂಗವಾಗುತ್ತದೆ ಎಂಬ ನಂಬಿಕೆಯಿದೆ. ಇದರಿಂದ ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗಲು ಆಗುವುದಿಲ್ಲ. ಅದೇ ರೀತಿ ಏಕಾದಶಿಯಂದೂ ತುಳಸಿಗೆ ನೀರೆರೆಯಬಾರದು. ತುಳಸಿಯು ವಿಷ್ಣುವಿಗೆ ಸಮರ್ಪಿತವಾದ ಸಸ್ಯವಾಗಿದೆ. ಹೀಗಾಗಿ ಏಕಾದಶಿಯಂದು ತುಳಸಿ ಉಪವಾಸ ಇರುತ್ತದೆ ಎಂಬ ನಂಬಿಕೆಯಿದೆ. ಹೀಗಾಗಿ ಏಕಾದಶಿಯಂದು ತುಳಸಿಗೆ ನೀರೆರೆಯುವಂತಿಲ್ಲ.

ತುಳಸಿ ಗಿಡವನ್ನು ಹೇಗೆ ಪೂಜಿಸಬೇಕು..?

ಪ್ರತಿದಿನ ತುಳಸಿ ಗಿಡವನ್ನು ಪೂಜೆ ಮಾಡಿದರೆ ಶುಭ ಫಲ ಸಿಗುತ್ತದೆ. ತಾಮ್ರ ಅಥವಾ ಬೆಳ್ಳಿಯ ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ನಿಧಾನವಾಗಿ ಭಕ್ತಿಯಿಂದ ತುಳಸಿಗೆ ನೀರನ್ನು ಅರ್ಪಿಸಬೇಕು. ಮಂತ್ರವನ್ನು ಪಠಿಸುತ್ತಾ ತುಳಸಿಗೆ ನೀರೆರೆಯಬೇಕು.

ದೇವತಾ ನಿರಿತಾ ಪೂರ್ವಮರ್ಚಿತಸಿ ಮುನೀಶ್ವರೈಃ

ನಮೋ ನಮಸ್ತೇ ತುಲಸೀ ಸಿನ್ ಹರ ಹರಿಪ್ರಿಯಮ್

ಎಂದು ಪಠಿಸಬೇಕು. ನೀರು ಎರೆದ ನಂತರ, ಅರಿಶಿನ ಮತ್ತು ಕುಂಕುಮವನ್ನು ಸೇರಿಸಿ ಮತ್ತು ಸ್ವಲ್ಪ ಅಕ್ಷತೆ ಮತ್ತು ತುಳಸಿ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ತುಳಸಿ ಮುಂದಿಟ್ಟು ದೂಪವನ್ನು ಬೆಳಗಬೇಕು. ಬಳಿಕ ಆರತಿಯನ್ನೂ ಅರ್ಪಿಸಬೇಕು. ಪ್ರತಿದಿನ ಸಂಜೆ ತುಳಸಿ ಬಳಿ ತುಪ್ಪ ಹಚ್ಚುವುದು ಮರೆಯಬಾರದು. ತುಳಸಿಯನ್ನು ಹೀಗೆ ಭಕ್ತಿಯಿಂದ ಪೂಜಿಸುವುದರಿಂದ ಆರ್ಥಿಕ ಸಂಕಷ್ಟದಿಂದ ಪಾರಾಗಲಿದ್ದೀರಿ. ಲಕ್ಷ್ಮೀ ದೇವಿಯ ಕೃಪೆ ಕೂಡಾ ನಿಮ್ಮದಾಗಲಿದೆ.

ಋತುಚಕ್ರದ ಸಮಯದಲ್ಲಿ ಮಹಿಳೆಯರು ತುಳಸಿ ಗಿಡದ ಬಳಿಯೂ ಹೋಗಬಾರದು. ಋತುಸ್ರಾವ ಮುಗಿದ ಬಳಿಕ ಶುದ್ಧ ಸ್ನಾನ ಮಾಡಿ ಅದಾದ ನಂತರವೇ ತುಳಸಿ ಗಿಡದ ಪೂಜೆ ಮಾಡಬಹುದು. ತುಳಸಿ ಗಿಡದ ಬಳಿ ಬಾಡಿದ ಹೂವುಗಳನ್ನು ಇಡುವಂತಿಲ್ಲ. ತುಳಸಿ ಕಟ್ಟೆಯನ್ನು ಆಗಾಗ ಸ್ವಚ್ಛಗೊಳಿಸಬೇಕು. ಅಲ್ಲದೇ ಯಾವುದೇ ಕಾರಣಕ್ಕೂ ತುಳಸಿ ಗಿಡ ಒಣಗದಂತೆ ನೋಡಿಕೊಳ್ಳಿ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.