ಕೃಷ್ಣ ಜನ್ಮಾಷ್ಟಮಿಯಂದು ಉಪವಾಸ ಮಾಡುತ್ತಿದ್ದೀರಾ? ಅಂದು ಪಾಲಿಸಬೇಕಾದ ಈ ನಿಯಮಗಳ ಬಗ್ಗೆ ನಿಮಗೆ ತಿಳಿದಿರಬೇಕು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕೃಷ್ಣ ಜನ್ಮಾಷ್ಟಮಿಯಂದು ಉಪವಾಸ ಮಾಡುತ್ತಿದ್ದೀರಾ? ಅಂದು ಪಾಲಿಸಬೇಕಾದ ಈ ನಿಯಮಗಳ ಬಗ್ಗೆ ನಿಮಗೆ ತಿಳಿದಿರಬೇಕು

ಕೃಷ್ಣ ಜನ್ಮಾಷ್ಟಮಿಯಂದು ಉಪವಾಸ ಮಾಡುತ್ತಿದ್ದೀರಾ? ಅಂದು ಪಾಲಿಸಬೇಕಾದ ಈ ನಿಯಮಗಳ ಬಗ್ಗೆ ನಿಮಗೆ ತಿಳಿದಿರಬೇಕು

ನಾಡಿನಾದ್ಯಂತ ಕೃಷ್ಣಜನ್ಮಾಷ್ಟಮಿ ಸಂಭ್ರಮ ಜೋರಾಗಿದೆ. ಶ್ರೀಕೃಷ್ಣನ ಜನ್ಮದಿನದಂದು ಕೆಲವರು ಉಪವಾಸ ಮಾಡುತ್ತಾರೆ. ಈ ದಿನ ನಿಮಗೂ ಉಪವಾಸ ಅಭ್ಯಾಸವಿದ್ದರೆ ಯಾವೆಲ್ಲಾ ನಿಯಮಗಳನ್ನು ಪಾಲಿಸಬೇಕು ಎಂಬುದು ತಿಳಿದಿರಬೇಕು. ಕೃಷ್ಣಜನ್ಮಾಷ್ಟಮಿ ಉಪವಾಸದಂದು ಮಾಡಬೇಕಾದ ಹಾಗೂ ಮಾಡಬಾರದಂತಹ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ.

ಕೃಷ್ಣ ಜನ್ಮಾಷ್ಟಮಿ
ಕೃಷ್ಣ ಜನ್ಮಾಷ್ಟಮಿ

ಪ್ರತಿ ವರ್ಷ ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ದೇಶದೆಲ್ಲೆಡೆ ವೈಭವದಿಂದ ಆಚರಿಸಲಾಗುತ್ತದೆ. ಈ ವರ್ಷ ಆಗಸ್ಟ್ 26ರಂದು ಕೃಷ್ಣ ಜನ್ಮಾಷ್ಟಮಿ ಇದೆ. ಅಂದು ಕೃಷ್ಣನ ಮಗುವಿನ ರೂಪ ಅಂದರೆ ಬಾಲಗೋಪಾಲನನ್ನು ಪೂಜಿಸಲಾಗುತ್ತದೆ. ಭಾರತದಾದ್ಯಂತ ವಿವಿಧ ಪ್ರದೇಶಗಳಲ್ಲಿ ವಿವಿಧ ರೀತಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತದೆ. ಈ ಶುಭ ದಿನದಂದು ಕೆಲವರು ಉಪಾವಾಸ ಮಾಡುತ್ತಾರೆ. ಜನ್ಮಾಷ್ಟಮಿಯಂದು ಉಪವಾಸ ಮಾಡುವವರು ಪಾಲಿಸಬೇಕಾದ ನಿಯಮಗಳೇನು? ಏನು ಮಾಡಬಾರದು ಎಂಬ ಬಗ್ಗೆ ಇಲ್ಲಿದೆ ವಿವರವಾದ ಮಾಹಿತಿ.

ಕೃಷ್ಣಾಷ್ಟಮಿ ಉಪವಾಸದ ನಿಯಮಗಳು

ಜನ್ಮಾಷ್ಟಮಿ ವ್ರತವನ್ನು ಅನುಸರಿಸಲು ಬಯಸುವವರು ಬ್ರಹ್ಮಚರ್ಯವನ್ನು ಆಚರಿಸಬೇಕು. ಉಪವಾಸದ ಸಮಯದಲ್ಲಿ ಹಣ್ಣುಗಳನ್ನು ಹೊರತುಪಡಿಸಿ ಯಾವುದೇ ಆಹಾರವನ್ನು ಸೇವಿಸಬಾರದು. ಮರುದಿನ ಬೆಳಿಗ್ಗೆ ಸೂರ್ಯೋದಯದ ನಂತರ ಉಪವಾಸವನ್ನು ಮುರಿಯಬೇಕು. ಭಕ್ತರು ಕೃಷ್ಣಾಷ್ಟಮಿ ದಿನದಂದು ಕೃಷ್ಣ ದೇವಾಲಯಕ್ಕೆ ಭೇಟಿ ನೀಡಬೇಕು. ಭಗವಂತನಿಗೆ ನೈವೇದ್ಯ ಮಾಡಿದ ನಂತರ ಪ್ರಸಾದವನ್ನು ತೆಗೆದುಕೊಳ್ಳಬೇಕು. ಹಗಲಿನಲ್ಲಿ ಮಲಗುವಂತಿಲ್ಲ.

ಜನ್ಮಾಷ್ಟಮಿಯಂದು ಉಪವಾಸ ಮಾಡಬಯಸುವವರು ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಬೇಕು. ಕೃಷ್ಣನ ವಿಗ್ರಹದ ಮುಂದೆ ತುಪ್ಪದ ದೀಪವನ್ನು ಹಚ್ಚಿ ಮತ್ತು ಕೈಯಲ್ಲಿ ತುಳಸಿ ಎಲೆಗಳನ್ನು ಹಿಡಿದು ಉಪವಾಸದ ಪ್ರತಿಜ್ಞೆ ಮಾಡಬೇಕು. ದಿನವಿಡೀ ರಾಧಾಕೃಷ್ಣರ ನಾಮಸ್ಮರಣೆ ಮಾಡುತ್ತಲೇ ಇರಬೇಕು.

ಕೃಷ್ಣಾಷ್ಟಮಿಯಂದು ಈ ಕೆಲಸಗಳನ್ನು ಮಾಡಬೇಡಿ

ಕೃಷ್ಣನಲ್ಲಿ ನಿಮ್ಮ ಅಚಲವಾದ ಪ್ರೀತಿಯನ್ನು ತೋರಿಸುವ ಬದ್ಧತೆಯಿಂದ ಉಪವಾಸ ಮಾಡಬೇಕು. ದಿನವಿಡೀ ಕೃಷ್ಣನ ನಾಮವನ್ನು ಜಪಿಸಿ. ಬೆಳಗ್ಗೆ ಬೇಗ ಎದ್ದು ಮನೆಯನ್ನು ಶುಚಿಗೊಳಿಸಿ ಬಾಲಗೋಪಾಲ ಅಥವಾ ಕೃಷ್ಣನ ವಿಗ್ರಹವನ್ನು ಸ್ವಚ್ಛ ಮಾಡಬೇಕು. ಹಾಗೆಯೇ ಸಾತ್ವಿಕ ವಸ್ತುಗಳಿಂದ ಮಾಡಿದ ನೈವೇದ್ಯವನ್ನು ಬಾಲಗೋಪಾಲನಿಗೆ ಅರ್ಪಿಸಬೇಕು. ಮಾಂಸ, ಈರುಳ್ಳಿ, ಬೆಳ್ಳುಳ್ಳಿ ಮತ್ತು ಮದ್ಯದಂತಹ ಆಹಾರಗಳನ್ನು ತ್ಯಜಿಸಬೇಕು.

ಜನ್ಮಾಷ್ಟಮಿಯ ದಿನದಂದು ಮನೆಯಲ್ಲಿ ಪ್ರಸಾದವನ್ನು ತಯಾರಿಸಬೇಕು. ಚಕ್ಕುಲಿ, ಕೋಡುಬಳೆ, ಅವಲಕ್ಕಿ ಉಂಡೆಯಂತಹ ಹಾಲು ಆಧಾರಿತ ಸಿಹಿತಿಂಡಿಗಳನ್ನು ಹೆಚ್ಚಾಗಿ ನೀಡಲಾಗುತ್ತದೆ. ಪೂಜೆಯ ದಿನದಂದು ಮನೆಯಲ್ಲಿ ಶಾಂತಿ ಮತ್ತು ಸಂತೋಷದ ವಾತಾವರಣ ಇರುವಂತೆ ನೋಡಿಕೊಳ್ಳಿ. ಯಾರೊಂದಿಗೂ ಕಟುವಾಗಿ ವರ್ತಿಸಬೇಡಿ. ಯಾರಿಗೂ ಅಗೌರವ ತೋರಬಾರದು. ಎಲ್ಲರೊಂದಿಗೆ ಸೌಜನ್ಯದಿಂದ ಇರಲು ಪ್ರಯತ್ನಿಸಿ. ಶ್ರೀಕೃಷ್ಣನಿಗೆ ಯಾವಾಗಲೂ ಗೋವುಗಳ ಮೇಲೆ ಅಪಾರ ಪ್ರೀತಿ. ಆದ್ದರಿಂದ ಗೋವುಗಳನ್ನು ದಯೆಯಿಂದ ನಡೆಸಿಕೊಳ್ಳಿ. ಎಲ್ಲಾ ಪ್ರಾಣಿಗಳಿಗೆ ಸಹಾನುಭೂತಿ ತೋರಿಸಿ. ಯಾವುದೇ ಪ್ರಾಣಿಗೆ ಹಾನಿ ಮಾಡಬಾರದು. ಪ್ರಾಣಿಗಳಿಗೆ ಆಹಾರ ಮತ್ತು ದ್ರವಾಹಾರವನ್ನು ನೀಡುವುದರಿಂದ ಕೃಷ್ಣನ ಹೇರಳವಾದ ಅನುಗ್ರಹ ದೊರೆಯುತ್ತದೆ.

ಇವುಗಳನ್ನು ಪೂಜೆಯಲ್ಲಿ ಅರ್ಪಿಸಿ

ಬಾಲಗೋಪಾಲನನ್ನು ಪೂಜಿಸುವಾಗ ಕೃಷ್ಣನಿಗೆ ಪ್ರಿಯವಾದ ನವಿಲು ಗರಿ, ಕೊಳಲು ಮತ್ತು ಬೆಣ್ಣೆಯನ್ನು ಅರ್ಪಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಗೋವಿನ ಪ್ರತಿಮೆಯನ್ನೂ ಸ್ಥಾಪಿಸಬಹುದು. ಇವು ಕೃಷ್ಣನಿಗೆ ಬಹಳ ಇಷ್ಟವಾಗುತ್ತವೆ. ಪುಟ್ಟ ಕೃಷ್ಣನನ್ನು ಮನೆಗೆ ಆಹ್ವಾನಿಸಲು ಅನೇಕರು ಕನ್ನಯ್ಯನ ಪಾದಗಳನ್ನು ಮನೆಯ ಮುಂದೆ ಇಡುತ್ತಾರೆ. ಮನೆಯನ್ನು ಸುಂದರವಾಗಿ ಅಲಂಕರಿಸಲಾಗಿದೆ.

ಗಮನಿಸಿ: ಈ ಮೇಲಿನ ಮಾಹಿತಿಯು ನಂಬಿಕೆ, ಶಾಸ್ತ್ರಗಳನ್ನು ಆಧರಿಸಿದೆ. ಅಂತರ್ಜಾಲದಲ್ಲಿ ದೊರೆತ ವಿವರಗಳನ್ನು ಆಧರಿಸಿದೆ. ಇದು ಮಾಹಿತಿಗಾಗಿ ಮಾತ್ರ. HT ಕನ್ನಡ ಮೇಲಿನ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಿಮಗೆ ಯಾವುದೇ ಸಂದೇಹಗಳಿದ್ದರೆ ಸಂಬಂಧಿತ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.

 

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.