ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಪ್ರೇಮಿಯೊಂದಿಗೆ ಮನಸ್ಸಿನ ಜೊತೆ ಆತ್ಮದ ಬೆಸುಗೆ ಸ್ಪಷ್ಟಪಡಿಸುವ 5 ಅಂಶಗಳಿವು; ನಿಮ್ಮ ಪ್ರೀತಿ ಎಷ್ಟು ಗಟ್ಟಿಯಾಗಿದೆ ನೋಡಿ

ಪ್ರೇಮಿಯೊಂದಿಗೆ ಮನಸ್ಸಿನ ಜೊತೆ ಆತ್ಮದ ಬೆಸುಗೆ ಸ್ಪಷ್ಟಪಡಿಸುವ 5 ಅಂಶಗಳಿವು; ನಿಮ್ಮ ಪ್ರೀತಿ ಎಷ್ಟು ಗಟ್ಟಿಯಾಗಿದೆ ನೋಡಿ

ನಿಮ್ಮ ಪ್ರೀತಿ ಎಷ್ಟು ಗಟ್ಟಿಯಾಗಿದೆ ಎಂಬುದು ನಿಮ್ಮ ಬಾಂಧವ್ಯದಿಂದ ತಿಳಿಯುತ್ತದೆ. ಇಬ್ಬರ ನಡುವೆ ಆದ್ಯಾತ್ಮಿಕ ಸಂಪರ್ಕವಿದ್ದರೆ, ಆ ಬಂಧ ತುಂಬಾ ಬಲಿಷ್ಠವಾಗಿರುತ್ತದೆ. ಮನಸು ಮಾತ್ರವಲ್ಲದೆ ಆತ್ಮದಿಂದ ಪರಸ್ಪರ ಬೆಸೆದಾಗ ಮಾತ್ರ ಇದು ಸಾಧ್ಯ.

ಪ್ರೇಮಿಯೊಂದಿಗೆ ಮನಸ್ಸಿನ ಜೊತೆ ಆತ್ಮದ ಬೆಸುಗೆ ಸ್ಪಷ್ಟಪಡಿಸುವ 5 ಅಂಶಗಳಿವು
ಪ್ರೇಮಿಯೊಂದಿಗೆ ಮನಸ್ಸಿನ ಜೊತೆ ಆತ್ಮದ ಬೆಸುಗೆ ಸ್ಪಷ್ಟಪಡಿಸುವ 5 ಅಂಶಗಳಿವು (Pexel)

ಎರಡು ದೇಹಗಳು ಮನಸು ಮತ್ತು ಆತ್ಮದಿಂದ ಒಂದಾದಾಗ ಮಾತ್ರ ಪರಿಪೂರ್ಣ ಸಂಬಂಧ ನಿರ್ಮಾಣವಾಗಲು ಸಾಧ್ಯ. ಎರಡು ಭಿನ್ನ ವ್ಯಕ್ತಿಗಳು ಆಧ್ಯಾತ್ಮಿಕವಾಗಿ ಅಥವಾ ತಮ್ಮ ಆತ್ಮದಿಂದ ಪರಸ್ಪರ ಸಂಪರ್ಕ ಹೊಂದಿದ್ದಾರೆ ಎಂಬ ನಂಬಿಕೆ ಬಂದಾಗ ಅವರು ಆತ್ಮಸಂಪರ್ಕ ಸಾಧಿಸಿದ್ದಾರೆ ಎಂದು ಹೇಳಬಹುದು. ಅಂದರೆ, ತಮ್ಮ ಸಂಬಂಧವನ್ನು ಇತರರಿಗಿಂತ ಭಿನ್ನವಾಗಿ ನೋಡುತ್ತಾರೆ. ಜೊತೆಗೆ ತಮ್ಮ ಬಂಧವು ಹೆಚ್ಚು ಆಧ್ಯಾತ್ಮಿಕ ಎಂದು ಗ್ರಹಿಕೆ ಇರುತ್ತದೆ. ಇಬ್ಬರ ನಡುವೆ ಆಳವಾದ ಬಂಧವಿದ್ದರೆ, ಆ ನಂಟು ಅವರ ದೈಹಿಕ ಸ್ವಭಾವವನ್ನು ಮೀರಿ ವಿಸ್ತರಿಸುತ್ತದೆ. ಇದಕ್ಕೆ ಯಾವುದೇ ಸ್ಥಳ ಅಥವಾ ಸಮಯದ ಎಲ್ಲೆ ಇಲ್ಲ. ಅಲ್ಲಿ ಅಸ್ತಿತ್ವದಲ್ಲಿರುವುದು ಪರಿಶುದ್ಧ ಪ್ರೀತಿ ಮಾತ್ರ. ಇದು ಸತ್ಯ ಮತ್ತು ವಾಸ್ತವ ಎಂಬುದು ನಿಮಗೆ ಅರಿವಾದರೆ, ನೀವಿಬ್ಬರು ಶಾಶ್ವತವಾಗಿ ಒಬ್ಬರನ್ನೊಬ್ಬರು ಪರಸ್ಪರ ಅರ್ಥಮಾಡಿಕೊಂಡಿದ್ದೀರಿ ಎಂಬುದು ಸ್ಪಷ್ಟವಾಗುತ್ತದೆ.

ಪ್ರೀತಿಯ ಮೇಲೆ ಅಪಾರ ಗೌರವವಿದ್ದರೆ ಮಾತ್ರ, ಪ್ರೀತಿಯನ್ನು ಮನಸಿನಿಂದ ಮಾತ್ರವಲ್ಲದೆ ಹೃದಯ ಮತ್ತು ಆತ್ಮದಿಂದ ಪ್ರೀತಿಸಲು ಸಾಧ್ಯ. ಇದು ಹೌದಾಗಿದ್ದರೆ ಯಾವುದೇ ಸ್ಪಷ್ಟ ಕಾರಣವಿಲ್ಲದೆಯೂ ಒಬ್ಬರಿಗೆ ಆಕರ್ಷಿತರಾಗುತ್ತೀರಿ. ಇನ್ನೂ ಕೆಲವು ಸಂದರ್ಭಗಳಲ್ಲಿ ನೀವು ಈಗ ಭೇಟಿಯಾದ ವ್ಯಕ್ತಿಯೊಂದಿಗೆ ತಕ್ಷಣ ಸಂಬಂಧ ಬೆಳೆಸಿಕೊಳ್ಳುತ್ತೀರಿ.

ನಿಮ್ಮ ಪ್ರೇಮಿಯೊಂದಿಗೆ ನೀವು ಆತ್ಮದಿಂದ ಉತ್ತಮ ಬಾಂಧವ್ಯ ಹೊಂದಿದ್ದೀರಿ ಎಂಬುದನ್ನು ಸೂಚಿಸುವ ಸುಳಿವುಗಳು ಹೀಗಿವೆ.

ಅವರೊಂದಿಗಿದ್ದಾಗ ಆನೆಬಲ ನಿಮ್ಮದಾಗುತ್ತದೆ

ಪ್ರೀತಿಯಲ್ಲಿ ಪರಸ್ಪರ ಆಕರ್ಷಣೆಯಿರುತ್ತದೆ. ಯಾರಿಗಾದರೂ ಆಕರ್ಷಿತರಾಗಿದ್ದೀರಿ ಎಂಬುದು ಸತ್ಯವಾಗಿದ್ದರೆ, ಅವರೊಂದಿಗೆ ಆತ್ಮದ ಮಟ್ಟದಲ್ಲಿ ಸಂಪರ್ಕ ಹೊಂದಿದ್ದೀರಿ ಎಂಬುದರ ಸ್ಪಷ್ಟ ಸೂಚನೆಯಾಗಿರುತ್ತದೆ. ಈ ಬಾಂಧವ್ಯ ನಿಜಕ್ಕೂ ದೊಡ್ಡದು. ಹೆಚ್ಚು ಹೊತ್ತು ಜೊತೆಗಿರಬೇಕು ಅನಿಸುತ್ತದೆ. ಒಟ್ಟಿಗೆ ಇರುವುದು ಹೊಸ ಚೈತನ್ಯ ನೀಡುತ್ತದೆ. ಒಂದು ವೇಳೆ ಜೊತೆಗಾರ ಅಥವಾ ಜೊತೆಗಾತಿ ಜೊತರಗಿಲ್ಲದಿದ್ದರೆ ಅವರ ಬಗ್ಗೆಯೇ ಯೋಚನೆ ಇರುತ್ತದೆ. ಅವರು ನಿಮ್ಮೊಂದಿಗಿದ್ದಾಗ ಅಪಾರ ಶಕ್ತಿ-ಚೈತನ್ಯ ನಿಮ್ಮಲ್ಲಿ ತುಂಬುತ್ತದೆ.

ನನಗೆ ನೀನು-ನಿನಗೆ ನಾನು

ಒಬ್ಬರನ್ನೊಬ್ಬರು ಪರಸ್ಪರ ಬೆಂಬಲಿಸುತ್ತೀರಿ. ಈ ಬಂಧದಲ್ಲಿ ಯಾವುದೇ ಪೈಪೋಟಿಯೂ ಇಲ್ಲ. ಯಾರೂ ಮೇಲಲ್ಲ ಯಾರೂ ಕೀಳಲ್ಲ. ಎಂದಿಗೂ ಒಬ್ಬರನ್ನೊಬ್ಬರು ದುರ್ಬಲಗೊಳಿಸುವುದಿಲ್ಲ. ಬದಲಿಗೆ ಒಬ್ಬರನ್ನೊಬ್ಬರು ಮೇಲಕ್ಕೆತ್ತುತ್ತೀರಿ.

ಒಬ್ಬರಿಗೊಬ್ಬರು ಏನೇ ಆದರೂ ಮಾಡಲು ಸಿದ್ದ

ಪ್ರೀತಿಯಲ್ಲಿ ಒಬ್ಬರನ್ನೊಬ್ಬರು ತುಂಬಾ ಅರ್ಥ ಮಾಡಿಕೊಳ್ಳುವುದರ ಮೂಲಕ ಇನ್ನೊಬ್ಬರು ಸಂತೋಷವಾಗಿರಬೇಕೆಂದು ಸಹಜವಾಗಿ ಬಯಸುತ್ತಾರೆ. ನಿಮ್ಮ ನಡುವೆ ಆಧ್ಯಾತ್ಮಿಕ ಸಂಪರ್ಕವಿದ್ದಾಗ, ಒಬ್ಬರು ಏನೂ ಹೇಳದಿದ್ದರೂ ಅದನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ನಿಮಗಿರುತ್ತದೆ. ಒಬ್ಬರಿಗೊಬ್ಬರು ನೆರವು ಕೇಳದೆಯೂ ಸಂತೋಷದಿಂದ ಸಹಾಯ ಮಾಡಲು ಮುಂದೆ ಬರುತ್ತೀರಿ.

ನಂಬಿಕೆಯೇ ದೊಡ್ಡದು

ಇಬ್ಬರ ನಡುವಿನ ಸಂಬಂಧದಲ್ಲಿ ನಂಬಿಕೆಯೇ ಬಲವಾದ ಅಡಿಪಾಯ. ಅದನ್ನು ಅಲ್ಲಾಡಲು ಬಿಡುವುದಿಲ್ಲ. ಆಳವಾದ ನಂಬಿಕೆಗಿಂತ ದೊಡ್ಡದು ಯಾವುದೂ ಅಲ್ಲ. ಇಬ್ಬರ ಮೊದಲು ಭೇಟಿಯಿಂದ ಹಿಡಿದ ಈ ಕ್ಷಣದವರೆಗೂ, ಮುಂದೆಯೂ ನಂಬಿಕೆಯೇ ಬಲಿಷ್ಠ ಒಡನಾಡಿ. ಇದು ಸ್ವಾಭಾವಿಕವಾಗಿರುತ್ತದೆ.

ನೀವು ಬೆಳೆಯಬೇಕೆಂದು ಬಯಸುತ್ತಾರೆ, ಬದಲಾಗಲು ಸಹಾಯ ಮಾಡುತ್ತಾರೆ

ಇಲ್ಲಿ ವಯಸ್ಸಿನ‌ ಅಂತರವಿಲ್ಲ. ನೀವು ಎಷ್ಟೇ ಚಿಕ್ಕವರಾಗಿದ್ದರೂ ಇಂಥಾ ವಿಶೇಷ ಸಂಪರ್ಕವಿದ್ದರೆ ಅಂಥವರೊಂದಿಗೆ ಹೆಚ್ಚು ಸಮಯವನ್ನು ಕಳೆಯುತ್ತೀರಿ. ವಿಭಿನ್ನ ದೃಷ್ಟಿಕೋನ ಹೊಂದಿರುತ್ತೀರಿ. ನಿಮ್ಮ ಜೀವನದ ಮಹತ್ವದ ಅಂಶದಲ್ಲಿ ವಿಭಿನ್ನ ಭಾವನೆಗಳನ್ನು ಅನುಭವಿಸುತ್ತೀರಿ. ನಿಮ್ಮ ಮತ್ತು ನೀವು ಒಡನಾಡಿಯ ನಡುವೆ ಹರಿಯುವ ವಿಶೇಷ ಶಕ್ತಿಯ ಪರಿಣಾಮವಾಗಿ ನಿಮ್ಮಿಬ್ಬರ ನಡುವೆ ವಿಶೇಷ ಸಂಪರ್ಕವಿರುತ್ತದೆ. ಇದು ಇಬ್ಬರಿಗೂ ಕಲಿಕೆಯನ್ನು ಉತ್ತೇಜಿಸುತ್ತದೆ. ಜೊತೆಗೆ ಈ ಬಂಧವು ನಿಮ್ಮನ್ನ ಬೆಳೆಸುತ್ತದೆ.

(ಗಮನಿಸಿ: ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.