Spiritual News: ಶ್ರೀ ಮಲ್ಲಿಕಾರ್ಜುನೇಶ್ವರ ಸ್ವಾಮಿ ದೇವಸ್ಥಾನ; ಬೆಂಗಳೂರಿನ ಬಸವನಗುಡಿಯಲ್ಲಿದೆ 3 ಶತಮಾನಗಳಷ್ಟು ಹಿಂದಿನ ದೇವಾಲಯ
ಸರ್ಕಾರದ ಅಧಿಕೃತ ದಾಖಲೆಗಳ ಪ್ರಕಾರ ಇದು 3 ಶತಮಾನಗಳಷ್ಟು ಹಳೆಯದಾಗಿದೆ. ಕೋಟೆ ವೆಂಕಟರಮಣ ಸ್ವಾಮಿ ದೇವಾಲಯದ ಹೋಲಿಕೆ ಎಂದರು ತಪ್ಪಾಗದು. ಕೆಂಪೇಗೌಡರು ನಿರ್ಮಿಸಿದ ಈ ದೇವಾಲಯವನ್ನು ಚಿಕ್ಕದೇವರಾಯರು ಅಭಿವೃದ್ಧಿಪಡಿಸಿದರು ಎಂದು ಹೇಳಲಾಗಿದೆ.
ರಾಜ್ಯದಲ್ಲಿ ಅನೇಕ ದೇವಾಲಯಗಳು ತನ್ನ ವಿಶಿಷ್ಟತೆಗೆ ಹೆಸರುವಾಸಿಯಾಗಿದೆ. ಬೆಂಗಳೂರಿನ ಬಸವನಗುಡಿ ಪ್ರಾಂತ್ಯದಲ್ಲಿ ಇರುವ ದೇವಾಲಯವೊಂದು ಎಲ್ಲರ ಗಮನ ಸೆಳೆಯುತ್ತಿದೆ. ಕೇವಲ ನೋಟಕ್ಕೆ ಸೀಮಿತವಾಗಿಲ್ಲದೆ ಪೂಜೆ ಪುರಸ್ಕಾರಗಳಲ್ಲಿಯೂ ಇದು ಮುಂಚೂಣಿಯಲ್ಲಿದೆ. ಇಲ್ಲಿನ ದೇವರುಗಳಿಗೆ ಹರಕೆ ಹೊತ್ತು ಪೂಜೆ ಮಾಡಿಸಿದ ನಂತರ ಅನೇಕರು ಶುಭ ಫಲಗಳನ್ನು ಪಡೆದಿರುವ ಉದಾಹರಣೆಗಳಿವೆ.
ಬಸವನಗುಡಿಯಲ್ಲಿರುವ ದೇವಸ್ಥಾನ
ಈ ದೇವಸ್ಥಾನವೇ ಶ್ರೀ ಮಲ್ಲಿಕಾರ್ಜುನೇಶ್ವರ ಸ್ವಾಮಿ ದೇವಸ್ಥಾನ. ಇಲ್ಲಿ ಬಂದ ಭಕ್ತರ ಅನೇಕ ತೊಂದರೆಗಳು ದೂರಾಗಿವೆ. ಇಲ್ಲಿ ದೇವರ ಪೂಜೆ ಪುನಸ್ಕಾರಗಳನ್ನು ನಡೆಸಿಕೊಡುವ ಅರ್ಚಕರು ಕೂಡಾ ಹಣಕ್ಕೆ ಆಸೆ ಪಡದೆ ನಿಸ್ವಾರ್ಥದಿಂದ ಪರೋಕ್ಷವಾಗಿ ಜನಸೇವೆ ಮಾಡುತ್ತಿದ್ದಾರೆ.
ಮಲ್ಲಿಕಾರ್ಜುನ ಸ್ವಾಮಿ ಕುಲದೇವತೆ ಆದವರೆಲ್ಲರೂ ಶ್ರೀಶೈಲಕ್ಕೆ ಹೋಗಲು ಸಾಧ್ಯವಾಗದು. ಅಂತಹವರು ಈ ದೇವಾಲಯಕ್ಕೆ ಬಂದಿದ್ದೇ ಆದರೆ ಖಂಡಿತವಾಗಿ ನಿಮ್ಮ ಕಷ್ಟ ನಷ್ಟಗಳೆಲ್ಲಾ ದೂರಾಗುವುದು. ಈ ದೇವಾಲಯ ಇಂದು ನಿನ್ನೆ ಕಟ್ಟಿದ್ದಲ್ಲ. ಇದೊಂದು ಪುರಾತನ ಕಾಲದ ದೇವಾಲಯವಾಗಿದೆ. ಇಲ್ಲೊಂದು ಶಕ್ತಿ ಇದೆ. ಇಲ್ಲಿ ಭೇಟಿ ನೀಡುವ ಅನೇಕರು ಈ ದೇವಾಲಯದಲ್ಲಿ ಅಥವಾ ದೇವಾಲಯದ ಆವರಣದಲ್ಲಿ ಕುಳಿತು ಮಂತ್ರವನ್ನು ಪಠಿಸಿದರೆ ಸುಲಭವಾಗಿ ಮನನವಾಗುತ್ತದೆ ಎಂದು ಹೇಳುತ್ತಾರೆ.
3 ಶತಮಾನಗಳಷ್ಟು ಹಳೆಯ ದೇವಸ್ಥಾನ
ಸರ್ಕಾರದ ಅಧಿಕೃತ ದಾಖಲೆಗಳ ಪ್ರಕಾರ ಇದು 3 ಶತಮಾನಗಳಷ್ಟು ಹಳೆಯದಾಗಿದೆ. ಕೋಟೆ ವೆಂಕಟರಮಣ ಸ್ವಾಮಿ ದೇವಾಲಯದ ಹೋಲಿಕೆ ಎಂದರು ತಪ್ಪಾಗದು. ಕೆಂಪೇಗೌಡರು ನಿರ್ಮಿಸಿದ ಈ ದೇವಾಲಯವನ್ನು ಚಿಕ್ಕದೇವರಾಯರು ಅಭಿವೃದ್ಧಿಪಡಿಸಿದರು ಎಂದು ಹೇಳಲಾಗಿದೆ. ಇಮ್ಮಡಿ ಕಂಠೀರವ ನರಸರಾಜನ ಕಾಲದಲ್ಲಿ ಸುಮಾರು ಕ್ರಿ.ಶ. 1705 ಕೊತ್ತನೂರು ಗ್ರಾಮವನ್ನು ದಾನ ನೀಡಿದ್ದು ನಂತರ ಕ್ರಿ.ಶ. 1710ರಲ್ಲಿ ಶಾನುಭೋಗರಾಗಿದ್ದ ಅಚ್ಯುತರಾಯರು ಇದರ ಅಭಿವೃದ್ಧಿಗೆ ಕಾರಣರಾದರೆಂದು ತಿಳಿದುಬಂದಿದೆ. ವಿಶೇಷವೆಂದರೆ ಶ್ರೀಯುತ ಡಿವಿ ಗುಂಡಪ್ಪನವರು ಮತ್ತು ಶ್ರೀಯುತ ಸೀತಾರಾಮ ಶಾಸ್ತ್ರಿ ಅವರು ಈ ದೇವಾಲಯದ ಆಭರಣದಲ್ಲಿ ಅನೇಕ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿದ್ದಾರೆ. ಕಾಲ ಕ್ರಮೇಣ ಸರ್ಕಾರ ಮತ್ತು ಭಕ್ತಾದಿಗಳ ಸಹಕಾರದೊಂದಿಗೆ ಈ ದೇವಾಲಯವು ಆಕರ್ಷಣೀಯ ಕೇಂದ್ರ ಬಿಂದುವಾಗಿದೆ.
ವಿವಿಧ ಕಾರ್ಯಕ್ರಮಗಳನ್ನು ಮಾಡಲು ಎಲ್ಲಾ ಅನುಕೂಲವಿದೆ
ಇಲ್ಲಿರುವ ಸಭಾಂಗಣಗಳಲ್ಲಿ ಕಡಿಮೆ ವೆಚ್ಚದಲ್ಲಿ ಮಂಗಳ ಕಾರ್ಯಗಳನ್ನು ಮಾಡಬಹುದು. ಅಲ್ಲದೆ ಶ್ರಾದ್ದ, ವೈಕುಂಠ ಸಮಾರಾಧನೆಗಳನ್ನು ಮಾಡಲು ಎಲ್ಲಾ ರೀತಿಯ ಅನುಕೂಲಗಳು ಇಲ್ಲಿವೆ. ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಜೊತೆಯಲ್ಲಿ ಭ್ರಮರಾಂಬಿಕೆ ಕೂಡಾ ಇಲ್ಲಿ ನೆಲೆಸಿದ್ದಾರೆ. ಇದಲ್ಲದೆ ಗಣಪತಿ ಮತ್ತು ಸುಬ್ರಹ್ಮಣ್ಯ ದೇವಾಲಯಗಳು ಕೂಡಾ ಇಲ್ಲಿವೆ. ಉತ್ಸವ ಮೂರ್ತಿಯಲ್ಲಿ ವಿಶೇಷವಾದಂತಹ ಶಕ್ತಿ ಇದೆ. ಈ ದೇವಾಲಯದ ಆವರಣದಲ್ಲಿಯೇ ನವಗ್ರಹಗಳ ಪ್ರತ್ಯೇಕ ದೇವಸ್ಥಾನಗಳಿವೆ.
ಇದರ ಪಕ್ಕದಲ್ಲಿಯೇ ಇರುವ ಸುಬ್ರಹ್ಮಣ್ಯ ಮಠದಲ್ಲಿ ಕುಕ್ಕೆ ಕ್ಷೇತ್ರದಲ್ಲಿ ನಡೆಸುವ ಎಲ್ಲಾ ರೀತಿಯ ಹೋಮ ಹವನಾದಿಗಳನ್ನು ನಡೆಸಿಕೊಡುತ್ತಾರೆ. ಒಟ್ಟಾರೆ ಇಲ್ಲಿಗೆ ಆಗಮಿಸುವ ಭಕ್ತಾದಿಗಳ ಕಷ್ಟ ನಷ್ಟಗಳು ಪರಿಹಾರವಾಗುವುದು. ಈ ವಾತಾವರಣ ಮನಸ್ಸಿಗೆ ಮುದ ನೀಡುತ್ತದೆ.