ಅಯೋಧ್ಯೆ ರಾಮಮಂದಿರದ ನಂತರ, ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಭಾರತದ ಪ್ರಸಿದ್ಧ ದೇಗುಲಗಳು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಅಯೋಧ್ಯೆ ರಾಮಮಂದಿರದ ನಂತರ, ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಭಾರತದ ಪ್ರಸಿದ್ಧ ದೇಗುಲಗಳು

ಅಯೋಧ್ಯೆ ರಾಮಮಂದಿರದ ನಂತರ, ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಭಾರತದ ಪ್ರಸಿದ್ಧ ದೇಗುಲಗಳು

ಭಾರತದಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿ ನಿರ್ಮಾಣ ಹಂತದಲ್ಲಿರುವ ಕೆಲವು ಸುಂದರ ದೇವಾಲಯಗಳು ಶೀಘ್ರದಲ್ಲೇ ಭಕ್ತರಿಗೆ ಮುಕ್ತವಾಗಲಿದೆ. ಈ ದೇಗುಲಗಳು ಬಹು ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು ಅಯೋಧ್ಯೆಯ ರಾಮಮಂದಿರದಷ್ಟೇ ಖ್ಯಾತಿ ಹೊಂದಲಿವೆ. ಅಂತಹ ದೇವಸ್ಥಾನಗಳ ಮಾಹಿತಿ ಇಲ್ಲಿದೆ.

ಅಯೋಧ್ಯೆ ರಾಮಮಂದಿರದ ನಂತರ, ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಭಾರತದ ಕೆಲವು ಪ್ರಸಿದ್ಧ ದೇಗುಲಗಳು
ಅಯೋಧ್ಯೆ ರಾಮಮಂದಿರದ ನಂತರ, ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಭಾರತದ ಕೆಲವು ಪ್ರಸಿದ್ಧ ದೇಗುಲಗಳು

ಭಾರತದ ಉತ್ತರ ಪ್ರದೇಶದಲ್ಲಿರುವ ಶ್ರೀ ರಾಮನ ಜನ್ಮ ಭೂಮಿ ಅಯೋಧ್ಯೆಯಲ್ಲಿರುವ ಶ್ರೀ ರಾಮಮಂದಿರವು ಈಗಂತೂ ಎಲ್ಲರ ಕೇಂದ್ರಬಿಂದುವಾಗಿದೆ. ಜೀವಮಾನದಲ್ಲಿ ಒಂದು ಬಾರಿಯಾದರೂ ಅಯೋಧ್ಯೆಗೆ ಭೇಟಿ ನೀಡಬೇಕು, ಬಾಲರಾಮನ ದರ್ಶನ ಪಡೆದು ಜೀವನ ಪಾವನವಾಗಿಸಿಕೊಳ್ಳಬೇಕೆಂದು ಮಹದಾಸೆ ಹೊಂದದವರಿಲ್ಲ. ಹೌದು, 1800 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಅಯೋಧ್ಯೆಯ ರಾಮಮಂದಿರವು ಕಳೆದ ತಿಂಗಳು ಜನವರಿ 22, 2024 ರಂದು ಪ್ರಧಾನಿ ನರೇಂದ್ರ ಮೋದಿಯವರಿಂದ ಅದ್ಧೂರಿಯಾಗಿ ಉದ್ಘಾಟನೆಗೊಂಡಿದೆ.

ಅಂದಿನಿಂದ, ರಾಮನ ಆಶೀರ್ವಾದ ಪಡೆಯಲು ಲಕ್ಷಾನುಗಟ್ಟಲೆ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ. ವಾಸ್ತವವಾಗಿ, ಪ್ರಾರಂಭದ ಮೊದಲ 12 ದಿನಗಳಲ್ಲಿ, ಬಾಲರಾಮನನ್ನು ಕಣ್ತುಂಬಿಕೊಳ್ಳಲು 24 ಲಕ್ಷಕ್ಕೂ ಹೆಚ್ಚು ಭಕ್ತರು ಅಯೋಧ್ಯೆಗೆ ಭೇಟಿ ನೀಡಿರುವುದಾಗಿ ಖುದ್ದು ಪ್ರಧಾನಿ ಮೋದಿಯವರೇ ಹೇಳಿಕೆ ನೀಡಿದ್ದರು

ಈ ನಡುವೆಯೇ ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಯ ವೇಳೆ ಅಲ್ಲಿಗೆ ಹೋಗುವುದಕ್ಕೆ ಸಾಧ್ಯವಾಗಲಿಲ್ಲವೆಂಬ ಕೊರಗು ಅನೇಕ ಭಕ್ತರಲ್ಲಿ ಮೂಡಿದೆ.

ಇದರ ನಡುವೆ ಭಾರತದಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿ ನಿರ್ಮಾಣ ಹಂತದಲ್ಲಿರುವ ಕೆಲವು ಸುಂದರವಾದ ದೇವಾಲಯಗಳು ಶೀಘ್ರದಲ್ಲೇ ಭಕ್ತರ ಪ್ರವೇಶಕ್ಕೆ ಮುಕ್ತವಾಗಲಿದೆ. ಅಯೋಧ್ಯೆಯ ರಾಮಮಂದಿರದಷ್ಟೇ ಖ್ಯಾತಿ ಹೊಂದಿ ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿರುವ ಆ ದೇಗುಲಗಳು ಯಾವುವು ? ಅವುಗಳ ನಿರ್ಮಾಣದ ವೆಚ್ಚ ಎಷ್ಟು ಎಂಬುದನ್ನು ನಾವು ನೋಡೋಣ:

1. 1200 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ ಆಂಜನೇಯನ ಅತಿ ಎತ್ತರದ ಪ್ರತಿಮೆ: ಹನುಮಾನ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹಂಪಿಯ ಹೊರವಲಯದ ಕಿಷ್ಕಿಂಧಾದಲ್ಲಿ ಮುಂದಿನ ಆರು ವರ್ಷಗಳಲ್ಲಿ 215 ಮೀಟರ್ ಹನುಮಾನ್ ಪ್ರತಿಮೆಯನ್ನು ನಿರ್ಮಿಸಲು ಮುಂದಾಗಿದೆ. 1200 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ದೇವಾಲಯವು ಕರ್ನಾಟಕದ ಹಿರಿಮೆಯನ್ನು ಹೆಚ್ಚಿಸಲಿದೆ.

2. ನಿರ್ಮಾಣವಾಗುತ್ತಿದೆ ವಿಶ್ವದ ಅತಿ ಎತ್ತರದ ಧಾರ್ಮಿಕ ಸ್ಮಾರಕ ಇಸ್ಕಾನ್ ಚಂದ್ರೋದಯ ಮಂದಿರ : ಮಥುರಾದ ವೃಂದಾವನದಲ್ಲಿ ನಿರ್ಮಾಣವಾಗುತ್ತಿರುವ ಬಹು ನಿರೀಕ್ಷಿತ ದೇವಾಲಯ ವೃಂದಾವನ ಚಂದ್ರೋದಯ ಮಂದಿರ. ಇದು ವಿಶ್ವದ ಅತಿ ಎತ್ತರದ ಧಾರ್ಮಿಕ ಸ್ಮಾರಕವಾಗಲಿದೆ. ಇದಕ್ಕೆ ತಗುಲುವ ಅಂದಾಜು ವೆಚ್ಚ 700 ಕೋಟಿ ರೂಪಾಯಿಗಳಾಗಿದ್ದು, ಇದು ವಿಶ್ವದ ಅತ್ಯಂತ ದುಬಾರಿ ದೇವಾಲಯಗಳಲ್ಲಿ ಒಂದಾಗುವ ಸಾಧ್ಯತೆಯಿದೆ. ಡಿಸೆಂಬರ್ 2026 ರ ವೇಳೆಗೆ ಈ ದೇವಾಲಯದ ನಿರ್ಮಾಣಕಾರ್ಯ ಪೂರ್ಣಗೊಳ್ಳಲಿದ್ದು, ಭಕ್ತರಿಗೆ ಭೇಟಿಗೆ ಮುಕ್ತವಾಗುವ ನಿರೀಕ್ಷೆಯಿದೆ.

3. 830 ಕೋಟಿ ರೂಪಾಯಿ ವೆಚ್ಚದಲ್ಲಿ ಶ್ರೀ ಚೈತನ್ಯ ಚಂದ್ರೋದಯ ಮಂದಿರ: ಪಶ್ಚಿಮ ಬಂಗಾಳದ ಮಾಯಾಪುರ ಪಟ್ಟಣದದಲ್ಲಿ 830 ಕೋಟಿ ರೂಪಾಯಿ ವೆಚ್ಚದಲ್ಲಿ ಶ್ರೀ ಚೈತನ್ಯ ಚಂದ್ರೋದಯ ಮಂದಿರ ನಿರ್ಮಾಣವಾಗುತ್ತಿದೆ. ಈ ಮಂದಿರವು ಪಂಚ-ತತ್ತ್ವ ದೇವತೆಗಳಾದ ರಾಧಾ ಮಾಧವ, ನೃಸಿಂಹದೇವ ಮತ್ತು ಚೈತನ್ಯ ಮಹಾಪ್ರಭುಗಳಿಗೆ ಸಮರ್ಪಿತವಾಗಿರುವ ಹಿಂದೂ ದೇವಾಲವಾಗಿದೆ. ಹಿಂದೂಗಳಿಗೆ ಅದರಲ್ಲಿ ವೈಷ್ಣವರಿಗೆ ಇದು ಮಹತ್ವದ ದೇವಾಲಯವಾಗಿದ್ದು, ಮಾಯಾಪುರದ ಪ್ರಮುಖ ಪ್ರವಾಸಿ ಕೇಂದ್ರವಾಗಿದೆ.

4. ವಿರಾಟ್ ರಾಮಾಯಣ ಮಂದಿರ: ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ನಿರ್ಮಿಸಲಾಗುತ್ತಿರುವ ವಿರಾಟ್ ರಾಮಾಯಣ ಮಂದಿರ "ವಿಶ್ವದ ಅತಿದೊಡ್ಡ ರಾಮಾಯಣ ದೇವಾಲಯ" ಆಗುವ ನಿರೀಕ್ಷೆಯಿದೆ. ಜೂನ್ 2023 ರಲ್ಲಿ ಪ್ರಾರಂಭವಾದ ಈ ದೇವಾಲಯದ ನಿರ್ಮಾಣ ವೆಚ್ಚ ಅಂದಾಜು 500 ಕೋಟಿ ರೂಪಾಯಿ.

5. 143 ಕೋಟಿ ರೂಪಾಯಿ ವೆಚ್ಚದಲ್ಲಿ ಜಗನ್ನಾಥ ಧಾಮ ಸಂಸ್ಕೃತಿ ಕೇಂದ್ರ: ಪಶ್ಚಿಮ ಬಂಗಾಳದ ಪುರ್ಬಾ ಮೇದಿನಿಪುರ್ ಜಿಲ್ಲೆಯ ದಿಘಾ ಕಡಲತೀರದ ಪಟ್ಟಣದಲ್ಲಿರುವ ಜಗನ್ನಾಥ ದೇವಾಲಯದ ನಿರ್ಮಾಣ ಕಾರ್ಯವು 2022 ರಲ್ಲಿ ಪ್ರಾರಂಭವಾಯಿತು. ಇದರ ನಿರ್ಮಾಣದ ಬಗ್ಗೆ 2018 ರಲ್ಲಿ ಘೋಷಿಸಿದ್ದು, ಮಾರ್ಚ್ 2024 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಸುಮಾರು 143 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ದೇವಾಲಯವು ಮುಂದಿನ ಏಪ್ರಿಲ್‌ನಲ್ಲಿ ಭಕ್ತರಿಗೆ ತೆರೆಯುವ ಸಾಧ್ಯತೆಯಿದೆ.

ಒಟ್ಟಿನಲ್ಲಿ ಗುಡಿ ಗೋಪುರಗಳ ನಾಡು, ಸಂಸ್ಕೃತಿ ಪರಂಪರೆಗಳ ಬೀಡಾಗಿರುವ ನಮ್ಮ ಭಾರತ ದೇಶದಲ್ಲಿ ಮುಂದಿನ ಪೀಳಿಗೆಯವರಿಗೂ ಮಾಹಿತಿ ಹಂಚಿಕೊಳ್ಳುವ ಸಲುವಾಗಿ ಸಾಲು ಸಾಲು ದೇವಾಲಯಗಳು ಭಾರೀ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.