ದೇಗುಲ ದರ್ಶನ: ತಮಿಳುನಾಡಿನ ಈ ದೇಗುಲದಲ್ಲಿ ಪೂಜೆ ಮಾಡಿದರೆ ಕ್ಯಾನ್ಸರ್, ಚರ್ಮರೋಗ ಗುಣವಾಗುವ ನಂಬಿಕೆ, ಶಿವ ಧರೆಗೆಳಿದು ಬಂದ ಪುಣ್ಯಕ್ಷೇತ್ರವಿದು
ತಮಿಳುನಾಡಿನ ತಿರುಪರೈತೊರೈನಾಥ ದೇವಾಲಯದಲ್ಲಿ ಪೂಜೆ ಮಾಡಿಸಿದರೆ ಕ್ಯಾನ್ಸರ್, ಚರ್ಮರೋಗ ಗುಣವಾಗುತ್ತದೆ ಎನ್ನುವ ನಂಬಿಕೆ ಇದೆ. ಅಲ್ಲದೇ ಮದುವೆಯಾಗದವರಿಗೆ ಬೇಗ ಕಂಕಣ ಭಾಗ್ಯ ಕೂಡಿ ಬರುತ್ತದೆ ಎಂಬ ಪ್ರತೀತಿಯೂ ಇದೆ. ಈ ದೇವಾಲಯದಲ್ಲಿ ಶಿವನ ಸ್ವಯಂ ಭೂಲಿಂಗವಿದೆ. ಸಾಕ್ಷಾತ್ ಶಿವ ಹಾಗೂ ವಿಷ್ಣು ಈ ಸ್ಥಳದಲ್ಲಿ ಪ್ರತ್ಯಕ್ಷರಾಗಿದ್ದರು ಎಂಬ ಪ್ರತೀತಿಯಿದೆ.
ಭಾರತದ ತಮಿಳುನಾಡು ದೇವಾಲಯಗಳ ತವರು. ಇಲ್ಲಿ ಹಲವು ಸುಪ್ರಸಿದ್ಧ ದೇಗುಲಗಳಿವೆ. ಇಲ್ಲಿನ ಪ್ರತಿ ದೇವಸ್ಥಾನಕ್ಕೂ ಒಂದೊಂದು ವೈಶಿಷ್ಟ್ಯವಿದೆ. ಅಂತಹ ಅಪರೂಪದ ವೈಶಿಷ್ಟ್ಯ ಹೊಂದಿರುವ ದೇವಾಲಯಗಳಲ್ಲಿ ತಿರುಪರೈತೊರೈನಾಥೇಶ್ವರ ದೇವಸ್ಥಾನವೂ ಒಂದು. ತಮಿಳುನಾಡಿನ ತಿರುಚ್ಚಿ ಜಿಲ್ಲೆಯ ಶ್ರೀರಂಗಂ ತಾಲ್ಲೂಕಿನ ತಿರುಪರೈತೊರೈ ಎಂಬ ಊರಿನಲ್ಲಿದೆ ಈ ದೇವಾಲಯ.
ಪರೈ (ಸ್ಯಾಂಡ್ ಪೇಪರ್ ಟ್ರೀ) ಗಿಡಗಳಿಂದ ತುಂಬಿರುವ ವನದಲ್ಲಿ ಈ ಹಿಂದೆ ಭಗವಾನ್ ಶಿವನು ಪ್ರತ್ಯಕ್ಷನಾಗಿದ್ದನು. ಒಂದು ಮಹತ್ತರ ಉದ್ದೇಶದೊಂದಿಗೆ ವಿಷ್ಣುವಿನೊಂದಿಗೆ ಶಿವನು ಈ ಜಾಗದಲ್ಲಿ ಪ್ರತ್ಯಕ್ಷನಾಗುತ್ತಾನೆ. ಈ ತಾಣಕ್ಕೆ “ತರುಗವನಂ” (ದಾರುಗವನ) ಎಂಬ ಹೆಸರೂ ಇದೆ. ಬಹಳ ಹಿಂದೆ ಈ ವನದಲ್ಲಿ ತಪಸ್ಸು ಮಾಡುತ್ತಿದ್ದ ಖುಷಿಗಳ ಅಹಂಕಾರ ಅಡಗಿಸಲು ಶಿವನು ಭಿಕ್ಷುಕನ ರೂಪದಲ್ಲಿ ಬಂದಿದ್ದ ಎಂಬ ಸ್ಥಳಪುರಾಣವನ್ನು ಸ್ಥಳೀಯರು ಹೇಳುತ್ತಾರೆ. ಪೌರಾಣಿಕ ಕಥೆಗಳು ಹೇಳುತ್ತವೆ. ಈ ದೇವಾಲಯದಲ್ಲಿ ಶಿವನ ಮಗ ಷಣ್ಮುಖನು ವಲ್ಲಿ ಮತ್ತು ದೈವಸೇನಾ ಸಮೇತ ಪ್ರತ್ಯೇಕ ಗರ್ಭಗುಡಿಯಲ್ಲಿ ನೆಲೆಸಿದ್ದಾನೆ.
ತಿರುಪರೈತೊರೈನಾಥ ಸ್ವಾಮಿ ದೇಗುಲದ ಇತಿಹಾಸ
ತರುಗವನದಲ್ಲಿ ತಪಸ್ಸು ಮಾಡುತ್ತಿದ್ದ ಖುಷಿಗಳು ಅಹಂಕಾರಿಗಳಾಗಿದ್ದರು. ಅವರು ಚೆಂದದ ಮಡದಿಯರನ್ನು ಹೊಂದಿದ್ದರು. ಆ ಕಾರಣಕ್ಕೆ ಅವರಲ್ಲಿ ಅಹಂಕಾರ ಮನೆಮಾಡಿತ್ತು. ದೇವರನ್ನು ಸುತ್ತಿಸುವ ಅಗತ್ಯವಿಲ್ಲ ಎಂಬ ಅಹಂಕಾರದಲ್ಲಿ ಅವರು ಮೆರೆಯುತ್ತಿದ್ದರು. ಈ ಋಷಿಮುನಿಗಳ ಅಹಂಕಾರ ಕಂಡ ಶಿವ ಹಾಗೂ ಮಹಾವಿಷ್ಣು ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದುಕೊಳ್ಳುತ್ತಾರೆ. ಆಗ ಶಿವ ಭಿಕ್ಷುಕನ ರೂಪದಲ್ಲಿ ಹಾಗೂ ವಿಷ್ಣುವು ಮೋಹಿನಿಯ ರೂಪದಲ್ಲಿ ಆ ಸ್ಥಳದಲ್ಲಿ ಪ್ರತ್ಯಕ್ಷರಾದರು.
ಇಬ್ಬರೂ ಋಷಿಗಳಿದ್ದ ತರುಗವನಕ್ಕೆ ಬಂದರು. ಮೋಹಿನಿಯ ಸೌಂದರ್ಯಕ್ಕೆ ಮರುಳಾದ ಋಷಿಗಳು ಮೋಹಿನಿ ರೂಪದಲ್ಲಿದ್ದ ವಿಷ್ಣುವನ್ನು ಹಿಂಬಾಲಿಸಿದರು. ಇದೇ ಸಮಯದಲ್ಲಿ ಅವರು ಭಿಕ್ಷುಕನ ಜೊತೆಯಲ್ಲಿ ಇದ್ದ ತಮ್ಮ ಹೆಂಡತಿಯರನ್ನು ನೋಡಿದರು. ಕೂಡಲೇ ಋಷಿಗಳಿಗೆ ತಾವಿರುವ ಜಾಗಕ್ಕೆ ಬಂದವರು ಯಾರೋ ಮಾಂತ್ರಿಕರು ಎಂದು ಭಾವಿಸಿ ಶಿವ ಹಾಗೂ ವಿಷ್ಣುವನ್ನು ಆ ಕಾಡಿನಿಂದ ಓಡಿಸಲು ಪ್ರಯತ್ನಿಸಿದರು.
ಆದರೆ ಇವರಿಬ್ಬರೂ ಆ ಸ್ಥಳದಿಂದ ಹೋಗಲು ನಿರಾಕರಿಸಿದರು. ಆಗ ಋಷಿಗಳು ಅವರನ್ನು ನಾಶಮಾಡಲು ಯಜ್ಞವನ್ನು ಮಾಡಿದರು. ಯಾಗ ಕುಂಡದಿಂದ ಭಗವಂತನ ಮೇಲೆ ಹುಲಿಗಳು ಹಾರುವಂತೆ ಮಾಡಿದರು. ಶಿವನು ಹುಲಿಗಳನ್ನು ಕೊಂದು ಅವುಗಳ ಚರ್ಮವನ್ನು ವಸ್ತ್ರವನ್ನಾಗಿ ಧರಿಸಿದ. ಖುಷಿಗಳು ಹಾವುಗಳನ್ನು ಕಳುಹಿಸಿದಾಗ ಅವುಗಳನ್ನು ಆಭರಣವಾಗಿ ಮಾಡಿಕೊಂಡ. ಅನೇಕ ಪ್ರಯತ್ನಗಳ ಹೊರತಾಗಿಯೂ, ಋಷಿಗಳಿಗೆ ಭಗವಂತನನ್ನು ಸೋಲಿಸಲು ಸಾಧ್ಯವಾಗುವುದಿಲ್ಲ.
ಇದನ್ನು ಮನಗಂಡ ಋಷಿಗಳು ಆತ್ಮಜ್ಞಾನವನ್ನು ಪಡೆದು ತಮ್ಮ ಅಹಂಕಾರವನ್ನು ನಿಗ್ರಹಿಸಿ ತಾವಿರುವಲ್ಲಿಗೆ ಬಂದಿದ್ದು ಶಿವನೇ ಎಂದು ತಿಳಿದುಕೊಂಡರು. ಆಗ ಶಿವನು ಅವರಿಗೆ ತಾರುಗವನೇಶ್ವರನಾಗಿ ಕಾಣಿಸಿಕೊಂಡು ಆಶೀರ್ವಾದ ಮಾಡಿದ. ಹೀಗಾಗಿಯೇ ಈ ಸ್ಥಳವು ಮಹತ್ವ ಪಡೆಯಿತು.
ತಿರುಪರೈತೊರೈನಾಥ ದೇಗುಲದ ಸ್ಥಳ ಮಹಿಮೆ
ಈ ದೇವಾಲಯದಲ್ಲಿ ನೆಲೆಯಾದ ಭಗವಾನ್ ತಾರುಗವನೇಶ್ವರನು ಸ್ವಯಂಭೂಲಿಂಗವಾಗಿ ಮೂಡಿ ಬಂದಿದ್ದಾನೆ. ಅವನನ್ನು ಬಾರೈ ಸತ್ಯ ನಾಡರ್ ಎಂದೂ ಕರೆಯುತ್ತಾರೆ. ಈ ದೇಗುಲದಲ್ಲಿ ಮಾಯಾಂಬಿಕೆ ದೇವಿಯು ದಕ್ಷಿಣಕ್ಕೆ ಕಾಣುತ್ತಾಳೆ. ಈಕೆಗೆ ವರ್ಣಾಂಬಿಕೆ ಎನ್ನುವ ಮತ್ತೊಂದು ಹೆಸರೂ ಸಹ ಇದೆ.
ದೇವಾಲಯದ ಮುಂಭಾಗದ ಸಭಾಂಗಣದಲ್ಲಿ ದೇಗುಲ ಪ್ರವೇಶಿಸಿದ ನಂತರ ಎಡಭಾಗದಲ್ಲಿ ಒಂದು ಕೊಳವಿದೆ. ಈ ದೇವಾಲಯದ ರಾಜಗೋಪುರವು ಏಳು ಹಂತಗಳನ್ನು ಹೊಂದಿದೆ. ದೇವಾಲಯದ ಮುಂಭಾಗದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ. ಒಳಗೆ ಧ್ವಜಸ್ತಂಭ, ಬಲಿಪೀಠ ಮತ್ತು ನಂದಿಯೊಂದಿಗೆ ಸಭಾಂಗಣವಿದೆ. ದೇವಾಲಯದ ಒಳಗಿರುವ ಕಂಬದಲ್ಲಿ ಸಂಬಂಧರ್, ಅಪ್ಪರ್, ಮಾಣಿಕ್ಕವಾಸಕ ಮತ್ತು ತಿರುಪಾಣಿ ಚೆಟ್ಟಿಯಾರ್ ಅವರ ಶಿಲ್ಪಗಳನ್ನು ಕೆತ್ತಲಾಗಿದೆ. ಹೊರಗಿನ ಪ್ರಾಕಾರದಲ್ಲಿ ದಂಡಾಯುಧಪಾಣಿ ಮತ್ತು ಗಣೇಶನನ್ನು ಕಾಣಬಹುದು.
ಭಿಕ್ಷುಕನ ರೂಪದಲ್ಲಿದ್ದ ಶಿವನು ದೇಗುಲದ ಅರ್ಧಮಂಟಪವನ್ನು ಉತ್ಸವಕ್ಕಾಗಿ ಅಲಂಕರಿಸಿದ ಎನ್ನುವ ಪ್ರತೀತಿಯಿದೆ. ಈ ದೇವಾಲಯದಲ್ಲಿ ಶಿವಲಿಂಗ ಮತ್ತು ಭಿಕ್ಷುಕನ ರೂಪದಲ್ಲಿರುವ ಶಿವನನ್ನು ಏಕಕಾಲದಲ್ಲಿ ಪೂಜಿಸಿದರೆ ಎಲ್ಲಾ ಅನಿಷ್ಟಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಈ ದೇವಾಲಯದ ಮುಖ್ಯ ಮರವೆಂದರೆ ಪರೈ ಮರ. ಶಿವನು ಈ ಪರೈ ಮರದ ಕೆಳಗೆ ಕಾಣಿಸಿಕೊಂಡನೆಂದು ಹೇಳಲಾಗುತ್ತದೆ. ಆದುದರಿಂದ ಅದರ ಕೆಳಗೆ ಒಂದು ಲಿಂಗವಿದೆ. ಅಂಬಾಲ್ ಪಸುಂಬೋನ್ ನವಿಲು ದೇವತೆ ಮತ್ತು ನಟರಾಜನನ್ನು ಪ್ರತ್ಯೇಕ ದೇವಾಲಯಗಳಲ್ಲಿ ದಕ್ಷಿಣಾಭಿಮುಖವಾಗಿ ಪ್ರತಿಷ್ಠಾಪಿಸಲಾಗಿದೆ.
ದೋಷ ಪರಿಹಾರಗಳು
ಅವಿವಾಹಿತರು ಈ ದೇವಾಲಯದಲ್ಲಿ ಅಭಿಷೇಕ ಮಾಡಿ ದೀಪ ಬೆಳಗಿಸಿದರೆ ಶೀಘ್ರ ವಿವಾಹವಾಗುತ್ತದೆ ಎಂಬ ನಂಬಿಕೆ ಇದೆ. ಚರ್ಮರೋಗ, ಕ್ಯಾನ್ಸರ್‌ನಂತಹ ಕಾಯಿಲೆಗಳು ಗುಣವಾಗುತ್ತದೆ ಹಾಗೂ ಮಾತನಾಡಲು ಬಾರದ ಮಕ್ಕಳು ತಿರುಪರೈತೊರೈನಾಥನಾಥನನ್ನು ಪೂಜಿಸಿದರೆ ಮಾತು ಬರುತ್ತದೆ ಎಂದು ಕೂಡ ಹೇಳಲಾಗುತ್ತದೆ.
ತಿರುಪರೈತೊರೈಗೆ ಹೋಗುವುದು ಹೀಗೆ
ಬೆಂಗಳೂರಿನಿಂದ ತಿರುಪರೈತೊರೈ ದೇವಾಲಯ 301 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿಗೆ ರೈಲು, ಬಸ್ಸು, ವಿಮಾನ, ಟ್ಯಾಕ್ಸಿ ಮೂಲಕ ಪ್ರಯಾಣ ಮಾಡಬಹುದು. ಬೆಂಗಳೂರಿನಿಂದ ಸುಮಾರು ಆರೂವರೆ ಗಂಟೆಗಳ ಪ್ರಯಾಣವಿದೆ. ಈ ದೇವಾಲಯವು ತಿರುಚ್ಚಿಯಿಂದ ಕರೂರ್‌ಗೆ ಹೋಗುವ ರಸ್ತೆಯಲ್ಲಿ ಸುಮಾರು 16 ಕಿ.ಮೀ. ತಿರುಚ್ಚಿ ಜಿಲ್ಲೆಯ ಛತ್ರಂ ಬಸ್ ನಿಲ್ದಾಣದಿಂದ ಈ ದೇವಸ್ಥಾನಕ್ಕೆ ಸಿಟಿ ಬಸ್ಸುಗಳು ಲಭ್ಯವಿವೆ. ತಿರುಚ್ಚಿಯಲ್ಲಿ ಉಳಿದು ಈ ದೇವಾಲಯಕ್ಕೆ ಭೇಟಿ ನೀಡಿ. ಗೂಗಲ್ ಮ್ಯಾಪ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ.
ದರ್ಶನ ಸಮಯ: ಈ ದೇಗುಲವು ಬೆಳಿಗ್ಗೆ 6 ರಿಂದ 11.30ರವರೆಗೆ ಹಾಗೂ ಸಂಜೆ 4 ರಿಂದ 8.30ರವರೆಗೆ ತೆರೆದಿರುತ್ತದೆ.
(ಗಮನಿಸಿ: ಇದು ನಂಬಿಕೆ ಮತ್ತು ಪ್ರಚಲಿತ ಕಥೆಗಳನ್ನು ಆಧರಿಸಿದ ಬರಹ. ಇಲ್ಲಿರುವ ಯಾವ ಸಂಗತಿಯನ್ನೂ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸಿಬ್ಬಂದಿ ಪುಷ್ಟೀಕರಿಸುವುದೂ ಇಲ್ಲ, ನಿರಾಕರಿಸುವುದೂ ಇಲ್ಲ. ಓದುಗರಿಗೆ ಮಾಹಿತಿ ಕೊಡುವ ಉದ್ದೇಶದಿಂದ ಈ ಬರಹ ಪ್ರಕಟಿಸಲಾಗಿದೆ)