ತಿರುಪತಿ ಲಡ್ಡು ಪ್ರಸಾದಕ್ಕೆ 300ಕ್ಕೂ ಹೆಚ್ಚು ವರ್ಷಗಳ ಇತಿಹಾಸ, ಅದಕ್ಕೂ ಮೊದಲು ಏನಿತ್ತು ನೈವೇದ್ಯಕ್ಕೆ, ಇನ್ನಷ್ಟು ವಿಶೇಷ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ತಿರುಪತಿ ಲಡ್ಡು ಪ್ರಸಾದಕ್ಕೆ 300ಕ್ಕೂ ಹೆಚ್ಚು ವರ್ಷಗಳ ಇತಿಹಾಸ, ಅದಕ್ಕೂ ಮೊದಲು ಏನಿತ್ತು ನೈವೇದ್ಯಕ್ಕೆ, ಇನ್ನಷ್ಟು ವಿಶೇಷ

ತಿರುಪತಿ ಲಡ್ಡು ಪ್ರಸಾದಕ್ಕೆ 300ಕ್ಕೂ ಹೆಚ್ಚು ವರ್ಷಗಳ ಇತಿಹಾಸ, ಅದಕ್ಕೂ ಮೊದಲು ಏನಿತ್ತು ನೈವೇದ್ಯಕ್ಕೆ, ಇನ್ನಷ್ಟು ವಿಶೇಷ

ತಿರುಪತಿ ಲಡ್ಡು ಪ್ರಸಾದ ಸದ್ಯ ಚರ್ಚೆಯ ಕೇಂದ್ರ ಬಿಂದು. ತಿರುಮಲ ತಿರುಪತಿಯಲ್ಲಿ ಶ್ರೀ ವೆಂಕಟೇಶ್ವರ ದೇವರ ನೈವೇದ್ಯಕ್ಕೆ ಲಡ್ಡು ಪ್ರಸಾದ ಬಳಕೆಗೆ ಯಾವಾಗ ಬಂತು, ಅದಕ್ಕೂ ಮೊದಲು ನೈವೇದ್ಯಕ್ಕೆ ಏನಿತ್ತು ಎಂಬಿತ್ಯಾದಿ ವಿಶೇಷ ವಿವರಗಳು ಇಲ್ಲಿದೆ.

ತಿರುಪತಿ ಲಡ್ಡು ಪ್ರಸಾದಕ್ಕೆ 300ಕ್ಕೂ ಹೆಚ್ಚು ವರ್ಷಗಳ ಇತಿಹಾಸ, ಅದಕ್ಕೂ ಮೊದಲು ಏನಿತ್ತು ನೈವೇದ್ಯಕ್ಕೆ, ಇನ್ನಷ್ಟು ವಿಶೇಷ ನೈವೇದ್ಯಗಳು ಬಳಕೆಯಲ್ಲಿದ್ದವು. (ಸಾಂಕೇತಿಕ ಚಿತ್ರ)
ತಿರುಪತಿ ಲಡ್ಡು ಪ್ರಸಾದಕ್ಕೆ 300ಕ್ಕೂ ಹೆಚ್ಚು ವರ್ಷಗಳ ಇತಿಹಾಸ, ಅದಕ್ಕೂ ಮೊದಲು ಏನಿತ್ತು ನೈವೇದ್ಯಕ್ಕೆ, ಇನ್ನಷ್ಟು ವಿಶೇಷ ನೈವೇದ್ಯಗಳು ಬಳಕೆಯಲ್ಲಿದ್ದವು. (ಸಾಂಕೇತಿಕ ಚಿತ್ರ)

ತಿರುಮಲ ತಿರುಪತಿ ದೇವಸ್ಥಾನ ಎಂದ ಕೂಡಲೇ ತತ್‌ಕ್ಷಣಕ್ಕೆ ನೆನಪಾಗುವುದು ಅಲ್ಲಿನ ಗುರುತಾಗಿ ಮನದಲ್ಲಿ ಛಾಪೊತ್ತಿರುವ ತಿರುಪತಿ ಲಡ್ಡು. ಹೌದು ಅದು ಈಗ ವಿವಾದದ ಕೇಂದ್ರ ಬಿಂದು. ತಿರುಪತಿ ಲಡ್ಡು ತಯಾರಿಸಲು ಬಳಸಿದ ತುಪ್ಪದಲ್ಲಿ ಪ್ರಾಣಿ ಕೊಬ್ಬು ಸೇರಿಕೊಂಡಿತ್ತು ಎಂಬ ಕಳವಳಕಾರಿ ಅಂಶ ಸೆಪ್ಟೆಂಬರ್ 19 ರಂದು ಬಹಿರಂಗವಾಗಿದೆ.

ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಹಿಂದಿನ ವೈಎಸ್‌ಆರ್‌ಸಿ ಸರ್ಕಾರದ ಅವಧಿಯಲ್ಲಿ ಈ ಅಪಚಾರವಾಗಿದೆ ಎಂದು ಲ್ಯಾಬ್ ವರದಿಯ ಅಂಶವನ್ನು ಬಹಿರಂಗಪಡಿಸಿದ್ದರು. ಅಲ್ಲಿಂದೀಚೆಗೆ ನಿತ್ಯವೂ ತಿರುಪತಿ ಪ್ರಸಾದ, ತಿರುಪತಿ ಲಡ್ಡು ಚರ್ಚೆಗೆ ಗ್ರಾಸವಾಗುತ್ತಲೇ ಇದೆ.

ಕಾರಣ ಇಲ್ಲದಿಲ್ಲ. ತಿರುಮಲ ತಿರುಪತಿ ಶ್ರೀ ವೆಂಕಟೇಶ್ವರ ದೇವರ ಪ್ರಸಾದವಾಗಿ ಭಕ್ತರಿಗೆ ಸಿಗುತ್ತಿರುವ ತಿರುಪತಿ ಲಡ್ಡು ಪ್ರಸಾದಕ್ಕೆ 300ಕ್ಕೂ ಹೆಚ್ಚು ವರ್ಷಗಳ ಇತಿಹಾಸ. ಅದೊಂದು ಕಾಲ ಇತ್ತು- ತಿರುಪತಿ ಲಡ್ಡು ಕಾಳಸಂತೆಯಲ್ಲೂ ಬಿಕರಿಯಾಗುವಷ್ಟು ಬೇಡಿಕೆ ಹೊಂದಿದ್ದ ಕಾಲವದು. ಇರಲಿ ಈಗ ತಿರುಪತಿ ಲಡ್ಡು ಪ್ರಸಾದದ ಇತಿಹಾಸ ಮತ್ತು ವಿಶೇಷಗಳ ಕಡೆಗೆ ಗಮನಹರಿಸೋಣ.

ತಿರುಪತಿ ಲಡ್ಡು; 300ಕ್ಕೂ ಹೆಚ್ಚು ವರ್ಷದ ಇತಿಹಾಸ

ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಲಡ್ಡು ಪ್ರಸಾದವನ್ನು ನೀಡುವ ಸಂಪ್ರದಾಯವು 300 ವರ್ಷಕ್ಕೂ ಹಿಂದೆ ಚಾಲ್ತಿಗೆ ಬಂತು. ಮೊದಲ ಬಾರಿಗೆ 1715ರ ಆಗಸ್ಟ್‌ 2 ರಂದು ಮೊದಲ ಬಾರಿಗೆ ಲಡ್ಡು ಪ್ರಸಾದ ನೀಡುವುದನ್ನು ಜಾರಿಗೊಳಿಸಲಾಯಿತು. ಪೋಟು (ದೇವರ ಅಡುಗೆ ಮನೆ) ಎಂಬ ಅಡುಗೆ ಮನೆಯಲ್ಲಿ ಇದನ್ನು ತಯಾರಿಸುವ ಪರಂಪರೆ ಬೆಳೆಯಿತು. ಸಾಂಪ್ರದಾಯಿಕ ಸಮುದಾಯದ ನುರಿತ ಬಾಣಸಿಗರು ಈ ಲಾಡನ್ನು ತಯಾರಿಸುತ್ತಾರೆ.

ತಿರುಪತಿ ಲಡ್ಡು ಪ್ರಸಾದವನ್ನು ಶ್ರೀವಾರಿ ಲಡ್ಡು ಎಂದೂ ಕರೆಯುವುದುಂಟು. 2009 ರಲ್ಲಿ ಭೌಗೋಳಿಕ ಗುರುತಿನ (ಜಿಐ) ಟ್ಯಾಗ್ ಪಡೆದ ತಿರುಮಲ ಲಡ್ಡು ಮೂರು ಶತನಮಾನಗಳಿಂದ ಭಕ್ತರ ಪ್ರೀತಿಗೆ ಪಾತ್ರವಾದ ಜನಪ್ರಿಯ ಪ್ರಸಾದವಾಗಿ ರೂಪುಗೊಂಡಿದೆ.

ತಿರುಮಲ ದೇವರಿಗೆ ನೈವೇದ್ಯ ವಿಶೇಷ - ಇತಿಹಾಸದ ಹೆಜ್ಜೆ ಗುರುತು

ಸ್ವತಂತ್ರ ಪತ್ರಕರ್ತೆ ಲಾಸ್ಯಾ ಶೇಖರ್ ಇದೇ ವಿಚಾರವಾಗಿ ಹಿಂದೂಸ್ತಾನ್ ಟೈಮ್ಸ್‌ಗೆ ವಿಶ್ಲೇಷಣಾತ್ಮಕ ಲೇಖನ ಬರೆದಿದ್ದು, ಹಲವು ವಿಚಾರಗಳನ್ನು ಉಲ್ಲೇಖಿಸಿದ್ದಾರೆ.

1) ಲಡ್ಡು ಪ್ರಸಾದದ ಕುರಿತು ತಿರುಮಲೈ ಓಝುಗು (Thirumalai Ozhugu) ಎಂಬ ತಮಿಳು ಪುಸ್ತಕದಲ್ಲಿ ಅರ್ಚಕ, ಇತಿಹಾಸಕಾರ ಗೋಕುಲ ಕೃಷ್ಣನ್‌ ಉಲ್ಲೇಖಿಸಿರುವುದು ಹೀಗೆ -"ದೇವರಿಗೆ ಲಡ್ಡು ನೈವೇದ್ಯವಾಗಿ ನೀಡಲಾಗುತ್ತಿತ್ತು. ಅದನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ಕೊಡುವ ಪರಿಪಾಠ 1940ರ ದಶಕದಲ್ಲಿ ಶುರುವಾಯಿತು. ಈ ಅಲಂಕಾರಿಕ ನೈವೇದ್ಯಗಳಿಗೆ ಮೊದಲು ವೆಂಟಕೇಶ್ವರನಿಗೆ ಮಣ್ಣಿನ ಪಾತ್ರೆಯಲ್ಲಿ ಮೊಸರು ಅನ್ನವನ್ನು ನೈವೇದ್ಯವಾಗಿ ಸಮರ್ಪಿಸಲಾಗುತ್ತಿತ್ತು. ಅದು ದೇವರ ಅಚ್ಚು ಮೆಚ್ಚಿನ ನೈವೇದ್ಯ. ಅದನ್ನು ಇಂದಿಗೂ ಮುಂದುವರಿಸಲಾಗಿದೆ".

2) “1976 ರಲ್ಲಿ ಪ್ರಕಟವಾದ ತಿರುಮಲ ತಿರುಪತಿ ದೇವಸ್ಥಾನಂ ದಿಟ್ಟಂ ಎಂಬ ಪುಸ್ತಕವು ಲಡ್ಡುಗಳನ್ನು ತಯಾರಿಸುವ ಮಾರ್ಗದರ್ಶಿಯಾಗಿದೆ. ದೇವಸ್ಥಾನದಲ್ಲಿ ಲಡ್ಡುವನ್ನು ಪರಿಚಯಿಸಿದವರು ಯಾರು ಎಂಬುದು ತಿಳಿದಿಲ್ಲವಾದರೂ, ಕ್ರಿ.ಶ. 1790 ರಷ್ಟು ಹಿಂದೆಯೇ ಲಡ್ಡು ಪ್ರಸಾದ ತಯಾರಿಯ ಉಲ್ಲೇಖವಿರುವುದನ್ನು ದಾಖಲೆಗಳು ತೋರಿಸುತ್ತವೆ ”ಎಂದು ತಿರುಪತಿಯ ಎಸ್‌ವಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪೇಟಾ ಶ್ರೀನಿವಾಸುಲು ರೆಡ್ಡಿ ಹಿಂದೂಸ್ತಾನ್ ಟೈಮ್ಸ್‌ಗೆ ತಿಳಿಸಿದ್ದಾರೆ.

3) ಪೇಟಾ ಶ್ರೀನಿವಾಸುಲು ರೆಡ್ಡಿ ಅವರು ದ ಸ್ಟೋರೀಸ್ ಆಫ್ ತಿರುಪತಿ ಎಂಬ ಪುಸ್ತಕ ಪ್ರಕಟಿಸಿದ್ದು, "ಅತಿರಸವನ್ನು ನೈವೇದ್ಯವನ್ನಾಗಿ ಬಳಸಲಾಗುತ್ತಿತ್ತು. ನಂತರ ಬೂಂದಿಯನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತಿತ್ತು. ಅದಾಗಿ ಲಡ್ಡು ಬಳಕೆಗೆ ಬಂತು ಎಂದು ಉಲ್ಲೇಖಿಸಿದ್ದಾರೆ.

4) ಕರಿಮೆಣಸು ಮತ್ತು ಇತರ ಪದಾರ್ಥಗಳನ್ನು ಒಳಗೊಂಡ ಗಾಢ-ಕಂದು ಬಣ್ಣದ ವಡೆ ನೈವೇದ್ಯಕ್ಕೆ ಬಳಕೆಯಾಗಿದೆ. ತಮಿಳು ಭಾಷೆಯ ಸಾಹಿತ್ಯಗಳಲ್ಲಿ ಇದರ ಉಲ್ಲೇಖ ಇದ್ದು, “ತಿರುಮಲೈ ಕು ವಡೈ ಅಳಗು” (ತಿರುಮಲಕ್ಕೆ ವಡೆಯೇ ಶೋಭೆ) ಎಂದಿದೆ. ಪೊಂಗಲ್‌ ಅನ್ನು ಕೂಡ ನೈವೇದ್ಯವಾಗಿ ಬಡಿಸಿದ್ದಕ್ಕೆ ದಾಖಲೆಗಳಿವೆ.

5) ತಿರುಮಲದಲ್ಲಿದೆ ಮೂರು ರೀತಿಯ ಲಡ್ಡುಗಳು - 750 ಗ್ರಾಂ ತೂಕದ ಆಸ್ಥಾನಂ ಲಡ್ಡು. ಇದರಲ್ಲಿ ಕೇಸರಿ, ಬಾದಾಮಿ, ಗೋಡಂಬಿ, ದ್ರಾಕ್ಷಿ ತುಂಬಿಕೊಂಡಿದ್ದು ಇದಕ್ಕೆ 200 ರೂಪಾಯಿ ದರ. ವಿಶೇಷ ಸೇವೆ ಇದ್ದರಷ್ಟೆ ಇದನ್ನು ಮಾಡುತ್ತಾರೆ. ಎರಡನೇಯದ್ದು ಕಲ್ಯಾಣೋತ್ಸವಂ ಲಡ್ಡು. ಕಲ್ಯಾಣೋತ್ಸವ ಸೇವೆಗೆ ನೈವೇದ್ಯವಾಗಿ ಬಳಸುವ ಲಡ್ಡು ಇದಾಗಿದ್ದು, ಸೇವೆ ಮಾಡಿಸಿದವರಿಗೆ ಪ್ರಸಾದ ರೂಪವಾಗಿ ನೀಡುತ್ತಾರೆ. ಇನ್ನು ಮೂರನೇಯದ್ದು ಪ್ರೋಕ್ತಂ ಲಡ್ಡು 160 - 175 ಗ್ರಾಂ ತೂಕ ಇರುತ್ತೆ. 50 ರೂಪಾಯಿ ದರ. ಇದಲ್ಲದೇ ನಾಲ್ಕನೇಯ ಲಡ್ಡು ಪ್ರಸಾದ ಗಾತ್ರದ ಇನ್ನೂ ಸಣ್ಣದು, ಭಕ್ತರಿಗೆ ಉಚಿತವಾಗಿ ನೀಡಲಾಗುತ್ತದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.