Tulsi: ಪೂಜೆಗೆ ಇರಲೇಬೇಕು ತುಳಸಿ: ಮನೆಗಳಲ್ಲಿ ತುಳಸಿ ಗಿಡ ನೆಡುವ ಮೊದಲು ಈ ನಿಯಮಗಳನ್ನು ಮರೆಯಬೇಡಿ-spiritual news tulsi rules to follow when planting a tulsi plant caring for tulsi at home prk ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Tulsi: ಪೂಜೆಗೆ ಇರಲೇಬೇಕು ತುಳಸಿ: ಮನೆಗಳಲ್ಲಿ ತುಳಸಿ ಗಿಡ ನೆಡುವ ಮೊದಲು ಈ ನಿಯಮಗಳನ್ನು ಮರೆಯಬೇಡಿ

Tulsi: ಪೂಜೆಗೆ ಇರಲೇಬೇಕು ತುಳಸಿ: ಮನೆಗಳಲ್ಲಿ ತುಳಸಿ ಗಿಡ ನೆಡುವ ಮೊದಲು ಈ ನಿಯಮಗಳನ್ನು ಮರೆಯಬೇಡಿ

ಹಿಂದೂಗಳಿಗೆ ಅತ್ಯಂತ ಪೂಜ್ಯನೀಯ ಸಸ್ಯವಾಗಿರುವ ತುಳಸಿ ಗಿಡವನ್ನು ಬೆಳೆಸುವಾಗ ಕೆಲವೊಂದು ನಿಯಮಗಳನ್ನು ಅನುಸರಿಸಬೇಕು.ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಪವಿತ್ರವಾದ ತುಳಸಿ ಗಿಡದ ಆರೈಕೆಗೆ ನಿರ್ದಿಷ್ಟ ಮಾರ್ಗಸೂಚಿಗಳನ್ನು ಅನುಸರಿಸುವುದು ಬಹಳ ಅತ್ಯಗತ್ಯ.ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ತುಳಸಿ ಗಿಡವನ್ನು ಬೆಳೆಸುವಾಗ ಕೆಲವೊಂದು ನಿಯಮಗಳನ್ನು ಅನುಸರಿಸಬೇಕು. ಈ ಬಗ್ಗೆ ಇಲ್ಲಿದೆ ಮಾಹಿತಿ.
ತುಳಸಿ ಗಿಡವನ್ನು ಬೆಳೆಸುವಾಗ ಕೆಲವೊಂದು ನಿಯಮಗಳನ್ನು ಅನುಸರಿಸಬೇಕು. ಈ ಬಗ್ಗೆ ಇಲ್ಲಿದೆ ಮಾಹಿತಿ.

ತುಳಸಿಯು ಹಿಂದೂಗಳಿಗೆ ಅತ್ಯಂತ ಪೂಜ್ಯನೀಯವಾಗಿದ್ದು, ಇದನ್ನು ಬಹಳ ಪವಿತ್ರವೆಂದು ಕರೆಯಲಾಗುತ್ತದೆ. ಮನೆಯಲ್ಲಿ ತುಳಸಿ ಬೆಳೆಯುವುದರಿಂದ ಸೌಂದರ್ಯದ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ತುಳಸಿಯಲ್ಲಿರುವ ಆರೊಮ್ಯಾಟಿಕ್ ಎಲೆಗಳು ಅವುಗಳ ಆಧ್ಯಾತ್ಮಿಕ ಮಹತ್ವ ಮತ್ತು ಅವುಗಳ ಔಷಧೀಯ ಗುಣಗಳಿಂದಾಗಿಯೂ ಬಹಳ ಪ್ರಸಿದ್ಧಿ ಪಡೆದಿದೆ. ಮಕ್ಕಳು ಶೀತ, ಕಫದಿಂದ ಬಳಲುತ್ತಿದ್ದರೆ, ತುಳಸಿ ಎಲೆಯನ್ನು ಹಿಂಡಿ ಅದರ ರಸವನ್ನು ಮಕ್ಕಳಿಗೆ ಕುಡಿಸಲಾಗುತ್ತದೆ. ಹೀಗೆ ತುಳಸಿ ಎಲೆಗಳ ಆರೋಗ್ಯ ಪ್ರಯೋಜನ ಒಂದೆರಡಲ್ಲ.

ಇಂತಹ ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಪವಿತ್ರವಾದ ತುಳಸಿ ಗಿಡದ ಆರೈಕೆಗೆ ನಿರ್ದಿಷ್ಟ ಮಾರ್ಗಸೂಚಿಗಳನ್ನು ಅನುಸರಿಸುವುದು ಬಹಳ ಅತ್ಯಗತ್ಯ. ತುಳಸಿ ಗಿಡವನ್ನು ಬೆಳೆಸುವಾಗ ಕೆಲವೊಂದು ನಿಯಮಗಳನ್ನು ಅನುಸರಿಸಲೇಬೇಕು. ಹಿಂದೂಗಳಿಗೆ ಅತ್ಯಂತ ಪೂಜ್ಯನೀಯ ಸಸ್ಯ ಆಗಿರುವುದರಿಂದ ಮನೆಯಲ್ಲಿ ತುಳಸಿ ಗಿಡ ಯಾವ ದಿಕ್ಕಿನಲ್ಲಿರಬೇಕು ಎಂಬಿತ್ಯಾದಿ ನಿಯಮಗಳ ಬಗ್ಗೆ ಇಲ್ಲಿದೆ ಮಾಹಿತಿ:

ಸರಿಯಾದ ದಿಕ್ಕಿನ ಆಯ್ಕೆ: ವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಗಿಡವನ್ನು ಪೂರ್ವ ದಿಕ್ಕಿನಲ್ಲಿ ನೆಡಬೇಕು. ಈ ಮೂಲಕ ಸಸ್ಯವು ಸಾಕಷ್ಟು ಸೂರ್ಯನ ಬೆಳಕನ್ನು ಪಡೆಯುತ್ತದೆ. ಅಪ್ಪಿತಪ್ಪಿಯೂ ದಕ್ಷಿಣ ದಿಕ್ಕಿನಲ್ಲಿ ತುಳಸಿ ಗಿಡವನ್ನು ಇಡಬೇಡಿ. ಇದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವ ಮೂಲಕ ಋಣಾತ್ಮಕ ಪರಿಣಾಮ ಬೀರಬಹುದು. ಇದರಿಂದ ದಂಪತಿಗಳ ಮಧ್ಯೆ ಕಲಹ, ಮನಸ್ತಾಪ ಇತ್ಯಾದಿಗೆ ಕಾರಣವಾಗಬಹುದು.

ಪವಿತ್ರತೆ ಕಾಪಾಡಿ: ತುಳಸಿ ಗಿಡವನ್ನು ಪೂಜ್ಯನೀಯವಾಗಿ ನೋಡಿಕೊಳ್ಳಿ. ಪೊರಕೆ, ಡಸ್ಟ್‌ಬಿನ್‌, ಚಪ್ಪಲಿಗಳು ಇತ್ಯಾದಿ ವಸ್ತುಗಳನ್ನು ತುಳಸಿ ಗಿಡದ ಬಳಿ ಇಡಬಾರದು. ಇದು ಸಸ್ಯದ ಪವಿತ್ರತೆಯನ್ನು ಕಾಪಾಡುತ್ತದೆ.

ಎತ್ತರದಲ್ಲಿ ನಿಯೋಜಿಸಿ: ತುಳಸಿ ಗಿಡವನ್ನು ಸ್ವಲ್ಪ ಎತ್ತರದ ಸ್ಥಳದಲ್ಲಿ ನಿಯೋಜಿಸಿ. ತುಳಸಿ ಕಟ್ಟೆಯಂತೆ ನಿರ್ಮಿಸಿ ಅದರ ಮೇಲೆ ಗಿಡವನ್ನು ನೆಡಬಹುದು. ಈ ರೀತಿ ಮಾಡುವುದು ಬಹಳ ಮಂಗಳಕರ ಎಂದು ಪರಿಗಣಿಸಲಾಗಿದೆ.

ನೀರು ಹಾಕುವುದು: ತುಳಸಿ ಸಸ್ಯಕ್ಕೆ ನಿಯಮಿತವಾಗಿ ನೀರು ಹಾಕುವುದರಿಂದ ಮಣ್ಣು ತೇವವಾಗಿರುತ್ತದೆ. ಪ್ರತಿದಿನ ತುಳಸಿ ಗಿಡಕ್ಕೆ ನೀರು ಹಾಕಿ. ಆದರೆ, ಅತಿಯಾಗಿ ನೀರು ಹಾಕದಿರಿ. ಏಕೆಂದರೆ ಅದು ಬೇರುಗಳನ್ನು ಹಾನಿಗೊಳಿಸುತ್ತದೆ.

ತುಳಸಿ ಗಿಡ ಒಣಗದಂತೆ ನೋಡಿಕೊಳ್ಳಿ: ಒಣಗಿದ ತುಳಸಿ ಗಿಡಗಳು ದುರಾದೃಷ್ಟವನ್ನು ತರುತ್ತವೆ ಎಂದು ನಂಬಲಾಗಿದೆ. ಒಂದು ವರ್ಷದ ನಂತರ ಅವು ಒಣಗುವುದು ಸಾಮಾನ್ಯ. ಈ ವೇಳೆ ಅದನ್ನು ಬದಲಾಯಿಸಿ, ಬೇರೆ ತುಳಸಿ ಗಿಡವನ್ನು ನೆಡಬಹುದು. ಒಣಗಿರುವ ತುಳಸಿ ಗಿಡವನ್ನು ಪವಿತ್ರ ನದಿ ಅಥವಾ ಜಲಮೂಲದಲ್ಲಿ ವಿಲೇವಾರಿ ಮಾಡಿ.

ಸೂಕ್ತ ಸಂಖ್ಯೆ: ಧನಾತ್ಮಕ ಫಲಿತಾಂಶಕ್ಕಾಗಿ ವಾಸ್ತು ಪ್ರಕಾರ, ತುಳಸಿ ಸಸ್ಯಗಳನ್ನು ಬೆಸ ಸಂಖ್ಯೆಯಲ್ಲಿ ಇರಿಸಬೇಕು ಎಂದು ನಂಬಲಾಗಿದೆ. ಉದಾಹರಣೆಗೆ ಒಂದು ಅಥವಾ ಮೂರು ಅಥವಾ ಐದು ಸಂಖ್ಯೆಯಲ್ಲಿ ತುಳಸಿ ಗಿಡವನ್ನು ನೆಡಬೇಕು. ಇದರಿಂದ ಕುಟುಂಬದಲ್ಲಿ ಸಾಮರಸ್ಯ ಮತ್ತು ಸಮತೋಲನ ಉಂಟಾಗುತ್ತದೆ ಎಂದು ನಂಬಲಾಗಿದೆ.

ಈಶ್ವರನಿಗೆ ಅರ್ಪಿಸುವಂತಿಲ್ಲ ತುಳಸಿ ಎಲೆ

ತುಳಸಿ ಅತ್ಯಂತ ಪೂಜ್ಯನೀಯವಾಗಿದ್ದರೂ ಈಶ್ವರನಿಗೆ ತುಳಸಿ ಎಲೆಗಳನ್ನು ಅರ್ಪಿಸುವಂತಿಲ್ಲ ಎಂಬ ನಂಬಿಕೆಯಿದೆ. ಏಕೆಂದರೆ ಇದರ ಹಿಂದೆ ಪುರಾಣದ ಕಥೆಯಿದೆ. ವಿಷ್ಣುವಿನ ಪೂಜೆಗೆ ತುಳಸಿಯಿಲ್ಲದಿದ್ದರೆ ಅಪೂರ್ಣ ಎಂದು ಹೇಳಲಾಗುತ್ತದೆ. ಆದರೆ, ತುಳಸಿಯು ಶಿವನನ್ನು ಮಾತ್ರ ಪೂಜಿಸಲು ಇಷ್ಟಪಡುವುದಿಲ್ಲವಂತೆ.

ಹಿಂದೂ ಪುರಾಣಗಳ ಪ್ರಕಾರ, ಹಿಂದೆ ಜಲಂಧರ ಎಂಬ ರಾಕ್ಷಸನಿದ್ದ. ಶಿವನನ್ನು ಹೊರತು ಬೇರೆ ಯಾರಿಗೂ ಈತನನ್ನು ವಧಿಸಲು ಆಗದಂತಹ ವರವನ್ನು ಪಡೆದಿದ್ದ. ಈತನ ಪತ್ನಿ ವೃಂದಾ ದೇವಿ (ತುಳಸಿ). ಬಹಳ ಪರಾಕ್ರಮಿಯಾಗಿ ಬೆಳೆದ ಜಲಂಧರ ದೇವತೆಗಳನ್ನು ಹೆದರಿಸಿದ್ದ. ಈತನ ಪರಾಕ್ರಮಕ್ಕೆ ಹೆದರಿ ಓಡಿದ ದೇವತೆಗಳು ಶಿವನಲ್ಲಿ ಮೊರೆಯಿಟ್ಟರು. ಹೀಗೆ ಶಿವನಿಂದ ಜಲಂಧರನ ಮರಣವಾಗಿ, ದೇವತೆಗಳ ಸಂಕಟ ಪರಿಹರಿಸಲ್ಪಟ್ಟಿತು. ಆತನ ಪತ್ನಿ ವೃಂದಾ ‘ತುಳಸಿ’ಯಾಗಿ ಮರುಜನ್ಮ ಪಡೆಯುವ ವರವನ್ನು ಪಡೆದುಕೊಂಡಳು. ಆದರೆ, ತುಳಸಿ ಎಲೆಗಳನ್ನು ಶಿವನಿಗೆ ಅರ್ಪಿಸುವುದನ್ನು ಮಾತ್ರ ನಿರಾಕರಿಸಿದಳು. ಹೀಗಾಗಿ ಈಶ್ವರನಿಗೆ ತುಳಸಿ ಎಲೆಗಳನ್ನು ಅರ್ಪಿಸಲಾಗುವುದಿಲ್ಲ ಎಂದು ನಂಬಲಾಗಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.