Vastu Tips: ಮನೆಯಲ್ಲಿ ಸದಾ ಸಂಪತ್ತು, ಸಂತೋಷ ತುಂಬಿರಬೇಕು ಅಂದ್ರೆ ಹೂದೋಟ ಹೀಗಿರಬೇಕು; ಗಾರ್ಡನಿಂಗ್ ವಾಸ್ತು ನಿಯಮಗಳಿವು
ವಾಸ್ತುಶಾಸ್ತ್ರದಲ್ಲಿ ಗಾರ್ಡನಿಂಗ್ ಮಾಡುವುದಕ್ಕೂ ಕ್ರಮವಿದೆ. ಗಿಡಗಳನ್ನು ಸರಿಯಾದ ರೀತಿಯಲ್ಲಿ, ಸರಿಯಾದ ಜಾಗದಲ್ಲಿ ನೆಡುವುದರಿಂದ ಕುಟುಂಬದ ಏಳಿಗೆಯ ಜೊತೆಗೆ ಕುಟುಂಬದವರಿಗೆ ಯಶಸ್ಸೂ ಲಭಿಸುತ್ತದೆ. ಅದೃಷ್ಟ, ಯಶಸ್ಸು ಹಾಗೂ ಸಂಪತ್ತನ್ನು ಬರಮಾಡಿಕೊಳ್ಳಲು ಈ 10 ವಾಸ್ತುಸಲಹೆಗಳನ್ನು ತಪ್ಪದೇ ಪಾಲಿಸಿ ನೋಡಿ.
ವಾಸ್ತುಶಾಸ್ತ್ರವೆಂಬುದು ಬರಿಯ ಮನೆಯ ಒಳಾಂಗಣ, ದೇವರ ಮನೆ, ಅಡುಗೆ ಕೋಣೆ, ಮನೆಯಲ್ಲಿರಿಸುವ ವಸ್ತುಗಳಿಗಷ್ಟೇ ಸೀಮಿತವಾಗಿಲ್ಲ. ಬದಲಾಗಿ ಮನೆಯನ್ನು, ಸುತ್ತಮುತ್ತಲಿನ ಪರಿಸರದೊಂದಿಗೆ ಸಂಪರ್ಕಿಸುವಂತೆ ಮಾಡಿ, ಅಭಿವೃದ್ಧಿಯ ದಿಶೆಯನ್ನು ತೋರಿಸಿಕೊಡುತ್ತದೆ. ಅದರಲ್ಲೂ ಮನೆಯ ಅಂದವನ್ನು ಹೆಚ್ಚಿಸುವ ಉದ್ಯಾನವನ್ನು ಕೇಂದ್ರೀಕರಿಸುವ ವಾಸ್ತುಶಾಸ್ತ್ರವು, ಕುಟುಂಬದಲ್ಲಿ ಅದೃಷ್ಟ ತುಂಬಿಕೊಳ್ಳಲು ಗಿಡಗಳನ್ನು ಸರಿಯಾದ ರೀತಿಯಲ್ಲಿ ನೆಡುವುದು ಮುಖ್ಯ ಎನ್ನುತ್ತದೆ. ಅದೃಷ್ಟ ಮತ್ತು ಸಮೃದ್ಧಿಗಾಗಿ ಈ 10 ಪರಿಣಾಮಕಾರಿ ವಾಸ್ತು ಸಲಹೆಗಳನ್ನು ಅನುಸರಿಸಿ.
ಗಾರ್ಡನಿಂಗ್‌ನಲ್ಲಿ ಅನುಸರಿಸಬೇಕಾದ 10 ಪರಿಣಾಮಕಾರಿ ವಾಸ್ತು ಸಲಹೆಗಳಿವು
1. ಉದ್ಯಾನದ ಮಧ್ಯಭಾಗವು ಯಾವಾಗಲೂ ತೆರೆದಿರಬೇಕು. ಅಂದರೆ ಮಧ್ಯಭಾಗದಲ್ಲಿ ಯಾವುದೇ ಗಿಡಗಳನ್ನು ನೆಡುವುದಾಗಲಿ, ಕಳೆಗಳು ತುಂಬಿಕೊಳ್ಳುವೂದಾಗಲೀ ಒಳ್ಳೆಯದಲ್ಲ.
2. ಉದ್ಯಾನ ನಿರ್ಮಾಣಕ್ಕೆ ಮನೆಯ ಉತ್ತರ ಅಥವಾ ಪಶ್ಚಿಮ ಭಾಗವು ಸೂಕ್ತವಾಗಿದೆ. ಇಲ್ಲಿ ನಿಮಗಿಷ್ಟವಾದ ಗಿಡಗಳನ್ನು ನೆಡುವುದರಿಂದ ಮನೆಯಲ್ಲಿ ಸುಖ ಶಾಂತಿ, ನೆಮ್ಮದಿ ನೆಲೆಸುವಂತಾಗುತ್ತದೆ.
3. ಮನೆಯ ಆಗ್ನೇಯ ಅಥವಾ ನೈಋತ್ಯ ಭಾಗದಲ್ಲಿ ಉದ್ಯಾನವನ್ನು ಮಾಡುವುದು ಇಲ್ಲವೇ ಗಿಡಗಳನ್ನು ಬೆಳೆಸುವುದು ಒಳ್ಳೆಯದಲ್ಲ. ಇದು ಮನೆಯಲ್ಲಿ ನಿತ್ಯವೂ ಆತಂಕವನ್ನು ಹುಟ್ಟುಹಾಕುತ್ತದೆ. ಮನೆ ಮಂದಿಯ ಮನಸ್ಸನ್ನು ಕೆಡುವಂತೆ ಮಾಡುತ್ತದೆ. ಅದನ್ನು ತಪ್ಪಿಸಲೇಬೇಕು.
4. ಉದ್ಯಾನದ ಮಧ್ಯಭಾಗದಲ್ಲಿ ದೊಡ್ಡ ಮರಗಳು ಅಥವಾ ಸಸ್ಯಗಳನ್ನು ಬೆಳೆಸುವುದು ಸೂಕ್ತವಲ್ಲ. ಇದು ಮನಸ್ಸಿನ ಗೊಂದಲ, ಚಾಂಚಲ್ಯಕ್ಕೆ ಕಾರಣವಾಗುತ್ತದೆ.
5. ಮನೆಯ ಯಾವ ಭಾಗದಲ್ಲಿ ತುಳಸಿ ಗಿಡಗಳಿದ್ದರೆ ಮನೆಗೆ ಶ್ರೇಯಸ್ಸು ಗೊತ್ತೇ? ಅಪ್ಪಿತಪ್ಪಿಯೂ ತುಳಸಿ ಗಿಡಗಳನ್ನು ಮನೆಯ ಉತ್ತರ ಭಾಗದಲ್ಲಿ ಬಿಟ್ಟರೆ ಇನ್ಯಾವ ಭಾಗದಲ್ಲೂ ನೆಡಬೇಡಿ. ಮನೆಯ ಅಭಿವೃದ್ಧಿಯ ಸೂಚಕವಿದು.
6. ಮನೆಯ ಅಂದವನ್ನು ಹೆಚ್ಚಿಸಲು ಹೂವಿನ ಕುಂಡಗಳನ್ನು ಹಾಕಬೇಕೆಂದುಕೊಂಡಿದ್ದರೆ ಮನೆಯ ಪೂರ್ವಾಭಿಮುಖವಾಗಿ ಇಡುವುದು ಒಳ್ಳೆಯದು.
7. ಮನೆಯೊಳಗಿನ ಅಲಂಕಾರಕ್ಕಾಗಿ ಬೋನ್ಸಾಯ್ ಗಿಡಗಳನ್ನು ತರುವ ಯೋಚನೆ ಮಾಡಿದ್ದೀರಾ? ಹಾಗಾದರೆ ಆ ಯೋಚನೆಯನ್ನು ಇಂದೇ ಕೈಬಿಡಿ. ಏಕೆಂದರೆ ಬೋನ್ಸಾಯ್ ಅನ್ನು ಮನೆಯೊಳಗೆ ಇಡುವುದು ಒಳ್ಳೆಯದಲ್ಲ. ಇದರಿಂದಾಗಿ ಮನೆಯ ಮಾಲೀಕರಿಗೆ ಹಾನಿಯಾಗಬಹುದು.
8. ಹೂವಿನ ಬಳ್ಳಿಗಳು, ಇಲ್ಲವೇ ಬಳ್ಳಿಯಂತೆ ಹಬ್ಬಿಕೊಂಡು ಹೋಗುವ ಅಲಂಕಾರಿ ಒಳಾಂಗಣ ಸಸ್ಯಗಳನ್ನು ಲಿವಿಂಗ್ ರೂಮಿನಲ್ಲಿಟ್ಟುಕೊಳ್ಳುವುದು ಉತ್ತಮ.
9. ಮುಳ್ಳಿನ ಗಿಡಗಳನ್ನು ಮನೆಯೊಳಗೆ ಬೆಳೆಸದಿರುವುದು ಒಳ್ಳೆಯದು. ಯಾಕೆಂದರೆ ಇದು ದುರಾದೃಷ್ಟವನ್ನು ಮನೆಯೊಳಗೆ ಹೊತ್ತು ತರುತ್ತದೆ, ಮನೆ ಮಂದಿಗೆ ನೋವನ್ನುಂಟು ಮಾಡುತ್ತದೆ ಎನ್ನುತ್ತದೆ ವಾಸ್ತುಶಾಸ್ತ್ರ.
10. ಮಲಗುವ ಕೋಣೆಗಳಲ್ಲಿ ಒಳಾಂಗಣ ಸಸ್ಯ (ಇಂಡೋರ್ ಪ್ಲ್ಯಾಂಟ್)ಗಳನ್ನು ಬೆಳೆಸುವುದು ಇಲ್ಲವೇ ಇಟ್ಟುಕೊಳ್ಳುವುದು ಸೂಕ್ತವಲ್ಲ. ಅದೃಷ್ಟ ಮತ್ತು ಸಿರಿವಂತಿಕೆಯನ್ನು ತರಲು, ಮನಿ ಪ್ಲ್ಯಾಂಟ್ ಗಳನ್ನು ಮಾತ್ರವೇ ಮಲಗುವ ಕೋಣೆಯೊಳಗೆ ಇರಿಸಬಹುದು.
ಒಳಾಂಗಣ ಸಸ್ಯಗಳ ಬಗೆಗೆ ತಿಳಿಯಲೇಬೇಕಾದ ವಾಸ್ತು ಸಲಹೆಗಳು
- ಲಿವಿಂಗ್ ರೂಮಿನಲ್ಲಿ ಅದೃಷ್ಟದ ಬಿದಿರನ್ನು ನೆಡುವುದರಿಂದ ಮನೆಗೆ ಅದೃಷ್ಟ, ಸಂಪತ್ತು ಹೊತ್ತು ತರುತ್ತದೆ.
- ಮಲಗುವ ಕೋಣೆಯ ಪೂರ್ವ ಅಥವಾ ದಕ್ಷಿಣ ಭಾಗದಲ್ಲಿ ಹೂವಿನ ಗಿಡಗಳನ್ನು ನೆಡುವುದರಿಂದ ಮನೆಯಲ್ಲಿ ಧನಾತ್ಮಕ ಚಿಂತನೆಗಳು ತುಂಬಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಕೋಣೆಯೊಳಗಿನ ಮಾಲಿನ್ಯಗಳನ್ನು ಹೀರಿಕೊಳ್ಳುವ ಮೂಲಕ ಸುತ್ತಮುತ್ತಲಿನ ಪರಿಸರವನ್ನು ಶುಚಿಗೊಳಿಸುತ್ತದೆ.
- ಅಲೋವೆರಾ ಗಿಡಗಳು ಹೆಚ್ಚಿಗೆ ಆಮ್ಲಜನಕವನ್ನು ಉತ್ಪಾದಿಸುತ್ತದೆ. ಈ ಗಿಡಗಳನ್ನು ಮನೆಯ ಉತ್ತರ ಅಥವಾ ಪೂರ್ವಕ್ಕೆ ಅಭಿಮುಖವಾಗಿ ನೆಡಬೇಕು. ಇದರಿಂದ ಮನೆಯಲ್ಲಿ ಸಮೃದ್ಧಿ ಮತ್ತು ಸಂತೋಷ ಉಕ್ಕಿ ಹರಿಯುತ್ತದೆ. ಅಲ್ಲದೆ ಇದು ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಮನೆಯ ಅಂದವನ್ನು ಹೆಚ್ಚಿಸಲಿ ಎಂಬ ಕಾರಣಕ್ಕೆ ವಾಸ್ತು ಶಾಸ್ತ್ರವನ್ನು ಲೆಕ್ಕಿಸದೆ, ದಿಕ್ಕುಗಳನ್ನು ಗಮನಿಸದೆ ಗಿಡಗಳನ್ನು ನೆಟ್ಟು ಬೆಳೆಸಬೇಡಿ. ಈ ವಾಸ್ತು ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು ಮನೆಯನ್ನು, ಮನೆಯ ಉದ್ಯಾನವನ್ನು ಗಿಡಗಳಿಂದ ಜೋಡಿಸಿಕೊಳ್ಳಿ. ಇದರಿಂದ ನಿಮ್ಮ ಮನೆಯಲ್ಲಿ ಅದೃಷ್ಟ ಮನೆಮಾಡಲಿದ್ದು, ನೀವು ಮುಟ್ಟಿದ್ದೆಲ್ಲವೂ ಚಿನ್ನವಾಗುವುದರಲ್ಲಿ ಸಂದೇಹವಿಲ್ಲ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)