ಕಲ್ಕಿ ಯಾರು? ಕಲಿಯುಗದಲ್ಲಿ ಮಹಾವಿಷ್ಣುವಿನ 10ನೇ ಅವತಾರದ ಉದ್ದೇಶವೇನು? ಕಲ್ಕಿ ಅವತಾರದ ಕಥೆ ಇಲ್ಲಿದೆ
ಕಲಿಯುಗದಲ್ಲಿ ಶ್ರೀಹರಿಯು ಕಲ್ಕಿಯ ಅವತಾರ ತಾಳುತ್ತಾನೆ ಎಂಬ ವಿಚಾರ ಹಲವರಿಗೆ ತಿಳಿದಿದೆ. ಆದರೆ ಯಾರು ಈ ಕಲ್ಕಿ? ಶ್ರೀ ಮಹಾವಿಷ್ಣುವು ಕಲಿಯುಗದಲ್ಲಿ 10ನೇ ಅವತಾರ ತಾಳುವ ಉದ್ದೇಶವೇನು? ಕಲ್ಕಿ ಅವತಾರದ ನಂತರ ಭೂಮಿಯಲ್ಲಿ ಏನೆಲ್ಲಾ ಆಗುತ್ತದೆ? ಇತ್ಯಾದಿ ಪ್ರಶ್ನೆಗಳಿಗೆ ಜ್ಯೋತಿಷಿ ಚಿಲಕಮರ್ತಿ ಪ್ರಭಾಕರ ಶರ್ಮಾ ಅವರು ಈ ಬರಹದಲ್ಲಿ ಉತ್ತರಿಸಿದ್ದಾರೆ.
ಕಲಿಯುಗವು ಬಹಳ ವಿಚಿತ್ರವಾದುದು. ನಮ್ಮ ಪುರಾಣಗಳ ಪ್ರಕಾರ ಮಹಾಭಾರತದ ಯುದ್ಧ ಮುಗಿದು ಕಲಿಯುಗವು ಪ್ರಾರಂಭವಾದಾಗ ಕಾಳಿಯು ಬ್ರಹ್ಮನಿಗೆ ಕಾಣಿಸಿಕೊಂಡಳು. ಕಾಳಿಯ ಅವತಾರ ಹೀಗಿತ್ತು; ಬ್ರಹ್ಮನ ಎದುರು ನೇರವಾಗಿ ಪ್ರತ್ಯಕ್ಷಳಾದ ಕಾಳಿ ಬಲಗೈಯಲ್ಲಿ ಖಡ್ಗ, ಎಡಗೈಯಲ್ಲಿ ರುಂಡವನ್ನು ಹಿಡಿದುಕೊಂಡು ನಾಲಿಗೆಯನ್ನು ಹೊರ ಚಾಚಿ ಉಗ್ರರೂಪಿಯಾಗಿ ಬೃಹದಾಕಾರದಲ್ಲಿ ದರ್ಶನ ನೀಡಿದ್ದಳು. ಹಾಗಾದರೆ ಬ್ರಹ್ಮನ ಎದುರು ಕಾಳಿಯು ಈ ಭಯಂಕರ ಆಕಾರದಲ್ಲಿ ಕಾಣಿಸಿಕೊಳ್ಳಲು ಕಾರಣವೇನು?
ಕಲಿಯುಗದಲ್ಲಿ ಅನ್ಯಾಯ, ಅಧರ್ಮಗಳು ಹೆಚ್ಚಾಗುತ್ತವೆ. ಮನುಷ್ಯನು ದುರಾಸೆಯಿಂದ ಹಲವು ಕೆಟ್ಟ ಕೆಲಸಗಳನ್ನು ಮಾಡುತ್ತಾನೆ. ಕಾಮ, ಕ್ರೋಧದಲ್ಲಿ ಮನುಷ್ಯರು ಬಂಧಿತರಾಗುತ್ತಾರೆ. ಅಂತಹ ಸಮಯದಲ್ಲಿ ಕಲಿಯುಗದ ಅಂತ್ಯದಲ್ಲಿ ಕಲ್ಕಿ ಅವತಾರದಲ್ಲಿ ಭಗವಂತನು ಜನ್ಮ ತಾಳಿ ಪಾಪಿಗಳು, ದುಷ್ಟರನ್ನು ನಾಶ ಮಾಡಿ ಧರ್ಮ ಸ್ಥಾಪನೆ ಮಾಡುತ್ತಾನೆ.
ಕಲಿಯುಗವು ದುಶ್ಚಟ, ಸ್ವಾರ್ಥ, ಷಡ್ಯಂತ್ರ, ವಂಚನೆ, ಸೋಲು, ಧರ್ಮ ಭ್ರಷ್ಟತೆ, ಅಧರ್ಮಗಳಿಂದ ತುಂಬಿದ್ದು, ಜನರು ಸುಖ-ಶಾಂತಿಯಿಂದ ದೂರವಾಗಿ ನೆಮ್ಮದಿಯೇ ಇಲ್ಲದಂದೆ ಬದುಕುತ್ತಿದ್ದಾರೆ. ಇಂದಿನ ಯುಗದಲ್ಲಿ ಹಣದ ಪ್ರಭಾವದಿಂದ ಜನರು ಅನ್ಯಾಯವನ್ನೇ ಮಾಡುತ್ತಿದ್ದಾರೆ. ಭ್ರಷ್ಟರು ಹೆಚ್ಚುತ್ತಿದ್ದಾರೆ. ಪಾಪದಿಂದ ಭೂಮಿಯು ವಿಭಜನೆಯಾದರೆ, ಧರ್ಮವು ನಿಲ್ಲುವುದಿಲ್ಲ, ಶಾಂತಿ ನಾಶವಾಗುತ್ತದೆ.
ಕಲ್ಕಿ ಎಂದರೆ ಯಾರು?
ಕಲ್ಕಿ ಎಂದರೆ ಮಹಾವಿಷ್ಣುವಿನ ಅವತಾರ. ವಿಷ್ಣು ದುಷ್ಟರನ್ನು ನಾಶಮಾಡುತ್ತಾನೆ. ಪಾಪಿಗಳನ್ನು ಶಿಕ್ಷಿಸುತ್ತಾನೆ ಮತ್ತು ಭೂಮಿಯ ಭಾರವನ್ನು ಕಡಿಮೆ ಮಾಡುತ್ತಾನೆ. ಮಹಾವಿಷ್ಣುವಿನ ಕೊನೆಯ ಮತ್ತು 10ನೇ ಅವತಾರವಾಗಿ ಕಲ್ಕಿ ಜನಿಸುತ್ತಾನೆ. ಕಲ್ಕಿಯು ಬಿಳಿ ಕುದುರೆಯ ಮೇಲೆ ಖಡ್ಗ ಹಿಡಿದು ಸಮಸ್ತ ಲೋಕವನ್ನು ಸುತ್ತುತ್ತಾ ದುಷ್ಟರನ್ನು ಶಿಕ್ಷಿಸುತ್ತಾನೆ.
ದ್ವಾಪರ ಯುಗದ ಅಂತ್ಯದಲ್ಲಿ ಶ್ರೀಕೃಷ್ಣನ ಮರಣದ ನಂತರ ತಕ್ಷಣಕ್ಕೆ ಜನಿಸಿದ ಕಲಿಪುರುಷನು ಎಲ್ಲಾ ದುಷ್ಕೃತ್ಯಗಳಿಗೆ ಮತ್ತು ಪಾಪಗಳಿಗೆ ಕಾರಣನಾಗಿದ್ದಾನೆ. ಎಣ್ಣೆಯುಕ್ತ, ಕಪ್ಪು ದೇಹ, ಬೆಂಕಿಯಂತಹ ಕಣ್ಣುಗಳು, ಭವ್ಯವಾದ ಆಕೃತಿ ಮತ್ತು ಹಾವಿನಂತೆ ಬಾಯಿಯನ್ನು ಹೊಂದಿರುವ ಕಲಿಪುರುಷ ನೋಡಲು ಭಯಂಕರವಾಗಿದ್ದಾನೆ. ಕಲಿಪುರುಷನು ಯಾರ ಮಾತಿಗೂ ಬೆಲೆ ಕೊಡುವುದಿಲ್ಲ. ಸ್ತ್ರೀ ದ್ವೇಷಿ, ಅನ್ಯಾಯ ಮತ್ತು ಸುಳ್ಳನ್ನು ನಂಬುವವನು. ಕಲಿ ಪುರುಷನಿಂದ ಜಗತ್ತಿನ ಶಕ್ತಿ ನಾಶವಾಗುತ್ತದೆ. ರೋಗಗಳು ಹೆಚ್ಚಾಗುತ್ತವೆ. ಅರಾಜಕತೆ ಮೇಲುಗೈ ಸಾಧಿಸುತ್ತದೆ. ಸಂತೋಷ ಮತ್ತು ಶಾಂತಿ ಕದಡುತ್ತದೆ.
ಜಗತ್ತಿನಲ್ಲಿ ಪಾಪದ ಭಯವು ನಾಶವಾಗುತ್ತದೆ. ದೇಗುಲಗಳ ಹಿರಿಮೆ ಕಡಿಮೆಯಾಗಲಿದೆ. ಸಂಪತ್ತು ಮತ್ತು ದುಷ್ಟತನವು ಹೆಚ್ಚಾಗುತ್ತದೆ ಮತ್ತು ಸದಾಚಾರವು ದುರ್ಲಭವಾಗುತ್ತದೆ. ಈ ಕಲಿಯುಗದ ಅನಿಷ್ಟಗಳನ್ನು ಹೋಗಲಾಡಿಸಲು, ಯುಗಯುಗಾಂತರಗಳಿಂದ ಅವತಾರಗಳ ಮೂಲಕ ಜಗತ್ತನ್ನು ರಕ್ಷಿಸುತ್ತಿರುವ ಶ್ರೀಮನ್ನಾರಾಯಣನನ್ನು ಕಲ್ಕಿ ಅವತಾರವಾಗಿ ಪುನಃ ಜನಿಸಿ ಬರುತ್ತಾನೆ ಎಂಬ ನಂಬಿಕೆ ಇದೆ.