Tulasi Leaves: ಈ ದಿನದಂದು ತಪ್ಪಿಯೂ ತುಳಸಿ ದಳಗಳನ್ನು ಕೀಳಬೇಡಿ, ಅಂದು ಗಿಡಕ್ಕೆ ನೀರು ಹಾಕೋದು ಸಲ್ಲ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Tulasi Leaves: ಈ ದಿನದಂದು ತಪ್ಪಿಯೂ ತುಳಸಿ ದಳಗಳನ್ನು ಕೀಳಬೇಡಿ, ಅಂದು ಗಿಡಕ್ಕೆ ನೀರು ಹಾಕೋದು ಸಲ್ಲ

Tulasi Leaves: ಈ ದಿನದಂದು ತಪ್ಪಿಯೂ ತುಳಸಿ ದಳಗಳನ್ನು ಕೀಳಬೇಡಿ, ಅಂದು ಗಿಡಕ್ಕೆ ನೀರು ಹಾಕೋದು ಸಲ್ಲ

Tulasi Leaves: ಧಾರ್ಮಿಕ ಕಾರ್ಯಗಳಲ್ಲಿ ತುಳಸಿಯನ್ನು ಅತ್ಯಂತ ಪವಿತ್ರವಾದ ಸಸ್ಯ ಎಂದು ಪರಿಗಣಿಸಲಾಗಿದೆ. ಇದಲ್ಲದೆ, ವಿಷ್ಣುವಿನ ಆರಾಧನೆಯಲ್ಲಿ ತುಳಸಿ ದಳ ಇಲ್ಲದಿದ್ದರೆ ಆ ಪೂಜೆಯು ಅಪೂರ್ಣವಾಗಿ ಉಳಿಯುತ್ತದೆ. ಆದರೆ ತುಳಸಿ ದಳಗಳನ್ನು ಕೆಲವೊಂದು ದಿನಗಳಲ್ಲಿ ಬಿಡಿಸುವುದಿಲ್ಲ. ಹಾಗೊಂದು ವೇಳೆ ತುಳಸಿ ಎಲೆಗಳನ್ನು ಬಿಡಿಸಿದರೆೆ ಅದರಿಂದ ಅಶುಭ ಫಲ ಉಂಟಾಗುತ್ತದೆ.

ತುಳಸಿ ಗಿಡ
ತುಳಸಿ ಗಿಡ (HT File Photo)

ಪವಿತ್ರ ಸಸ್ಯಗಳ ಪಟ್ಟಿಯಲ್ಲಿ ತುಳಸಿಗೆ ಮೊದಲ ಸ್ಥಾನ. ಹಿಂದೂಗಳ ಪ್ರತಿಯೊಬ್ಬರ ಮನೆಯಲ್ಲೂ ತುಳಸಿ ಗಿಡವನ್ನು ಬೆಳೆಸುತ್ತಾರೆ ಮತ್ತು ಅದನ್ನು ಪೂಜಿಸುತ್ತಾರೆ. ವಾಸ್ತು ಶಾಸ್ತ್ರದಲ್ಲೂ ತುಳಸಿ ಗಿಡಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ. ತುಳಸಿ ಇಲ್ಲದೆ ಶ್ರೀಹರಿಗೆ ಮಾಡಿದ ಪೂಜೆಯು ಅಪೂರ್ಣ ಎಂದು ಹೇಳಲಾಗುತ್ತದೆ. ತುಳಸಿಯನ್ನು ಲಕ್ಷ್ಮೀ ದೇವಿಯ ಮೂರ್ತರೂಪವೆಂದು ಪರಿಗಣಿಸಲಾಗಿದೆ. ಮನೆಯಲ್ಲಿರುವ ತುಳಸಿ ಗಿಡ ಹಸಿರಾಗಿದ್ದರೆ ಕುಟುಂಬ ಸುಖವಾಗಿರುವುದು ಎಂಬ ನಂಬಿಕೆ ಇದೆ. ಆದರೆ ತುಳಸಿ ಗಿಡವನ್ನು ಪೂಜಿಸುವಾಗ ಕೆಲವು ನಿಯಮಗಳನ್ನು ತಿಳಿದಿರಬೇಕು. ವಿಷ್ಣು ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಲು, ತುಳಸಿ ಗಿಡವನ್ನು ಸರಿಯಾಗಿ ಪೂಜಿಸಬೇಕು.

ಭಾನುವಾರ ತುಳಸಿ ಗಿಡಕ್ಕೆ ನೀರು ಹಾಕಬೇಡಿ

ಧಾರ್ಮಿಕ ನಂಬಿಕೆಗಳ ಪ್ರಕಾರ, ತುಳಸಿಯನ್ನು ಪ್ರತಿದಿನ ಪೂಜಿಸಬೇಕು. ಸ್ನಾನ ಮಾಡದೆ ತುಳಸಿ ಗಿಡದ ಎಲೆಗಳನ್ನು ಮುಟ್ಟಬಾರದು. ಕೆಲವರು ತುಳಸಿ ಎಲೆಗಳನ್ನು ಕತ್ತರಿಸಿ ಬಾಯಿಗೆ ಹಾಕಿಕೊಂಡು ತಿನ್ನುತ್ತಾರೆ. ಆದರೆ ಸ್ನಾನ ಮಾಡದೆ ಅದನ್ನು ಮುಟ್ಟಬಾರದು. ಏಕಾದಶಿ ಮತ್ತು ಭಾನುವಾರದಂದು ತುಳಸಿ ಮಾತೆಯು ನಾರಾಯಣನಿಗಾಗಿ ಉಪವಾಸವನ್ನು ಮಾಡುತ್ತಾಳೆ. ಅದಕ್ಕಾಗಿ ಆ ದಿನ ತುಳಸಿ ಗಿಡಕ್ಕೆ ನೀರು ಹಾಕಬಾರದು. ನೀರು ಹಾಕುವುದರ ಮೂಲಕ ತುಳಸಿ ದೇವಿಯ ಉಪವಾಸವನ್ನು ಮುರಿದಂತಾಗುತ್ತದೆ. ಹೀಗೆ ಮಾಡುವುದರಿಂದ ಅಶುಭ ಫಲಗಳು ಉಂಟಾಗುತ್ತವೆ. ಅದಕ್ಕಾಗಿ ಆ ದಿನ ನೀರು ಹಾಕಬಾರದು. ಅಲ್ಲದೆ ಆ ಎರಡು ದಿನಗಳಲ್ಲಿ ತುಳಸಿ ದಳಗಳನ್ನು ಬಿಡಿಸಬಾರದು. ಹಾಗೆಯೇ ಸೂರ್ಯಾಸ್ತದ ನಂತರವೂ ತುಳಸಿ ಎಲೆಗಳನ್ನು ಬಿಡಿಸಬಾರದು ಎಂದು ಶಾಸ್ತ್ರಗಳು ಹೇಳುತ್ತವೆ. ಭಾನುವಾರ ತುಳಸಿ ಗಿಡಕ್ಕೆ ನೀರು ಹಾಕುವುದರಿಂದ ಮನೆಗೆ ನೆಗೆಟಿವ್ ಎನರ್ಜಿ ಬರುತ್ತದೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ.

ಇದನ್ನೂ ಓದಿ: Naivedyam: ಯಾವ ದೇವರಿಗೆ ಯಾವ ನೈವೇದ್ಯ ಅರ್ಪಿಸಿದರೆ ಶ್ರೇಷ್ಠ? ಇಲ್ಲಿದೆ ಮಾಹಿತಿ

ತುಳಸಿ ಬಳಿ ತುಪ್ಪದ ದೀಪ

ಬೆಳಗ್ಗೆ ಎದ್ದ ನಂತರ, ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ಧರಿಸಿ ತುಳಸಿ ಗಿಡವನ್ನು ಪೂಜಿಸಬೇಕು. ಅವುಗಳಿಗೆ ಅರಿಶಿಣ, ಕುಂಕುಮ ಮತ್ತು ಶ್ರೀಗಂಧವನ್ನು ಹಚ್ಚಿ ಪೂಜಿಸಬೇಕು. ಕೆಂಪು ಅಥವಾ ಗುಲಾಬಿ ಹೂವುಗಳನ್ನು ಅರ್ಪಿಸಬೇಕು. ನಂತರ ತುಳಸಿ ಬಳಿ ತುಪ್ಪದ ದೀಪವನ್ನು ಹಚ್ಚಬೇಕು. ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸಲು ಸಂಜೆ ತುಳಸಿ ಗಿಡದ ಬಳಿ ತುಪ್ಪದ ದೀಪವನ್ನು ಬೆಳಗಿಸಬೇಕು. ತುಳಸಿ ಗಿಡವನ್ನು ಸರಿಯಾದ ರೀತಿಯಲ್ಲಿ ಪೂಜಿಸುವುದರಿಂದ ಲಕ್ಷ್ಮೀ ಮತ್ತು ವಿಷ್ಣುವಿನ ಆಶೀರ್ವಾದ ಯಾವಾಗಲೂ ದೊರೆಯುತ್ತದೆ.

ನೆಲದ ಮೇಲೆ ತುಳಸಿ ಗಿಡ ನೆಡಬೇಡಿ

ತುಳಸಿ ಗಿಡವನ್ನು ಅಪ್ಪಿತಪ್ಪಿಯೂ ನೆಲದ ಮೇಲೆ ನೆಡಬಾರದು. ತುಳಸಿಯು ಮನೆಯ ಹೊಸ್ತಿಲಿಗಿಂತ ಎತ್ತರವಾಗಿರಬೇಕು. ಅದಕ್ಕಾಗಿಯೇ ಅನೇಕ ಜನರು ತುಳಸಿ ಕಟ್ಟೆಯನ್ನು ಎತ್ತರವಾಗಿ ನಿರ್ಮಿಸುತ್ತಾರೆ. ತುಳಸಿ ಗಿಡ ಒಣಗದಂತೆ ಎಚ್ಚರಿಕೆ ವಹಿಸಬೇಕು. ತುಳಸಿ ಗಿಡ ಒಣಗಿ ಹೋಗಿದ್ದರೆ ಮನೆಯಲ್ಲಿ ಕೆಲವು ಅಹಿತಕರ ಘಟನೆಗಳು ನಡೆಯುತ್ತವೆ ಎಂದು ಸೂಚಿಸುತ್ತದೆ. ತುಳಸಿ ಗಿಡವನ್ನು ಯಾವಾಗಲೂ ಸ್ವಚ್ಛವಾಗಿಡಬೇಕು. ಒಣಗಿದ ಹೂವುಗಳನ್ನು ಹಾಕಬಾರದು. ತುಳಸಿ ಕಟ್ಟೆಯನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು.

ಮನೆಯಲ್ಲಿ ಎಷ್ಟು ಗಿಡಗಳಿರಬೇಕು?

ತುಳಸಿ ಗಿಡ ಮನೆಯಲ್ಲಿದ್ದರೆ ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದರೆ ಎಷ್ಟು ತುಳಸಿ ಗಿಡಗಳು ಮನೆಯಲ್ಲಿರಬೇಕು ಎಂಬುದನ್ನು ವಾಸ್ತು ಶಾಸ್ತ್ರವು ಬಹಿರಂಗಪಡಿಸಿದೆ. ಮನೆಯಲ್ಲಿ ಬೆಸ ಸಂಖ್ಯೆಯ ತುಳಸಿ ಗಿಡಗಳನ್ನು ನೆಡಬೇಕು. ಒಂದು, ಮೂರು, ಐದು ಹೀಗೆ ಬೆಸ ಸಂಖ್ಯೆಗಳು ಮಾತ್ರ ಇರಬೇಕು. ತುಳಸಿಯನ್ನು ಶುದ್ಧತೆ ಮತ್ತು ಪವಿತ್ರತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ತುಳಸಿಯಲ್ಲಿ ಆರೋಗ್ಯಕಾರಿ ಗುಣಗಳಿವೆ. ಬ್ಯಾಕ್ಟೀರಿಯಾದ ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.