ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Peepul Tree: ಧಾರ್ಮಿಕ ನಂಬಿಕೆಗಳ ಪ್ರಕಾರ ಅಶ್ವತ್ಥ ಮರಕ್ಕೆ ಏಕೆ ಅಷ್ಟು ಪ್ರಾಮುಖ್ಯತೆ ನೀಡಲಾಗಿದೆ? ಇಲ್ಲಿದೆ ಮಾಹಿತಿ

Peepul Tree: ಧಾರ್ಮಿಕ ನಂಬಿಕೆಗಳ ಪ್ರಕಾರ ಅಶ್ವತ್ಥ ಮರಕ್ಕೆ ಏಕೆ ಅಷ್ಟು ಪ್ರಾಮುಖ್ಯತೆ ನೀಡಲಾಗಿದೆ? ಇಲ್ಲಿದೆ ಮಾಹಿತಿ

Peepul Tree: ಹಿಂದೂಗಳು ಅರಳಿಮರಕ್ಕೆ ಬಹಳ ಪ್ರಾಮುಖ್ಯತೆ ನೀಡುತ್ತಾರೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ಅಶ್ವತ್ಥಮರಕ್ಕೆ ದೇವರ ಸ್ಥಾನ ನೀಡಲಾಗಿದೆ. ಸಾಕ್ಷಾತ್‌ ವಿಷ್ಣು, ಪತ್ನಿ ಸಹಿತ ಅರಳಿಮರದಲ್ಲಿ ನೆಲೆಸಿದ್ದಾನೆಂಬ ನಂಬಿಕೆ ಇದೆ. ಭಗವಾನ್‌ ಬುದ್ಧ ಕೂಡಾ ಅರಳಿಮರದ ಕೆಳಗೆ ಕುಳಿತು ತಪಸ್ಸು ಮಾಡಿ ಜ್ಞಾನೋದಯ ಪಡೆದನೆಂಬ ನಂಬಿಕೆ ಇದೆ.

ಹಿಂದೂಗಳು ಪೂಜಿಸುವ ಅರಳಿಮರದ ಪ್ರಾಮುಖ್ಯತೆ
ಹಿಂದೂಗಳು ಪೂಜಿಸುವ ಅರಳಿಮರದ ಪ್ರಾಮುಖ್ಯತೆ (PC: Tara @kartha_tara, Pixaby)

 Peepul Tree: ಅಶ್ವತ್ಥ ಮರ ಅಥವಾ ಅರಳಿ ಮರವು ಸಾಮಾನ್ಯವಾಗಿ ದಕ್ಷಿಣ ಏಷ್ಯಾದಲ್ಲಿ ವ್ಯಾಪಕವಾಗಿ ಕಂಡು ಬರುತ್ತದೆ. ಉಳಿದ ಜಾತಿಯ ಮರಗಳಿಗಿಂತ ಅರಳಿ ಮರವು ಅತಿ ಹೆಚ್ಚು ಆಮ್ಲಜನಕವನ್ನು ಉತ್ಪಾದಿಸುತ್ತದೆ. ಸಾಮಾನ್ಯವಾಗಿ ಬೇರೆ ವೃಕ್ಷಗಳು ಕೇವಲ ಸೂರ್ಯನ ಬೆಳಕಿನಲ್ಲಿ ಮಾತ್ರ ದ್ಯುತಿ ಸಂಶ್ಲೇಷಣಾ ಕ್ರಿಯೆ ನಡೆಸುತ್ತದೆ. ಆದರೆ, ಅರಳಿ (ಅಶ್ವತ್ಥ) ಮರವು ಚಂದ್ರನ ಬೆಳಕಿನಲ್ಲೂ ದ್ಯುತಿಸಂಶ್ಲೇಷಣಾ ಕ್ರಿಯೆ ನಡೆಸುವ ಸಾಮರ್ಥ್ಯ ಹೊಂದಿದೆ. ಧಾರ್ಮಿಕ ವಿಚಾರಕ್ಕೆ ಬರುವುದಾದರೆ ಅಶ್ವತ್ಥ ಮರವು ಹಿಂದೂಗಳಿಗೆ ಅತ್ಯಂತ ಪೂಜ್ಯನೀಯವಾಗಿದೆ.

ಅರಳಿ ಮರವನ್ನು ಹಿಂದೂ ಪುರಾಣಗಳಲ್ಲಿ ಅತ್ಯಂತ ಮಂಗಳಕರವಾದ ಮರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಹಿಂದೂ ಪುರಾಣಗಳ ಪ್ರಕಾರ, ಅರಳಿ ಮರವು ವಿವಿಧ ಪ್ರಯೋಜನಗಳನ್ನು ಹೊಂದಿದೆ. ಭಕ್ತರು ವಿಶೇಷವಾಗಿ ಶ್ರಾವಣ ಮಾಸದಲ್ಲಿ ಈ ಮರವನ್ನು ಪೂಜಿಸುತ್ತಾರೆ. ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಅಶ್ವತ್ಥ ಮರಕ್ಕೆ ವಿಶೇಷ ಮಹತ್ವವಿದೆ. ಅರಳಿ ಮರಕ್ಕೆ ಪ್ರದಕ್ಷಿಣೆ ಹಾಕುವುದರಿಂದ ಆಂಜನೇಯ ಸ್ವಾಮಿಯು ಭಕ್ತರನ್ನು ಆಶೀರ್ವದಿಸಿ ಮತ್ತು ಅವರ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎಂಬುದು ಜನರ ನಂಬಿಕೆಯಾಗಿದೆ.

ಅಶ್ವತ್ಥ ಮರದ ಕೆಳಗೆ ಜ್ಞಾನೋದಯ ಪಡೆದ ಗೌತಮ ಬುದ್ಧ

ಗೌತಮ ಬುದ್ಧ ಅರಳಿ ಮರದ ಕೆಳಗೆ ಕುಳಿತು ಜ್ಞಾನೋದಯ ಪಡೆದಿದ್ದರಿಂದ ಈ ಮರವನ್ನು ಬೋಧಿ ವೃಕ್ಷ ಎಂದೂ ಕರೆಯುತ್ತಾರೆ. ಹಿಂದೆಲ್ಲಾ ಋಷಿ ಮುನಿಗಳು ಅರಳಿ ಮರದ ಕೆಳಗೆ ಧ್ಯಾನ ಮಾಡುತ್ತಿದ್ದರು. ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ವೃಕ್ಷದ ಸುತ್ತ ಪ್ರದಕ್ಷಿಣೆ ಹಾಕುತ್ತಾರೆ. ಇದರಿಂದ ಬೇಡಿದ ವರವನ್ನು ದೇವರು ಕರುಣಿಸುತ್ತಾರೆ ಎಂದು ಭಕ್ತರು ನಂಬುತ್ತಾರೆ.

ಈ ಮರದಿಂದ ಹಲವಾರು ಔಷಧಿಗಳನ್ನು ತಯಾರಿಸುತ್ತಾರೆ. ಆಯುರ್ವೇದದ ಪ್ರಕಾರ, ಅತಿಸಾರ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಇದರ ಔಷಧಿ ಉಪಯುಕ್ತವಾಗಿದೆ. ಪುಣ್ಯಹವಾಚನಂ ಅಥವಾ ಮನೆ ಶುದ್ಧೀಕರಣ ಪ್ರಕ್ರಿಯೆಯಲ್ಲಿ, ಕೀಟಗಳನ್ನು ತೊಡೆದುಹಾಕಲು ಔಷಧೀಯ ಗುಣಗಳನ್ನು ಹೊಂದಿರುವ ಅರಳಿ ಮರವನ್ನು ಬಳಸಲಾಗುತ್ತದೆ. ಜನರು ತಮ್ಮ ನಂಬಿಕೆಗಳಿಗೆ ಅನುಗುಣವಾಗಿ ವಿವಿಧ ದೇವರುಗಳನ್ನು ಪೂಜಿಸುತ್ತಾರೆ. ಕೆಲವರು ಗಣಪತಿಯ ಭಕ್ತರಾಗಿದ್ದರೆ, ಕೆಲವರು ಕಾರ್ತಿಕೇಯನನ್ನು ಪೂಜಿಸುತ್ತಾರೆ. ಆದರೆ, ಇವರೆಲ್ಲರೂ ಭಕ್ತಿಯಿಂದ ಅರಳಿ ಮರವನ್ನೂ ಪೂಜಿಸಿದರೆ ಒಳಿತಾಗಲಿದೆ.

ಭಗವಂತ ವಿಷ್ಣು ಈ ವೃಕ್ಷದಲ್ಲಿ ನೆಲೆಗೊಂಡಿದ್ದಾನೆ ಎಂಬ ನಂಬಿಕೆ ಹಿಂದೂಗಳದ್ದು

ಹಿಂದೂ ಪುರಾಣಗಳಲ್ಲಿ ಅರಳಿಮರವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸುವ ಇನ್ನೊಂದು ಕಾರಣವೆಂದರೆ, ವಿಷ್ಣುವು ಈ ಮರದ ಬೇರುಗಳಲ್ಲಿ ನೆಲೆಸಿದ್ದಾನೆ ಎಂದು ನಂಬಲಾಗಿದೆ. ಭಗವಂತ ಕೃಷ್ಣನು ಇದರ ಕಾಂಡವೆಂದು ಪರಿಗಣಿಸಲಾಗುತ್ತದೆ. ಅಷ್ಟೇ ಅಲ್ಲ, ಅರಳಿ ಮರದಲ್ಲಿ ಭಗವಂತ ಶ್ರೀ ಕೃಷ್ಣನು ಮರಣ ಹೊಂದಿದ ಎಂದು ಹೇಳಲಾಗಿದೆ. ಹೀಗಾಗಿ ಈ ಧಾರ್ಮಿಕ ಮರದ ನೆರಳಿನಲ್ಲೇ ಕಲಿಯುಗದ ಪ್ರಾರಂಭವಾಯಿತು ಎಂಬ ನಂಬಿಕೆಯಿದೆ. ವಿಷ್ಣುವು ತನ್ನ ಪತ್ನಿ ಲಕ್ಷ್ಮಿಯೊಂದಿಗೆ ಶುಕ್ರವಾರ ಸಂಜೆಯಿಂದ ಶನಿವಾರ ಬೆಳಗ್ಗೆಯವರೆಗೆ ಈ ಮರದಲ್ಲೇ ವಾಸಿಸುತ್ತಾರಂತೆ. ಹೀಗಾಗಿ ಈ ಸಮಯದಲ್ಲಿ ಅರಳಿ ಮರವನ್ನು ಪೂಜಿಸಿದರೆ ಸಂಕಷ್ಟಗಳೆಲ್ಲಾ ದೂರವಾಗುತ್ತವೆ ಅನ್ನೋ ನಂಬಿಕೆ ಭಕ್ತರದ್ದು.

ಅಶ್ವತ್ಥ ಮರದ ಸುತ್ತಲೂ ವಿಶೇಷವಾಗಿ ಮಹಿಳೆಯರು ಪ್ರದಕ್ಷಿಣೆ ಹಾಕುತ್ತಾರೆ. ಹಾಗೆ ಮಾಡುವುದರಿಂದ ಅವರಿಗೆ ಮಕ್ಕಳಾಗುತ್ತದೆ ಅಥವಾ ಬಯಸಿದ ವಸ್ತು ಅಥವಾ ವ್ಯಕ್ತಿಯನ್ನು ಪಡೆಯಬಹುದು ಎಂದು ನಂಬಲಾಗಿದೆ. ಮರಕ್ಕೆ ನೀರುಣಿಸುವ ಯಾವುದೇ ಭಕ್ತನಿಗೆ ದೇವರು ಒಲಿಯುತ್ತಾನೆ. ಆತನ ದುಃಖಗಳು ಪರಿಹಾರವಾಗಿ, ಕಾಯಿಲೆಗಳು ವಾಸಿಯಾಗುತ್ತವೆ ಎಂದು ನಂಬಲಾಗಿದೆ. ಅಲ್ಲದೆ, ಅಶ್ವತ್ಥ ಮರದ ಕೆಳಗೆ ಧಾರ್ಮಿಕ ವಿಧಿ-ವಿಧಾನವನ್ನು ಕೈಗೊಳ್ಳುವುದರಿಂದ ಮೋಕ್ಷವನ್ನು ಪಡೆಯಬಹುದೆಂಬ ನಂಬಿಕೆಯಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.