Bhadrachalam Kalyanam: ಭದ್ರಾಚಲಂನಲ್ಲಿ ಸೀತಾರಾಮ ಕಲ್ಯಾಣಕ್ಕೆ ಸಿದ್ಧತೆಗಳು ಆರಂಭ; ಬೆಂಗಳೂರಿನಿಂದ ಹೋಗುವ ಮಾರ್ಗದ ವಿವರ ಇಲ್ಲಿದೆ
Bhadrachalam Kalyanam: ದಕ್ಷಿಣ ಅಯೋಧ್ಯೆ ಎಂದು ಜನಪ್ರಿಯವಾಗಿರುವ ಭದ್ರಾದ್ರಿಯಲ್ಲಿ ಸೀತಾ ರಾಮ ಕಲ್ಯಾಣಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಬೆಂಗಳೂರಿನಿಂದ ಹೋಗಲು ಮಾರ್ಗದ ವಿವರ ಇಲ್ಲಿದೆ.

Bhadrachalam Kalyanam: ದಕ್ಷಿಣ ಭಾರತದ ಅಯೋಧ್ಯೆ ಎಂದೇ ಜನಪ್ರಿಯವಾಗಿರುವ ತೆಲಂಗಾಣದ ಭದ್ರಾಚಲಂನಲ್ಲಿ ಸೀತಾರಾಮ ಕಲ್ಯಾಣೋತ್ಸವದ ಸಿದ್ಧತೆಗಳು ಆರಂಭವಾಗಿವೆ. ಯುಗಾದಿಯಿಂದ (ಮಾರ್ಚ್ 31) ಬ್ರಹ್ಮೋತ್ಸವ ಆರಂಭವಾಗಿದೆ. ಭದ್ರಾಚಲಂ ಸೀತಾರಾಮ ಕಲ್ಯಾಣಂ ಮತ್ತು ಬ್ರಹ್ಮೋತ್ಸವಗಳ ಭವ್ಯತೆಯನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಏಪ್ರಿಲ್ 6 ರಂದು ಸೀತಾ ರಾಮುಲು ಕಲ್ಯಾಣಂ ಮತ್ತು ಏಪ್ರಿಲ್ 7 ರಂದು ಮಹಾ ಪಟ್ಟಾಭಿಷೇಕ ನಡೆಯಲಿದೆ. ಏಪ್ರಿಲ್ 6 ರಂದು ಅಭಿಜಿತ್ ಲಗ್ನದಲ್ಲಿ ಶ್ರೀರಾಮಚಂದ್ರನ ವಿವಾಹವನ್ನು ಅದ್ದೂರಿಯಾಗಿ ಆಚರಿಸಲು ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ. ಅದೇ ದಿನ ಸಂಜೆ, ಪುನರ್ವಸು ದೀಕ್ಷೆ ಪ್ರಾರಂಭವಾಗುತ್ತದೆ. ಮೇ 3 ರವರೆಗೆ ಮುಂದುವರಿಯುತ್ತದೆ. ಭದ್ರಾದ್ರಿಯಲ್ಲಿ ಕಲ್ಯಾಣ ವ್ಯವಸ್ಥೆಗಳು ವೇಗ ಪಡೆಯುತ್ತಿದ್ದಂತೆ, ರಾಮನ ನಾಮಸ್ಮರಣೆ ಎಲ್ಲೆಡೆ ಕೇಳಬಹುದು. ಸೀತೆಯ ಮದುವೆ ನಡೆಯುವ ಮಿಥುಲಾ ಕ್ರೀಡಾಂಗಣವನ್ನು ಸುಂದರವಾಗಿ ಅಲಂಕರಿಸಲಾಗಿದೆ.
ಮುಖ್ಯಮಂತ್ರಿ ರೇವಂತ್ ರೆಡ್ಡಿ ಆಗಮನ
ಕಳೆದ ವರ್ಷ ಚುನಾವಣಾ ನೀತಿ ಸಂಹಿತೆಯಿಂದಾಗಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ಶ್ರೀರಾಮನವಮಿಗೆ ಬರಲು ಸಾಧ್ಯವಾಗಿರಲಿಲ್ಲ. ಈ ಬಾರಿ ರೇವಂತ್ ರೆಡ್ಡಿ ಅರು ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಕಲ್ಯಾಣೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಹಳೆಯ ಸಂಪ್ರದಾಯದಂತೆ ಮುಖ್ಯಮಂತ್ರಿ ರೆಡ್ಡಿ ಅವರು, ಸೀತಾರಾಮ ಕಲ್ಯಾಣಕ್ಕೆ ರೇಷ್ಮೆ ಬಟ್ಟೆ ಇತರೆ ವಸ್ತುಗಳನ್ನು ಅರ್ಪಿಸಲಿದ್ದಾರೆ. ಸಿಎಂ ಆಗಮನದ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಮತ್ತೊಂದೆಡೆ, ಕಲ್ಯಾಣೋತ್ಸವಕ್ಕೆ ಬರುವ ಭಕ್ತರಿಗೆ ಯಾವುದೇ ಅನಾನುಕೂಲವಾಗದಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರಸಾದ ವಿತರಣೆಗೆ 60 ವಿಶೇಷ ಕೌಂಟರ್ ಗಳನ್ನು ಸ್ಥಾಪಿಸಲಾಗಿದ್ದು, ಈ ಬಾರಿ ಬ್ರಹ್ಮೋತ್ಸವ ನಡೆಸಲು ಸರ್ಕಾರ 2.5 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ.
ಒಂದೆಡೆ ಸೀತಾರಾಮ ಕಲ್ಯಾಣಕ್ಕೆ ಸಿದ್ಧತೆಗಳು ಭರದಿಂದ ಸಾಗಿದ್ದರೆ, ಮತ್ತೊಂದೆಡೆ ಅಧಿಕಾರಿಗಳು ದೇವಾಲಯದ ವಿಸ್ತರಣೆ ಕಾರ್ಯವನ್ನು ಪ್ರಾರಂಭಿಸಿದ್ದಾರೆ. ಇತ್ತೀಚೆಗೆ ಭದ್ರಾದ್ರಿ ಸೀತಾರಾಮ ದೇವಾಲಯದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿ ಜಿತೇಶ್ ವಿ ಪಾಟೀಲ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. (ವರದಿ: ಕಪರ್ತಿ ನರೇಂದ್ರ, ಖಮ್ಮಂ ಜಿಲ್ಲಾ ಪ್ರತಿನಿಧಿ)
ಬೆಂಗಳೂರಿನಿಂದ ಭದ್ರಾಚಲಂ ತಲುಪುವ ಮಾರ್ಗದ ವಿವರ
ಬೆಂಗಳೂರಿನಿಂದ ಭದ್ರಾಚಲಂಗೆ ವಿಮಾನದಲ್ಲಿ ಹೋಗುವುದು ಹೇಗೆ
ಬೆಂಗಳೂರಿನಿಂದ ಭದ್ರಾಚಲಂಗೆ ವಿಮಾನದ ವ್ಯವಸ್ಥೆ ಇದೆ. ಆದರೆ ನೇರ ವಿಮಾನ ಸೇವೆ ಇಲ್ಲದಿದ್ದರೂ ರಾಜಮಂಡ್ರಿ ವಿಮಾನ ನಿಲ್ದಾಣ ಹೋಗಿ ಅಲ್ಲಿಂದ ಬಸ್ ಅಥವಾ ಕಾರಿನ ಮೂಲಕ ಭದ್ರಾಚಲಂ ತಲುಪಬಹುದು. ರಾಜಮಂಡ್ರಿಯಿಂದ ಭದ್ರಾಚಲಂಗೆ 117 ಕಿಲೋ ಮೀಟರ್ ಅಂತರವಿದೆ. ಇದನ್ನು ಹೊರತುಪಡಿಸಿದರೆ ಹೈದರಾಬಾದ್ ಮತ್ತು ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಿ ಅಲ್ಲಿಂದ ಭದ್ರಾಚಲಂಗೆ ಹೋಗಬಹುದು. ಹೈದಾರಾಬಾದ್ ನಿಂದ ಭದ್ರಾಚಲಂಗೆ 304 ಕಿಲೋ ಮೀಟರ್, ಚೆನ್ನೈನಿಂದ ಭದ್ರಾಚಲಂಗೆ 635 ಕಿಲೋ ಮೀಟರ್ ಅಂತರವಿದೆ. ಆದರೆ ಬೆಂಗಳೂರಿನಿಂದ ಭದ್ರಾಚಲಂಗೆ 870.4 ಕಿಲೋ ಮೀಟರ್ ಅಂತರವಿದೆ.
ಬೆಂಗಳೂರಿನಿಂದ ಭದ್ರಾಚಲಂಗೆ ರೈಲು ಮೂಲಕ ಹೋಗುವುದು ಹೇಗೆ
ಬೆಂಗಳೂರಿನಿಂದ ಭದ್ರಾಚಲಂ ರೋಡ್ ನಿಲ್ದಾಣಕ್ಕೆ ತಲುಪಿ ಅಲ್ಲಿಂದ ಬಸ್ ಅಥವಾ ಟ್ಯಾಕ್ಸಿಯಲ್ಲಿ ಹೋಗಬಹುದು. ಭದ್ರಾಚಲಂ ರೋಡ್ ಸ್ಟೇಷನ್ ನಿಂದ ಭದ್ರಾಚಲಂ ನಗರಕ್ಕೆ 40 ಕಿಲೋ ಮೀಟರ್ ಅಂತರವಿದೆ. ಸಂಗಮಿತ್ರ ಎಕ್ಸ್ ಪ್ರೆಸ್ (12295) ರೈಲು ಎಸ್ ಬಿಸಿ ಬೆಂಗಳೂರು, ಪಾಟ್ಲಿಪುತ್ರ ಎಕ್ಸ್ ಪ್ರೆಸ್ (22352) ಯಶವತಂಪುರ, ವೈಪಿಆರ್ ಟಾಟಾ ಎಕ್ಸ್ ಪ್ರೆಸ್ (18112) ಯಶವಂತಪುರ ರೈಲು ನಿಲ್ದಾಣದಿಂದ ಹೊರಟು ಖಮ್ಮಂ ನಿಲ್ದಾಣ ತಲುಪುತ್ತವೆ. ಅಲ್ಲಿಂಗ ಭದ್ರಾಚಲಂಗೆ 60 ಕಿಲೋ ಮೀಟರ್ ಅಂತರವಿದ್ದು, ಬಸ್ ಅಥವಾ ಟ್ಯಾಕ್ಸಿ ಮೂಲಕ ಭದ್ರಾಚಲಂ ತಲುಪಬಹುದು. ಈ ಮೂರು ರೈಲುಗಳು ಈ ಮಾರ್ಗದಲ್ಲಿ ಜನಪ್ರಿಯವಾಗಿವೆ.
ಬೆಂಗಳೂರಿನಿಂದ ಭದ್ರಾಚಲಂಗೆ ಬಸ್ ನಲ್ಲಿ ಹೋಗುವುದು ಹೇಗೆ
ಶ್ರೀ ತುಳಸಿ ಟೂರ್ಸ್ ಅಂಡ್ ಟ್ರಾವೆಲ್ಸ್ ಸೇರಿದಂತೆ ಕೆಲವೊಂದು ಖಾಸಗಿ ಬಸ್ ಗಳು ಬೆಂಗಳೂರಿನಿಂದ ಭದ್ರಾಚಲಂಗೆ ನೇರ ಸೇವೆಯನ್ನು ಒದಗಿಸುತ್ತವೆ.