Swastik: ವಾಸ್ತುದೋಷ ನಿವಾರಣೆಯಿಂದ ಕುಟುಂಬದಲ್ಲಿ ನೆಮ್ಮದಿಯವರೆಗೆ; ಮನೆಯಲ್ಲಿ ಸ್ವಸ್ತಿಕ್ ಚಿಹ್ನೆ ಇದ್ರೆ ಎಷ್ಟೊಂದು ಲಾಭಗಳಿವೆ
ಮನೆಯಲ್ಲಿ ಸ್ವಸ್ತಿಕ್ ಚಿಹ್ನೆಯ ಆಕೃತಿ ಅಥವಾ ಫೋಟೊ ಇದ್ದರೆ ಕಣ್ಣಿನ ದೋಷ ದೂರವಾಗುತ್ತೆ, ಮನೆಯಲ್ಲಿ ನೆಮ್ಮೆದಿ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಇವಿಷ್ಟೇ ಅಲ್ಲ ಇನ್ನೂ ಹಲವು ಪ್ರಯೋಜನಗಳಿವೆ. ಮನೆಯಷ್ಟೇ ವಾಹನದಲ್ಲಿ ಇಟ್ಟರೂ ಲಾಭಗಳಿವೆ. ಸ್ವಸ್ತಿಕ್ ನಿಂದಾಗುವ ಫಲಿತಾಂಶಗಳ ವಿವರ ಇಲ್ಲಿದೆ.
ಸಂಕಷ್ಟಹರ ಚತುರ್ಥಿಯ ದಿನದಂದು ಸಂಕಷ್ಟಹರ ಗಣಪತಿಯ ಪೂಜೆಯನ್ನು ಮಾಡುತ್ತೇವೆ. ಇದೇ ರೀತಿ ಬಹುಳ ಚತುರ್ಥಿಯ ದಿನದಂದು ಶಕ್ತಿಗಣಪತಿಯ ಪೂಜೆಮಾಡುವುದು ಕೆಲವೆಡೆ ಸಾಮಾನ್ಯವಾಗಿದೆ. ಕೆಲವೊಂದು ಗ್ರಂಥಗಳ ಪ್ರಕಾರ, ಸ್ವಸ್ತಿಕ್ ಚಿಹ್ನೆ ಗಣಪತಿಯನ್ನು ಸೂಚಿಸುತ್ತದೆ. ಮನೆಯ ಮುಂಬಾಗಿಲಿನಲ್ಲಿ ಸ್ವಸ್ತಿಕ್ ಚಿಹ್ನೆಯನ್ನು ಬರೆಸಿದಲ್ಲಿ ಅಥವಾ ಆಕೃತಿಯನ್ನು ಇರಿಸಿದಲ್ಲಿ ಆ ಮನೆಗೆ ದೃಷ್ಠಿಯು ತಾಗುವುದಿಲ್ಲ. ಮನೆಯಲ್ಲಿರುವ ವಾಸ್ತುದೋಷವೂ ಸಹ ಕಡಿಮೆಯಾಗುತ್ತದೆ. ಮನೆಯ ಮುಂಭಾಗಿಲ ಬಲಭಾಗದಲ್ಲಿ ಸ್ವಸ್ತಿಕ್ ಆಕಾರವಿದ್ದಲ್ಲಿ, ಕುಟುಂಬದ ಹಿರಿಯರ ಜೊತೆಯಲ್ಲಿ ಉತ್ತಮ ಬಡನಾಟ ಇರುತ್ತದೆ. ಕಣ್ಣಿನ ದೋಷವು ದೂರವಾಗುತ್ತದೆ. ಮನೆಯ ಮುಂಭಾಗದ ಎಡ ಭಾಗದಲ್ಲಿ ಸ್ವಸ್ತಿಕ್ ಇದ್ದಲ್ಲಿ ಮನಸ್ಸಿಗೆ ನೆಮ್ಮದಿ ಇರುತ್ತದೆ. ಅಲ್ಲದೆ ಮನಸ್ಸಿನಲ್ಲಿ ನಿರ್ಧರಿಸಿದ ಬಹುತೇಕ ಕೆಲಸ ಕಾರ್ಯಗಳು ಯಶಸ್ವಿಯಾಗಿ ಸಂಪೂರ್ಣಗೊಳ್ಳುತ್ತವೆ.
ವಾಹನಗಳಲ್ಲಿ ಸ್ವಸ್ತಿಕ್ ಚಿಹ ಇದ್ದಲ್ಲಿ ಅನಿರೀಕ್ಷಿತ ಅಪಘಾತಗಳಿಂದ ಪಾರಾಗಬಹುದು. ಸಾಮಾನ್ಯವಾಗಿ ಬಿಳಿ ಅಥವಾ ಕೇಸರಿ ಬಣ್ಣವನ್ನು ಬಳಸುತ್ತಾರೆ. ಮನೆಯ ಮಧ್ಯಭಾಗದಲ್ಲಿ ಸ್ವಸ್ತಿಕ್ ಇದ್ದಲ್ಲಿ ಆ ಮನೆಯಲ್ಲಿ ಶಾಂತಿ ನೆಮ್ಮದಿ ಇರುತ್ತದೆ. ಎದುರಾಗುವ ಕಷ್ಟನಷ್ಟಗಳು ದೂರವಾಗುತ್ತವೆ. ಇದರಿಂದಾಗಿ ಮಕ್ಕಳ ಜೊತೆಯಲ್ಲಿ ವಿಶೇಷವಾದ ಪ್ರೀತಿ ವಿಶ್ವಾಸವು ಮೂಡುತ್ತದೆ. ವಿದ್ಯಾರ್ಥಿಗಳು ಆತಂಕವಿಲ್ಲದೆ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸುತ್ತಾರೆ. ಸಣ್ಣ ಪುಟ್ಟ ವಿಚಾರವಾದರೂ ಮನೆಮಂದಿಯಲ್ಲಾ ಕುಳಿತು ವಿಚಾರ ವಿನಿಮಯ ಮಾಡಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಕುಟುಂಬದಲ್ಲಿ ಭೂ ವಿವಾದ ವಿದ್ದಲ್ಲಿ ಸುಲಭವಾಗಿ ಪರಿಹಾರ ಗೊಳ್ಳುತ್ತದೆ.
ಮನೆಯ ಪೂರ್ವ ದಿನಕ್ಕೆ ಸ್ವಸ್ತಿಕ್ ಇದ್ದರೆ ಏನು ಲಾಭ?
ಮನೆಯ ಈಶಾನ್ಯ ಅಥವಾ ಪೂರ್ವದ ದಿಕ್ಕಿನಲ್ಲಿ ಸ್ವಸ್ತಿಕ್ ಚಿಹ್ನೆ ಇದ್ದಲ್ಲಿ ಉತ್ತಮ ಆರೋಗ್ಯವಿರುತ್ತದೆ. ಹಣಕಾಸಿನ ಕೊರತೆ ಉಂಟಾಗುವುದಿಲ್ಲ. ಸಂತಾನದ ವಿಚಾರದಲ್ಲಿ ಯಾವುದೇ ಯೋಚನೆ ಇರುವುದಿಲ್ಲ. ಸಕಾಲಕ್ಕೆ ಮಕ್ಕಳಾಗುತ್ತವೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಮೊದಲಿಗರಾಗಿರುತ್ತಾರೆ. ಕಷ್ಟವಾದ ಸನ್ನಿವೇಶವಿದ್ದರೂ ಬುದ್ಧಿವಂತಿಕೆಯಿಂದ ಕೆಲಸ ಸಾಧಿಸುವರು. ಬಹುಕಾಲದಿಂದ ಕಾಡುತ್ತಿದ್ದ ಆರೋಗ್ಯದ ಸಮಸ್ಯೆಯು ದೂರವಾಗುತ್ತದೆ. ಉತ್ತಮ ಗೌರವ ಅಂತಸ್ತು ದೊರೆಯುತ್ತದೆ. ಕೇವಲ ಕುಟುಂಬವಲ್ಲದೆ ನೆರೆಹೊರೆಯವರೊಂದಿಗೂ ಉತ್ತಮ ಸಂಬಂಧ ಇರುತ್ತದೆ. ಕುಟುಂಬದಲ್ಲಿ ಅನೇಕ ಧಾರ್ಮಿಕ ಕೆಲಸ ಕಾರ್ಯಗಳು ನಡೆಯುತ್ತವೆ. ಆದರೆ ಕೆಲವೊಮ್ಮೆ ಇವರಿಗೆ ಉಷ್ಣಕ್ಕೆ ಸಂಬಂಧಿಸಿದಂತೆ ಅನಾರೋಗ್ಯ ಉಂಟಾಗಬಹುದು. ಆದರೆ ಆತ್ಮವಿಶ್ವಾಸದ ಕೊರತೆ ಉಂಟಾಗುವುದಿಲ್ಲ. ಕೊಂಚ ಕಷ್ಟವೆನಿಸಿದರು ಭವಿಷ್ಯದ ಜೀವನಕ್ಕಾಗಿ ಹಣ ಉಳಿಸುವುದಲ್ಲದೆ ಆಸ್ತಿಯನ್ನು ಗಳಿಸುತ್ತಾರೆ.
ದಕ್ಷಿಣ ದಿಕ್ಕಿನಲ್ಲಿ ಸ್ವಸ್ತಿಕ್ ಚಿಹ್ನೆ ಇದ್ದಲ್ಲಿ ಆ ಮನೆಯಲ್ಲಿ ನೆಲೆಸಿರುವವರ ಬುದ್ಧಿವಂತಿಕೆಯು ಹೆಚ್ಚುತ್ತದೆ. ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಜವಾಬ್ದಾರಿಯಿಂದ ಕಲಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಸೋದರ ಮತ್ತು ಸೋದರಿಯ ಜೊತೆಯಲ್ಲಿ ಉತ್ತಮ ಬಾಂಧವ್ಯ ರೂಪಿತವಾಗುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಲಾಭ ದೊರೆಯುತ್ತದೆ. ಮನಸ್ಸಿನಲ್ಲಿ ತಾನೇ ದೊಡ್ಡವನೆಂಬ ಭಾವನೆಯು ಮನೆ ಮಾಡಿರುತ್ತದೆ. ಅನೇಕ ರಹಸ್ಯದ ವಿಚಾರಗಳು ಇವರಿಗೆ ತಿಳಿದಿರುತ್ತದೆ. ಇವರಿಗೆ ಸ್ಥಿರವಾದ ಮನಸ್ಸಿರುತ್ತದೆ. ಕಲಾವಿದರಿಗೆ ಉತ್ತಮ ಅವಕಾಶಗಳು ದೊರೆಯುತ್ತವೆ.
ಉತ್ತರ ದಿಕ್ಕಿನಲ್ಲಿ ಸ್ವಸ್ತಿಕ್ ಚಿಹ್ನೆಗೆ ವಿಶೇಷವಾದಂತಹ ಶಕ್ತಿ ಇರುತ್ತದೆ. ಕುಟುಂಬದಲ್ಲಿ ಯಾವುದೇ ಕೆಲಸ ಕಾರ್ಯವಿದ್ದರೂ ಆತ್ಮವಿಶ್ವಾಸದಿಂದ ಕೆಲಸ ನಿರ್ವಹಿಸುತ್ತಾರೆ. ಪ್ರತಿಯೊಬ್ಬರು ತಮಗೆ ಇಷ್ಟವೆನಿಸುವಂತೆ ಕೆಲಸ ನಿರ್ವಹಿಸಿದರು ಯಾರಿಗೂ ತೊಂದರೆ ಆಗದು. ಸ್ವಂತ ಜವಾಬ್ದಾರಿಯನ್ನು ಅರಿತು ಪ್ರತಿಯೊಬ್ಬರು ತಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಮುಖ್ಯವಾಗಿ ಕುಟುಂಬದ ಹಿರಿಯರು ಮತ್ತು ಕಿರಿಯರ ನಡುವೆ ಉತ್ತಮ ಬಾಂಧವ್ಯ ರೂಪಗೊಳ್ಳುತ್ತದೆ.
ವಂಶದಲ್ಲಿಯೇ ಇವರಿಗೆ ವಿಶೇಷವಾದಂತಹ ಗೌರವ ಅಂತಸ್ತು ದೊರೆಯುತ್ತದೆ. ಉದ್ಯೋಗದಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು ದೊರೆಯುತ್ತದೆ. ಹಣಕಾಸಿನ ವಿಚಾರದಲ್ಲಿ ದೃಢವಾದ ನಿಲುವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಆಗ್ನೇಯ, ನೈರುತ್ಯ, ವಾಯುವ್ಯ ಮತ್ತು ಪಶ್ಚಿಮ ದಿಕ್ಕಿನಲ್ಲಿ ಸ್ವಸ್ತಿಕ್ ಚಿನ್ಹೆಯನ್ನು ಬಳಸಬಾರದು.