ಕೋಪ, ಅಹಂಕಾರ ಮತ್ತು ತಪ್ಪುಗಳು ವಿನಾಶಕ್ಕೆ ದಾರಿ: ಭಗವದ್ಗೀತೆಯ ಈ ಎರಡು ಶ್ಲೋಕದಲ್ಲಿದೆ ಅತ್ಯಮೂಲ್ಯ ಸಂದೇಶ
ಭಗವದ್ಗೀತೆಯಲ್ಲಿ ಶ್ರೀಕೃಷ್ಣನು, ಮನುಷ್ಯನು ಕೋಪ ಬಂದಾಗ ತನ್ನನ್ನು ತಾನು ನಿಯಂತ್ರಿಸಿಕೊಳ್ಳಬೇಕು, ತನ್ನಿಂದ ತಪ್ಪುಗಳಾದರೆ ಅದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು. ಈ ಅತ್ಯಮೂಲ್ಯ ಸಂದೇಶವನ್ನು ಭಗವಾನ್ ಶ್ರೀಕೃಷ್ಣನು ಈ ಎರಡು ಶ್ಲೋಕಗಳ ಮೂಲಕ ಹೇಳಿದ್ದಾನೆ. (ಅರ್ಚನಾ ವಿ ಭಟ್)
ಭಗವದ್ಗೀತೆಯು ಮನುಷ್ಯನಿಗೆ ಅಪಾರವಾದ ಜ್ಞಾನವನ್ನು ಕೊಡುತ್ತದೆ. ನಮ್ಮಲ್ಲಿ ಅನೇಕರು ಶಾಲಾ ದಿನಗಳಲ್ಲಿ ಭಗವದ್ಗೀತೆಯ ಶ್ಲೋಕಗಳನ್ನು ಕಂಠಪಾಠ ಮಾಡಿರಬಹುದು. ಮಹಾಭಾರತದಲ್ಲಿ ಬರುವ ಕಥೆ, ಉಪಕಥೆಗಳನ್ನು ಕೇಳಿರಬಹುದು. ಬಾಲ್ಯದಲ್ಲಿ ಕಲಿತ ಭಗವದ್ಗೀತೆಯ ಅನೇಕ ಶ್ಲೋಕಗಳು ದೊಡ್ಡವರಾದ ಮೇಲೆ ಸಹಾಯಕ್ಕೆ ಬಂದ ಉದಾಹರಣೆಗಳೂ ಇರಬಹುದು.
ಭಗವದ್ಗೀತೆ ಕಾವ್ಯಗಳಲ್ಲಿಯೇ ಮಹಾ ಕಾವ್ಯ, ಜ್ಞಾನದ ಬಂಢಾರ. ಕುರುಕ್ಷೇತ್ರದ ರಣರಂಗದಲ್ಲಿ ಶ್ರೀಕೃಷ್ಣನು ಅರ್ಜುನಿಗೆ ಉಪದೇಶಿಸಿದ ಜ್ಞಾನವಾಗಿದೆ. ಶ್ರೇಷ್ಠ ಧನುರ್ಧಾರಿಯಾದ ಅರ್ಜುನನು ಯುದ್ಧದಿಂದ ಉಂಟಾಗುವ ಪರಿಣಾಮಗಳನ್ನು ನೆನೆದು, ತನ್ನಿಂದ ಯುದ್ಧ ಮಾಡಲು ಸಾಧ್ಯವಿಲ್ಲವೆಂದು ಹೇಳುತ್ತಾನೆ. ನೀನೇ ಇದಕ್ಕೆ ಮಾರ್ಗವನ್ನು ತೋರಿಸು ಎಂದು ಶ್ರೀಕೃಷ್ಣನಲ್ಲಿ ಕೋರುತ್ತಾನೆ. ಆಗ ಮಾಧವನು ಅರ್ಜುನನಿಗೆ ನೀನು ಯಾವುದೇ ಫಲಿತಾಂಶಗಳನ್ನು ನಿರೀಕ್ಷಿಸಿದೆ, ನಿನ್ನ ಕರ್ತವ್ಯವನ್ನು ಮಾಡಬೇಕು ಎಂದು ಹೇಳುತ್ತಾನೆ. ಕ್ಷತ್ರಿಯನ ಕರ್ತವ್ಯವು ನ್ಯಾಯ ಮತ್ತು ರಾಷ್ಟ್ರವನ್ನು ರಕ್ಷಿಸುವುದಾಗಿದೆ. ಯುದ್ಧ ಅಥವಾ ಕರ್ತವ್ಯದಿಂದ ಹೇಡಿಯಂತೆ ಹಿಂದೆ ಸರಿಯುವುದಲ್ಲ ಎಂದು ಹೇಳಿದನು. ಅರ್ಜುನನ ಎಲ್ಲಾ ಅನುಮಾನಗಳನ್ನು ನಿವಾರಿಸಲು ಶ್ರೀಕೃಷ್ಣನು ತನ್ನ ವಿಶ್ವರೂಪವನ್ನು ತೋರಿಸಿದನು. ಇದರಿಂದ ಬ್ರಹ್ಮಾಂಡದ ಎಲ್ಲಾ ಜೀವಿಗಳು ಪರಮಾತ್ಮನ ಅಂಶವಾಗಿದೆ ಎಂಬುದನ್ನು ಅರ್ಜುನನು ಅರಿತುಕೊಂಡನು. ಸಂದಿಗ್ಧ ಪರಿಸ್ಥಿತಿಯಲ್ಲಿದ್ದ ಅರ್ಜುನನು ಧರ್ಮದ ಮಾರ್ಗದಲ್ಲಿ ನಡೆಯಲು ನಿರ್ಧರಿಸಿದನು. ನಂತರ ಮಹಾಭಾರತ ಯುದ್ಧವು 18 ದಿನಗಳ ಕಾಲ ನಡೆಯಿತು. ಪಾಂಡವರ ವಿಜಯದೊಂದಿಗೆ ಅದು ಕೊನೆಗೊಂಡಿತು. ಯುದ್ಧದಲ್ಲಿ ಅನೇಕ ವೀರ ಯೋಧರ ಮರಣವಾಯಿತು. ಯುದ್ಧವು ವಿನಾಶಕಾರಿ ಫಲಿತಾಂಶವನ್ನು ನೀಡಿತು.
ಆದರೆ, ಯುದ್ಧದ ಪೂರ್ವದಲ್ಲಿ ಶ್ರೀಕೃಷ್ಣನಿಂದ ಹೇಳಲ್ಪಟ್ಟ ಭಗವದ್ಗೀತೆಯು ಒಬ್ಬ ಸಾಮಾನ್ಯ ವ್ಯಕ್ತಿಯೂ ಶ್ರೇಷ್ಠ ವ್ಯಕ್ತಿಯಾಗಿ ಬದುಕುವುದು ಹೇಗೆ ಎಂಬುದನ್ನು ತಿಳಿಸುತ್ತದೆ. ಜೀವನದಲ್ಲಿ ಮಾಡುವ ತಪ್ಪುಗಳನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವುದು ಮತ್ತು ಕೋಪದ ಸಮಯದಲ್ಲಿ ಮನಸ್ಸನ್ನು ನಿಯಂತ್ರಿಸಿಕೊಳ್ಳದಿದ್ದರೆ ಏನಾಗುತ್ತದೆ ಎಂದು ವಾಸುದೇವನು ಗೀತೋಪದೇಶದಲ್ಲಿ ಹೇಳಿದ್ದಾನೆ.
ಕೋಪದಿಂದ ಏನಾಗುತ್ತದೆ?
ಭಗವದ್ಗೀತೆಯ ಪ್ರಕಾರ ಕೋಪ ಮತ್ತು ಅಹಂಕಾರದಿಂದ ವಿನಾಶವೇ ಆಗುತ್ತದೆ. ಆದ್ದರಿಂದ ಅದನ್ನು ದೂರವಿಡಬೇಕು. ಶ್ರೀಕೃಷ್ಣನು ಅರ್ಜುನನಿಗೆ ಕೋಪವು ಮನುಷ್ಯನ ದೊಡ್ಡ ಶತ್ರು ಎಂದು ಹೇಳುತ್ತಾನೆ.
ಕ್ರೋಧಾದ್ಭವತಿ ಸಮ್ಮೋಹ: ಸಮ್ಮೋಹಾತ್ಸ್ಮೃತಿವಿಭ್ರಮಃ |
ಸ್ಮೃತಿಭ್ರಾಂಶಾದ್ ಬುದ್ಧಿನಾಶೋ ಬುದ್ಧಿನಾಶಾತ್ ಪ್ರಣಶ್ಯತಿ ||
ಅಂದರೆ, ಕೋಪವು ಗೊಂದಲವನ್ನು ಉಂಟುಮಾಡುತ್ತದೆ. ಗೊಂದಲದಿಂದ ಸ್ಮರಣಶಕ್ತಿಯ ನಾಶವಾಗುತ್ತದೆ. ಸ್ಮರಣಶಕ್ತಿಯ ನಾಶದಿಂದ ಬುದ್ಧಿಯ ನಾಶವಾಗುತ್ತದೆ. ಅದು ಮನುಷ್ಯನ ಅವನತಿಗೆ ಕಾರಣವಾಗುತ್ತದೆ. ಆದ್ದರಿಂದ, ಕೋಪವನ್ನು ನಿಯಂತ್ರಿಸುವುದು ಅವಶ್ಯಕ, ಇದರಿಂದ ನಾವು ನಮ್ಮ ಬುದ್ಧಿವಂತಿಕೆ ಮತ್ತು ವಿವೇಕವನ್ನು ಕಾಪಾಡಿಕೊಳ್ಳಬಹುದು.
ತಪ್ಪು ಮಾಡಿದಾಗ ಏನು ಮಾಡಬೇಕು?
ಮನುಷ್ಯನು ತಪ್ಪು ಮಾಡುವುದು ಸಹಜ. ತಪ್ಪು ಮಾಡಿದಾಗ ಅದನ್ನು ಒಪ್ಪಿಕೊಳ್ಳಬೇಕು. ಸರಿಯಾದ ಮಾರ್ಗವನ್ನು ಅನುಸರಿಸಿಬೇಕು. ತಪ್ಪುಗಳಿಂದ ಕಲಿಯಬೇಕು ಎಂದು ಶ್ರೀಕೃಷ್ಣನು ಅರ್ಜುನನಿಗೆ ಹೇಳಿದನು.
ಅಮಾನಿತ್ವಮದಂಭಿತ್ವಮಹಿಂಸಾ ಕ್ಷಾಂತಿರಾರ್ಜವಮ್ |
ಆಚಾರ್ಯೋಪಾಸನಂ ಸ್ಥೈರ್ಯಮಾತ್ಮವಿನಿಗ್ರಹಃ ||
ಇದರ ಅರ್ಥ, ನಮ್ರತೆ, ಕ್ಷಮೆ, ಸರಳತೆ, ಗುರುವಿಗೆ ಗೌರವ, ಪರಿಶುದ್ಧತೆ, ಸ್ಥಿರತೆ ಮತ್ತು ಆತ್ಮ ಸಂಯಮವನ್ನು ಬೆಳೆಸಿಕೊಳ್ಳಬೇಕು. ಅಹಂಕಾರವನ್ನು ತ್ಯಜಿಸಿ, ವಿನಯದಿಂದ ಬಾಳಬೇಕು. ತಪ್ಪನ್ನು ಒಪ್ಪಿಕೊಳ್ಳುವುದು ಮತ್ತು ಅದನ್ನು ವಿನಯದಿಂದ ಸರಿಪಡಿಸಿಕೊಳ್ಳುವುದು ವ್ಯಕ್ತಿಯನ್ನು ಉನ್ನತಕ್ಕೇರಿಸುತ್ತದೆ ಮತ್ತು ಸರಿಯಾದ ಮಾರ್ಗದಲ್ಲಿ ನಡೆಯಲು ಸಹಾಯ ಮಾಡುತ್ತದೆ.
ಬರಹ: ಅರ್ಚನಾ ವಿ ಭಟ್