ಜೀವನದಲ್ಲಿ ಮುನ್ನಡೆಯಬೇಕೆಂದರೆ ಭಗವದ್ಗೀತೆಯ ಈ 4 ಮೌಲ್ಯಗಳನ್ನು ಅಳವಡಿಸಿಕೊಳ್ಳಿ; ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿಯೂ ಗುರಿಯತ್ತ ಸಾಗುತ್ತೀರಿ
Bhagavad Gita: ಜೀವನದಲ್ಲಿ ಯಶಸ್ವಿಯಾಗಿ ಮುನ್ನಡೆಯಲು ಪ್ರೇರಣೆ ಬೇಕಾಗುತ್ತೆ. ಭಗವದ್ಗೀತೆಯಲ್ಲಿ ಹೇಳಿರುವ ಅನೇಕ ಉಪದೇಶಗಳು ಇಂದಿನ ಯುವ ಜನತೆಗೆ ಮುನ್ನಡೆಯಲು ಪ್ರೇರಣೆಯನ್ನು ನೀಡುತ್ತದೆ.

ಭಗವದ್ಗೀತೆಯು, ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಬೋಧನೆಗಳ ಸಂಗ್ರಹವಾಗಿದೆ. ಸಂಭಾಷಣೆಯ ರೂಪದಲ್ಲಿರುವ ಇದು ಜೀವನದ ಪ್ರತಿಯೊಂದು ಸಮಯದಲ್ಲೂ ನಮಗೆ ಮಾರ್ಗದರ್ಶನ ನೀಡುತ್ತದೆ. ಗೀತೆಯ ಈ ಮೌಲ್ಯಗಳು ಮತ್ತು ತತ್ವಗಳನ್ನು ಅಳವಡಿಸಿಕೊಳ್ಳುವ ಮೂಲಕ ನಾವು ನಮ್ಮ ಜೀವನವನ್ನು ಸುಲಭ ಮತ್ತು ಅರ್ಥಪೂರ್ಣಗೊಳಿಸಿಕೊಳ್ಳಬಹುದಾಗಿದೆ. ಭಗವದ್ಗೀತೆಯು ನಮ್ಮ ಜೀವನಕ್ಕೆ ಅಗತ್ಯವಿರುವ ಅನೇಕ ವಿಷಯಗಳನ್ನು ಹೇಳುತ್ತದೆ. ಉದಾಹರಣೆಗೆ, ಭಗವದ್ಗೀತೆಯು ನಾವು ನಮ್ಮ ಕರ್ತವ್ಯವನ್ನು ಮಾಡುತ್ತಲೇ ಇರಬೇಕು ಮತ್ತು ಫಲಿತಾಂಶಗಳ ಬಗ್ಗೆ ಚಿಂತಿಸಬಾರದು, ಎಲ್ಲವೂ ದೇವರ ಇಚ್ಛೆಯಂತೆಯೇ ನಡೆಯುತ್ತದೆ ಎಂದು ಹೇಳುತ್ತದೆ. ಗೀತೆಯ ಈ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ, ನೀವು ನಿಮ್ಮ ವ್ಯಕ್ತಿತ್ವವನ್ನು ಸುಧಾರಿಸಿಕೊಳ್ಳಬಹುದು. ನಿಮ್ಮ ಜೀವನವನ್ನು ಯಶಸ್ವಿಗೊಳಿಸಿಕೊಳ್ಳಬಹುದು. ಮಹಾಭಾರತ ಯುದ್ಧದ ಸಮಯದಲ್ಲಿ ಅರ್ಜುನನು ವಿಚಲಿತನಾದಾಗ ಕೃಷ್ಣ ಪರಮಾತ್ಮನು ಅವನಿಗೆ ಭಗವದ್ಗೀತೆಯ ಉಪದೇಶಗಳನ್ನು ಬೋಧಿಸಿದನು. ಅದನ್ನು ಕೇಳಿದ ನಂತರವೇ ಅರ್ಜುನನು ತನ್ನ ಗುರಿಯತ್ತ ಮುನ್ನಡೆದನು. ಭಗವದ್ಗೀತೆಯಲ್ಲಿರುವ ಈ 4 ಮೌಲ್ಯಗಳು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿಯೂ ನಿಮಗೆ ಸಹಾಯ ಮಾಡುತ್ತದೆ.
1. ಇಂದ್ರಿಯಗಳ ಮೇಲೆ ನಿಯಂತ್ರಣ
ಶ್ರೀಕೃಷ್ಣ ಪರಮಾತ್ಮನು ಮನಸ್ಸು ಮನುಷ್ಯನ ದೊಡ್ಡ ಸ್ನೇಹಿತ ಹಾಗೂ ಶತ್ರು ಎಂದು ಹೇಳಿದ್ದಾನೆ. ಜೀವನದ ಯಶಸ್ಸಿಗೆ ಮನಸ್ಸಿನ ಶಾಂತಿ ಅತಿಮುಖ್ಯ. ಆದ್ದರಿಂದ ನಮ್ಮ ಆಸೆಗಳನ್ನು ಹಿಡಿತದಲ್ಲಿಟ್ಟುಕೊಳ್ಳದಿದ್ದರೆ ಅದು ನಮ್ಮನ್ನು ತಪ್ಪು ದಾರಿಗೆ ಕೊಂಡೊಯ್ಯುತ್ತದೆ. ಆದ್ದರಿಂದ, ಮನಸ್ಸನ್ನು ಗೆಲ್ಲುವುದು ಬಹಳ ಮುಖ್ಯವಾಗಿದೆ. ಮನಸ್ಸನ್ನು ಶಾಂತಗೊಳಿಸುವ ಮೂಲಕ, ನಾವು ಜೀವನದ ಹೆಚ್ಚಿನ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಬಹುದಾಗಿದೆ.
2. ನಿರಂತರ ಅಭ್ಯಾಸ
ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ನಿರಂತರ ಅಭ್ಯಾಸವು ಯಶಸ್ಸಿನ ಕೀಲಿಕೈ ಆಗಿದೆ ಎಂದು ಹೇಳಿದ್ದಾನೆ. ನಿರಂತರ ಅಭ್ಯಾಸವು ಆತ್ಮವಿಶ್ವಾಸವನ್ನು ಹೆಚ್ಚಿಸುವುದಲ್ಲದೆ, ಹೊಸ ಕೌಶಲಗಳನ್ನು ಸಹ ಅಭಿವೃದ್ಧಿಪಡಿಸುತ್ತದೆ. ಗೀತೆಯ ಪ್ರಕಾರ, ಜೀವನವನ್ನು ಸುಲಭಗೊಳಿಸಲು ನಿಯಮಿತ ಅಭ್ಯಾಸ ಅಗತ್ಯ. ಅದರಿಂದ ಮನಸ್ಸು ಕೇಂದ್ರೀಕೃತವಾಗುತ್ತದೆ. ಆಗ ವ್ಯಕ್ತಿಯು ಗುರಿಗಳನ್ನು ಸುಲಭವಾಗಿ ತಲುಪಿ ಯಶಸ್ವಿಯಾಗಬಹುದಾಗಿದೆ.
3. ಕೆಲಸ ಮಾಡಬೇಕು
ಭಗವದ್ಗೀತೆಯ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯು ತನ್ನ ಕರ್ಮ(ಕೆಲಸ) ದ ಮೇಲೆ ಗಮನವನ್ನು ಕೇಂದ್ರೀಕರಿಸಬೇಕು. ಫಲಿತಾಂಶಗಳ ಬಯಕೆ ಇಟ್ಟುಕೊಳ್ಳಬಾರದು. ಅದು ಮನಸ್ಸನ್ನು ವಿಚಲಿತಗೊಳಿಸುತ್ತದೆ. ಆದ್ದರಿಂದ, ನಾವು ನಮ್ಮ ಕೆಲಸವನ್ನು ಮಾಡುತ್ತಲೇ ಇರಬೇಕು ಮತ್ತು ಪರಿಣಾಮಗಳ ಬಗ್ಗೆ ಚಿಂತಿಸಬಾರದು. ಕೃಷ್ಣ ಪರಮಾತ್ಮನ ಪ್ರಕಾರ, ದೇವರು ನಿಮ್ಮ ಕರ್ಮಗಳಿಗೆ ಅನುಗುಣವಾಗಿ ಫಲಗಳನ್ನು ನೀಡುತ್ತಾನೆ. ಆದ್ದರಿಂದ, ಫಲಿತಾಂಶದ ಬಗ್ಗೆ ಎಂದಿಗೂ ಚಿಂತಿಸಬಾರದು, ಏಕೆಂದರೆ ಕೆಲಸ ಮಾಡುವ ಮೊದಲೇ ಫಲಿತಾಂಶವನ್ನು ನಿರೀಕ್ಷಿಸುವುದರಿಂದ ಮನಸ್ಸು ಗೊಂದಲಮಯವಾಗುತ್ತದೆ.
4. ಆತ್ಮಾವಲೋಕನ ಅಗತ್ಯ
ಭಗವದ್ಗೀತೆಯ ಪ್ರಕಾರ, ಆತ್ಮಾವಲೋಕನ ಬಹಳ ಅಗತ್ಯವಾಗಿದೆ. ಪ್ರತಿಯೊಬ್ಬರು ಕಾಲಕಾಲಕ್ಕೆ ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಳ್ಳುತ್ತಲೇ ಇರಬೇಕು. ಹಾಗೆ ಮಾಡುವುದರಿಂದ, ವ್ಯಕ್ತಿಯು ತನ್ನಲ್ಲಿರುವ ಕೊರತೆಗಳನ್ನು ಗುರುತಿಸಬಹುದು ಮತ್ತು ಅವುಗಳನ್ನು ಸುಧಾರಿಸಿಕೊಳ್ಳಬಹುದು. ಇದು ಯಶಸ್ಸಿನ ಹಾದಿಯನ್ನು ಸುಲಭಗೊಳಿಸುತ್ತದೆ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟಿಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)
