ಶಬರಿಮಲೆಯಲ್ಲಿ ಮಕರವಿಳಕ್ಕು ಹಬ್ಬಕ್ಕೆ ಸಜ್ಜು; ಮಕರ ಜ್ಯೋತಿ ಕಣ್ತುಂಬಿಕೊಳ್ಳಲು ಜಮಾಯಿಸುತ್ತಿದ್ದಾರೆ ಅಯ್ಯಪ್ಪನ ಭಕ್ತರು
ಜನವರಿ 14 ರಂದು ನಡೆಯುವ ಮಕರ ಜ್ಯೋತಿಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಮಂದಿ ಅಯ್ಯಪ್ಪ ಮಾಲಾಧಾರಿಗಳು ಈಗಾಗಲೇ ಶಬರಿಮಲೆಯತ್ತ ಹೊರಟ್ಟಿದ್ದಾರೆ. ಮಕರವಿಳಕ್ಕು ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿಟ್ಟಿನಲ್ಲಿ ಟಿಡಿಬಿ ಸಕಲ ರೀತಿಯಲ್ಲಿ ಸಿದ್ದತೆಗಳನ್ನು ಮಾಡಿಕೊಂಡಿದೆ.

ಪತ್ತಿನಂತಿಟ್ಟ: ಮಕರ ಜ್ಯೋತಿಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಕೇರಳದ ಪ್ರಮುಖ ಧಾರ್ಮಿಕ ಕ್ಷೇತ್ರ ಶಬರಿಮಲೆಯಲ್ಲಿ ಜಮಾಯಿಸುತ್ತಿದ್ದಾರೆ. ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳ ಭೇಟಿ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕೇರಳ ಹೈಕೋರ್ಟ್ ನಿರ್ದೇಶನವನ್ನು ಪಾಲಿಸುತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ), ಮಕರವಿಳಕ್ಕು ಹಬ್ಬಕ್ಕೆ ಸಕಲ ರೀತಿಯಲ್ಲಿ ಸಿದ್ದತೆಗಳನ್ನು ಮಾಡಿಕೊಂಡಿದೆ. 2025ರ ಜನವರಿ 8 ರಿಂದ 15 ರವರೆಗೆ ಪ್ರತಿದಿನ 5 ಸಾವಿರ ಭಕ್ತರಿಗೆ ಮಾತ್ರ ಸನ್ನಿಧಾನಂ ಸ್ಪಾಟ್ ಬುಕಿಂಗ್ ಅನ್ನು ಸೀಮಿತಗೊಳಿಸಿದೆ.
ಪೊನ್ನಂಬಲಮೇಡಿನಲ್ಲಿ ಕರ್ಪೂರದ ಪೂಜೆಯೇ ಮಕರವಿಳಕ್ಕು ಹಬ್ಬವಾಗಿದೆ. ಇದನ್ನು ಮಕರ ಜ್ಯೋತಿ ಅಂತಲೂ ಕರೆಯಲಾಗುತ್ತದೆ. ಪ್ರತಿ ವರ್ಷ ಮಕರವಿಳಕ್ಕು ಹಬ್ಬಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಇಲ್ಲಿ ಸೇರುತ್ತಾರೆ. ದೇಶದ ನಾನಾ ಭಾಗಗಳಿಂದ ಅಯ್ಯಪ್ಪನ ಮಾಲಾಧಾರಿಗಳು ಆಗಮಿಸಿ ಮಕರ ಜ್ಯೋತಿ ಕಣ್ತುಂಬಿಕೊಳ್ಳಲು ಕಾಯುತ್ತಾರೆ. ಜನವರಿ 14 (ಮಂಗಳವಾರ) ರಂದು ನಡೆಯುವ ಮಕರ ಜ್ಯೋತಿಗೆ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿನಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಬೆಟ್ಟದ ದೇವಾಲಯವಾದ ಶಬರಿಮಲೆಯಲ್ಲಿ ಸೇರುತ್ತಾರೆ. ಈ ಸಮಯದಲ್ಲಿ ದೇವರ ದರ್ಶನಕ್ಕೆ ಬುಕಿಂಗ್ ಕಡ್ಡಾಯವಾಗಿದೆ.
ತಿರುವಾಂಕೂರು ದೇವಸ್ವಂ ಮಂಡಳಿ ವೆಬ್ ಸೈಟ್ ನಲ್ಲಿ ವರ್ಚುವಲ್ ಕ್ಯೂ ವ್ಯವಸ್ಥೆಯನ್ನು ಇಂದಿನಿಂದ (ಜನವರಿ 12, ಭಾನುವಾರ) ಜನವರಿ 14 ರವರೆಗೆ ಅಂದರೆ ಒಟ್ಟು 3 ದಿನ ನಿರ್ದಿಷ್ಟ ಬುಕಿಂಗ್ ಗೆ ಸೀಮಿತಗೊಳಿಸಲಾಗಿದೆ. ಜನವರಿ 12ರ ಭಾನುವಾರ 60,000, ಜನವರಿ 13ರ ಸೋಮವಾರ 50,000 ಹಾಗೂ ಜನವರಿ 14ರ ಮಂಗಳವಾರ 40,000 ಬುಕಿಂಗ್ ಗೆ ಮಿತಿಗೊಳಿಸಲಾಗಿದೆ ಎಂದು ವರದಿಯಾಗಿದೆ.
ಡಿಸೆಂಬರ್ 30 ರಂದು ಸುಮಾರು 15,000 ಭಕ್ತರು ಸರತಿ ಸಾಲನ್ನು ದಾಟಿ ಬಂದು ನೇರವಾಗಿ ದೇವಸ್ಥಾನದ 18 ಮೆಟ್ಟಿಲುಗಳ ಬಳಿಗೆ ಪ್ರವೇಶಿಸಲು ಮುಂದಾದಾಗ ಭಾರಿ ನೂಕುನುಗ್ಗಲು ಉಂಟಾಗಿತ್ತು. ಅವ್ಯವಸ್ಥೆಯನ್ನು ಖಂಡಿಸಿ ಹಲವಾರು ಭಕ್ತರು ಪ್ರತಿಭಟನೆ ಕೂಡ ನಡೆಸಿದ್ದರು. ಈ ಘಟನೆಯ ಬಳಿಕ ಎಚ್ಚೆತ್ತಿರುವ ಟಿಡಿಬಿ, ಭಕ್ತರು ಸರತಿ ಸಾಲಿನಲ್ಲೇ ಬರಲು ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಿದ್ದು, ಭದ್ರತೆಯನ್ನು ಹೆಚ್ಚಿಸಿದೆ.
ಭಕ್ತರ ದಟ್ಟಣೆಯ ಬಗ್ಗೆ ಕೇರಳ ಹೈಕೋರ್ಟ್ ಕಳವಳ ವ್ಯಕ್ತಪಡಿಸಿತ್ತು. ಅಲ್ಲದೆ, ಪಾಸ್ ವಿತರಣೆಯ ಮಿತಿಯನ್ನು ದಿನಕ್ಕೆ 5 ಸಾವಿರಕ್ಕೆ ಸೀಮಿತಗೊಳಿಸುವಂತೆ ನಿರ್ದೇಶನ ನೀಡಿತ್ತು. ಜನವರಿ 10 ನಂತರ ಈ ಮಿತಿಯನ್ನು ಮುಂದುವರಿಸಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ ಮುಖ್ಯ ಪೊಲೀಸ್ ಆಯುಕ್ತರು, ವಿಶೇಷ ಆಯುಕ್ತರೊಂದಿಗೆ ಸಮಾಲೋಚನೆ ನಡೆಸುವಂತೆ ಟಿಡಿಬಿಗೆ ಸೂಚನೆ ನೀಡಿತ್ತು.
