ಸಂಕಷ್ಟಹರ ಚತುರ್ಥಿ 2025 ಯಾವಾಗ; ಈ ದಿನ ವಿನಾಯಕನಿಗೆ ಮಾಡುವ ಪೂಜೆಯಿಂದ ಧನಲಾಭ ಸೇರಿ ಏನೆಲ್ಲಾ ಪ್ರಯೋಜನಗಳಿವೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸಂಕಷ್ಟಹರ ಚತುರ್ಥಿ 2025 ಯಾವಾಗ; ಈ ದಿನ ವಿನಾಯಕನಿಗೆ ಮಾಡುವ ಪೂಜೆಯಿಂದ ಧನಲಾಭ ಸೇರಿ ಏನೆಲ್ಲಾ ಪ್ರಯೋಜನಗಳಿವೆ

ಸಂಕಷ್ಟಹರ ಚತುರ್ಥಿ 2025 ಯಾವಾಗ; ಈ ದಿನ ವಿನಾಯಕನಿಗೆ ಮಾಡುವ ಪೂಜೆಯಿಂದ ಧನಲಾಭ ಸೇರಿ ಏನೆಲ್ಲಾ ಪ್ರಯೋಜನಗಳಿವೆ

2025ರ ಮೇ ತಿಂಗಳಲ್ಲಿ ಸಂಕಷ್ಟಹರ ಚತುರ್ಥಿ ಯಾವಾಗ ಬರುತ್ತೆ, ವಿಘ್ನನಿವಾರಕನಿಗೆ ಪೂಜೆಯಿಂದ ಧನಲಾಭ ಸೇರಿದಂತೆ ಏನೆಲ್ಲಾ ಶುಭಫಲಗಳನ್ನು ಪಡೆಯಬಹುದು ಎಂಬುದನ್ನು ತಿಳಿಯಿರಿ. (ಬರಹ: ಎಚ್ ಸತೀಶ್, ಜ್ಯೋತಿಷಿ)

ಸಂಕಷ್ಟಹರ ಚತುರ್ಥಿ ದಿನ ಮಾಡುವ ಪೂಜೆಯಿಂದ ಏನೆಲ್ಲಾ ಶುಭಫಲಗಳನ್ನು ಪಡೆಯಬಹುದು ಎಂಬುದನ್ನು ಇಲ್ಲಿ ವಿವರಿಸಲಾಗಿದೆ
ಸಂಕಷ್ಟಹರ ಚತುರ್ಥಿ ದಿನ ಮಾಡುವ ಪೂಜೆಯಿಂದ ಏನೆಲ್ಲಾ ಶುಭಫಲಗಳನ್ನು ಪಡೆಯಬಹುದು ಎಂಬುದನ್ನು ಇಲ್ಲಿ ವಿವರಿಸಲಾಗಿದೆ

ಸಂಕಷ್ಟಹರ ಎಂದರೆ ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಕೊನೆ ಮಾಡುವುದು ಎಂಬ ಅರ್ಥ ಬರುತ್ತದೆ. ಆದರೆ ಚತುರ್ಥಿ ತಿಥಿಯು ಬರುವ ವಾರ ಅಥವಾ ದಿನ ಮತ್ತು ಆಂದಿನ ನಕ್ಷತ್ರವನ್ನು ತಿಳಿಯುಬೇಕು. 2025 ರ ಮೇ 16ರ ಶುಕ್ರವಾರ ಸಂಕಷ್ಟಹರ ಚತುರ್ಥಿಯನ್ನು ಆಚರಿಸಲಾಗುತ್ತದೆ. ಈ ಪೂಜೆಯನ್ನು ಸೂರ್ಯಾಸ್ತದ ನಂತರ ಆರಂಭಿಸಬೇಕು. ಚಂದ್ರೋದಯ ನಂತರ ಚಂದ್ರನಿಗೆ ಅರ್ಘ್ಯ ನೀಡುವ ಮೂಲಕ ಪೂಜೆಯನ್ನು ಪರಿಸಮಾಪ್ತಿ ಮಾಡಲಾಗುತ್ತದೆ.

ಈ ದಿನದ ವಿಶೇಷತೆ ಎಂದರೆ ಚೌತಿಯು ರಾತ್ರಿ 2.05 ರ ವರೆಗೂ ಇರುತ್ತದೆ. ಮೂಲ ನಕ್ಷತ್ರವು ಮಧ್ಯಾಹ್ನ 1.50 ರವರೆಗೆ ಇರುತ್ತದೆ. ಆನಂತರ ಪೂರ್ವಾಷಾಢ ನಕ್ಷತ್ರವು ಆರಂಭವಾಗುತ್ತದೆ. ಅಂದರೆ ಪೂಜೆಯನ್ನು ಮಾಡುವ ವೇಳೆ ಪೂರ್ವಾಷಾಢ ನಕ್ಷತ್ರ ಇರುತ್ತದೆ. ಪೂರ್ವಾಷಾಢ ನಕ್ಷತ್ರವು ಶುಕ್ರನ ನಕ್ಷತ್ರವಾಗುತ್ತದೆ. ಶುಕ್ರವಾರ ಅಥವಾ ಬುಧವಾರ ಈ ನಕ್ಷತ್ರಗಳು ಬಂದ ವೇಳೆ ಮಾಡುವ ಪೂಜೆ ಪುನಸ್ಕಾರಗಳಿಂದ ಮತ್ತು ದಾನ ಧರ್ಮಗಳಿಂದ ವಿಶೇಷವಾದ ಫಲಗಳು ದೊರೆಯುತ್ತವೆ.

ಬೆಳಗಿನ ವೇಳೆ ಶ್ರೀ ಮಹಾಲಕ್ಷ್ಮಿಯ ಪೂಜೆಯನ್ನು ಮಾಡಬೇಕು. ಒಂದು ಸೇರು ಅಥವಾ ಪಾವಿನಲ್ಲಿ ಅದರ ಮುಕ್ಕಲು ಭಾಗ ಅಕ್ಕಿಯನ್ನು ತುಂಬಬೇಕು. ಅದರಲ್ಲಿ ಶ್ರೀ ಮಹಾಲಕ್ಷ್ಮಿಯ ವಿಗ್ರಹವನ್ನು ಇಡಬೇಕು. ಅದನ್ನು ಬೆಳಗಿನ ವೇಳೆಯಲ್ಲಿ ಮನೆಯ ಮುಂಬಾಗಿಲಿನ ಹೊಸಿಲಿನ ಮೇಲೆ ಇಟ್ಟು ಮನೆಯ ಒಳಗೆ ಕುಳಿತು ಪೂಜೆಯನ್ನು ಸಲ್ಲಿಸಬೇಕು. ನೈವೇದ್ಯವಾಗಿ ಮೊಸರನ್ನ ಮತ್ತು ಹೆಸರುಬೇಳೆ ಅಥವಾ ಕಡಲೆಬೇಳೆಯಿಂದ ಮಾಡಿದ ಕೋಸಂಬರಿಯನ್ನು ಅರ್ಪಿಸಬೇಕು. ಮನೆಗೆ ಬಂದವರಿಗೆ ಅದರಲ್ಲಿನ ಪಾಲನ್ನು ನೀಡಬೇಕು. ಆದರೆ ಆ ದಿನ ಮನೆಯಲ್ಲಿ ಮಾಡಿದ ಆಹಾರದ ಕೊಂಚ ಭಾಗವನ್ನು ಉಳಿಸಬೇಕು. ಆ ದಿನ ಸಂಜೆ ಪಂಚಮುಖಿ ಗಣಪತಿ ದೇವಾಲಯಕ್ಕೆ 21 ಗರಿಕೆ ಮತ್ತು ಮಿಶ್ರವರ್ಣದ ವಸ್ತ್ರವನ್ನು ನೀಡಬೇಕು. ಇದರಿಂದ ಕುಟುಂಬದಲ್ಲಿ ಎದುರಾಗುವ ವಿಘ್ನಗಳು ದೂರವಾಗುತ್ತವೆ. ಹಣಕಾಸಿನ ಸಮಸ್ಯೆಯು ಕೊನೆಯಾಗುತ್ತದೆ. ಸಂಜೆಯ ಪೂಜೆಯು ಮುಕ್ತಾಯವಾದ ಬಳಿಕ ಚಂದ್ರನಿಗೆ ಅರ್ಘ್ಯವನ್ನು ನೀಡಿದ ನಂತರ ಭೋಜನವನ್ನು ಸ್ವೀಕರಿಸಬೇಕು. ರಾತ್ರಿ 10 ಘಂಟೆಗೆ ಚಂದ್ರೋದಯ ಆಗಲಿದೆ. ಚಂದ್ರನಿಗೆ ಅರ್ಘ್ಯವನ್ನು ನೀಡದೇ ಹೋದಲ್ಲಿ ವ್ರತದ ಫಲವು ದೊರೆಯುವುದಿಲ್ಲ.

ಪಾರ್ವತಿಗೆ ಚಿಕ್ಕವಯಸ್ಸಿನಲ್ಲಿಯೆ ಸಾಕ್ಷಾತ್ ಶಿವನೆ ತನ್ನ ಪತಿಯಾಗಬೇಕೆಂಬ ಆಸೆ ಇರುತ್ತದೆ. ಆದರೆ ಆಕೆಯ ಆಸೆ ಈಡೇರಲು ಹತ್ತು ಹಲವು ಅಡ್ಡಿ ಆತಂಕಗಳು ಎದುರಾಗುತ್ತದೆ. ಪಾರ್ವತಿಯು ಈಶ್ವರನನ್ನು ವರಿಸಲು ಬೇಕಾದ ವ್ರತದ ಬಗ್ಗೆ ತಿಳಿಯಲು ಕಠಿಣ ತಪಸ್ಸನ್ನು ಆಚರಿಸುತ್ತಾಳೆ. ಕೆಲವು ಗ್ರಂಥಗಳ ಪ್ರಕಾರ, ಗಣನಾಧನು ಸಂಕಷ್ಟಹರ ಚತುರ್ಥಿ ವ್ರತವನ್ನು ಆಚರಿಸಲು ತಿಳಿಸುತ್ತಾನೆ. ಇನ್ನೂ ಕೆಲವು ಗ್ರಂಥಗಳ ಪ್ರಕಾರ, ನಾರದರ ಆಗಮನ ಆಗುತ್ತದೆ. ಪಾರ್ವತಿಯ ಚಿಂತೆಗೆ ಕಾರಣವನ್ನು ಕೇಳುತ್ತಾರೆ. ನಿಜಾಂಶವನ್ನು ಅರಿತ ನಾರದರು ಪಾರ್ವತಿಗೆ ಸಂಕಷ್ಟ ಹರ ಗಣಪತಿ ಪೂಜೆಯನ್ನು ಮಾಡಲು ತಿಳಿಸುತ್ತಾರೆ. ಪೂಜೆಯ ವಿಧಾನವನ್ನು ತಿಳಿಸುತ್ತಾರೆ. ಅದರಂತೆ ಪಾರ್ವತಿಯು ಈ ವ್ರತವನ್ನು ಆಚರಿಸುತ್ತಾಳೆ. ಈ ಪೂಜೆಯಿಂದ ಪಾರ್ವತಿಯ ವಿವಾಹ ನಡೆಯಿತೆಂದು ಹೇಳಲಾಗುತ್ತದೆ. ಶ್ರಾವಣ ಮಾಸದಲ್ಲಿ ಈ ವ್ರತವನ್ನು ಮಾಡುವುದನ್ನು ಆರಂಭಿಸುವುದು ಹೆಚ್ಚು ಫಲದಾಯಕ. ಕನಿಷ್ಠ 21 ಭಾರಿ ಈ ವ್ರತವನ್ನು ಆಚರಿಸಬೇಕು.

ಈ ವ್ರತದಲ್ಲಿ ಸರಳವಾದ ಶೋಡಷೋಪಚಾರ ಪೂಜೆಯನ್ನು ಮಾಡಬೇಕು. ಸಂಕಲ್ಪ ಮಾಡುವಾಗ ಸಂಕಷ್ಟಹರ ಗಣಪತಿ ಪ್ರಸಾದೇನ ವಿದ್ಯಾ ಆರೋಗ್ಯ ಪುತ್ರಲಾಭಾದಿ ಫಲ ಸಿಧ್ಯರ್ಥಂ ಮನಸಾಭಿಷ್ಟ ಸಕಲ ಫಲ ಸಿಧ್ಯಾರ್ಥಂ ದಾರಿದ್ರ್ಯ ಪರಿಹಾರಾರ್ಥಂ ಶೀ ಸಂಕಷ್ಟಹರ ಗಣಪತಿ ಪೂಜಾನಿ ಕರೀಷ್ಯೆ ಎಂದು ಹೇಳಬೇಕು. ಆ ನಂತರ ಕಲಶಪೂಜೆ, ಶಂಖಪೂಜೆ ಮಾಡಬೇಕು. ಪಂಚಾಮೃತ ಸ್ನಾನದ ನಂತರ ಗಂಧ, ಪುಷ್ಪ, ಚಿನ್ನ, ರುದ್ರಾಕ್ಷಿ, ವಿಭೂತಿ, ಬಿಲ್ವಪತ್ರೆ ಮತ್ತು ಗರಿಕೆಯ ಅಭಿಷೇಕವನ್ನು ಮಾಡಬೇಕು. ರುಧ್ರ, ಚಮೆ, ಪುರುಷಸೂಕ್ತ, ಶ್ರೀಸೂಕ್ತದ ಮೂಲಕ ಆಚರಿಸಬೇಕು. ಆನಂತರ ಆವರಣ ಪೂಜೆಯನ್ನು ಮಾಡಬೇಕು. ಧೂಪ ದೀಪ ನಿವೇದನೆ ಉತ್ತರ ನೀರಾಜನ ಆದ ನಂತರ ಗಣಪತಿ ಸೂಕ್ತವನ್ನು ಮಂತ್ರಪುಷ್ಪವನ್ನಾಗಿ ಹೇಳಬೇಕು.

(ಬರಹ: ಎಚ್ ಸತೀಶ್, ಜ್ಯೋತಿಷಿ)

ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.