ಸಾವಿತ್ರಿ ಗೌರಿ ವ್ರತಾಚರಣೆಯಿಂದ ಮಹಿಳೆಯರಿಗೆ ಸಿಗುವ ಸೌಭಾಗ್ಯಗಳಿವು; ದೇವಿ ಮಹಾತ್ಮೆ ಕಥೆ ತಿಳಿಯಿರಿ
ಪವಿತ್ರ ಪುಷ್ಯಮಾಸದ ಉತ್ತರಾಯಣದಲ್ಲಿ ಮಹಿಳೆಯರು, ಸಮೃದ್ಧಿ ಮತ್ತು ಮುಕ್ತಿಯನ್ನು ನೀಡುವ ಸಾವಿತ್ರಿ ಗೌರಿ ವ್ರತವನ್ನು ಆಚರಿಸಿದರೆ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಸಾವಿತ್ರಿ ಗೌರಿ ವ್ರತದ ಮಹಾತ್ಮೆಯ ಕಥೆಯ ಬಗ್ಗೆ ಪಂಚಾಂಗಕರ್ತ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ವಿವರಿಸಿದ್ದಾರೆ.

ಹಿಂದೂ ಸಂಪ್ರದಾಯಗಳ ಪ್ರಕಾರ, ವಿವಾಹಿತ ಮಹಿಳೆಯರು ಸಾವಿತ್ರಿ ಗೌರಿ ವ್ರತಾಚರಣೆಯನ್ನು ಮಾಡಿದರೆ ಅದೃಷ್ಟ, ಯೋಗಕ್ಷೇಮ, ದೀರ್ಘಾಯುಷ್ಯ, ಕುಟುಂಬದಲ್ಲಿ ಶಾಂತಿ, ಸಮೃದ್ಧಿ ಹಾಗೂ ದಾಂಪತ್ಯ ಜೀವನ ಸುಖಕರವಾಗಿರುತ್ತದೆ ಎಂದು ಹೇಳಲಾಗುತ್ತದೆ. ಪಂಚಾಂಗಕರ್ತ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಅವರು ಸಾವಿತ್ರಿ ಗೌರಿ ವ್ರತ ಮಹಾತ್ಮೆಯ ಕಥೆಯ ಬಗ್ಗೆ ವಿವರವಾಗಿ ಹೇಳಿದ್ದಾರೆ.
ಪ್ರಾಚೀನ ಕಾಲದಲ್ಲಿ ಕಾಶ್ಮೀರದಲ್ಲಿ ಒಬ್ಬ ಬ್ರಾಹ್ಮಣನಿದ್ದನು, ಅವನು ಪುರೋಹಿತಶಾಹಿಯಿಂದ ತನ್ನ ಕುಟುಂಬವನ್ನು ಪೋಷಿಸುತ್ತಿದ್ದನು. ಕಾಲಾನಂತರದಲ್ಲಿ ಅವನಿಗೆ ಓರ್ವ ಮಗಳಿದ್ದವು, ಈಕೆಗೆ ಇಂದುಮತಿ ಎಂದು ಹೆಸರು ಇಟ್ಟಿದ್ದನು. ಮಗಳು ಪ್ರೌಢಾವಸ್ಥೆಯನ್ನು ತಲುಪಿದಾಗ, ಆಕೆಗೆ ಮದುವೆ ಮಾಡಲು ನಿರ್ಧರಿಸಿದನು, ದಿನಗಳು ಕಳೆದಂತೆ ಆಕೆಗೆ ಮಿತ್ರ ಶರ್ಮಾ ಎಂಬ ಬ್ರಾಹ್ಮಣನೊಂದಿಗೆ ಮದುವೆ ಮಾಡಿಸಿದನು. ಅವನು ಸದಾಚಾರ ಪಾರಾಯಣ, ಶಾಶ್ವತ ಸತ್ಯದ ವ್ಯಕ್ತಿ ಹಾಗೂ ಭಗವಂತನ ನಾಮವನ್ನು ನಿರಂತರವಾಗಿ ನೆನಪಿಸಿಕೊಳ್ಳುವ ಬ್ರಾಹ್ಮಣ.
ಇಂದುಮತಿಯು ಮಿತ್ರಶರ್ಮಾನ ಸ್ವಭಾವಕ್ಕೆ ವಿರುದ್ಧವಾದ ಗುಣಗಳನ್ನು ಹೊಂದಿದ್ದಳು. ಈಕೆಯನ್ನು ತಂದೆ ಬಹಳ ಕ್ರೂರವಾಗಿ ಬೆಳೆಸಿದ್ದ ಕಾರಣ ಯಾವಾಗಲೂ ಹಿರಿಯರನ್ನು ನಿಂದಿಸುತ್ತಿದ್ದಳು, ತನ್ನ ಪತಿ ಮತ್ತು ಅತ್ತೆ ಮಾವಂದಿರನ್ನು ಕೆಟ್ಟ ಪದಗಳಿಂದ ನಿಂದಿಸುತ್ತಿದ್ದಳು, ಮತ್ತು ಮಹಿಳೆಯರ ಗುಣಗಳಿಗೆ ಈಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಳು. ಮಾತ್ರವಲ್ಲದೆ, ಗಂಡನ ಮಾತುಗಳಿಗೆ ಕಿವಿಗೊಡುತ್ತಿರಲಿಲ್ಲ.
ಇಂದುಮತಿಯ ಪತಿ ಸಾವನ್ನಪ್ಪುತ್ತಾನೆ. ಪತಿಯ ಮರಣದ ನಂತರ, ಪೋಷಕರು ಮಗಳನ್ನು ಅವಳ ಹುಟ್ಟೂರಿಗೆ ಕರೆತಂದರು. ಇಂದುಮತಿಯ ಪೋಷಕರು ಸದ್ಗುಣಶೀಲ ಅಳಿಯನ ಸಾವಿನ ಬಗ್ಗೆ ವಿಚಾರಿಸಿದರು. ನೆರೆಹೊರೆಯವರು ಇಂದುಮತಿಯ ನಡವಳಿಕೆಯನ್ನು ದ್ವೇಷಿಸಿದರು. ಮಗಳ ಪರಿಸ್ಥಿತಿ ಬಗ್ಗೆ ಪಶ್ಚಾತ್ತಾಪ ಪಡದೆ, ಅವಳೊಂದಿಗೆ ಕರುಣೆಯಿಲ್ಲದೆ ವರ್ತಿಸಿದರು.
ನಂತರ ಇವರು ದೇಶಾದ್ಯಂತ ಪ್ರಯಾಣಿಸಿದರು, ದೇವಾಲಯಗಳಿಗೆ ಭೇಟಿ ನೀಡಿದರು. ದೇವರುಗಳ ಬಳಿ ತಮ್ಮ ನೋವನ್ನು ತೋಡಿಕೊಳ್ಳುತ್ತಾರೆ. ಅಂತಿಮವಾಗಿ ಕಾಶಿ ಕ್ಷೇತ್ರವನ್ನು ತಲುಪಿದಾಗ ಇಲ್ಲಿ ಈ ದಂಪತಿಯನ್ನು ಶ್ಲಾಘಿಸಲಾಯಿತು. ಇವರ ದುಃಖವನ್ನು ನಿವಾರಿಸಲು ಮತ್ತು ಮಗಳಿಗೆ ಉತ್ತಮ ಜೀವನವನ್ನು ನೀಡುವಂತೆ ಬೇಡಿಕೊಂಡಾಗ ಪಾರ್ವತಿ ಮತ್ತು ಪರಮೇಶ್ವರರು ಇವರ ಬಗ್ಗೆ ದಯೆ ತೋರಿದರು.
ಪಾರ್ವತಿ ಮತ್ತು ಪರಮೇಶ್ವರ ಇವರ ಕಷ್ಟಕ್ಕೆ ಸ್ಪಂದಿಸಿದರಲ್ಲದೆ, ಮಾರುವೇಷದಲ್ಲಿ ಅವರಿಗೆ ಕಾಣಿಸಿಕೊಂಡರು."ನೀವು ದೇವಾಲಯಗಳಲ್ಲಿ ಏಕೆ ತಿರುಗಾಡುತ್ತಿದ್ದೀರಿ ಮತ್ತು ಅಯೋಮಯ ಜೀವನವನ್ನು ಏಕೆ ನಡೆಸುತ್ತಿದ್ದೀರಿ ಎಂದು ಕೇಳುತ್ತಾರೆ, ಅದಕ್ಕೆ ಅವರು ಉತ್ತರಿಸಿದರು, "ಸ್ವಾಮಿ! ಅವಳು ನಮ್ಮ ಮಗಳು. ಆಕೆಯ ಪತಿ ತೀರಿಕೊಂಡ. ನಮ್ಮ ಮಗಳು ವಿಧವೆಯಾದ ದುಃಖವನ್ನು ಸಹಿಸಲಾಗಲಿಲ್ಲ. ಹೀಗಾಗಿ ನಾವು ಈ ರೀತಿಯ ತೀರ್ಥಯಾತ್ರೆಗಳಲ್ಲಿ ದೇವರುಗಳನ್ನು ಪ್ರಾರ್ಥಿಸುತ್ತಿದ್ದೇವೆ." ಎಂದು ಹೇಳುತ್ತಾರೆ. ಆಗ ಮಾರುವೇಷದಲ್ಲಿದ್ದ ಪಾರ್ವತಿ, ಪರಮೇಶ್ವರ ಹೀಗೆ ಹೇಳುತ್ತಾರೆ. "ಈ ಹುಡುಗಿ ವಿಧವೆಯಾಗಿರುವುದಕ್ಕೆ ನಮಗೆ ತುಂಬಾ ವಿಷಾದವಿದೆ. ಸ್ವಾಭಾವಿಕವಾಗಿ, ಮಾನವರಾದ ನೀವು ಸಹ ಈ ದುಃಸ್ಥಿತಿಗೆ ವಿಷಾದಿಸುತ್ತೀರಿ. ನಾವು ಪರಿಹಾರದ ಬಗ್ಗೆ ಯೋಚಿಸಬೇಕಾಗಿದೆ ಎನ್ನುತ್ತಾರೆ.
"ನಿಮ್ಮ ಮಗಳು ತನ್ನ ಹಿಂದಿನ ಜನ್ಮದಲ್ಲಿ ಸೌಭಾಗ್ಯ ಗೌರಿ ವ್ರತವನ್ನು ಮಾಡಲು ನಿರ್ಲಕ್ಷಿಸಿದಳು ಮತ್ತು ಇದರ ಪರಿಣಾಮವಾಗಿ ಈ ದುಃಸ್ಥಿತಿ ಉದ್ಭವಿಸಿದೆ. ಈಗಲಾದರೂ ನಿಮ್ಮ ಮಗಳು ಸೌಭಾಗ್ಯ ಗೌರಿ ವ್ರತವನ್ನು ಮಾಡಲಿ. ಇದು ತುಂಬಾ ಮಂಗಳಕರವಾಗಿರುತ್ತದೆ." ಎಂದು ಹೇಳುತ್ತಾರೆ.
ದಂಪತಿ ಈ ಮಾತುಗಳನ್ನು ಕೇಳಿದ ನಂತರ, ಅವರಿಗೆ ನಮಸ್ಕರಿಸಿ ತಮ್ಮ ಹಳ್ಳಿಗೆ ವಾಪಸ್ ಬರುತ್ತಾರೆ. ಆ ಬಳಿಕ ಉತ್ತಮ ಮುಹೂರ್ತವನ್ನು ನೋಡಿ ಮಗಳಿಗೆ ಮುತ್ತೈದೆಯ ಗೌರವಗಳನ್ನು ಅರ್ಪಿಸುತ್ತಾರೆ. ದೇವಿಗೆ ಅರ್ಪಣೆ ಸಲ್ಲಿಸಿ ವ್ರತದ ಕಥೆಯನ್ನು ಕೇಳುತ್ತಾರೆ. ಆ ಬಳಿಕ ಶಾಂತ ಮನಸ್ಸಿನಿಂದ ತೃಪ್ತರಾಗುತ್ತಾರೆ.
ಸಾವಿತ್ರಿ ಗೌರಿ ವ್ರತ ಮಾಡಿ ಉತ್ತಮ ಪತಿ, ಸಂಪ್ತತು, ಸಮೃದ್ಧಿಯನ್ನು ಪಡೆದ ಇಂದುಮತಿ
ಈ ವ್ರತವನ್ನು ಇಂದುಮತಿಯೊಂದಿಗೆ ಆಕೆಯ ಪೋಷಕರು ಕೆಲವು ವರ್ಷಗಳ ಕಾಲ ಮಾಡುತ್ತಿದ್ದರು. ಕರುಣಾಮಯಿ ತಾಯಿ ಭುವನೇಶ್ವರಿ ಸಂತೋಷಪಟ್ಟು ಆಶೀರ್ವಾದ ನೀಡುತ್ತಾಳೆ. ಇಂದುಮತಿ ತನ್ನೆಲ್ಲಾ ಪಾಪಗಳಿಂದ ಮುಕ್ತಿ ಪಡೆಯುತ್ತಾಳೆ. ಮುಂದಿನ ಜನ್ಮದಲ್ಲಿ ರಾಜಮನೆತನದಲ್ಲಿ ಜನಿಸುತ್ತಾಳೆ. ಜೊತೆಗೆ ಸೂಕ್ತ ಗಂಡನನ್ನು ಪಡೆದಳು, ನಂತರ ಈಕೆಯ ಉಳಿದ ಜೀವನ ಉತ್ತಮ ಸಂಪತ್ತು ಮತ್ತು ಸಮೃದ್ಧಿಯಿಂದ ಕೂಡಿರುತ್ತದೆ. ಪವಿತ್ರ ಪುಷ್ಯಮಾಸ ಉತ್ತರಾಯಣದಲ್ಲಿ ಸಮೃದ್ಧಿ ಮತ್ತು ಮುಕ್ತಿಯನ್ನು ನೀಡುವ ಸೌಭಾಗ್ಯ ಗೌರಿ ವ್ರತವನ್ನು ಆಚರಿಸಿದರೆ ಮಹಿಳೆಯರು ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)
