ದೇಹವೆಂಬುದು ರಥ, ಮನಸ್ಸೇ ಸಾರಥಿ: ನಿಮ್ಮ ಬದುಕಿನ ದಿಕ್ಕನ್ನೇ ಬದಲಿಸುತ್ತೆ ಗೀತೆಯಲ್ಲಿರುವ ಶ್ರೀಕೃಷ್ಣನ ಈ ಮಾತುಗಳು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ದೇಹವೆಂಬುದು ರಥ, ಮನಸ್ಸೇ ಸಾರಥಿ: ನಿಮ್ಮ ಬದುಕಿನ ದಿಕ್ಕನ್ನೇ ಬದಲಿಸುತ್ತೆ ಗೀತೆಯಲ್ಲಿರುವ ಶ್ರೀಕೃಷ್ಣನ ಈ ಮಾತುಗಳು

ದೇಹವೆಂಬುದು ರಥ, ಮನಸ್ಸೇ ಸಾರಥಿ: ನಿಮ್ಮ ಬದುಕಿನ ದಿಕ್ಕನ್ನೇ ಬದಲಿಸುತ್ತೆ ಗೀತೆಯಲ್ಲಿರುವ ಶ್ರೀಕೃಷ್ಣನ ಈ ಮಾತುಗಳು

Bhagavad Gita: ಸಾಮಾನ್ಯವಾಗಿ ಎಲ್ಲರೂ ಸಮಸ್ಯೆಗಳಿಂದ ವಿಚಲಿತರಾಗುತ್ತಾರೆ. ಅಲ್ಲಿಂದ ಓಡಿಹೋಗುವ ಮಾರ್ಗವನ್ನೇ ಆಯ್ದುಕೊಳ್ಳುತ್ತಾರೆ. ಆದರೆ ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಸಮಸ್ಯೆಗಳಿಂದ ಓಡಿಹೋಗುವುದು ಸರಿಯಲ್ಲ, ಅದನ್ನು ಎದುರಿಸಬೇಕು ಎಂದು ಹೇಳುತ್ತಾನೆ.

ಗೀತೆಯ ಪ್ರಕಾರ ದೇಹವೆಂಬುದು ರಥ, ಮನಸ್ಸೇ ಸಾರಥಿ: ನಿಮ್ಮ ಬದುಕಿನ ದಿಕ್ಕನ್ನೇ ಬದಲಿಸುತ್ತವೆ ಶ್ರೀಕೃಷ್ಣನ ಈ ಮಾತಗಳು
ಗೀತೆಯ ಪ್ರಕಾರ ದೇಹವೆಂಬುದು ರಥ, ಮನಸ್ಸೇ ಸಾರಥಿ: ನಿಮ್ಮ ಬದುಕಿನ ದಿಕ್ಕನ್ನೇ ಬದಲಿಸುತ್ತವೆ ಶ್ರೀಕೃಷ್ಣನ ಈ ಮಾತಗಳು (PC: HT File Photo)

ಭಗವದ್ಗೀತೆಯನ್ನು ಹಿಂದೂಗಳ ಪವಿತ್ರ ಗ್ರಂಥಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಶ್ರೀಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು ಉಪದೇಶಿಸಿದನು. ಅರ್ಜುನನು ಮೋಹ ಮತ್ತು ಬಾಂಧವ್ಯದ ಬಂಧಗಳಿಂದ ಮುಕ್ತನಾದನು ಮತ್ತು ತನ್ನದೇ ಜನರೊಂದಿಗೆ ಯುದ್ಧಕ್ಕೆ ಸಿದ್ಧನಾದನು. ಗೀತೆಯು ಪ್ರತಿಯೊಂದು ಸಮಸ್ಯೆಗೆ ಪರಿಹಾರವನ್ನು ಹೇಳುತ್ತದೆ. ಒಬ್ಬ ಸಾಮಾನ್ಯ ಮನುಷ್ಯನು ಸಮಸ್ಯೆಗಳೊಂದಿಗೆ ಹೋರಾಡುವುದಕ್ಕಿಂತ ಓಡಿಹೋಗುವುದನ್ನು ಆರಿಸಿಕೊಳ್ಳುತ್ತಾನೆ. ಮಹಾಭಾರತದ ಮಹಾನಾಯಕ ಅರ್ಜುನನು ತಾನು ಎದುರಿಸಿದ ಸಮಸ್ಯೆಗಳಿಂದ ಹೆದರಿ ಕ್ಷತ್ರಿಯ ಧರ್ಮವನ್ನು ತೊರೆಯಲು ಯೋಚಿಸಿದನು. ಶ್ರೇಷ್ಠ ಬಿಲ್ಲುಗಾರನಾದ ಅರ್ಜುನನಂತೆ, ಕೆಲವೊಮ್ಮೆ ಅನಿಶ್ಚಿತತೆಯ ಸ್ಥಿತಿಯಲ್ಲಿ ಹತಾಶರಾಗುತ್ತೇವೆ ಅಥವಾ ನಮ್ಮ ಸಮಸ್ಯೆಗಳಿಂದ ವಿಚಲಿತರಾಗುತ್ತೇವೆ ಮತ್ತು ಅಲ್ಲಿಂದ ಓಡಿಹೋಗುವ ಮಾರ್ಗವನ್ನೇ ಆಯ್ದುಕೊಳ್ಳುತ್ತೇವೆ. ಆದರೆ ಭಗವದ್ಗೀತೆಯಲ್ಲಿ ಶ್ರೀಕೃಷ್ಣನು, ಸಮಸ್ಯೆಗಳಿಂದ ಓಡಿಹೋಗುವುದು ಸರಿಯಲ್ಲ, ಅದನ್ನು ಎದುರಿಸಬೇಕು ಎಂದು ಹೇಳುತ್ತಾನೆ. ಅಧರ್ಮದ ಎದುರು ಯಾವಾಗಲೂ ಧರ್ಮ ಜಯಿಸಬೇಕು. ಒಳ್ಳೆಯ ಕೆಲಸಗಳನ್ನು ಮಾಡಲು ಪರಿಶ್ರಮ ಪಡಲೇಬೇಕಾಗುತ್ತದೆ. ಆಳವಾದ ಜ್ಞಾನವು ಗೆಲುವಿನ ಹಾದಿಯನ್ನು ಸುಗಮಗೊಳಿಸುತ್ತದೆ.

ಬದುಕುವ ಕಲೆಯನ್ನು ಕಲಿಸುತ್ತದೆ ಭಗವದ್ಗೀತೆ

ಭಗವದ್ಗೀತೆಯು ಧರ್ಮಕ್ಕಿಂತ ಹೆಚ್ಚಾಗಿ ಅದು ಜೀವನಕ್ಕೆ ಹೆಚ್ಚು ಮಹತ್ವ ನೀಡುತ್ತದೆ. ಗೀತೆಯಲ್ಲಿ ಶ್ರೀಕೃಷ್ಣನ ಕೊಳಲಿನ ಹಾಡು, ಸಂಗೀತ, ಕವನಗಳು ಹೇಗೆ ಸುಮಧುರ ಮಾಧುರ್ಯದಿಂದ ಕೂಡಿವೆಯೊ ಅದೇ ರೀತಿ ಗೀತೆಯು ಸುಶ್ರಾವ್ಯವಾಗಿದೆ. ಈ ಸ್ವರವು ಪ್ರಜ್ಞಾಹೀನ ಮತ್ತು ಗೊಂದಲಮಯ ಮನುಷ್ಯನಿಗೆ ಜಾಗೃತ ಜೀವನ ಕಲೆಯನ್ನು ಕಲಿಸುತ್ತದೆ. ಜೀವನದಲ್ಲಿ ದುಃಖದಿಂದ ಕೂಡಿದ ಹೃದಯವನ್ನು ಆನಂದದೆಡೆಗೆ, ಅಹಂಕಾರದಿಂದ ಶರಣಾಗತಿಯೆಡೆಗೆ, ಸಣ್ಣತನದಿಂದ ಶ್ರೇಷ್ಠತೆಯೆಡೆಗೆ, ಹೇಡಿತನದಿಂದ ಶೌರ್ಯದವರೆಗೆ, ಬಂಧನದಿಂದ ಮೋಕ್ಷದೆಡೆಗೆ, ರೋಗದಿಂದ ಸಮಾಧಿಯೆಡೆಗೆ ಕೊಂಡೊಯ್ಯುವ ಅಗಾಧ ಶಕ್ತಿ ಭಗವದ್ಗೀತೆಯ ಉಪದೇಶಗಳಲ್ಲಿದೆ. ಮನುಷ್ಯನು ಅವನ ಜೀವನದ ಸೃಷ್ಟಿಕರ್ತ. ಅದು ಮನುಷ್ಯನಲ್ಲಿರುವ ಶಕ್ತಿ. ಅದನ್ನು ಸದುಪಯೋಗಪಡಿಸಿಕೊಂಡು ಉತ್ತಮರಾಗಿ ಬಾಳಬೇಕು. ಕೆಟ್ಟತನ ನಶಿಸುತ್ತದೆ. ಆದರೆ ಒಳ್ಳೆಯತನ ಅಜರಾಮರವಾಗಿರುತ್ತದೆ. ಆದ್ದರಿಂದ ಮನುಷ್ಯ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಗೀತೆಯು ಹೇಳುತ್ತದೆ.

ದೇಹವೇ ರಥ, ಮನಸ್ಸೇ ಸಾರಥಿ

ಭಗವದ್ಗೀತೆಯು ದೇಹವನ್ನು ರಥಕ್ಕೆ ಹೋಲಿಸುತ್ತದೆ. ಇಂದ್ರಿಯಗಳು ಅದರ ಕುದುರೆಗಳಾಗಿವೆ. ಮನಸ್ಸೇ ಸಾರಥಿ ಮತ್ತು ಆತ್ಮವು ಯಜಮಾನನಾಗಿದೆ ಎಂದು ಹೇಳುತ್ತದೆ. ದೇಹ ಮತ್ತು ಮನಸ್ಸಿನ ನಡುವಿನ ಸಂಬಂಧವಿದೆ. ಅವೆರಡೂ ಒಂದಕ್ಕೊಂದು ಹೊಂದಿಕೊಂಡೇ ಕೆಲಸ ಮಾಡುತ್ತವೆ. ಮನಸ್ಸು ಏನು ಹೇಳುತ್ತದೆಯೋ ಅದನ್ನು ದೇಹ ಮಾಡುತ್ತದೆ. ಮನಸ್ಸು ಎಲ್ಲೆಲ್ಲಿ ಲಗಾಮು ಎಳೆಯುತ್ತದೆಯೊ ರಥದ ಕುದುರೆಗಳು ಅಲ್ಲಿ ಓಡುತ್ತವೆ. ಮನಸ್ಸಿನ ಇಚ್ಛೆಗೆ ವಿರುದ್ಧವಾಗಿ, ಅದರ ಅನುಮತಿಯಿಲ್ಲದೇ ದೇಹವು ಯಾವುದೇ ದೈಹಿಕ ಕಾರ್ಯಗಳನ್ನು ಮಾಡಲಾಗುವುದಿಲ್ಲ. ಮನಸ್ಸನ್ನು ನಿರ್ಲಕ್ಷಿಸುವ ಯಾವುದೇ ಅಂಗ ಅಥವಾ ಅಂಶ ದೇಹದಲ್ಲಿ ಇಲ್ಲ. ಆತ್ಮವು ಮನಸ್ಸಿಗಿಂತ ಬಲವಾಗಿದೆ. ಆದರೆ ದೇಹಕ್ಕಿಂತ ಶಕ್ತಿಯುತವಾದದ್ದು ಯಾವುದೂ ಇಲ್ಲ. ಅದನ್ನು ತಿಳಿದವನು, ಮನಸ್ಸನ್ನು ಜಯಿಸಿದವನು ಗುರುವಾಗುತ್ತಾನೆ. ಮನಸ್ಸಿನ ಅಸಮತೋಲನವು ಸಂಕಟ, ನೋವು ಅನಾರೋಗ್ಯದ ರೂಪದಲ್ಲಿ ಉಂಟಾಗುತ್ತದೆ. ಇದನ್ನು ಯಾವುದೇ ಕಾರಣಕ್ಕೂ ನಿರಾಕರಿಸಲು ಸಾಧ್ಯವಿಲ್ಲ. ಆದ್ದರಿಂದ ಮನಸ್ಸಿನ ಮೇಲೆ ಹಿಡಿತ ಸಾಧಿಸಬೇಕು ಮತ್ತು ಆತ್ಮಸಾಕ್ಷಾತ್ಕಾರದೆಡೆಗೆ ಸಾಗಬೇಕು ಎಂದು ಗೀತೆಯು ಹೇಳುತ್ತದೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟಿಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.