ಜೂನ್ ತಿಂಗಳ ಹುಣ್ಣಿಮೆಯ ಮಹತ್ವವೇನು; ಸತ್ಯನಾರಾಯಣ ಪೂಜೆ ಮತ್ತು ರೈತರಿಗೆ ಅತಿ ಮುಖ್ಯವಾದ ದಿನದ ಬಗ್ಗೆ ತಿಳಿಯಿರಿ
ಪ್ರತಿ ತಿಂಗಳು ಆಕಾಶದಲ್ಲಿ ಪೂರ್ಣ ಚಂದ್ರ ಕಾಣಿಸುವ ದಿನವನ್ನು ಹುಣ್ಣಿಮೆಯಾಗಿ ಆಚರಿಸಲಾಗುತ್ತದೆ. ಆದರೆ ಜೂನ್ ತಿಂಗಳ ಹುಣ್ಣಿಮೆಯ ಮಹತ್ವದ ಬಗ್ಗೆ ಇಲ್ಲಿ ವಿವರಿಸಲಾಗಿದೆ. ರೈತರಿಗೆ ತುಂಬಾ ಮುಖ್ಯವಾದ ದಿನವಾಗಿರುತ್ತದೆ.

2025 ರ ಜೂನ್ ತಿಂಗಳ 10ನೇ ದಿನಾಂಕದಂದು ಬೆಳಗಿನ ವೇಳೆ 10.25 ಕ್ಕೆ ಹುಣ್ಣಿಮೆ ತಿಥಿಯು ಆರಂಭವಾಗುತ್ತದೆ. ಈ ಕಾರಣದಿಂದಾಗಿ ಶೀ ಸತ್ಯನಾರಾಯಣ ಸ್ವಾಮಿಯ ಪೂಜೆಯನ್ನು ಇದೇ ದಿನ ಮಾಡಬೇಕಾಗುತ್ತದೆ. ಇದೇ ದಿನ ಅನೂರಾಧ ನಕ್ಷತ್ರವು ಪೂರ್ಣಗೊಂಡು ಜೇಷ್ಠ ನಕ್ಷತ್ರ ಆರಂಭವಾಗುತ್ತದೆ. ಈ ದಿನದ ಪೂಜೆಯನ್ನು ನದಿ ತೀರದಲ್ಲಿ ಮಾಡಿದಲ್ಲಿ ವಿಶೇಷವಾದ ಫಲಗಳು ದೊರೆಯುತ್ತವೆ. ಬೆಳಗಿನ ವೇಳೆ ಕೆಲವರು ಈ ಪೂಜೆಯನ್ನು ಮಾಡುತ್ತಾರೆ. ಸಂಜೆಯ ವೇಳೆಯಲ್ಲಿಯೂ ಈ ಪೂಜೆಯನ್ನು ಮಾಡಬಹುದಾಗಿದೆ. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ. ಈ ದಿನದಂದು ಕೇವಲ ಸತ್ಯನಾರಾಯಣ ಪೂಜೆಯನ್ನು ಆಚರಿಸಿದಲ್ಲಿ ಯಾವುದೇ ಶುಭಫಲಗಳು ದೊರೆಯುವುದಿಲ್ಲ. ಶ್ರೀ ಲಕ್ಷ್ಮಿಯನ್ನು ಕುಂಕುಮದಿಂದ ಅಷ್ಟೋತ್ತರದಿಂದ ಪ್ಲೂಜಿಸುವುದು ಹೆಚ್ಚು ಫಲದಾಯಕ. ಇದರಿಂದ ಹಣಕಾಸಿನ ಕೊರತೆಯು ಕಡಿಮೆ ಆಗುತ್ತದೆ. ಈ ದಿನದಂದು ದಂಪತಿಯ ಪೂಜೆಯನ್ನು ಮಾಡುವುದು ಬಲುಮುಖ್ಯ. ಸಾಮಾನ್ಯವಾಗಿ ರವೆಯಿಂದ ಮಾಡಿದ ಸಜ್ಜಿಗೆಯನ್ನು ದೇವರಿಗೆ ಅರ್ಪಿಸುವುದು ವಾಡಿಕೆಯಾಗಿದೆ. ಪೂಜೆಯ ವೇಳೆ ಮನೆಗೆ ಆಗಮಿಸುವವರಿಗೆ ಫಲ ಮತ್ತು ದಕ್ಷಿಣೆಯ ಸಹಿತ ತಾಂಬೂಲವನ್ನು ನೀಡಬೇಕು. ಇದರಿಂದ ಜೀವನದಲ್ಲಿ ಹಲವು ತೊಂದರೆ ತಾಪತ್ರಯಗಳು ದೂರವಾಗುತ್ತವೆ.
ಜೂನ್ ತಿಂಗಳ ಹುಣ್ಣಿಮೆ ಅನ್ನದಾತರಿಗೆ ಅತಿ ಮುಖ್ಯ
ಈ ಹುಣ್ಣಿಮೆಯನ್ನು ಭೂಮಿ ಹುಣ್ಣಿಮೆ ಅಥವ ಕಾರ ಹುಣ್ಣಿಮೆ ಎಂದು ಕರೆಯುತ್ತೇವೆ. ಈ ದಿನವು ರೈತರ ಜೀವನದಲ್ಲಿ ಅತಿ ಮುಖ್ಯವಾದ ದಿನವಾಗಿರುತ್ತದೆ. ಮುಂಗಾರು ಮಳೆಯ ಆಗಮದ ನಿರೀಕ್ಷೆ ಇರುವ ವೇಳೆಯಲ್ಲಿ ಕಾರಹುಣ್ಣಿಮೆ ಇರುತ್ತದೆ. ಉತ್ತರ ಕರ್ನಾಟಕದಲ್ಲಿ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಈ ಆಚರಣೆಯಲ್ಲಿ ಗ್ರಾಮೀಣ ಮಾದರಿಯ ಆಚರಣೆ ಕಂಡುಬರುತ್ತದೆ. ಈ ಹಬ್ಬದಲ್ಲಿ ಹೊಲ ಗದ್ದೆಗಳಲ್ಲಿ ದುಡಿಯುವ ರೈತರು ಮಾತ್ರವಲ್ಲದೆ ಸಮಸ್ತ ರೈತ ಕುಟುಂಬವೇ ಈ ಹಬ್ಬದ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ. ಪ್ರತಿ ಸಂವತ್ಸರದ ರೈತರ ಹಬ್ಬಗಳಲ್ಲಿ ಇದು ಮೊದಲ ಹಬ್ಬವಾಗುತ್ತದೆ.
ದೇಶಕ್ಕೆ ರೈತರು ಬೆನ್ನೆಲುಬಾದರೆ, ರೈತರು ಬಹುತೇಕ ಎತ್ತುಗಳನ್ನು ಪೂರ್ಣವಾಗಿ ಅವಲಂಭಿಸುತ್ತಾರೆ. ಕಾರ ಹುಣ್ಣಿಮೆಯ ವೇಳೆಯಲ್ಲಿ ಎತ್ತುಗಳಿಗೆ ಸಂಪೂರ್ಣ ವಿಶ್ರಾಂತಿಯನ್ನು ನೀಡುತ್ತಾರೆ. ಮುಂಗಾರು ಆರಂಭವಾಗುವ ವೇಳೆ ಎತ್ತುಗಳನ್ನು ಪುನಃ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ದಿನದಂದು ಎತ್ತುಗಳನ್ನು ಬಣ್ಣಗಳಿಂದ ಸಿಂಗರಿಸುತ್ತಾರೆ. ಹಗಲಲ್ಲಿ ಮನರಂಜನಾ ಕಾರ್ಯಕ್ರಮಗಳನ್ನು ಮಾಡುತ್ತಾರೆ. ಇದರಲ್ಲಿ ಧಾರ್ಮಿಕತೆಗೆ ಸಂಬಂಧಿಸಿದ ವಿಧಿ ವಿಚಾರಗಳು ಇರುತ್ತವೆ. ಹಗಲು ಮತ್ತು ರಾತ್ರಿಯ ವೇಳೆ ಮನೆಯಲ್ಲಿ ಹಬ್ಬದ ಅಡುಗೆಯನ್ನು ತಯಾರಿಸುತ್ತಾರೆ. ಎತ್ತುಗಳನ್ನು ಪೂಜಿಸುವುದು ಇಂದಿನ ಆಚರಣೆಯ ಭಾಗವಾಗುತ್ತದೆ. ಆನಂತರ ಮನೆಯಲ್ಲಿ ತಯಾರಿಸಿದ ಆಹಾರದಲ್ಲಿನ ಒಂದು ಪಾಲನ್ನು ಎತ್ತುಗಳಿಗೆ ನೀಡುತ್ತಾರೆ. ಎತ್ತುಗಳಿಗೆ ಸಿಹಿ ಹೋಳಿಗೆಯನ್ನು ಉಣಬಡಿಸುತ್ತಾರೆ. ಆ ಊರಿನ ಜನರೆಲ್ಲರೂ ತಾವು ತಯಾರಿಸಿದ ಸಿಹಿಯನ್ನು ಎತ್ತುಗಳಿಗೆ ನೀಡುತ್ತಾರೆ. ಆನಂತರ ಜನಸಾಮಾನ್ಯರು ಸಿಹಿಭರಿತ ಹಬ್ಬದ ಪ್ರಸಾದವನ್ನು ಸೇವಿಸುತ್ತಾರೆ. ಕುಟುಂಬದಲ್ಲಿ ಗರ್ಭಿಣಿಯರು ಇದ್ದಲ್ಲಿ ಎತ್ತುಗಳಿಗೆ ವಿಶೇಷವಾದ ಪೂಜೆಯನ್ನು ಮಾಡುತ್ತಾರೆ.
ಆಹಾರ ಸಮಸ್ಯೆ ಎದುರಾಗದಿರಲು ಹೀಗೆ ಮಾಡುತ್ತಾರೆ
ವಿಶೇಷವಾಗಿ ಅಲಂಕರಿಸಿದ ಎತ್ತುಗಳನ್ನು ಊರಿನಲ್ಲಿ ಮೆರವಣಿಗೆ ಮಾಡುತ್ತಾರೆ . ಈ ವೇಳೆಯಲ್ಲಿ ಎತ್ತುಗಳ ಆರೈಕೆಗಾಗಿ ಆಸಕ್ತಿ ಮತ್ತು ನಂಬಿಕೆ ಇರುವವರು ಹಣದ ಸಹಾಯ ಮಾಡುತ್ತಾರೆ. ಈ ದಿನದಂದು ಎತ್ತು ಮತ್ತು ಹಸುಗಳಿಗೆ ಆಹಾರದ ವ್ಯವಸ್ಥೆ ಮಾಡಿದಲ್ಲಿ ವರ್ಷಪೂರ್ತಿ ಆಹಾರದ ಸಮಸ್ಯೆ ಎದುರಾಗುವುದಿಲ್ಲ ಎಂಬ ನಂಬಿಕೆ ಇದೆ. ಮನೆಯಲ್ಲಿ ಸಾಕಿರುವ ಹಸುಗಳನ್ನು ಸಹ ಬಣ್ಣ ಮುಂತಾದುವುಗಳಿಂದ ಅಲಂಕರಿಸಿ ಪೂಜೆ ಸಲ್ಲಿಸುತ್ತಾರೆ. ದಿನಾಂತ್ಯದಲ್ಲಿ ಹಸು ಮತ್ತು ಎತ್ತುಗಳನ್ನು ಗ್ರಾಮದೇವತೆಯ ಮತ್ತು ಆ ಊರಿನ ಪ್ರಮುಖ ದೇವಾಲಯಕ್ಕೆ ಕರೆದೊಯ್ಯುತ್ತಾರೆ. ತಾವು ಸಾಕಿರುವ ಹಸು, ಕರು, ಎತ್ತುಗಳಲ್ಲಿಯೇ ದೇವರನ್ನು ಕಾಣುವ ದಿನವಾಗಿದೆ.
ಬರಹ: ಹೆಚ್. ಸತೀಶ್, ಜ್ಯೋತಿಷಿ, ಬೆಂಗಳೂರು