Kumbh Mela: ದಕ್ಷಿಣ ಭಾರತದ ಐತಿಹಾಸಿಕ ಕುಂಭಮೇಳಕ್ಕೆ ಟಿ ನರಸೀಪುರದ ತ್ರಿವೇಣಿ ಸಂಗಮದಲ್ಲಿ ಇಂದಿನಿಂದ ಚಾಲನೆ
ಮೈಸೂರು ಜಿಲ್ಲೆ ಟಿ ನರಸೀಪುರದ ತ್ರಿವೇಣಿ ಸಂಗಮದಲ್ಲಿ ಇಂದಿನಿಂದ (ಫೆ 10) ಕುಂಭಮೇಳ ಆರಂಭವಾಗಿದೆ. ಪ್ರತಿ 3 ವರ್ಷಗಳಗೊಮ್ಮೆ ನಡೆಯುವ ಕುಂಭಮೇಳಕ್ಕೆ ಅಗಸ್ತೇಶ್ವರನಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಗಿದೆ.

ಕುಂಭಮೇಳ: ದಕ್ಷಿಣ ಭಾರತದ ಐತಿಹಾಸಿಕ ಕುಂಭಮೇಳ ಟಿ ನರಸೀಪುರದ ತ್ರಿವೇಣಿ ಸಂಗಮದಲ್ಲಿ ಇಂದಿನಿಂದ (ಫೆಬ್ರವರಿ 10, ಸೋಮವಾರ) ಆರಂಭವಾಗಿದೆ. ಪ್ರತಿ ಮೂರು ವರ್ಷಗಳಗೊಮ್ಮೆ ನಡೆಯುವ ಈ ಕುಂಭಮೇಳಕ್ಕೆ ಬೆಳಿಗ್ಗೆ 11 ಗಂಟೆಗೆ ಅಗಸ್ತೇಶ್ವರನಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಗಿದೆ. ಕಾವೇರಿ, ಕಪಿಲ ಹಾಗೂ ಸ್ಪಟಿಕ ಸರೋವರ ಸಂಧಿಸುವ ಸಂಗಮ ಸ್ಥಳವಾಗಿರುವ ಟಿ ನರಸೀಪುರದ ತ್ರಿವೇಣೆ ಸಂಗಮದಲ್ಲಿ ಕುಂಭಮೇಳ ನಡೆಯುತ್ತಿದೆ. 1989 ರಲ್ಲಿ ಆದಿಚುಂಚನಗಿರಿ ಮಠದ ಶ್ರೀಗಳು ಹಾಗೂ ಸುತ್ತೂರು ಶ್ರೀಗಳಿಂದ ಕುಂಭಮೇಳಕ್ಕೆ ಮೊದಲ ಬಾರಿ ಚಾಲನೆ ನೀಡಲಾಗಿತ್ತು. ಅಂದಿನಿಂದ ಇಂದಿನವರೆಗೆ 12 ಕುಂಭಮೇಳು ನಡೆದಿವೆ.
13ನೇ ಕುಂಭಮೇಳಕ್ಕೆ ಚಾಲನೆ
ಇಂದಿನ (ಫೆ.10) ಕಾರ್ಯಕ್ರಮದ ವಿವರ: ಅಗಸ್ತೇಸ್ವರ ದೇವಸ್ಥಾನದಲ್ಲಿ ತ್ರಯೋದಶಿ, ಪುಷ್ಯ ಪ್ರಾತಃಕಾಲ 9 ಗಂಟೆಗೆ ಶ್ರೀ ಅಗಸ್ತೇಶ್ವರ ಸನ್ನಿಧಿಯಲ್ಲಿ ಅನುಜ್ಞೆ, ಪುಣ್ಯಾಹ, ಗಣಹೋಮ, ಪೂರ್ಣಾಹುತಿ, ಅಭಿಷೇಕ, ಮಹಾಮಂಗಳಾರತಿ. ಸಂಜೆ 5 ಗಂಟೆಗೆ ಧರ್ಮಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಅತಿಥಿ ಗಣ್ಯರಿಂದ ಉದ್ಘಾಟನೆ ಹಾಗೂ ಧ್ವಜಾರೋಹಣ ನೆರವೇರಲಿದೆ.
ಫೆಬ್ರವರಿ11ರ ಕಾರ್ಯಕ್ರಮಗಳ ವಿವರ: ಚತುರ್ದಶಿ, ಆಶ್ಲೇಷ, ಪ್ರಾತಃ ಪುಣ್ಯಾಹ - ನವಗ್ರಹ ಹೋಮ, ಸುದರ್ಶನ ಹೋಮ ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ಧರ್ಮಸಭೆ, ಸಂಜೆ 4ಕ್ಕೆ ಮಹಾತ್ಮರ, ಸಂತರ, ಮಹಾ ಮಂಡಲೇಶ್ವರರ ತ್ರಿವೇಣಿ ಸಂಗಮ ಕ್ಷೇತ್ರ ಪ್ರವೇಶ. ಗುಂಜಾನರಸಿಂಹಸ್ವಾಮಿ ದೇವಸ್ಥಾನದಿಂದ ಟಿ ನರಸೀಪುರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ. ಸಂಜೆ 6 ಗಂಟೆಗೆ ಶ್ರೀ ರುದ್ರ ಹೋಮ, ಪೂರ್ಣಾಹುತಿ, ರಾತ್ರಿ 7 ಗಂಟೆಗೆ ನಡೆಯುವ ಗಂಗಾ ಪೂಜೆಯ ವೇಳೆ ವಾರಾಣಸಿಯ ಗಂಗಾರತಿ ಮಾದರಿಯಲ್ಲಿ ದೀಪಾರತಿ ಕಾರ್ಯಕ್ರಮ ನಡೆಯಲಿದೆ.
ಫೆಬ್ರವರಿ 12ರ ಕಾರ್ಯಕ್ರಮಗಳ ವಿವರ: ಕುಂಭಮೇಳದ ಕೊನೆಯ ದಿನ ಅಂದರೆ ಫೆಬ್ರವರಿ 12ರಂದು ಮಾಘ ಪೂರ್ಣಿಮೆಯಂದು ಬೆಳಿಗ್ಗೆ ಚಂಡಿಹೋಮ, ಪೂರ್ಣಾಹುತಿ, ಕುಂಭೋಧ್ವಾಸನ ಹಾಗೂ ಸಪ್ತ ಪವಿತ್ರ ನದಿಗಳಿಂದ ತಂದ ತೀರ್ಥಗಳನ್ನು ತ್ರಿವೇಣಿ ಸಂಗಮದಲ್ಲಿ ಸಂಯೋಜನೆ, ಪುಣ್ಯಸ್ನಾನ, ಧರ್ಮಸಭೆ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ. ಮಹೋದಯಕಾಲದ ಮಹಾಮಾಘ ಪುಣ್ಯಸ್ನಾನಕ್ಕೆ ಅಂದು ಬೆಳಿಗ್ಗೆ 9ರಿಂದ 9.30ರ ವರೆಗಿನ ಮೀನ ಲಗ್ನ ಮತ್ತು ಮಧ್ಯಾಹ್ನ 12ರಿಂದ 1ರ ವರೆಗಿನ ವೃಷಭ ಲಗ್ನದಲ್ಲಿ ಸಮಯ ನಿಗದಿ ಮಾಡಲಾಗಿದೆ.
ದಕ್ಷಿಣ ಭಾರತದ ಐತಿಹಾಸಿಕ 13ನೇ ಕುಂಭಮೇಳ ಹಿನ್ನೆಲೆ
ಟಿ ನರಸೀಪುರದ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ 13ನೇ ಕುಂಭಮೇಳದ ಮೊದಲ ದಿನವೇ ತ್ರಿವೇಣಿ ಸಂಗಮಕ್ಕೆ ಭಕ್ತ ಸಾಗರ ಹರಿದು ಬರುತ್ತಿದೆ. ತ್ರಿವೇಣಿ ಸಂಗಮದಲ್ಲಿ ಸಾವಿರಾರು ಭಕ್ತರು ಪವಿತ್ರ ಸ್ನಾನ ಮಾಡಿದರು. ಮಹಿಳೆಯರು, ಮಕ್ಕಳು ಸೇರಿದಂತೆ ಕುಟುಂಬ ಸಮೇತ ಸಂಗಮಕ್ಕೆ ಭೇಟಿ ನೀಡುತ್ತಿದ್ದಾರೆ. ಸ್ಥಳದಲ್ಲಿ ಎಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
