Rama Navami 2025: ಶ್ರೀರಾಮ ನವಮಿ ಯಾವಾಗ, ದಿನಾಂಕ, ಶುಭ ಮುಹೂರ್ತ, ಆಚರಣೆಯ ಮಹತ್ವದ ವಿವರ ಇಲ್ಲಿದೆ
ಈ ಹೊಸ ಸಂವತ್ಸರದಲ್ಲಿ ಬರುವ ಮೊದಲ ಹಬ್ಬವೇ ಶ್ರೀರಾಮ ನವಮಿ. ರಾಮ ಹುಟ್ಟಿದ ದಿನವನ್ನು ರಾಮ ನವಮಿ ಎಂದು ಆಚರಿಸಲಾಗುತ್ತದೆ. ಈ ವರ್ಷ ರಾಮ ನವಮಿ ಯಾವಾಗ, ಈ ದಿನದ ಶುಭ ಮುಹೂರ್ತ, ಆಚರಣೆಯ ಕ್ರಮಗಳ ಕುರಿತ ವಿವರ ಇಲ್ಲಿದೆ.

Rama Navami 2025: ಹಿಂದೂಗಳಲ್ಲಿ ಪ್ರತಿ ಹಬ್ಬಗಳ ಆಚರಣೆಗೆ ಬಹಳ ಮಹತ್ವವಿದೆ. ಯುಗಾದಿಯ ನಂತರ ಬರುವ, ಹಿಂದೂಗಳ ಹೊಸ ವರ್ಷದ ಎರಡನೇ ಹಬ್ಬವಾದ ಶ್ರೀರಾಮ ನವಮಿಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಮರ್ಯಾದ ಪುರುಷೋತ್ತಮ ಶ್ರೀರಾಮ ಜನಿಸಿದ ದಿನವನ್ನು ರಾಮ ನವಮಿಯನ್ನಾಗಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಅಂದು ಪಾನಕ, ಮಜ್ಜಿಗೆ ಹಾಗೂ ಕೋಸಂಬರಿಯನ್ನು ಹಂಚಿ ಸಂಭ್ರಮಿಸಲಾಗುತ್ತದೆ. 2025ರ ಶ್ರೀರಾಮ ನವಮಿ ಯಾವಾಗ, ಶುಭ ಮುಹೂರ್ತ ಹಾಗೂ ಮಹತ್ವವನ್ನು ತಿಳಿಯೋಣ.
2025ರ ಶ್ರೀರಾಮ ನವಮಿ ಯಾವಾಗ?
ಈ ವರ್ಷ (2025) ಏಪ್ರಿಲ್ 6ರ ಭಾನುವಾರ ಶ್ರೀರಾಮ ನವಮಿಯನ್ನು ಆಚರಿಸಲಾಗುತ್ತದೆ. ಶ್ರೀರಾಮನು ಈ ದಿನ ಜನಿಸಿದನು ಎಂಬ ಕಾರಣಕ್ಕೆ ಭಕ್ತರು ಶ್ರೀರಾಮ ನವಮಿ ಆಚರಿಸುತ್ತಾರೆ. ಈ ದಿನ ಶ್ರೀರಾಮನೊಂದಿಗೆ ದುರ್ಗಾಮಾತೆಯನ್ನು ಕೂಡ ಪೂಜಿಸುವ ವಾಡಿಕೆ ಇದೆ. ಮನೆ ಹಾಗೂ ರಾಮನ ದೇವಾಲಗಳಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ.
ರಾಮ ನವಮಿ 2025 ಶುಭ ಮುಹೂರ್ತ
ರಾಮ ನವಮಿಯ ಶುಭ ಮುಹೂರ್ತ: ಏಪ್ರಿಲ್ 6ರ ಬೆಳಗ್ಗೆ 11 08 ರಿಂದ ಮಧ್ಯಾಹ್ನ 1.39 ರವರಿಗೆ ಇರುತ್ತದೆ. 2 ಗಂಟೆಗೆ 31 ನಿಮಿಷ.
ಶ್ರೀರಾಮ ನವಮಿಯ ಮಧ್ಯಾಹ್ನದ ಸಮಯ: ಏಪ್ರಿಲ್ 6ರ ಮಧ್ಯಾಹ್ನ 12.24
ನವಮಿ ತಿಥಿ ಆರಂಭ: 2025ರ ಏಪ್ರಿಲ್ 5ರ ಸಂಜೆ 7.26
ನವಮಿ ತಿಥಿ ಮುಕ್ತಾಯ: 2025ರ ಏಪ್ರಿಲ್ 6ರ ಸಂಜೆ 7.22
ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯಂದು ರಾಮ ಜನಿಸಿದ್ದ. ಪ್ರತಿ ವರ್ಷ ಈ ದಿನವನ್ನು ರಾಮನ ಜನ್ಮದಿನವೆಂದು ಆಚರಿಸಲಾಗುತ್ತದೆ. ಹಿಂದೂ ದಿನದ ಮಧ್ಯಭಾಗವಾದ ಮಧ್ಯಾಹ್ನ ಅವಧಿಯಲ್ಲಿ ರಾಮ ಜನಿಸಿದ. ಆರು ಘಟಿಗಳ (ಸುಮಾರು 2 ಗಂಟೆ 24 ನಿಮಿಷಗಳು) ಕಾಲ ನಡೆಯುವ ಮಧ್ಯಾಹ್ನವು ರಾಮ ನವಮಿ ಪೂಜಾ ವಿಧಿಗಳನ್ನು ನಿರ್ವಹಿಸಲು ಅತ್ಯಂತ ಶುಭ ಸಮಯವಾಗಿದೆ. ಪಶ್ಚಿಮ ಗಡಿಯಾರ ಮತ್ತು ಗ್ರೆಗೋರಿಯನ್ ಕ್ಯಾಲೆಂಡರ್ ವ್ಯಾಪಕವಾಗಿ ಬಳಸುವುದರಿಂದ ಜನರು ಮಧ್ಯಾಹ್ನ 12 ಗಂಟೆಯನ್ನು ಮಧ್ಯಾಹ್ನದ ಸಮಯವೆಂದು ಭಾವಿಸುತ್ತಾರೆ.
ಉತ್ತರ ಪ್ರದೇಶದಲ್ಲಿರುವ ಅಯೋಧ್ಯೆಯು ರಾಮನ ಜನ್ಮಸ್ಥಳವಾಗಿದ್ದು, ಅಯೋಧ್ಯೆಯಲ್ಲಿ ರಾಮನವಮಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ದೇಶದ ನಾನಾ ಭಾಗಗಳಿಂದ ಭಕ್ತರು ಅಯೋಧ್ಯೆಗೆ ಬರುತ್ತಾರೆ. ಸರಯು ನದಿಯಲ್ಲಿ ಪವಿತ್ರ ಸ್ನಾನ ಮಾಡಿದ ನಂತರ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ರಾಮನ ದರ್ಶನ ಪಡೆಯುತ್ತಾರೆ.
ರಾಮ ನಮವಿಯ 3 ವಿಭಿನ್ನ ರೀತಿಯ ವ್ರತಾಚರಣೆಗಳು
ರಾಮ ನಮವಿಯ ಸಮಯದಲ್ಲಿ ಎಂಟು ಪ್ರಹರ ಉಪವಾಸಗಳನ್ನು ಮಾಡಲು ಸೂಚಿಸಲಾಗುತ್ತದೆ. ಅಂದರೆ ಭಕ್ತರು ಸೂರ್ಯೋದಯದಿಂದ ಸೂರ್ಯಾಸ್ತದವರಿಗೆ ಉಪವಾಸವನ್ನು ಆಚರಿಸಬೇಕು. ರಾಮ ನಮವಿ ವ್ರತವನ್ನು ಮೂರು ವಿಭಿನ್ನ ರೀತಿಯಲ್ಲಿ ಆಚರಿಸಬಹುದು. ಸಾಂದರ್ಭಿಕ (ನೈಮಿತ್ತಿಕ) ಯಾವುದೇ ಕಾರಣವಿಲ್ಲದೆ ಆಚರಿಸುವುದು, ನಿರಂತರ (ನಿತ್ಯ) ಯಾವುದೇ ಆಸೆ ಇಲ್ಲದೆ ಜೀವನದುದ್ದಕ್ಕೂ ಆಚರಿಸುವುದು ಹಾಗೂ ಅಪೇಕ್ಷಣೀಯ (ಕಾಮ್ಯ) - ಯಾವುದೇ ಆಸೆಯನ್ನು ಪೂರೈಸಲು ಆಚರಿಸಬಹುದು.
ಭಗವಾನ್ ವಿಷ್ಣುವಿನ ಏಳನೇ ಅವತಾರ ಶ್ರೀರಾಮಚಂದ್ರ ಎಂದು ಹೇಳಲಾಗುತ್ತದೆ. ಚೈತ್ರ ಮಾಸದ ಒಂಭತ್ತನೇ ದಿನ ಶ್ರೀರಾಮ ಅಯೋಧ್ಯೆಯಲ್ಲಿ ಜನ್ಮ ತಾಳುತ್ತಾನೆ. ಸದ್ಗುಣ ಸಂಪನ್ನ, ಆದರ್ಶ ಪುರುಷ, ಮರ್ಯಾದ ಪುರುಷೋತ್ತಮ ಎಂದೆಲ್ಲಾ ಕರೆಸಿಕೊಳ್ಳುವ ಶ್ರೀರಾಮನು ಜನಿಸಿದ ದಿನವನ್ನು ನಾಡಿನಾದ್ಯಂತ ಶ್ರೀರಾಮ ನವಮಿ ಎಂದು ಭಕ್ತಿ ಭಾವದಿಂದ ಆಚರಿಸಲಾಗುತ್ತದೆ.
ಪ್ರತಿವರ್ಷವೂ ಶ್ರೀರಾಮ ನವಮಿಯಂದು ಸಂಭ್ರಮ, ಸಡಗರದೊಂದಿಗೆ ಭಕ್ತಿ ಭಾವವೂ ಜೊತೆಯಾಗುತ್ತದೆ. ರಾಮ ಭಕ್ತರು ರಾಮನ ದೇಗುಲಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳನ್ನು ಆಯೋಜಿಸುತ್ತಾರೆ. ಆ ದಿನ ಮನೆ, ಮನಗಳಲ್ಲೂ ಶ್ರೀರಾಮನ ಜಪವೇ ಇರುತ್ತದೆ. ಹಾಗಾದರೆ ಈ ವರ್ಷ ಶ್ರೀರಾಮ ನವಮಿ ಯಾವಾಗ, ರಾಮ ನವಮಿಯ ಶುಭ ಮೂಹೂರ್ತ ಯಾವುದು, ಈ ದಿನದ ಆಚರಣೆಯ ಮಹತ್ವವೇನು ಎಂಬಿತ್ಯಾದಿ ವಿವರ ಇಲ್ಲಿದೆ.
ರಾಮ ನವಮಿ ಆಚರಣೆಯ ಮಹತ್ವ
ರಾಮ ನವಮಿ ರಾಮನ ಜನ್ಮ ದಿನವನ್ನು ಸಂಕೇತಿಸುತ್ತದೆ. ಚೈತ್ರ ಮಾಸ ಶುಕ್ಲ ಪಕ್ಷದ 9ನೇ ದಿನ ವಿಷ್ಣುವಿನ 7ನೇ ಅವತಾರವಾದ ಶ್ರೀರಾಮನು ಅಯೋಧ್ಯೆಯಲ್ಲಿ ದಶರಥ ಹಾಗೂ ಕೌಸಲ್ಯೆಯ ಮಗನಾಗಿ ಜನಿಸುತ್ತಾನೆ. ಈ ದಿನವು ಚೈತ್ರ ನವರಾತ್ರಿ ಕೊನೆಯ ದಿನವೂ ಆಗಿದೆ. ಶ್ರೀರಾಮನ ಹುಟ್ಟಿದ ದಿನ ಎಂಬ ಕಾರಣಕ್ಕೆ ಈ ದಿನ ರಾಮ ನವಮಿ ಆಚರಿಸುವ ಜನರು ಪೂಜೆ, ಹೋಮ, ಹವನಗಳನ್ನು ಮಾಡುತ್ತಾರೆ. ಹಿಂದೂಗಳಿಗೆ ಈ ದಿನ ಬಹಳ ಮಹತ್ವದ್ದಾಗಿದೆ.
