ಶ್ರೀಶೈಲ ಯುಗಾದಿ ಮಹೋತ್ಸವಕ್ಕೆ ಹೊರಟಿರುವ ಭಕ್ತರೇ ಗಮನಿಸಿ; ದೇವಸ್ಥಾನದ ಈ ಎಚ್ಚರಿಕೆ ತಿಳಿದರೆ ನಿಮಗೆ ಒಳ್ಳೆಯದು
ಮಾರ್ಚ್ 27 ರಿಂದ 31 ರವರಿಗೆ ನಡೆಯಲಿರುವ ಶ್ರೀಶೈಲಂ ಯುಗಾದಿ ಮಹೋತ್ಸವಕ್ಕೆ ಆಗಮಿಸುತ್ತಿರುವ ಭಕ್ತರಿಗೆ ದೇವಾಲಯ ಆಡಳಿತ ಮಂಡಳಿ ಎಚ್ಚರಿಕೆಯೊಂದನ್ನು ನೀಡಿದೆ. ಇದನ್ನು ತಪ್ಪದೇ ಗಮನಿಸಬೇಕಿದೆ.

Srisailam Temple: ಭಾರತದಲ್ಲಿನ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಶ್ರೀಶೈಲಂನ ಮಲ್ಲಿಕಾರ್ಜುನ ದೇವಾಲಯದಲ್ಲಿ ಪ್ರತಿ ವರ್ಷದಂತೆ ಈ ಬಾರಿಯು 'ಶ್ರೀಶೈಲಂ ಯುಗಾದಿ ಮಹೋತ್ಸವ' ನಡೆಯುತ್ತಿದೆ. 2025ರ ಮಾರ್ಚ್ 27 ರಿಂದ 31 ರವರಿಗೆ ನಡೆಯಲಿರುವ ಮಹೋತ್ಸವದಲ್ಲಿ ಕರ್ನಾಟಕ, ಮಹಾರಾಷ್ಟ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುತ್ತಾರೆ. ಈಗಾಗಲೇ ನೂರಾರು ಮಂದಿ ಪಾದಯಾತ್ರೆ ಮೂಲಕ ನಲ್ಲಮಲ ಅರಣ್ಯದ ಮೂಲಕ ಶ್ರೀಶೈಲಂನತ್ತ ಹೊರಟ್ಟಿದ್ದಾರೆ. ಶ್ರೀಶೈಲಂಗೆ ಬರುತ್ತಿರುವ ಎಲ್ಲಾ ಭಕ್ತರಿಗೆ ದೇವಸ್ಥಾನದ ಆಡಳಿತ ಮಂಡಳಿ ಎಚ್ಚರಿಕೆಯೊಂದನ್ನು ನೀಡಿದೆ.
ಭಕ್ತರ ವಿಚಾರವಾಗಿ ಮಾತನಾಡಿರುವ ದೇವಾಲಯದ ಅಧಿಕಾರಿಗಳು ಪ್ರಮುಖ ಸೂಚನೆಗಳನ್ನು ನೀಡಿದ್ದಾರೆ. ಶ್ರೀಶೈಲ ಮಹಾ ಕ್ಷೇತ್ರಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳು ನಕಲಿ ವೆಬ್ ಸೈಟ್ ಗಳಿಗೆ ಮೋರೆ ಹೋಗಿ ಮೋಸ ಹೋಗಬಾರದು ಎಂದು ಹೇಳಿದ್ದಾರೆ. ಶ್ರೀಶೈಲಂ ದೇವಾಲಯದ ಕಾರ್ಯನಿರ್ವಣಾಧಿಕಾರಿ ಶ್ರೀನಿವಾಸ ರಾವ್ ಮಾತನಾಡಿ, ದೇವಾಲಯವು ನಡೆಸುವ ವಸತಿ ಸಂಕೀರ್ಣಗಳ ಹೆಸರಿನಲ್ಲಿ ಮೂರು ನಕಲಿ ವೆಬ್ ಸೈಟ್ ಗಳನ್ನು ಆರಂಭಿಸಿರುವುದು ತಿಳಿದು ಬಂದಿದೆ. ಈ ನಕಲಿ ವೆಬ್ ಸೈಟ್ ಗಳಿಂದ ಅನೇಕ ಯಾತ್ರಾರ್ಥಿಗಳು ಮೋಸ ಹೋಗಿರುವುದು ಗಮನಕ್ಕೆ ಬಂದಿದೆ. ಶ್ರೀಶೈಲಂ ದೇವಾಲಯದ ವಸತಿ ಸೌಕರ್ಯಗಳನ್ನು ಮುಂಚಿತವಾಗಿ ಕಾಯ್ದಿರಿಸಲು ಮತ್ತು ಆಯಾ ಸೇವೆಗಳು, ದರ್ಶನ ಟಿಕೆಟ್ ಗಳನ್ನು ಮುಂಚಿತವಾಗಿ ಪಡೆಯಲು ದೇವಾಲಯದ ವತಿಯಿಂದ ಆನ್ ಲೈನ್ ವ್ಯವಸ್ಥೆಯನ್ನು ಮಾಡಲಾಗಿದೆ.
ಭಕ್ತರು ವಸತಿ, ದರ್ಶನ, ಅರ್ಜಿತ ಸೇವೆಗಳು, ಸ್ಪರ್ಶ ದರ್ಶನ ಹಾಗೂ ತ್ವರಿತ ದರ್ಶನದ ಸೇವೆಗಳನ್ನು ಪಡೆಯಲು ದೇವಾಲಯದ ಅಧಿಕೃತ ವೆಬ್ ಸೈಟ್ srisailadevasthanam.org ಅಥವಾ ಆಂಧ್ರ ಪ್ರದೇಶದ ದತ್ತಿ ಇಲಾಖೆಯ ವೆಬ್ ಸೈಟ್ aptemples.ap.gov.in ವೆಬ್ ಸೈಟ್ ಗಳನ್ನು ಮಾತ್ರ ಬಳಸಬೇಕೆಂದು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೇವಾಲಯದ ದೂರವಾಗಿ ಸಂಖ್ಯೆಗಳಾದ 833901351/52/53 ಕ್ಕೆ ಸಂಪರ್ಕಿಸಬಹುದು ಎಂದು ಶ್ರೀನಿವಾಸ ರಾವ್ ಮಾಹಿತಿ ನೀಡಿದ್ದಾರೆ.
ಸ್ಪರ್ಶ ದರ್ಶನಕ್ಕಾಗಿ ಶ್ರೈಶೈಲಂನಲ್ಲಿ ಸರತಿ ಸಾಲಿನಲ್ಲಿ ನಿಂತ ಭಕ್ತರು
ಶ್ರೀಶೈಲಂನಲ್ಲಿ ಭ್ರಮರಾಂಬ ಮಲ್ಲಿಕಾರ್ಜುನ ಸ್ವಾಮಿಯನ್ನು ಕಣ್ತುಂಬಿಕೊಳ್ಳಲು ಈಗಾಗಲೇ ಮಂದಿ ಭಕ್ತರ ದಂಡೇ ದೇವಾಲಯಕ್ಕೆ ಹರಿದು ಬಂದಿದೆ. ಸ್ಪರ್ಶ ದರ್ಶನಕ್ಕಾಗಿ ನೂರಾರು ಮಂದಿ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ವಾರಾಂತ್ಯದ (ಮಾರ್ಚ್ 22, 23) ರಜೆಗಳು ಹಾಗೂ ಯುಗಾದಿ ಮಹೋತ್ಸವ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಶ್ರೀಗಿರಿಯಲ್ಲಿ ಶಿವನಾಮ ಸ್ಮರಣೆ ಮಾಡುತ್ತ ಮಲ್ಲಿಕಾರ್ಜುನ ದರ್ಶನ ಪಡೆಯುತ್ತಿದ್ದಾರೆ. ದೇವಾಲಯದ ಬಳಿಕ ಕ್ಯೂ ಕಾಂಪ್ಲೆಕ್ಸ್ ಗಳು ತುಂಬಿ ತುಳುಕುತ್ತಿವೆ. ವಿಶೇಷವಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಭಕ್ತರ ಸಂಖ್ಯೆ ಹೆಚ್ಚಿದೆ. ಮಾರ್ಚ್ 27 ರಿಂದ ಆರಂಭವಾಗುವ 5 ದಿನಗಳ ಯುಗಾದಿ ಮಹೋತ್ಸವ ಕಣ್ತುಂಬಿಕೊಳ್ಳಲು ಭಕ್ತರ ಕಾತುರರಾಗಿದ್ದಾರೆ.
