ವಾಸ್ತುಶಿಲ್ಪಕ್ಕೆ ತಂಜಾವೂರಿನ ಬೃಹದೀಶ್ವರ, ಚೋಳ ಸಾಮ್ರಾಜ್ಯವೇ ಬೃಹತ್ ವಿಶ್ವವಿದ್ಯಾಲಯ, ವಿಶ್ವಕ್ಕೆ ತಿಳಿಯಬೇಕಿದೆ ಈ ಸತ್ಯ; ರಾಜೀವ ಹೆಗಡೆ ಬರಹ
ರಾಜೀವ ಹೆಗಡೆ ಬರಹ: ಭಾರತವೆಂದರೆ ತಾಜ್‌ಮಹಲ್ ಎನ್ನುವ ಸಮಾಧಿ ಸ್ಥಳ ಎಂದು ವಿಶ್ವಕ್ಕೆ ತೋರಿಸಿರುವ ಇತಿಹಾಸಕಾರರು, ರಾಜಕಾರಣಿಗಳು ಈ ಚೋಳರ ದೂರದೃಷ್ಟಿಯ ಮುಂದೆ ತೃಣ ಸಮಾನರು. ಭಾರತ, ತಮಿಳುನಾಡಿನ ದ್ರಾವಿಡ ಬುದ್ಧಿಜೀವಿ ಇತಿಹಾಸಕಾರರು ಜಗತ್ತಿನ ಇಂತಹ ಅತ್ಯದ್ಭುತವನ್ನು ಮರೆಮಾಚುವ ಕೆಲಸ ಮಾಡಿದ್ದಾರೆ. ಇದನ್ನು ಜಗತ್ತಿಗೆ ಸಾರುವ ಕೆಲಸ ನಾವು ಇನ್ನಷ್ಟು ಮಾಡಬೇಕಿದೆ.

ನಮಗೆ ಇತಿಹಾಸವೇ ಅತ್ಯಂತ ಬೋರಿಂಗ್ ವಿಚಾರ. ಅದರಲ್ಲೂ ಭಾರತದ ಇತಿಹಾಸವೆಂದರೆ ಮೂಗು ಮುರಿಯುತ್ತೇವೆ. ಕಲೆ, ಸಂಗೀತ, ವಾಸ್ತುಶಿಲ್ಪ ಸೇರಿ ಪ್ರತಿಯೊಂದರ ಇತಿಹಾಸವನ್ನು ಪಶ್ಚಿಮದ ಆಯಾಮದಲ್ಲೇ ನೋಡುವುದನ್ನು ನಮ್ಮ ಶಿಕ್ಷಣ ತೋರಿಸಿಕೊಟ್ಟಿದೆ. ಅದನ್ನೇ ದಶಕಗಳ ಕಾಲ ನಾವು ಪಾಲಿಸಿಕೊಂಡು ಬಂದಿದ್ದೇವೆ. ಇಂತಹ ಗುಲಾಮಿ ಮನಃಸ್ಥಿತಿಯಲ್ಲೇ ಬೆಳೆದ ನನಗೂ ‘ಪೊನ್ನಿಯಿನ್ ಸೆಲ್ವನ್‘ ಎಂಬ ಚೋಳ ಸಾಮ್ರಾಜ್ಯದ ಕುರಿತ ಸಿನೆಮಾ ಬರುವವರೆಗೆ ಭಾರತದ ಭವ್ಯ ರಾಜವಂಶ ಹಾಗೂ ಅದರ ಹಿರಿಮೆ ಕುರಿತು ಮಾಹಿತಿಯೇ ಇರಲಿಲ್ಲ. ಆ ಚಿತ್ರ ಬಿಡುಗಡೆಯಾದಾಗ ಒಂದಿಷ್ಟು ಲೇಖನ, ಬ್ಲಾಗ್‌ಗಳನ್ನು ಓದಿದ್ದೆ. ಆ ಸಂದರ್ಭದಲ್ಲಿಯೇ ತಂಜಾವೂರಿನ ಬೃಹದೀಶ್ವರ ಸೇರಿ ಇತರ ಚೋಳರ ದೇವಸ್ಥಾನಗಳ ಮೇಲೆ ಎಲ್ಲಿಲ್ಲದ ಕುತೂಹಲ ಹುಟ್ಟಿತ್ತು. ಒಂದು ವರ್ಷಕ್ಕೂ ಅಧಿಕ ಸಮಯದಿಂದ ತಂಜಾವೂರಿಗೆ ಭೇಟಿ ನೀಡಬೇಕು ಎಂದು ನಾನು ಹಾಗೂ ವಿನಾಯಕ್ ಭಟ್ ಪ್ಲ್ಯಾನ್ ಮಾಡುತ್ತಲೇ ಇದ್ದೆವು. ಆದರೆ ಯಾವಾಗ ಈ ವರ್ಷದ ಆರಂಭದ ದಿನದಲ್ಲೇ ತಂಜಾವೂರಿಗೆ ಹೋಗುವುದು ಖಾತ್ರಿಯಾಯಿತೋ ಅಂದಿನಿಂದ ತಂಜಾವೂರಿನ ವಿಡಿಯೊ, ಫೋಟೊ ನೋಡುವುದನ್ನು ನಿಲ್ಲಿಸಿ, ಎಲ್ಲ ಕೌತುಕಗಳನ್ನು ಮನದಲ್ಲಿಯೇ ಹಿಡಿದಿಟ್ಟುಕೊಂಡು, ಚೋಳರ ರಾಜಧಾನಿಯತ್ತ ಕಾರಿನಲ್ಲಿ ಹೊರಟಿದ್ದೆ.
ತಂಜಾವೂರಿನ ‘ಬಿಗ್ ಟೆಂಪಲ್‘
ಸೂರ್ಯನು ಪಶ್ಚಿಮ ತೀರದಲ್ಲಿ ಮುಳುಗುತ್ತಿದ್ದ ಗೋಧೂಳಿ ಗಳಿಗೆಯಲ್ಲಿ ಪೂರ್ವದ ವೈಭವಪೂರಿತ ಬೃಹದೀಶ್ವರನ ಎದುರು ಹಾಜರಾಗಿದ್ದೆ. ಶ್ರೀರಂಗಂ ದೇವಾಲಯದ ವೈಭವವಿನ್ನೂ ಕಣ್ಣು ಕಟ್ಟಿರುವ ಸ್ಥಿತಿಯಲ್ಲೇ ತಂಜಾವೂರಿನ ‘ಬಿಗ್ ಟೆಂಪಲ್‘ ಎದುರು ಬಂದು ನಿಂತಿದ್ದೆ. ಸುಮಾರು ಹತ್ತು ಶತಮಾನಗಳ ಹಿಂದೆ ಸಂಪೂರ್ಣ ಕಲ್ಲಿನಲ್ಲೇ ನಿರ್ಮಿಸಿದ್ದ ದೇವಾಲಯದ ಎದುರು ನಿಂತಾಗ, ಅದು ಹಳೆ ಕಾಲದ ಚಿನ್ನದಂತೆ ಕಾಣಿಸುತ್ತಿತ್ತು. ವೆಲ್ಲೂರಿನಲ್ಲಿರುವ ಇತ್ತೀಚಿನ ಗೋಲ್ಡನ್ ಟೆಂಪಲ್ ಇದರೆದುರು ಏನೂ ಅಲ್ಲ ಎನಿಸಿಬಿಟ್ಟಿತು. ದೇವಾಲಯಕ್ಕೆ ಅಲ್ಪ-ಸ್ವಲ್ಪ ಮಾಡಿದ್ದ ಲೈಟಿಂಗ್‌ನಲ್ಲಿಯೇ ದೇವಾಲಯದ ಮೊದಲ ದ್ವಾರವೇ ಅಷ್ಟೊಂದು ಆಕರ್ಷಕವಾಗಿ ಕಾಣಿಸಿತು. ಆದರೆ ಶ್ರೀರಂಗಂನ ಮುಖ್ಯ ಗೋಪುರದ ಬೃಹದಾಕಾರದ ಮುಂದೆ ನನಗೆ ಆ ಕ್ಷಣಕ್ಕೆ ಬೃಹದೀಶ್ವರನ ಮೊದಲ ದ್ವಾರ ಅಷ್ಟೊಂದು ಮೆಜೆಸ್ಟಿಕ್ ಅನಿಸಲೇ ಇಲ್ಲ.
ಆದರೆ ಯಾವಾಗ ಅಲ್ಲಿಂದ ಇಪ್ಪತ್ತು ಹೆಜ್ಜೆ ಒಳಗಿಟ್ಟು ಎರಡನೇ ದ್ವಾರದತ್ತ ಧಾವಿಸಿದೆನೋ, ಆಗ ʼವಾವ್ʼ ಎನ್ನದೇ ಅನ್ಯ ಮಾರ್ಗವಿರಲಿಲ್ಲ. ಸ್ವರ್ಗದ ಬಾಗಿಲಿನಲ್ಲಿ ನಿಂತ ಅನುಭವ ನನ್ನದಾಗಿತ್ತು. ಅಲ್ಲಿಂದಲೇ ಎರಡು ಹೆಜ್ಜೆ ಮುಂದೆ ಹೋಗಿ ಬಗ್ಗಿ ನೋಡಿದಾಗ ಬೃಹದೀಶ್ವರನ ಬೃಹತ್ ದೇವಾಲಯ ಕಣ್ಣು ಕುಕ್ಕಲು ಆರಂಭಿಸಿತು. ಕಣ್ಣಲ್ಲಿ ಇದನ್ನು ಆನಂದಿಸಬೇಕೋ, ಕ್ಯಾಮೆರಾದಲ್ಲಿ ದೃಶ್ಯ ಸೆರೆ ಹಿಡಿಯಬೇಕೋ ಎನ್ನುವ ಗೊಂದಲದಲ್ಲಿ ಬಿದ್ದುಬಿಟ್ಟೆ. ಒಟ್ಟಿನಲ್ಲಿ ಹೇಗೆ ನೋಡಿದರೂ ತೃಪ್ತಿ ಆಗುತ್ತಿಲ್ಲ. ನಿಶ್ಚಿತಾರ್ಥದ ಸಂದರ್ಭದಲ್ಲಿ ಜಗುಲಿಯಲ್ಲೇ ಕುಳಿತು ಹುಡುಗಿಗಾಗಿ ಕಾದು ಕೂರುವಾಗ ಆಗುವ ಚಡಪಡಿಕೆ ರೀತಿಯೇ ನನ್ನ ಪರಿಸ್ಥಿತಿಯಾಗಿತ್ತು. ಒಳಗೆ ಓಡಿ ಹೋಗಿ ಬೃಹದೇಶ್ವರ ದೇವಾಲಯವನ್ನು ಕಣ್ತುಂಬಿಕೊಳ್ಳಬೇಕು ಎಂದು ಮನಸ್ಸು ಹೇಳುತ್ತಿದ್ದರೆ, ಇಲ್ಲಿಂದ ಪ್ರತಿ ಹೆಜ್ಜೆ ಹೆಜ್ಜೆಗೂ ವಿಭಿನ್ನವಾಗಿ, ವೈಭವಯುತವಾಗಿ ಕಾಣುವ ದೇವಾಲಯದ ಪ್ರಾಂಗಣದ ಸವಿಯಲು ಮರೆಯಬೇಡ ಎಂದು ಬುದ್ಧಿ ಹೇಳುತ್ತಿತ್ತು.
ಎರಡನೇ ದ್ವಾರದ ಎದುರು ನಿಂತು ಒಂದು ಸುತ್ತು ತಿರುಗಿ ನೋಡಿದಾಗ, ಯಾವುದೋ ಅರಮನೆಗೆ ಪ್ರವೇಶಿಸುತ್ತಿದ್ದೇನೆ ಎಂದು ಭಾಸವಾಯಿತು. ಹಾಗೆಯೇ ಈ ದ್ವಾರದಲ್ಲಿ ಚೋಳ ಸಾಮ್ರಾಜ್ಯದ ರಾಜರಾಜ ಚೋಳನು ಆನೆಯ ಮೇಲೆ ಗಜಗಾಂಭೀರ್ಯದಲ್ಲಿ ಹೋದರೆ ಮಾತ್ರ ಮರ್ಯಾದೆ, ನಾವೆಲ್ಲ ನಡೆದುಕೊಂಡು ಹೋದರೆ ಇರುವೆಯಂತೆ ಕಾಣುತ್ತೇವೆ ಎನ್ನುವ ಕಲ್ಪನೆ ಮನದಲ್ಲಿ ಮೂಡಿತು. ರಾಜರಾಜ ಚೋಳನು ಕೇವಲ ಏಳು ವರ್ಷದಲ್ಲಿ ನಿರ್ಮಿಸಿದ್ದ ಈ ಬೃಹತ್ ಈಶ್ವರನ ದೇವಾಲಯದ ಮುಖ್ಯ ಪ್ರಾಂಗಣಕ್ಕೆ ಹೆಜ್ಜೆ ಇಡುತ್ತಲೇ ಅಕ್ಷರಶಃ ವಿಶಿಷ್ಟವಾದ ಅನುಭವವಾಯಿತು. ಆ ಅನುಭೂತಿಯನ್ನು ಶಬ್ದದಲ್ಲಿ ವರ್ಣಿಸಲು ಸಾಧ್ಯವೇ ಇಲ್ಲ ಅಥವಾ ಅಷ್ಟೊಂದು ಪ್ರೌಢಿಮೆ ನನಗಿಲ್ಲ ಎನಿಸುತ್ತದೆ.
ಮುಖ್ಯ ಪ್ರಾಂಗಣಕ್ಕೆ ಕಾಲಿಡುತ್ತಿದ್ದಂತೆ ಈ ದೇವಾಲಯಕ್ಕೆ ಬೃಹದೀಶ್ವರ ಎಂದು ಹೇಳಲು ಕಾರಣವೇನು ಎನ್ನುವುದು ಗೊತ್ತಾಯಿತು. ಏಕೆಂದರೆ ಆ ದೇವಾಲಯವನ್ನು ನಿರ್ಮಿಸಿದ ರಾಜನ ಮನಃಸ್ಥಿತಿಯಿಂದ ಹಿಡಿದು ಅಲ್ಲಿರುವ ಪ್ರತಿಯೊಂದು ನಿರ್ಮಾಣವು ಬೃಹದಾಕಾರದಲ್ಲಿಯೇ ಇದೆ. ಪ್ರಾಂಗಣದೊಳಗೆ ಕಾಲಿಡುತ್ತಿದ್ದಂತೆ ನಂದಿ ಹಾಗೂ ಮಂಟಪದ ಮೂಲಕ ಮುಖ್ಯ ದೇವಸ್ಥಾನದ ಬೃಹತ್ ಗೋಪುರದ ಅರ್ಧಭಾಗ ಕಾಣಿಸುತ್ತದೆ. ಯಾವುದೋ ಚಿನ್ನದ ಗಣಿಯ ಮುಂದೆ ನಿಂತಂತೆ ಆ ಕ್ಷಣಕ್ಕೆ ಅನಿಸುತ್ತದೆ. ಅಲ್ಲಿಂದಲೇ ಕೊಂಚ ಎಡಕ್ಕೆ ಹೋಗಿ ಬೃಹದೀಶ್ವರ ದೇವಾಲಯದ ಸಂಪೂರ್ಣ ಗೋಪುರವನ್ನು ನೋಡಿದಾಗ ನಾನು ಮಂತ್ರಮುಗ್ಧನಾಗುವುದರ ಜತೆಗೆ, ರೋಮಾಂಚನಗೊಂಡೆ. ಹಾಗೆಯೇ ಖುಷಿಯಲ್ಲಿ ಗೊತ್ತಿಲ್ಲದೇ ಕಣ್ಣುಗಳು ತೇವವಾದವು. ಅಲ್ಲೇ ನಿಂತುಕೊಂಡು ಕೆಲ ನಿಮಿಷಗಳ ಕಾಲ ಮುಖ್ಯ ಗೋಪುರವನ್ನೇ ದಿಟ್ಟಿಸುತ್ತಾ ನಿಂತುಬಿಟ್ಟೆ. ಅದೇ ಜಾಗದಿಂದ ಹಿಂತಿರುಗಿ ನೋಡಿದಾಗ ದಾಟಿ ಬಂದ ಎರಡು ದ್ವಾರಗಳು ಯಕ್ಷಗಾನದಲ್ಲಿ ವೇಷ ಕಟ್ಟಿಕೊಂಡು ಬಂದವರಂತೆ ಕಂಡಿತು. ಹಾಗೆಯೇ ಒಮ್ಮೆ ಇಡೀ ಪ್ರಾಂಗಣವನ್ನು ಒಮ್ಮೆ ನೋಡಿದಾಗ ಜೀವಂತವಾಗಿರುವಾಗಲೇ ಸ್ವರ್ಗದಲ್ಲಿ ನಿಂತ ಅನುಭವ ನನ್ನದಾಗಿತ್ತು. ಆ ಕ್ಷಣಕ್ಕೆ ನನ್ನ ಜಗತ್ತೇ ಮರೆತುಹೋಗಿ, ಎಲ್ಲೋ ತೇಲಾಡುತ್ತಿದ್ದೆ. ಅದೇ ಖುಷಿಯಲ್ಲಿ ಪ್ರಾಂಗಣದಲ್ಲಿರುವ ಎಲ್ಲ ಸಣ್ಣ ಪುಟ್ಟ ದೇವಸ್ಥಾನಗಳನ್ನು ನೋಡುತ್ತಾ ಬೃಹದೀಶ್ವರನ ಹಿಂದೆ ಹೋಗಿ ಕುಳಿತೆ.
ಜೀವನದ ಅತ್ಯಂತ ದೈವಿಕ ಕ್ಷಣ
ಆ ದೀಪಾಲಂಕಾರದ ನಡುವೆ ಬೃಹದೀಶ್ವರನ ಹಿಂಭಾಗದಿಂದ ಇನ್ನುಳಿದ ದೇವಾಲಯ ಹಾಗೂ ಪ್ರಾಂಗಣವನ್ನು ನೋಡಿದಾಗ ನಾನು ಅಕ್ಷರಶಃ ಕಳೆದುಹೋದೆ. ಅಲ್ಲಿಯೇ ಕುಳಿತುಕೊಂಡು ಆ ದೃಶ್ಯ ವೈಭವವನ್ನು ಆನಂದಿಸದೇ ಇರಲು ಸಾಧ್ಯವಿರಲಿಲ್ಲ. ನನ್ನ ಪಾಲಿಗೆ ಇಲ್ಲಿಯವರೆಗೆ ಬೃಹದೀಶ್ವರ ದೇವಾಲಯದಲ್ಲಿ ಅತ್ಯಂತ ಖುಷಿಕೊಟ್ಟ ಕ್ಷಣವದು. ಆ ಕ್ಷಣಕ್ಕೆ ಅದು ತಂಜಾವೂರು, ಬೃಹದೀಶ್ವರ ದೇವಾಲಯ ಎನ್ನುವುದು ಮರೆತೆ ಹೋಯಿತು. ಯಾವುದೇ ಸ್ವರ್ಗಲೋಕದಲ್ಲಿ ವಿಹರಿಸುತ್ತಿದ್ದೇನೆ ಎನಿಸತೊಡಗಿತು. ಸ್ವಲ್ಪ ಸಮಯದ ಬಳಿಕ ಅದೇ ಪ್ರಾಂಗಣದಲ್ಲಿರುವ ಪಾರ್ವತಿ ದೇವಾಲಯದ ದಿಕ್ಕಿನಿಂದ ಮತ್ತೊಮ್ಮೆ ಬೃಹದೀಶ್ವರನ ಮೆಜೆಸ್ಟಿಕ್ ವ್ಯೂವ್ ಸವಿದುಕೊಂಡು ಗರ್ಭಗುಡಿಯತ್ತ ಹೆಜ್ಜೆ ಹಾಕಿದೆ. ಇದು ನನ್ನ ಜೀವನದ ಅತ್ಯಂತ ದೈವಿಕ ಕ್ಷಣವಾಗಿತ್ತು. ನಾನು ದೇವರನ್ನು ನಂಬುತ್ತೀನಾ ಎನ್ನುವುದಕ್ಕೆ ಇನ್ನೂ ಉತ್ತರ ದೊರೆತಿಲ್ಲ. ಆದರೆ ಬೃಹದೇಶ್ವರನ ಮುಂದೆ ಹೋದ ಆ ಕೆಲ ನಿಮಿಷಗಳು ನನ್ನ ಪಾಲಿಗೆ ಅತ್ಯಂತ ದೈವಿಕವಾಗಿತ್ತು.
ದೇವಾಲಯದೊಳಗೆ ನಾವು ಕಾಲಿಡುತ್ತಿದ್ದಂತೆ ಮುಖ್ಯ ದ್ವಾರವನ್ನು ಮುಚ್ಚಿಬಿಟ್ಟರು. ಒಳಗೆ ನೋಡುತ್ತಿದ್ದಂತೆಯೇ ಶಿವಲಿಂಗವಿರುವ ಗರ್ಭಗುಡಿಗೂ ಕರ್ಟನ್ ಹಾಕಿಡಲಾಗಿತ್ತು. ಅಂದಿನ ಅಂತಿಮ ಪೂಜೆಯ ಕೊನೆಯ ಕ್ಷಣಕ್ಕೆ ನಾವು ಸಾಕ್ಷಿ ಆಗುತ್ತಿದ್ದೆವು. ಗರ್ಭಗುಡಿಗೆ ಇನ್ನೆರಡು ಬಾಗಿಲು ಇರುವ ಜಾಗದಿಂದಲೇ ಎಲ್ಲವನ್ನೂ ನೋಡುತ್ತಿದ್ದೆವು. ಆ ಕೊನೆಯ ಕ್ಷಣದಲ್ಲಿ ಧೂಪಾರತಿ ಆಗುತ್ತಿದ್ದಂತೆ ಕರ್ಟನ್‌ನ್ನು ಒಂದೇ ಸಮನೇ ಪಕ್ಕಕ್ಕೆ ಸರಿಸಿದಾಗ ಬೃಹದೀಶ್ವರನ ದರ್ಶನವಾಯಿತು. ಆ ದಿನದಲ್ಲಿ ಮತ್ತೊಮ್ಮೆ ರೋಮಾಂಚನಗೊಳ್ಳುವ ಸದವಕಾಶ ನನ್ನ ಪಾಲಿಗೆ ದೊರೆತಿತ್ತು. ಆ ಕ್ಷಣದಲ್ಲಿನ ಏನಾಗುತ್ತಿದೆ ಎನ್ನುವ ಅರಿವು ಕೂಡ ನನಗಿರದ ಸ್ಥಿತಿಯಲ್ಲಿದ್ದೆ. ಅದೇ ಅನುಭೂತಿಯಲ್ಲಿ ಉತ್ಸವ ಮೂರ್ತಿಯನ್ನು ಪಾರ್ವತಿ ದೇವಾಲಯಕ್ಕೆ ಕೊಂಡೊಯ್ಯುವ ತನಕ ನಡೆದುಕೊಂಡು ಬಂದು, ರಾತ್ರಿ ಹೋಟೆಲ್‌ಗೆ ತಲುಪಿದೆ. ಈ ವೈಭವವನ್ನು ಒಮ್ಮೆ ಅನುಭವಿಸಿದರೆ ಸಾಲದು ಎನ್ನುವ ಕಾರಣಕ್ಕೆ ಮತ್ತೆ ಮರುದಿನ ಸಂಜೆಯೂ ದೇವಾಲಯಕ್ಕೆ ಬಂದೆ. ಮೊದಲ ದಿನವಾಗಿದ್ದ ಎಲ್ಲ ಅನುಭವವೂ ಎರಡನೇ ದಿನವೂ ಆಯಿತು. ಅಲ್ಲಿಂದ ಹೊರಕ್ಕೆ ಬರುವಾಗ ಅನಿಸಿದ್ದೇನೆಂದರೆ, ಇಲ್ಲಿ ನೂರು ಬಾರಿ ಬಂದರೂ ಇದೇ ಅನುಭೂತಿ ಸಿಗುತ್ತದೆ. ಅದಕ್ಕಾಗಿಯೇ ಮತ್ತೆ ಮರುದಿನ ಬೆಳಗ್ಗೆ ಕೂಡ ಬೃಹದೀಶ್ವರನ ಪ್ರಾಂಗಣಕ್ಕೆ ಬಂದು, ಸೂರ್ಯನ ಮೊದಲ ರಶ್ಮಿ ಬೀಳುವ ಸೌಂದರ್ಯವನ್ನು ಸವಿದೆ. ಅಷ್ಟಾದರೂ ಬೃಹದೀಶ್ವರನನ್ನು ನೋಡಿದ ತೃಪ್ತಿಯಾಗಲೇ ಇಲ್ಲ. ಅಲ್ಲಿಂದ ಹೋಗಲೂ ಮನಸ್ಸಾಗಲಿಲ್ಲ. ಹಾಗೆಯೇ ಮತ್ತೆ ಶೀಘ್ರವೇ ಮಹಾಬಲಿಪುರಂ, ಚಿದಂಬರಂ, ಗಂಗೈಕೊಂಡ, ಕುಂಭಕೋಣಂ ಹಾಗೂ ತಂಜಾವೂರಿಗೆ ಪ್ರವಾಸ ಬರಬೇಕು ಎನ್ನುವ ಪ್ಲ್ಯಾನ್ ಕೂಡ ಸಿದ್ಧವಾಯಿತು. ಏಕೆಂದರೆ ತಂಜಾವೂರಿನ ಸೆಳೆತ ಹಾಗಿದೆ.
ಅಂದ್ಹಾಗೆ ಈ ಬೃಹದೀಶ್ವರ ದೇವಾಲಯವನ್ನು 1010ರ ಸಮಯದಲ್ಲಿ ರಾಜರಾಜ ಚೋಳ ಕೇವಲ ಏಳು ವರ್ಷದಲ್ಲಿ ಕಟ್ಟಿಸಿದ್ದರಂತೆ. ಆ ದೇವಾಲಯದ ಗೋಪುರದ ಮೇಲೆ 80 ಟನ್ ಏಕಶಿಲ ಕುಂಭವನ್ನು ಇಡಲಾಗಿದೆ. ಇದನ್ನು ಅಲ್ಲಿ ಸ್ಥಾಪನೆ ಮಾಡಲು ಆರು ಕಿ.ಮೀ ದೂರದವರೆಗೆ ಮಣ್ಣನ್ನು ತುಂಬಲಾಗಿತ್ತಂತೆ. ಅಲ್ಲಿಂದ ಬೃಹತ್ ಏಕಶಿಲೆಯನ್ನು ಆನೆಗಳಿಂದ ಎಳೆಸಿಕೊಂಡು ಬಂದು 50 ಮೀಟರ್‌ಗೂ ಅಧಿಕ ಎತ್ತರವಿರುವ ಗೋಪುರದ ತುತ್ತ ತುದಿಯಲ್ಲಿ ಇರಿಸಲಾಗಿದೆ. ಇದನ್ನು ನೆನೆಸಿಕೊಳ್ಳುವುದು ಕೂಡ ಇಂದಿನ ತಂತ್ರಜ್ಞಾನ ಕಾಲದಲ್ಲೂ ಅಸಾಧ್ಯ. ಇಂದು ಭಾರತಕ್ಕೆ ಸ್ವಾತಂತ್ರ್ಯ ಬಂದು ಏಳೂವರೆ ದಶಕ ಕಳೆದರೂ, ಈ ದೇವಾಲಯ ಹೇಗೆ ಕಟ್ಟಿರಬಹುದೆಂಬ ನಿಖರ ಅಧ್ಯಯನವನ್ನು ಮಾಡಲಾಗುತ್ತಿಲ್ಲ. ಇದು ಆಧುನಿಕ ಇಂಡಿಯಾ ಹಾಗೂ ಭವ್ಯ ಭಾರತದ ನಡುವಿನ ವ್ಯತ್ಯಾಸ ಎನಿಸುತ್ತದೆ. ಅಂದ್ಹಾಗೆ ಈ ದೇವಾಲಯದ ದೀಪಾಲಂಕಾರವನ್ನು ಇನ್ನಷ್ಟು ಚೆಂದಗೊಳಿಸಿದರೆ ಚೋಳರು ಮೇಲಿನಿಂದ ನೋಡಿ ಖುಷಿ ಪಡಬಹುದು. ಜೊತೆಗೆ ಚೋಳರು ಇತಿಹಾಸವನ್ನು ಲೇಸರ್ ಶೋ ಮೂಲಕ ತೋರಿಸುವ ಪ್ರಯತ್ನ ಮಾಡಿದರೆ ಇತಿಹಾಸಕಾರರು ಮಾಡಿದ ತಪ್ಪನ್ನು ಅಲ್ಪಮಟ್ಟಿಗೆ ಸರಿಪಡಿಸಬಹುದು.
ಕುಂಭಕೋಣಂ ಐರವತೇಶ್ವರ ದೇವಾಲಯ
ತಂಜಾವೂರಿನ ಸೌಂದರ್ಯವನ್ನು ನೋಡಿಕೊಂಡು ಚೋಳರ ಇನ್ನೆರಡು ವಾಸ್ತುಲೋಕವನ್ನು ನೋಡಲು ಹೊರಟೆವು. ಅಲ್ಲೇ 40 ಕಿ.ಮೀ ದೂರದಲ್ಲಿರುವ ಕುಂಭಕೋಣಂ ಐರವತೇಶ್ವರ ದೇವಾಲಯದತ್ತ ಧಾವಿಸಿದೆವು. ಈ ದೇವಾಲಯವು ಹೊರಗಿನಿಂದ ಅಲ್ಪಮಟ್ಟಿಗೆ ಬೃಹದೀಶ್ವರನನ್ನು ಹೋಲಿದರೂ, ಒಳಗಿರುವ ಕಂಬ ಹಾಗೂ ಶಿಲ್ಪಗಳು ಸ್ವಲ್ಪ ವಿಭಿನ್ನವಾಗಿವೆ. ಹಾಗೆಯೇ ದೇವಾಲಯದೊಳಗೆ ಎಡದಿಂದ ಹೋಗುವಾಗ ಸಿಗುವ ಮೆಟ್ಟಿಲಿನ ಬಳಿ ಇರುವ ಆನೆ ಹಾಗೂ ಚಕ್ರಗಳು ಸೂರ್ಯ ದೇವಸ್ಥಾನ, ಹಂಪಿಯನ್ನು ನೆನಪಿಸುತ್ತವೆ. ಹಾಗೆಯೇ ದೇವಾಲಯದಿಂದ ಹೊರಗೆ ಜಲಾಭಿಷೇಕ ಬರುವ ಶಿಲ್ಪನ ವಿಶಿಷ್ಟ ಕೆತ್ತನೆ ಗಮನ ಸೆಳೆಯುತ್ತದೆ. ಸಮಯವಿದ್ದರೆ ದೇವಾಲಯದ ಆವರಣದಲ್ಲಿ ಕನಿಷ್ಠ ಎರಡು-ಮೂರು ಗಂಟೆ ಆರಾಮಾಗಿ ಕಳೆಯಬಹುದು.
ಇಲ್ಲಿಂದ ನೇರವಾಗಿ ನಾವು ಗಂಗೈಕೊಂಡ ಚೋಳಪುರಂಗೆ ಲಗ್ಗೆ ಇಟ್ಟೆವು. ಇದು ತಂಜಾವೂರಿನ ಬಳಿಕ ರಾಜರಾಜ ಚೋಳನ ಮಗನ ರಾಜಧಾನಿ ಪ್ರದೇಶವಾಗಿತ್ತು. ಹೀಗಾಗಿ ಇಲ್ಲಿಯೂ ಬೃಹದೀಶ್ವರನ ರೀತಿಯಲ್ಲೇ ಬೃಹತ್ ದೇವಾಲಯವನ್ನು ನಿರ್ಮಿಸಲಾಗಿದೆ. ದೇವಾಲಯವು ಹೊರಗಿನಿಂದ ಬೃಹದೀಶ್ವರದ ರೀತಿ ಕಾಣಿಸಿದರೂ ಒಳಗಿರುವ ಕಂಬಗಳು ಸಾಕಷ್ಟು ವಿಭಿನ್ನವಾಗಿವೆ. ಹಾಗೆಯೇ ದೇವಾಲಯದ ಎದುರಿಗಿರುವ ನಂದಿಯು ತುಂಬಾ ಕ್ಯೂಟ್ ಆಗಿದೆ. ಅಲ್ಲಿಂದ ಎದ್ದು ಬಂದು ಶಿವನ ಮಡಿಲಲ್ಲಿ ಕೂರಲು ತಯಾರಾಗಿರುವಂತೆ ಬೃಹತ್ ಶಿವಲಿಂಗದೆಡೆಗೆ ನಂದಿಯು ಮುಗ್ದವಾಗಿ ನೋಡುತ್ತಿದೆ. ಈ ದೇವಾಲಯದಲ್ಲಿ ನನ್ನ ಪಾಲಿಗೆ ಅತ್ಯಂತ ಆಕರ್ಷಣೀಯ ಎನಿಸಿದ್ದು ಇದೇ ನಂದಿ ಎನ್ನಬಹುದು. ಅಂದ್ಹಾಗೆ ದೇವಾಲಯದೊಳಗೆ ಇರಬಹುದಾದ ಸೌಂದರ್ಯ ನೋಡಲು ನಾವು ಸುಮಾರು ಎರಡು ಗಂಟೆ ಕಾದಿದ್ದೆವು. ಬೇಸರದ ಸಂಗತಿಯೆಂದರೆ ಚೋಳರು ನಿರ್ಮಿಸಿದ ಕಂಬಗಳ ಸೌಂದರ್ಯವನ್ನು ಕೆಡಿಸಲು ಆಧುನಿಕ ಕೌರವರು ಅದೇನೇನೋ ಬಿದಿರನ ಕಂಬಗಳನ್ನು ಕಟ್ಟಿಟ್ಟು ಎಲ್ಲ ಅಂದವನ್ನು ಹಾಳು ಮಾಡಿದ್ದಾರೆ. ಚೋಳರ ನಿರ್ಮಾಣದ ಮತ್ತೊಂದು ಅದ್ಭುತವನ್ನು ಕಣ್ತುಂಬಿಕೊಂಡು ಮತ್ತದೇ ತಂಜಾವೂರಿನ ಬೃಹದೀಶ್ವರನನ್ನು ಮತ್ತೆ ಆನಂದಿಸಿದೆವು. ಆರಂಭವಾದಲ್ಲೇ ಕೊನೆಯಾಗದಿದ್ದರೆ ಅಲ್ಲಿರುವ ಶಿವ ಮೆಚ್ಚಲಾರ. ಹಾಗೆಯೇ ಅದು ಚೋಳರ ವಾಸ್ತುಶಿಲ್ಪದ ಶಕ್ತಿಯೂ ಹೌದು.
ಕೊನೆಯದಾಗಿ: ಇಂತಹದೊಂದು ದೇವಾಲಯಗಳು ವಿಶ್ವದ ಅಚ್ಚರಿಯಲ್ಲಿ ಒಂದಾಗಿಲ್ಲವೆಂದಾದರೆ ನಾವು ಭಾರತೀಯರು ಎಷ್ಟು ಗುಲಾಮಿತನದ ಮನಃಸ್ಥಿತಿಯಲ್ಲಿದ್ದೇವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಭಾರತವೆಂದರೆ ತಾಜ್‌ಮಹಲ್ ಎನ್ನುವ ಸಮಾಧಿ ಸ್ಥಳ ಎಂದು ವಿಶ್ವಕ್ಕೆ ತೋರಿಸಿರುವ ಇತಿಹಾಸಕಾರರು ಹಾಗೂ ರಾಜಕಾರಣಿಗಳು ಈ ಚೋಳರ ದೂರದೃಷ್ಟಿಯ ಮುಂದೆ ತೃಣ ಸಮಾನರು ಎನಿಸುತ್ತದೆ. ಭಾರತ ಹಾಗೂ ತಮಿಳುನಾಡಿನ ದ್ರಾವಿಡ ಬುದ್ಧಿಜೀವಿ ಇತಿಹಾಸಕಾರರು ಜಗತ್ತಿನ ಇಂತಹ ಅತ್ಯದ್ಭುತವನ್ನು ಮರೆಮಾಚುವ ಕೆಲಸ ಮಾಡಿದ್ದಾರೆ. ಆದರೆ ಇದನ್ನು ಜಗತ್ತಿಗೆ ಸಾರುವ ಕೆಲಸವನ್ನು ನಾವು ಇನ್ನಷ್ಟು ಮಾಡಬೇಕಿದೆ. ನನ್ನ ರೀತಿಯಲ್ಲಿ ಮೂರೂವರೆ ದಶಕದ ಬಳಿಕ ಇದರ ಬಗ್ಗೆ ತಿಳಿದು ಹೆಮ್ಮೆ ಪಡುವ ದುಃಸ್ಥಿತಿಯು ಇತರ ಭಾರತೀಯರಿಗೆ ಬರಬಾರದು. ಭಾರತದ ಇಂತಹ ವೈಭವವನ್ನು ನಾವು ಮೊದಲೇ ತಿಳಿದುಕೊಂಡರೆ, ರಾಷ್ಟ್ರಾಭಿಮಾನಕ್ಕೆ ವಿಶೇಷ ಶಿಬಿರ ಆಯೋಜಿಸುವ ಅನಿವಾರ್ಯತೆ ನಿರ್ಮಾಣವಾಗುವುದಿಲ್ಲ. ನಮ್ಮ ದೇಶದ ದೇಗುಲಗಳು ಕೇವಲ ಆಸ್ತಿಕರ ತಾಣವಲ್ಲ. ಇದು ಖಂಡಿತವಾಗಿಯೂ ಸಾಂಸ್ಕೃತಿಕ, ರಾಜಕೀಯ, ಆರ್ಥಿಕ, ವಿದೇಶಿ ರಾಯಭಾರಿಯಾಗಿದೆ. ಆದರೆ ನಾವದನ್ನು ಒಪ್ಪಿಕೊಡು, ಅಪ್ಪಿಕೊಳ್ಳಲು ಪಾಶ್ಚಿಮಾತ್ಯ ಶಿಕ್ಷಣ ಹಾಗೂ ಆಲೋಚನೆ ಅಡ್ಡಿ ಬರುತ್ತಿದೆ. ವರ್ಷಕ್ಕೊಮ್ಮೆಯಾದರೂ ನಮ್ಮ ದೇಶದ ಇಂತಹ ದೇಗುಲಗಳನ್ನು ನೋಡಿದರೆ ನಮ್ಮಲ್ಲಿನ ಒಂದಿಷ್ಟು ಗುಲಾಮಿತನ ನಶಿಸಬಹುದು.
ಡಿಸೆಂಬರ್ 13ಕ್ಕೆರಾಜೀವ ಹೆಗಡೆ ಈ ಬರಹ ಪೋಸ್ಟ್ ಮಾಡಿದ್ದಾರೆ. ಈಗಾಗಲೇ 25ಕ್ಕೂ ಹೆಚ್ಚು ಜನ ಇವರ ಪೋಸ್ಟ್ ಶೇರ್ ಮಾಡಿದ್ದಾರೆ. 100ಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ.
