8ನೇ ಶತಮಾನದಲ್ಲಿ ಅಗಸ್ತ್ಯ ಮುನಿ ಸ್ಥಾಪಿಸಿದ ಅನ್ನಪೂರ್ಣೇಶ್ವರಿ ವಿಗ್ರಹ; ಹೊರನಾಡು ಕ್ಷೇತ್ರದ ಮಹಿಮೆ ತಿಳಿಯಿರಿ
ಕರ್ನಾಟಕದ ಪ್ರಸಿದ್ಧ ದೇವಾಲಯಗಳಲ್ಲಿ ಹೊರನಾಡಿನ ಅನ್ನಪೂರ್ಣೆಶ್ವರಿ ದೇಗುಲವೂ ಒಂದು. 8ನೇ ಶತಮಾನದಲ್ಲಿ ಅಗಸ್ತ್ಯ ಮುನಿ ಸ್ಥಾಪಿಸಿದ ಈ ದೇವಾಲಯದ ಸ್ಥಳ ಮಹಿಮೆ ಇಲ್ಲಿದೆ. (ಬರಹ: ಸತೀಶ್ ಎಸ್., ಜ್ಯೋತಿಷಿ)

ಕರ್ನಾಟಕದ ಪಶ್ಚಿಮಘಟ್ಟಗಳ ಸಾಲಿನಲ್ಲಿ ಬರುವ ಸುಂದರ ಊರು ಚಿಕ್ಕಮಗಳೂರು. ಇಲ್ಲಿನ ಪ್ರಸಿದ್ಧ ದೇವಾಲಯ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಾಲಯ. ಇದು ಕರ್ನಾಟಕದಲ್ಲಿರುವ ಪ್ರಸಿದ್ಧ ದೇವಿ ದೇವಾಲಯವೂ ಹೌದು. ಕಾಶಿಯಲ್ಲಿ ಕೂಡ ಅನ್ನಪೂರ್ಣೆಯ ದೇವಾಲಯವಿದೆ. ಬೆಳ್ಳಿ ಸಿಂಹಾಸನದಲ್ಲಿ ಇರುವ ಅನ್ನಪೂರ್ಣೆಯ ವಿಗ್ರಹವನ್ನು ಕಾಶಿಯಲ್ಲಿ ಕಾಣಬಹುದು. ಅನ್ನಪೂರ್ಣೆಯು ಶಿವನ ಕಪಾಲವನ್ನು ತುಂಬಿಸಿದವಳು ಎಂಬ ಖ್ಯಾತಿಯನ್ನು ಪಡೆದಿದ್ದಾಳೆ.
ಅಗಸ್ತ್ಯ ಮುನಿಗಳು ಸ್ಥಾಪಿಸಿದ ದೇಗುಲ
ತೇತ್ರಾಯುಗದಲ್ಲಿ ದಂಡಕಾರಣ್ಯದಲ್ಲಿ ಅಗಸ್ತ್ಯ ಮಹಾಮುನಿಗಳ ಆಶ್ರಮವಿರುತ್ತದೆ. ವನವಿಹಾರಕ್ಕಾಗಿ ಬಂದ ಶ್ರೀರಾಮಚಂದ್ರ ತನ್ನ ಕುಟುಂಬದವರ ಜೊತೆ ಅಗಸ್ತ್ಯ ಮುನಿಗಳ ಆಶ್ರಮಕ್ಕೆ ಬರುತ್ತಾನೆ. ರಾಜಪರಿವಾರದ ಉಪಚಾರಕ್ಕಾಗಿ ಅನುಗ್ರಹವನ್ನು ಬೇಡಿ ಅಗಸ್ತ್ಯರು ಅನ್ನಪೂರ್ಣೇಶ್ವರಿಯನ್ನು ಪೂಜಿಸುತ್ತಾರೆ. ಇವರ ಭಕ್ತಿಗೆ ಮೆಚ್ಚಿ ಶ್ರೀ ಅನ್ನಪೂರ್ಣೇಶ್ವರಿಯು ಪ್ರತ್ಯಕ್ಷಳಾಗಿ ಅಗಸ್ತ್ಯರಿಗೆ ಅಕ್ಷಯಪಾತ್ರೆಯೊಂದನ್ನು ನೀಡುತ್ತಾರೆ. ಅಗಸ್ತ್ಯ ಮುನಿಗಳ ಪತ್ನಿಯ ಹೆಸರು ಲೋಪಾಮುದ್ರೆ. ಲೋಪಾಮುದ್ರೆಯು ಭೋಜನ ಮಾಡುವವರೆಗೂ ಎಷ್ಟು ಜನರಿಗೆ ಬೇಕಾದರೂ ಅಕ್ಷಯಪಾತ್ರೆಯಿಂದ ಭೋಜನವನ್ನು ತಯಾರಿಸಬಹುದಿತ್ತು. ಆದ್ದರಿಂದ ಅನ್ನಪೂರ್ಣೆಯ ಪೂಜೆಯಿಂದ ಅನ್ನ ಆಹಾರಾದಿಗಳ ಸಮಸ್ಯೆಯು ಉಂಟಾಗುವುದಿಲ್ಲ ಎಂಬ ನಂಬಿಕೆ ಈಗಲೂ ಇದೆ.
ಕರ್ನಾಟಕದಲ್ಲಿನ ಹೊರನಾಡಿನ ಆದಿಶಕ್ತಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನದಲ್ಲಿನ ದೇವಿಯ ಮೂರ್ತಿಯನ್ನು 8ನೇ ಶತಮಾನದಲ್ಲಿ ಅಗಸ್ತ್ಯ ಮುನಿಗಳು ಪ್ರತಿಸ್ಥಾಪಿಸಿದರು ಎಂದು ಹೇಳಲಾಗುತ್ತದೆ.
ಪಾರ್ವತಿ ದೇವಿಯ ಅವತಾರ ಅನ್ನಪೂರ್ಣೆ
ಅನ್ನಪೂರ್ಣೆಯು ಪಾರ್ವತಿದೇವಿಯ ಮತ್ತೊಂದು ಅವತಾರ. ಜಗತ್ತಿನ ಸಮಸ್ತ ಜೀವಿಗಳಿಗೆ ಆಹಾರ ನೀಡುವುದು ಅನ್ನಪೂರ್ಣೆಯ ಕೆಲಸವಾಗಿರುತ್ತದೆ. ಆದರೆ ಒಮ್ಮೆ ಇದರ ಬಗ್ಗೆ ಶಿವ ಪಾರ್ವತಿಯರ ನಡುವೆ ವಾದ–ವಿವಾದ ಉಂಟಾಗುತ್ತದೆ. ಪರಮೇಶ್ವರನು ಆಹಾರ ಮತ್ತು ಪ್ರತಿಯೊಂದು ವಿಚಾರಗಳೂ ಕೇವಲ ಮಾಯೆ ಎಂದು ವಾದಿಸುತ್ತಾನೆ. ಪರಮೇಶ್ವರನ ವಾದದಿಂದ ಬೇಸತ್ತು ಕೋಪಗೊಂಡ ಪಾರ್ವತಿಯು ತನ್ನ ಶಕ್ತಿಯಿಂದ ಕಣ್ಮರೆಯಾಗುತ್ತಾಳೆ. ಈ ಕಾರಣದಿಂದಾಗಿ ಪ್ರಕೃತಿಯಲ್ಲಿನ ಬದಲಾವಣೆ ಹಠಾತ್ ಎಂದು ನಿಂತು ಹೋಗುತ್ತದೆ. ಹವಾಮಾನ ಬದಲಾಗದ ಕಾರಣ ಮರ ಗಿಡಗಳು ಬೆಳೆಯುವುದಿಲ್ಲ. ಸಮಯಕ್ಕೆ ಸರಿಯಾಗಿ ಮಳೆ ಬರಲಿಲ್ಲ. ಇದರ ಪರಿಣಾಮ ಇಡೀ ಪ್ರಪಂಚದ ಮೇಲೆ ಆಗುತ್ತದೆ. ಎಲ್ಲೆಡೆ ಬರಗಾಲವು ಆರಂಭವಾಗುತ್ತದೆ. ಆಗ ಶಿವನಿಗೆ ನಿಜಾಂಶವು ತಿಳಿಯುತ್ತದೆ. ಪಾರ್ವತಿಯು ಪ್ರಕೃತಿಯ ದೇವತೆ ಎಂದು ಒಪ್ಪಿಕೊಳ್ಳುತ್ತಾನೆ. ಅನಂತರ ಕೋಪಗೊಂಡಿದ್ದ ಪಾರ್ವತಿಗೆ ಪ್ರಪಂಚದ ಮೇಲೆ ಕರುಣೆ ಮೂಡುತ್ತದೆ. ಪುನಃ ಪ್ರಪಂಚದ ಎಲ್ಲ ಜೀವಿಗಳಿಗೂ ಆಹಾರವನ್ನು ನೀಡುತ್ತಾಳೆ.
ಇದೇ ರೀತಿಯಲ್ಲಿ ಮತ್ತೊಂದು ಕಥೆಯಿದೆ. ಬ್ರಹ್ಮನು ಪರಮೇಶ್ವರ ಬಗ್ಗೆ ಅವಹೇಳನ ಮಾಡುತ್ತಾನೆ. ಶಿವನ ಸಹನೆಯು ಮರೆಯಾಗುತ್ತದೆ. ಬ್ರಹ್ಮನ ಒಂದು ತಲೆಯನ್ನು ದೇಹದಿಂದ ಬೇರ್ಪಡಿಸುತ್ತಾನೆ. ಆದರೆ ಬ್ರಹ್ಮನ ಶಾಪದಂತೆ ತಲೆಬುರುಡೆಯು ಶಿವನ ಕೈಗಳಿಗೆ ಅಂಟಿಕೊಳ್ಳುತ್ತದೆ. ಆ ತಲೆಬುರುಡೆಯು ಆಹಾರದಿಂದ ತುಂಬದ ಹೊರತು ಶಿವನ ಕೈಗಳಿಂದ ಬೇರೆಯಾಗುವುದಿಲ್ಲ ಎಂಬ ಶಾಪ ಪಡೆಯುತ್ತಾನೆ. ಆ ಕ್ಷಣದಿಂದಲೇ ಬ್ರಹ್ಮನು ಎಲ್ಲರಲ್ಲಿಯೂ ಆಹಾರವನ್ನು ಪಡೆಯುತ್ತಾನೆ. ಲಕ್ಷ್ಮೀಯ ಆದಿಯಾಗಿ ಎಲ್ಲಾ ದೇವತೆಗಳು ಆಹಾರವನ್ನು ನೀಡಿದರೂ ಶಿವನ ತಲೆಬುರುಡೆಯು ತುಂಬಲಿಲ್ಲ. ಬೇರೆ ದಾರಿ ಕಾಣದ ಬ್ರಹ್ಮನು ಅಂತಿಮವಾಗಿ ಈ ಅನ್ನಪೂಣೇಶ್ವರಿಯ ದೇವಸ್ಥಾನಕ್ಕೆ ಬರುತ್ತಾನೆ. ಆಗ ಸ್ವತಃ ಅನ್ನಪೂರ್ಣೆಯು ಆಹಾರ ಧಾನ್ಯಗಳನ್ನು ನೀಡುತ್ತಾಳೆ. ಆಗ ಅಚ್ಚರಿ ಎಂಬಂತೆ ಶಿವನ ಕಪಾಲ ಅಂದರೆ ತಲೆಬುರುಡೆಯು ತುಂಬಿಹೋಗುತ್ತದೆ. ಈ ರೀತಿಯಲ್ಲಿ ಬ್ರಹ್ಮನು ಪರಮೇಶ್ವರನ ಶಾಪದಿಂದ ವಿಮುಕ್ತನಾಗುತ್ತಾನೆ.
ಹೊರನಾಡು ದೇಗುಲದ ಜೀರ್ಣೋದ್ಧಾರ
ಮೊದಲು ಈ ದೇವಾಲಯವು ಕೇವಲ ಗರ್ಭಗುಡಿಯನ್ನು ಹೊಂದಿತ್ತು. ಕೇವಲ ಬಯಲಲ್ಲಿ ಈ ದೇವಾಲಯವಿತ್ತು. ಆದರೆ ಧರ್ಮಕರ್ತರಾದ ಶ್ರೀವೆಂಕಟಸುಬ್ಬ ಜೋಯಿಸರು ದೇವಾಲಯದ ಪುನರುಜ್ಜೀವನ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಶ್ರೀಅನ್ನಪೂರ್ಣೆಯ ಮೂರ್ತಿಯನ್ನು 1973 ರಲ್ಲಿ ಅಕ್ಷಯ ತೃತೀಯದ ಶುಭ ದಿನದಂದು ಪುನಃ ಸ್ಥಾಪಿಸಿದರು. ಅನ್ನಪೂರ್ಣೆಯ ಬಗ್ಗೆ ಶಿವ ರಹಸ್ಯ ಮತ್ತು ಇನ್ನಿತರ ಧಾರ್ಮಿಕ ಗ್ರಂಥಗಳಲ್ಲಿ ತಿಳಿಯಬಹುದಾಗಿದೆ. ಈ ದೇವಾಲಯದಲ್ಲಿ ಪೂಜೆ ಸಲ್ಲಿಸಿದವರಿಗೆ ಆಹಾರದ ಕೊರತೆ ಇರುವುದಿಲ್ಲ ಎಂಬ ನಂಬಿಕೆ ಇದೆ. ಅಕ್ಷಯ ತದಿಗೆಯಂದು ಈ ಕ್ಷೇತ್ರದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ.
