ಈ ವರ್ಷ ಗುರು ಪೂರ್ಣಿಮೆ ಯಾವಾಗ? ದಿನಾಂಕ, ಮಹತ್ವ, ಶುಭಮುಹೂರ್ತ, ಪೂಜಾವಿಧಾನ ಸೇರಿ ಇನ್ನಿತರ ವಿವರ ಇಲ್ಲಿದೆ
ಭಾರತದ ಸನಾತನ ಸಂಸ್ಕೃತಿಯಲ್ಲಿ, ಆಷಾಢ ಮಾಸದ ಪೌರ್ಣಿಮೆಯ ದಿನವನ್ನು ಗುರು ಪೂರ್ಣಿಮಾ ಎಂದು ಆಚರಿಸಲಾಗುತ್ತದೆ. ಈ ವರ್ಷ ಗುರು ಪೂರ್ಣಿಮೆ ಯಾವಾಗ, ಈ ದಿನದ ಮಹತ್ವವೇನು, ಪೂಜಾವಿಧಾನದ ಬಗ್ಗೆ ಇಲ್ಲಿದೆ ಮಾಹಿತಿ.

ಗುರು ಪೂರ್ಣಿಮೆ, ವಿಶ್ವಾವಸು ನಾಮ ಸಂವತ್ಸರ, 2025: ಸನಾತನ ಹಿಂದೂ ಪಂಚಾಂಗದ ಕಾಲಗಣನೆಯಂತೆ ಪ್ರತಿ ಮಾಸ ಅಥವಾ ತಿಂಗಳು ತಲಾ 15 ದಿನಗಳ ಎರಡು ಪಕ್ಷಗಳನ್ನು ಹೊಂದಿರುತ್ತವೆ. ಇವುಗಳನ್ನು ಶುಕ್ಲ ಪಕ್ಷ ಹಾಗೂ ಕೃಷ್ಣಪಕ್ಷಗಳೆಂದು ಕರೆಯಲಾಗುತ್ತೆ. ಒಂದು ಮಾಸದಲ್ಲಿ ಒಂದು ಪೌರ್ಣಮಿ ಹಾಗೂ ಒಂದು ಅಮಾವಾಸ್ಯೆ ಬರುತ್ತವೆ. ಶುಕ್ಲಪಕ್ಷದ ಕೊನೆಯ ದಿನವಾದ ಪೌರ್ಣಮಿಯನ್ನು ಬಹಳ ಪವಿತ್ರವಾದುದೆಂದು ಪರಿಗಣಿಸಲಾಗುತ್ತದೆ. ಪೌರ್ಣಮಿಯಂದು ಅನೇಕ ಪೂಜೆ ಹಾಗೂ ವ್ರತಾನುಷ್ಠಾನಗಳನ್ನು ಆಚರಿಸಲಾಗುತ್ತದೆ. ಅದರೆ, ಆಷಾಢಮಾಸದಲ್ಲಿ ಬರುವ ಪೌರ್ಣಮಿ ಅತ್ಯಂತ ಮಹತ್ವದ್ದಾಗಿದ್ದು ಅದನ್ನು ಗುರುಪೂರ್ಣಿಮೆ ಎಂದು ಆಚರಿಸಲಾಗುತ್ತದೆ. ಅದಕ್ಕೆ ವ್ಯಾಸಪೌರ್ಣಮಿ ಹಾಗೂ ವೇದ ಪೌರ್ಣಮಿ ಎಂದೂ ಸಹ ಕರೆಯಲಾಗುತ್ತದೆ. ಸನಾತನ ಹಿಂದೂ ಸಂಸ್ಕೃತಿಯಲ್ಲಿ, ತಾಯಿ-ತಂದೆಗೆ ದೇವರ ಸ್ಥಾನವನ್ನು ನೀಡಲಾಗಿದ್ದು ಗುರುವಿಗೂ ಸಹ ದೇವರಿಗೆ ಸಮಾನವಾದ ಸ್ಥಾನವನ್ನೇ ನೀಡಲಾಗಿದೆ. “ಹರ ಮುನಿದರೆ ಗುರು ಕಾಯ್ವ” ಎಂಬ ಮಾತು ನಮ್ಮಲ್ಲಿ ಜನಜನಿತವಾಗಿದೆ. ಅಂದರೆ, ಒಂದು ವೇಳೆ ಶಿವನೇ ನಮ್ಮ ಮೇಲೆ ಕೋಪಗೊಂಡರೂ, ನಮ್ಮ ಗುರುವಿಗೆ ನಮ್ಮನ್ನು ಶಿವನ ಕೋಪದಿಂದ ರಕ್ಷಿಸುವ ಸಾಮರ್ಥ್ಯ ಇರುತ್ತದೆ ಅನ್ನೋದೇ ಈ ಮಾ ತಾಯಿ-ತಂದೆಯರ ನಂತರ, ವ್ಯಕ್ತಿಯೊಬ್ಬನ ಜ್ಞಾನಾರ್ಜನೆ ಹಾಗೂ ವ್ಯಕ್ತಿತ್ವ ನಿರ್ಮಾಣ ಮಾತ್ರವಲ್ಲದೇ, ಅವನ ಸಂಪೂರ್ಣ ಜೀವನ ನಿರ್ವಹಣೆಯ ವಿವಿಧ ಹಂತಗಳಲ್ಲಿ ಗುರು ವಹಿಸುವ ಪಾತ್ರ ಅದ್ಭುತವಾದದ್ದು ಸರಿಸಾಟಿ ಇಲ್ಲದಿರುವಂತಹದು.
ಗುರುಪೂರ್ಣಿಮೆಯು ಗುರು-ಶಿಷ್ಯರ ನಡುವಿನ ಪವಿತ್ರವಾದ ಸಂಬಂಧವನ್ನು ಸೂಚಿಸುತ್ತದೆ. ನಮ್ಮ ದೇಶದ ಸಂಸ್ಕೃತಿಯಲ್ಲಿ ಗುರು-ಶಿಷ್ಯ ಸಂಬಂಧದ ಮಹತ್ವವನ್ನು ಸಾರುವ ಅನೇಕ ಉದಾಹರಣೆಗಳನ್ನು ನಾವು ನೋಡಬಹುದಾಗಿದೆ. ಅವುಳಲ್ಲಿ ಕೆಲವನ್ನು ಹೆಸರಿಸಬೇಕೆಂದರೆ ರಾಮ-ಲಕ್ಷ್ಮಣರು ಹಾಗೂ ವಿಶ್ವಾಮಿತ್ರರ ನಡುವಿನ ಸಂಬಂಧ, ಕೃಷ್ಣ-ಬಲರಾಮ-ಸುಧಾಮರು ಹಾಗೂ ಸಾಂದೀಪನಿ ಮಹರ್ಷಿಗಳ ನಡುವಿನ ಸಂಬಂಧ, ದ್ರೋಣ-ಅರ್ಜುನ ಹಾಗೂ ದ್ರೋಣ-ಏಕಲವ್ಯರ ನಡುವಿನ ಸಂಬಂಧ ಹೀಗೆ ಕೊನೆಯಿಲ್ಲದ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಗುರು ಪೂರ್ಣಿಮೆಯ ದಿನಾಂಕ, ಇನ್ನಿತರ ವಿವರಗಳು
ಗುರು ಪೂರ್ಣಿಮೆಯ ದಿನಾಂಕ: 10ನೇ ಜುಲೈ 2025ರ ಗುರುವಾರ
ಪೌರ್ಣಮಿ ತಿಥಿ ಆರಂಭದ ಸಮಯ: 9ನೇ ಜುಲೈ 2025ರ ಬುಧವಾರದ ಮಧ್ಯರಾತ್ರಿಯ (10ರ ಬೆಳಗಿನ ಜಾವ) 1 ಗಂಟೆ 37 ನಿಮಿಷಕ್ಕೆ.
ಪೌರ್ಣಮಿ ತಿಥಿ ಮುಗಿಯುವ ಸಮಯ: 10ನೇ ಜುಲೈ 2025ರ ಗುರುವಾರದ ಮಧ್ಯರಾತ್ರಿಯ (11ರ ಬೆಳಗಿನ ಜಾವ) 2 ಗಂಟೆ 7 ನಿಮಿಷಕ್ಕೆ.
ಗುರು ಪೂರ್ಣಿಮೆಯ ಪೂಜೆಗೆ ಶುಭ ಮುಹೂರ್ತ:
ಬ್ರಹ್ಮ ಮುಹೂರ್ತ: ಬೆಳಗಿನ ಜಾವ 4:10 ನಿಮಿಷದಿಂದ 4:50 ನಿಮಿಷಗಳವರೆಗೆ
ಅಭಿಜಿನ್ ಮುಹೂರ್ತ: ಬೆಳಿಗ್ಗೆ 11:59ರಿಂದ ಮಧ್ಯಾಹ್ನ 12:54ರವರೆಗೆ
ವಿಜಯ ಮುಹೂರ್ತ: ಮಧ್ಯಾಹ್ನ 12:45ರಿಂದ 3:40ರವರೆಗೆ
ಗೋಧೂಳಿ ಮುಹೂರ್ತ: ಸಂಜೆ 7:21ರಿಂದ 7:41ರವರೆಗೆ
ಗುರು ಪೌರ್ಣಮಿಯ ಪೂಜಾವಿಧಾನ
ಗುರು ಪೌರ್ಣಮಿಯ ದಿನದಂದು, ಬೆಳಗಿನ ಜಾವದ ಸಮಯಕ್ಕೇ ಎದ್ದು ಸ್ನಾನಾದಿ ನಿತ್ಯಕರ್ಮಗಳನ್ನು ಮುಗಿಸಿ ಶುಚಿರ್ಭೂತರಾಗಿ ಶುಭ್ರವಸ್ತ್ರಗಳನ್ನು ಧರಿಸಬೇಕು. ಬಾವಿ, ನದಿ, ಸಮುದ್ರಗಳ ಸ್ನಾನವನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಅದು ಸಾಧ್ಯವಾಗದಿದ್ದರೆ, ಮನೆಯಲ್ಲೇ ಸ್ನಾನದ ನೀರಿಗೆ ಸ್ವಲ್ಪ ಗಂಗಾಜಲವನ್ನು ಸೇರಿಸಿ ಮಾಡುವುದು ಉತ್ತಮವಾದದ್ದು.
ಹೂವು, ಹಣ್ಣು, ದೀಪಗಳು, ಊದುಬತ್ತಿ-ಕರ್ಪೂರ, ವೀಳ್ಯದೆಲೆ-ಅಡಿಕೆ, ಗೆಜ್ಜೆವಸ್ತ್ರಗಳು, ನೀರು, ನೈವೇದ್ಯ ಇತ್ಯಾದಿ ಎಲ್ಲಾ ಪೂಜಾ ಸಾಮಾಗ್ರಿಗಳನ್ನೂ ವ್ಯವಸ್ಥಿತವಾಗಿ ಸಂಗ್ರಹಿಸಿಕೊಳ್ಳಿ.
ಗುರು ಪೌರ್ಣಮಿಯಂದು ನಿಮ್ಮ ಕುಲಗುರುಗಳ ಜೊತೆಗೆ ಲಕ್ಷ್ಮೀ-ನಾರಾಯಣರನ್ನು, ಇಷ್ಟದೇವರನ್ನು, ಹಾಗೂ ವೇದವ್ಯಾಸರನ್ನು ಪೂಜಿಸುವ ಪದ್ಧತಿ ಮೊದಲಿನಿಂದಲೂ ನಡೆದು ಬಂದಿದೆ. ಅಲ್ಲದೇ, ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ, ಹಯಗ್ರೀವರು, ದಕ್ಷಿಣಾಮೂರ್ತಿ, ಶ್ರೀ ಸುಬ್ರಹ್ಮಣ್ಯ ಸ್ವಾಮಿ, ಹಾಗೂ ದತ್ತಾತ್ರೇಯರ ಪೂಜೆಯನ್ನೂ ಸಹ ಮಾಡುವ ಪದ್ಧತಿ ಇದೆ.
ಗುರುವಿನ ಶಾಸ್ತ್ರೋಕ್ತ ಪೂಜೆಯ ನಂತರ, ಸಂಜೆ ಚಂದ್ರದರ್ಶನ ಮಾಡಿ ಚಂದ್ರ ದೇವರಿಗೆ ಅರ್ಘ್ಯವನ್ನು ಕೊಡುವುದನ್ನೂ ಸಹ ಹೇಳಲಾಗಿದೆ.
ಗುರು ಪೌರ್ಣಮಿಯ ಆಧ್ಯಾತ್ಮಿಕ ಮಹತ್ವ
ಮಹರ್ಷಿ ವೇದವ್ಯಾಸರು ಹರಿದು ಹಂಚಿಹೋಗಿದ್ದು ಚತುರ್ವೇದಗಳನ್ನು ಒಗ್ಗೂಡಿಸಿ ಅವಕ್ಕೆ ಭಾಷ್ಯಗಳನ್ನು ಬರೆದ ಮಹಾನುಭಾವರು. ಮಹರ್ಷಿ ವೇದವ್ಯಾಸರು ಜನಿಸಿದ್ದೂ ಸಹ ಆಷಾಢ ಪೌರ್ಣಮಿಯಂದೇ ಎಂದು ಪವಿತ್ರ ಪ್ರಾಚೀನ ಗ್ರಂಥಗಳು ಹೇಳುತ್ತವೆ. ಮಹರ್ಷಿ ವೇದವ್ಯಾಸರು ವೇದಗಳಿಗೆ ಭಾಷ್ಯಗಳನ್ನು, ಅನೇಕ ಪುರಾಣಗಳನ್ನು, ಹಾಗೂ ಮಹಾಭಾರತವನ್ನು ಬರೆದವರು ಎಂಬುದು ನಮಗೆಲ್ಲಾ ತಿಳಿದಿರುವ ವಿಚಾರವೇ ಆಗಿದೆ. ಹೀಗಾಗಿಯೇ, ಅವರನ್ನು ಮಹಾಗುರು ಎಂದು ಪರಿಗಣಿಸಲಾಗಿದ್ದು, ಗುರು ಪೂರ್ಣಿಮೆಯಂದು ಅವರನ್ನು ಸ್ಮರಿಸಿ, ಅರಾಧಿಸಿ, ಅವರ ಆಶೀರ್ವಾದವನ್ನು ಪಡೆಯುವುದು ಅತ್ಯಂತ ಶ್ರೇಯಸ್ಕರವಾಗಿದ್ದು ಮಾನವನನ್ನು ಅಜ್ಞಾನದ ಅಂಧಕಾರದಿಂದ ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುವ ಮಾರ್ಗವಾಗಿದೆ.
ಇಂತಹ ಪವಿತ್ರದಿನವಾದ ಗುರು ಪೌರ್ಣಿಯಂದು, ನಾವೆಲ್ಲರೂ ನಿಶ್ಚಲ ಮನಸ್ಸಿನಿಂದ ಹಾಗೂ ಶ್ರದ್ಧಾಭಕ್ತಿಗಳಿಂದ ಗುರುಗಳ ಆರಾಧನೆಯನ್ನು ಮಾಡುವ ಮೂಲಕ ಅವರ ಕೃಪಾಶೀರ್ವಾದಗಳಿಗೆ ಪಾತ್ರರಾಗೋಣ.
ಬರಹ: ನಾಗೇಶ್, ದೊಡ್ಡಬಳ್ಳಾಪುರ