Kumbh Mela 2025: ನಾಗಸಾಧುಗಳೆಂದರೆ ಯಾರು, ಮಹಾ ಕುಂಭಮೇಳದಲ್ಲಿ ಪ್ರತ್ಯಕ್ಷವಾಗುವ ಅವರ ಬದುಕಿನ ಉದ್ದೇಶವೇನು? -ಇಲ್ಲಿದೆ ಸಮಗ್ರ ವಿವರ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Kumbh Mela 2025: ನಾಗಸಾಧುಗಳೆಂದರೆ ಯಾರು, ಮಹಾ ಕುಂಭಮೇಳದಲ್ಲಿ ಪ್ರತ್ಯಕ್ಷವಾಗುವ ಅವರ ಬದುಕಿನ ಉದ್ದೇಶವೇನು? -ಇಲ್ಲಿದೆ ಸಮಗ್ರ ವಿವರ

Kumbh Mela 2025: ನಾಗಸಾಧುಗಳೆಂದರೆ ಯಾರು, ಮಹಾ ಕುಂಭಮೇಳದಲ್ಲಿ ಪ್ರತ್ಯಕ್ಷವಾಗುವ ಅವರ ಬದುಕಿನ ಉದ್ದೇಶವೇನು? -ಇಲ್ಲಿದೆ ಸಮಗ್ರ ವಿವರ

ಭಾರತದಲ್ಲಿ ನಡೆಯುವ ಹಲವು ವಿಶೇಷ ಉತ್ಸವಗಳಲ್ಲಿ ಕುಂಭಮೇಳವೂ ಒಂದು. 12 ವರ್ಷಗಳಿಗೊಮ್ಮೆ ಕುಂಭಮೇಳ ನಡೆಯುತ್ತದೆ. ಈ ಬಾರಿ ಜನವರಿ 13 ರಿಂದ ಕುಂಭಮೇಳ ಆರಂಭವಾಗುತ್ತದೆ. ಕುಂಭಮೇಳದಲ್ಲಿ ಭಾಗವಹಿಸುವುದರಿಂದ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಇದೆ. ಕುಂಭಮೇಳ ಎಂದಾಕ್ಷಣ ನೆನಪಾಗುವುದು ನಾಗಸಾಧುಗಳು. ಅವರು ಯಾರು? ಅವರ ಜೀವನಶೈಲಿ ಹೇಗಿರುತ್ತದೆ? ಇಲ್ಲಿದೆ ವಿವರ

ನಾಗ ಸಾಧುಗಳೆಂದರೆ ಯಾರು?
ನಾಗ ಸಾಧುಗಳೆಂದರೆ ಯಾರು? (PC: HT File )

ಮಹಾ ಕುಂಭಮೇಳ ಭಾರತದಲ್ಲಿ ನಡೆಯುವ ಪ್ರಸಿದ್ಧ ಧಾರ್ಮಿಕ ಉತ್ಸವ. 12 ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳದಲ್ಲಿ ದೇಶ, ವಿದೇಶಗಳಿಂದಲೂ ಲಕ್ಷಾಂತರ ಜನರು ಭಾಗವಹಿಸುತ್ತಾರೆ. ಕುಂಭಮೇಳದಲ್ಲಿ ಹೆಚ್ಚು ಕಂಡು ಬರುವವರು ನಾಗಸಾಧುಗಳು. ಮೈತುಂಬಾ ವಿಭೂತಿ ಬಳಿದುಕೊಂಡು, ಶಿವನ ಜಪ ಮಾಡುವ ನಾಗಸಾಧುಗಳ ಬಗ್ಗೆ ಹಲವರಿಗೆ ಕುತೂಹಲವಿರುತ್ತದೆ. ಮಹಾ ಕುಂಭಮೇಳದ ಸಮಯದಲ್ಲಿ ಲಕ್ಷಾಂತರ ನಾಗಸಾಧುಗಳು ಕಣ್ಣಿಗೆ ಬೀಳುತ್ತಾರೆ. ಅಲ್ಲಿಯವರೆಗೆ ಎಲ್ಲೂ ಕಾಣಿಸದ ಅವರು ಈ ಸಮಯದಲ್ಲಿ ಇದ್ದಕ್ಕಿದ್ದಂತೆ ಎಲ್ಲೆಡೆ ಕಂಡು ಬರುತ್ತಾರೆ. ಕಾಶಿ, ಪ್ರಯಾಗ್‌ರಾಜ್‌ ಬಳಿ ಸಾವಿರ ಸಾವಿರ ಸಂಖ್ಯೆಯಲ್ಲಿ ನಾವು ನಾಗಸಾಧುಗಳನ್ನು ಕಾಣಬಹುದು. ಹಾಗಾದರೆ ನಾಗಸಾಧುಗಳೆಂದರೆ ಯಾರು? ಅವರ ಜೀವನಶೈಲಿ ಹೇಗಿರುತ್ತೆ? ಅವರ ಜೀವನದ ಧೈಯವೇನು ಇತ್ಯಾದಿ ವಿವರ ಇಲ್ಲಿದೆ.

ಮಹಾ ಕುಂಭಮೇಳ 2025

ಮೊದಲೇ ಹೇಳಿದಂತೆ 12 ವರ್ಷಗಳಿಗೊಮ್ಮೆ ಕುಂಭಮೇಳ ನಡೆಯುತ್ತದೆ. 2013 ರಲ್ಲಿ ಕುಂಭಮೇಳ ನಡೆದಿತ್ತು. ಇದೀಗ 12 ವರ್ಷದ ನಂತರ ಅಂದರೆ 2025 ರ ಜನವರಿ 13ರಿಂದ ಫೆಬ್ರುವರಿ 26 ರ ವರೆಗೆ ಮಹಾ ಕುಂಭಮೇಳ ನಡೆಯಲಿದೆ. ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಕುಂಭಮೇಳ ನಡೆಯುತ್ತದೆ. ಕುಂಭಮೇಳದ ಸಮಯದಲ್ಲಿ ಪ್ರವಿತ್ರ ದಿನಗಳಲ್ಲಿ ಸ್ನಾನ ಮಾಡುವುದರಿಂದ ಜನ್ಮಜನ್ಮಾಂತರದ ಪಾಪಗಳಿಂದ ಮುಕ್ತಿ ಪಡೆಯಬಹುದು ಎಂಬ ನಂಬಿಕೆ ಇದೆ. ಲಕ್ಷಾಂತರ ಮಂದಿ ಭಾಗವಹಿಸುವ ಕುಂಭಮೇಳದಲ್ಲಿ ನಾಗಸಾಧುಗಳು ಕಾಣಿಸುವುದು ವಿಶೇಷ. ಪುಷ್ಯ ಹುಣ್ಣಿಮೆ ದಿನದಿಂದ ಕುಂಭಮೇಳ ಆರಂಭವಾಗುತ್ತದೆ. ಫೆಬ್ರುವರಿ 26 ರ ಮಹಾ ಶಿವರಾತ್ರಿ ದಿನಕ್ಕೆ ಕುಂಭಮೇಳ ಮುಕ್ತಾಯವಾಗುತ್ತದೆ. ಕುಂಭಮೇಳಕ್ಕೆ ವಿಶ್ವದಲ್ಲಿ ನಡೆಯುವ ಅತಿ ದೊಡ್ಡ ಧಾರ್ಮಿಕ, ಆಧ್ಯಾತ್ಮಿಕ ಉತ್ಸವ ಎಂಬ ಹೆಸರೂ ಇದೆ.

ಮಹಾ ಕುಂಭಮೇಳದಲ್ಲಿ ನಾಗಸಾಧುಗಳ ಪಾತ್ರ

ಮಹಾ ಕುಂಭಮೇಳದಲ್ಲಿ ನಾಗಸಾಧುಗಳು ಗಂಗಾ ಸ್ನಾನ ಮಾಡುವ ಉದ್ದೇಶದಿಂದ ಬರುತ್ತಾರೆ. ಇಲ್ಲಿ ನಾಗಸಾಧುಗಳು ಮೊದಲು ಸ್ನಾನ ಮಾಡಿದ ನಂತರ ಉಳಿದವರು ಸ್ನಾನ ಮಾಡುತ್ತಾರೆ. ಕುಂಭಮೇಳದಲ್ಲಿ ಸ್ನಾನ ಮಾಡುವುದರಿಂದ ಪಾಪಗಳಿಂದ ವಿಮೋಚನೆ ಪಡೆಯುವುದು ಮಾತ್ರವಲ್ಲ, ದೇವರ ಅನುಗ್ರಹವೂ ಸಿಗುತ್ತದೆ ಎಂಬ ನಂಬಿಕೆ ಇದೆ. ನಾಗಸಾಧುಗಳು ತಪಸ್ಸು ಮತ್ತು ಧ್ಯಾನದ ವೈಶಿಷ್ಟ್ಯವನ್ನು ಪ್ರದರ್ಶಿಸುವ ಏಕೈಕ ಹಾಗೂ ವಿಶ್ವ ದೊಡ್ಡ ಜಾತ್ರೆ ಮಹಾ ಕುಂಭಮೇಳ ಎನ್ನಬಹುದು. ಗಂಗಾ, ಯಮನಾ, ಸರಸ್ವತಿ ನದಿಯಲ್ಲಿ ಸ್ನಾನ ಮಾಡುವ ಮೂಲಕ ನಾಗಸಾಧುಗಳು ಪಾಪ ವಿಮೋಚನೆಗಾಗಿ ಪ್ರಾರ್ಥಿಸುತ್ತಾರೆ. ಪ್ರಯಾಗ್‌ರಾಜ್‌, ನಾಸಿಕ್‌, ಉಜ್ಜಯಿನಿ ಹಾಗೂ ಹರಿದ್ವಾರ ಈ 4 ಕಡೆಗಳಲ್ಲಿ ಕುಂಭಮೇಳ ನಡೆಯುತ್ತದೆ. ಈ ಎಲ್ಲಾ ಸ್ಥಳಗಳಲ್ಲೂ ನಾವು ನಾಗಸಾಧುಗಳನ್ನು ಕಾಣಬಹುದು.

ನಾಗಸಾಧುಗಳು ಯಾರು, ಅವರ ಬದುಕಿನ ಉದ್ದೇಶವೇನು?

ನಾಗಸಾಧುಗಳೆಂದರೆ ಲೌಖಿಕ ಪ್ರಪಂಚದ ಎಲ್ಲಾ ವ್ಯಾಮೋಹಗಳನ್ನು ತೊರೆದು ಬದುಕುವವರು. ಸಾಮಾನ್ಯವಾಗಿ ನಾಗಸಾಧುಗಳು ಬಟ್ಟೆ ಧರಿಸುವುದಿಲ್ಲ. ಅವರ ಕೂದಲು ಸಿಕ್ಕಾಗಿ ಜಡೆ ಹೆಣೆದಂತಿರುತ್ತದೆ. ಮೈತುಂಬಾ ವಿಭೂತಿ ಬಳಿದುಕೊಂಡಿರುತ್ತಾರೆ. ಕೈಯಲ್ಲಿ ಭಾಂಗ್ ಹಿಡಿದು ಸೇದುತ್ತಾ, ಸದಾ ನಶೆಯಲ್ಲಿ ಇರುತ್ತಾರೆ. ಭಾಂಗ್‌, ಗಾಂಜಾ ಅವರ ಬದುಕಿನ ಭಾಗವಾಗಿರುತ್ತದೆ. ಇವರು ಶಿವನನ್ನು ಪೂಜಿಸುವವರು.

ನಾಗಸಾಧುಗಳು ಸನಾತನ ಧರ್ಮವನ್ನು ಪಾಲಿಸುತ್ತಾರೆ. ಅವರನ್ನು ಅಖಂಡ ಎಂದೂ ಕರೆಯಲಾಗುತ್ತದೆ. ಬಟ್ಟೆ ಇಲ್ಲದೇ ಬೆತ್ತಲೆಯಾಗಿ ಇರುವುದು ಅವರು ಲೌಕಿಕ ಬದುಕು ತ್ಯಜಿಸಿರುತ್ತಾರೆ. ಲೌಕಿಕ ಬಾಂಧವ್ಯವನ್ನು ಕಡಿದುಕೊಳ್ಳುತ್ತಾರೆ. ತಮ್ಮ ಜೀವನವನ್ನು ತಪಸ್ಸು, ಧ್ಯಾನ ಹಾಗೂ ಮೋಕ್ಷಕ್ಕಾಗಿ ಅರ್ಪಿಸುತ್ತಾರೆ. ನಾಥ ಸಂಪ್ರದಾಯಕ್ಕೆ ಸೇರುವ ಇವರು ಅಗ್ನಿಯನ್ನು ಪೂಜಿಸುತ್ತಾರೆ. ನಾಗಸಾಧುಗಳು ತಮ್ಮ ಸಾಧನೆಗೆ ಆಯ್ಕೆ ಮಾಡಿಕೊಳ್ಳುವ ಜಾಗ ಹಿಮಾಲಯ. ಹಿಮಾಲಯದ ಎತ್ತರದ ಪ್ರದೇಶಗಳಲ್ಲಿ ಇವರು ತಪಸ್ಸು ಮಾಡುತ್ತಾರೆ. ಹಟಯೋಗ ಹಾಗೂ ತಂತ್ರಕ್ಕೆ ಹೆಚ್ಚಿನ ಮಹತ್ವ ನೀಡುವ ಇವರು ಸದಾ ಜನರಿಂದ ದೂರವಿರಲು ಬಯಸುತ್ತಾರೆ. ಇವರದ್ದು ನಿರ್ಭೀತ ಸ್ವಭಾವ. ಆಧ್ಯಾತ್ಮವನ್ನು ‘ಅಮಲು’ ಎನ್ನುವ ನಾಗಸಾಧುಗಳು ಶಿವನನ್ನು ಆರಾಧಿಸುತ್ತಾ ಬದುಕು ಕಳೆಯುತ್ತಾರೆ.

ತಮ್ಮ ಜೀವನವನ್ನು ತಪಸ್ಸು, ಧ್ಯಾನಕ್ಕಾಗಿ ಮೀಸಲಿಡುವ ಅವರು ಬದುಕಿನುದ್ದಕ್ಕೂ ಹಾಗೇ ಇರುತ್ತಾರೆ. ಪ್ರತಿದಿನ ಧ್ಯಾನ, ಸಾಧನೆ ಮಾಡುತ್ತಾ ಬದುಕು ಸಾಗಿಸುತ್ತಾರೆ. ಸರಳ ಜೀವನ ನಡೆಸುವ ಇವರು ನೈಸರ್ಗಿಕ ವಸ್ತುಗಳನ್ನು ಮಾತ್ರ ಬಳಸುತ್ತಾರೆ. ಸಾಮಾನ್ಯ ಜನರಿಂದ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ನಾಗಸಾಧುಗಳ ಏಕೈಕ ಗುರಿ ಆತ್ಮಸಾಕ್ಷಾತ್ಕಾರ ಹಾಗೂ ಮೋಕ್ಷ ಸಾಧಿಸುವುದೇ ಆಗಿರುತ್ತದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.