Mahakumbh 2025: ಮಹಾ ಕುಂಭ ಮೇಳ ಆರಂಭ; ಈ ಬಾರಿ ಅಮೃತಸ್ನಾನ ಯಾವಾಗ ನಡೆಯುತ್ತೆ? ಇದರ ಮಹತ್ವ, ವೈಶಿಷ್ಟ್ಯವೇನು? ಇಲ್ಲಿದೆ ವಿವರ
Mahakumbh Mela: ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಸೇರಿದಂತೆ 4 ಪವಿತ್ರ ಸ್ಥಳಗಳಲ್ಲಿ ಮಹಾ ಕುಂಭಮೇಳ ನಡೆಯಲಿದೆ. ಪುಷ್ಯ ಹುಣ್ಣಿಮೆಯ ದಿನವಾದ ಇಂದು (ಜನವರಿ 13) ಕುಂಭ ಮೇಳದ ಮೊದಲ ದಿನದ ಪುಣ್ಯ ಸ್ನಾನ ನಡೆಯುತ್ತದೆ. ನಾಳೆ (ಜ 14) ಮಕರ ಸಂಕ್ರಾಂತಿ ಸಂಭ್ರಮ, 2ನೇ ಪುಣ್ಯ ಸ್ನಾನ. ಪುಷ್ಯ ಹುಣ್ಣಿಮೆಯ ಸ್ನಾನದೊಂದಿಗೆ 2025ರ ಮಹಾಕುಂಭ ಮೇಳ ಆರಂಭವಾಗಿದೆ.

ಭಾರತದಲ್ಲಿ 144 ವರ್ಷಗಳಿಗೊಮ್ಮೆ ಮಹಾಕುಂಭ ಮೇಳ ಹಾಗೂ 12 ವರ್ಷಗಳಿಗೊಮ್ಮೆ ಕುಂಭ ಮೇಳ ನಡೆಯುತ್ತದೆ. ಈ ಬಾರಿ ಮಹಾ ಕುಂಭಮೇಳ ನಡೆಯುತ್ತಿದ್ದು, ಇದನ್ನು ವಿಶ್ವದ ‘ಅತಿ ದೊಡ್ಡ ಧಾರ್ಮಿಕ ಜಾತ್ರೆ’ ಎಂದೇ ಕರೆಯುತ್ತಾರೆ. ಜನವರಿ 13 ರಿಂದ ಫೆಬ್ರುವರಿ 26ರವರೆಗೆ ಕುಂಭ ಮೇಳ ನಡೆಯುತ್ತದೆ. ಮೂರು ಪವಿತ್ರ ನದಿಗಳು ಸಂಗಮವಾಗುವ ಜಾಗದಲ್ಲಿ ಕುಂಭಮೇಳ ನಡೆಯುತ್ತದೆ. ಈ ಜಾಗದಲ್ಲಿ ಪುಣ್ಯಸ್ನಾನ ಮಾಡುವುದು ವಿಶೇಷ. ಪುಷ್ಯ ಹುಣ್ಣಿಮೆಯ ದಿನದಿಂದ ಮಹಾಕುಂಭ ಮೇಳ ಆರಂಭವಾಗುತ್ತದೆ. ಇಂದು (ಜನವರಿ 13) ಪುಷ್ಯ ಹುಣ್ಣಿಮೆ. ಇಂದು ಕುಂಭ ಮೇಳದ ಮೊದಲ ಪುಣ್ಯ ಸ್ನಾನವನ್ನು ಭಕ್ತರು ಮಾಡಿದರು. ಈ ಬಾರಿಯ ಕುಂಭ ಮೇಳದಲ್ಲಿ ಪುಷ್ಯ ಹುಣ್ಣಿಮೆಯ ಜೊತೆಗೆ ಮಕರ ಸಂಕ್ರಾಂತಿಯ ಸಹಯೋಗವೂ ಸಿಕ್ಕಿದೆ. ಪುಷ್ಯ ಹುಣ್ಣಿಮೆಯ ಸ್ನಾನದೊಂದಿಗೆ ಕುಂಭ ಮೇಳ ನಡೆಯುವ ಜಾಗದಲ್ಲಿ ಧಾರ್ಮಿಕ ಕಾರ್ಯಗಳು ಪ್ರಾರಂಭವಾಗುತ್ತವೆ. ಮಕರ ಸಂಕ್ರಮಣ ಭಕ್ತರ ಸಂಭ್ರಮ ಹೆಚ್ಚಿಸಲಿದೆ.
ಮಕರ ಸಂಕ್ರಾಂತಿಯ ದಿನ ಮೊದಲ ಅಮೃತ ಸ್ನಾನ ನಡೆಯಲಿದೆ. ಸ್ನಾನಕ್ಕಾಗಿ 10.5 ಕಿಲೋಮೀಟರ್ ಉದ್ದದ ಘಾಟ್ ಸಿದ್ಧಪಡಿಸಲಾಗಿದೆ. ನಾಗಸಾಧುಗಳು ಹಾಗೂ ಸಂತರು ಸಂಗಮಕ್ಕೆ ಪ್ರವೇಶಿಸಲು ಎರಡು ಮಾರ್ಗಗಳನ್ನು ಒದಗಿಸಲಾಗಿದೆ.
ಅಮೃತ ಸ್ನಾನ
ಮಹಾ ಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡುವುದರಿಂದ ಸ್ವರ್ಗ ಪ್ರಾಪ್ತಿಯಾಗುತ್ತದೆ, ಪಾಪಗಳು ಕಳೆದು ಹೋಗುತ್ತವೆ ಎಂಬ ನಂಬಿಕೆ ಇದೆ. ಕುಂಭ ಮೇಳದಲ್ಲಿ ನಡೆಯುವ ಶಾಹಿ ಸ್ನಾನವನ್ನು ಅಮೃತ ಸ್ನಾನ ಎಂದೂ ಕರೆಯಲಾಗುತ್ತದೆ. ಈ ಸಮಯದಲ್ಲಿ ನಾಗಸಾಧುಗಳು ಹಾಗೂ ಇತರ ಸಂತರು ಆನೆ, ಕುದುರೆ ಹಾಗೂ ರಥಗಳ ಮೇಲೆ ಭವ್ಯವಾದ ಮೆರವಣಿಗೆಯಲ್ಲಿ ಸ್ನಾನ ಮಾಡಲು ಬರುತ್ತಾರೆ. ಇದು ರಾಜರ ವೈಭೋಗದಂತೆ ಕಾಣಿಸುತ್ತದೆ. ಹಿಂದಿನ ಕಾಲದಲ್ಲಿ ರಾಜರು ಕೂಡ ಸ್ನಾನ ಮಾಡಲು ಇದೇ ರೀತಿ ವೈಭವದಿಂದ ಬರುತ್ತಿದ್ದರಂತೆ. ಅದೇ ಕಾರಣಕ್ಕೆ ಇದನ್ನು ‘ರಾಜ ಸ್ನಾನ’ ಎಂದು ಸಹ ಕರೆಯಲಾಗುತ್ತದೆ.
ಮಹಾ ಕುಂಭಮೇಳದಲ್ಲಿ ಒಟ್ಟು 5 ಪವಿತ್ರ ಸ್ನಾನಗಳು ನಡೆಯಲಿಕ್ಕಿವೆ. ಅವುಗಳಲ್ಲಿ ಮೂರು ಅಮೃತ (ರಾಜ) ಸ್ನಾನಗಳಾಗಿರುತ್ತವೆ. ಮೊದಲ ಅಮೃತ ಸ್ನಾನವು ಜನವರಿ 14 ರಂದು ಮಕರ ಸಂಕ್ರಾಂತಿಯಂದು, ಎರಡನೆಯದು ಜನವರಿ 29 ರ ಮೌನಿ ಅಮಾವಾಸ್ಯೆಯಂದು ಮತ್ತು ಮೂರನೆಯದು ಫೆಬ್ರವರಿ 3 ರ ವಸಂತ ಪಂಚಮಿಯಂದು ನಡೆಯಲಿದೆ. ಮಕರ ಸಂಕ್ರಾಂತಿಯಂದು 1 ಗಂಟೆ 47 ನಿಮಿಷಗಳ ಕಾಲ ಪುಣ್ಯ ಸ್ನಾನ ಮಾಡಲು ಶುಭ ಸಮಯವಾಗಿದೆ.
ಜನವರಿ 14, ಮಂಗಳವಾರ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಸಂಕ್ರಾಂತಿಯಂದು, ಶುಭ ಸಮಯ ಬೆಳಿಗ್ಗೆ 9:03 ರಿಂದ 10:50 ರವರೆಗೆ (1 ಗಂಟೆ 47 ನಿಮಿಷಗಳು). ಸಂಕ್ರಾಂತಿಯ ಇಡೀ ದಿನ ಬೆಳಿಗ್ಗೆಯಿಂದ ಸಂಜೆಯವರೆಗೆ ಸ್ನಾನ ಮಾಡುವುದು ಶುಭವಾಗಿರುತ್ತದೆ.
ಜನವರಿ 13 ಹಾಗೂ 14ರಂದು ಸುರಿಯಲಿದೆ ಪುಷ್ಪವೃಷ್ಟಿ
ಈ ಬಾರಿಯ ಕುಂಭಮೇಳದಲ್ಲಿ ಪುಷ್ಪವೃಷ್ಟಿ ಸುರಿಯುವುದಾಗಿ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ. ಇಂದು ಹಾಗೂ ನಾಳೆ ನಡೆಯುವ ಪವಿತ್ರ ಸ್ನಾನದ ಸಂದರ್ಭ ಪುಷ್ಪವೃಷ್ಟಿ ಸುರಿಸಲು ಸಕಲ ಸಿದ್ಧತೆಗಳು ನಡೆದಿವೆ.
ಕುಂಭಮೇಳದ ಐತಿಹ್ಯ ಹೀಗಿದೆ
ಧಾರ್ಮಿಕ ನಂಬಿಕೆಗಳ ಪ್ರಕಾರ ಇಂದ್ರನ ಮಗ ಜಯಂತನು ಅಮೃತದ ಪಾತ್ರೆಯೊಂದಿಗೆ ಸ್ವರ್ಗವನ್ನು ತಲುಪಲು 12 ದಿನಗಳನ್ನು ತೆಗೆದುಕೊಂಡನು. ದೇವತೆಗಳ ಒಂದು ದಿನವು ಒಂದು ಐಹಿಕ ವರ್ಷಕ್ಕೆ ಸಮಾನವಾಗಿರುತ್ತದೆ. ಆದ್ದರಿಂದ, ದೇವತೆಗಳ 12 ದಿನಗಳು 12 ವರ್ಷಗಳಿಗೆ ಸಮಾನವಾದವು. ಈ ನಂಬಿಕೆಯ ಆಧಾರದ ಮೇಲೆ, ಕುಂಭಮೇಳವು ಪ್ರತಿ 12 ವರ್ಷಗಳಿಗೊಮ್ಮೆ ನಡೆಯುತ್ತದೆ. ಪ್ರಯಾಗ್‌ರಾಜ್ ಜೊತೆ, ಇತರ ಮೂರು ಸ್ಥಳಗಳಲ್ಲಿ ಕುಂಭಮೇಳವು ಪ್ರತಿ 12 ವರ್ಷಗಳಿಗೊಮ್ಮೆ ನಡೆಯುತ್ತದೆ. ಈ ಅನುಕ್ರಮವು ಎಷ್ಟಿದೆಯೆಂದರೆ, ಒಂದು ಸ್ಥಳ ಮತ್ತು ಇನ್ನೊಂದು ಸ್ಥಳದ ಕುಂಭ ಮೇಳದ ನಡುವಿನ ಅಂತರ ಮೂರು ವರ್ಷಗಳು. ಸೂರ್ಯನು ಮೇಷ ರಾಶಿಯಲ್ಲಿ ಮತ್ತು ಗುರು ಕುಂಭ ರಾಶಿಯಲ್ಲಿದ್ದಾಗ ಹರಿದ್ವಾರದಲ್ಲಿ ಕುಂಭ ಮೇಳವನ್ನು ಆಯೋಜಿಸಲಾಗುತ್ತದೆ. ಕುಂಭಮೇಳದಲ್ಲಿ ನಾಗಸಾಧುಗಳು ಕಾಣಿಸಿಕೊಳ್ಳುವುದು ವಿಶೇಷ. ಈ ಸಮಯದಲ್ಲಿ ಲಕ್ಷಾಂತರ ನಾಗಸಾಧುಗಳು ಕುಂಭಮೇಳದಲ್ಲಿ ಭಾಗವಹಿಸಿ ಪುಣ್ಯ ಸ್ನಾನ ಮಾಡುತ್ತಾರೆ. ಭಾರತ ಮಾತ್ರವಲ್ಲದೇ ವಿಶ್ವದಾದ್ಯಂತ ಸಹಸ್ರಾರು ಮಂದಿ ಕುಂಭಮೇಳದಲ್ಲಿ ಭಾಗವಹಿಸುತ್ತಾರೆ.
