ಗಲ್ಲದಿಂದ ತಿಳಿಯಬಹುದು ವ್ಯಕ್ತಿತ್ವ; ಗಲ್ಲ ಹೇಗಿದ್ದರೆ ನಮ್ಮ ಸ್ವಭಾವ, ಗುಣ ಹೇಗಿರುತ್ತೆ, ಇಲ್ಲಿದೆ ವಿವರ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಗಲ್ಲದಿಂದ ತಿಳಿಯಬಹುದು ವ್ಯಕ್ತಿತ್ವ; ಗಲ್ಲ ಹೇಗಿದ್ದರೆ ನಮ್ಮ ಸ್ವಭಾವ, ಗುಣ ಹೇಗಿರುತ್ತೆ, ಇಲ್ಲಿದೆ ವಿವರ

ಗಲ್ಲದಿಂದ ತಿಳಿಯಬಹುದು ವ್ಯಕ್ತಿತ್ವ; ಗಲ್ಲ ಹೇಗಿದ್ದರೆ ನಮ್ಮ ಸ್ವಭಾವ, ಗುಣ ಹೇಗಿರುತ್ತೆ, ಇಲ್ಲಿದೆ ವಿವರ

ಮನುಷ್ಯ ದೇಹದ ಬೇರೆ ಬೇರೆ ಭಾಗಗಳಿಂದ ಸ್ವಭಾವ, ವ್ಯಕ್ತಿತ್ವವನ್ನು ತಿಳಿಯಬಹುದು. ಇಂದು ನಾವು ಗಲ್ಲದ ಆಕಾರದಿಂದ ವ್ಯಕ್ತಿತ್ವ ಸ್ವಭಾವ, ಗುಣ ಲಕ್ಷಣ ಹೇಗಿರುತ್ತೆ ಎಂಬುದನ್ನು ತಿಳಿಯೋಣ.

ಗಲ್ಲದಿಂದ ತಿಳಿಯಬಹುದು ವ್ಯಕ್ತಿತ್ವ
ಗಲ್ಲದಿಂದ ತಿಳಿಯಬಹುದು ವ್ಯಕ್ತಿತ್ವ (PC: Canva)

ಗುರುವು ಉಸಿರಾಟಕ್ಕೆ ಸಂಬಂಧಪಟ್ಟ ಗ್ರಹವಾಗಿದೆ. ಆದ್ದರಿಂದ ಇದು ಮೂಗನ್ನು ಸಹ ಪ್ರತಿನಿಧಿಸುತ್ತದೆ. ಗಲ್ಲವು ಶನಿಗೆ ಸಂಬಂಧಿಸಿದಾಗಿದೆ. ಹಾಗಾಗಿ ಮೂಗು ಮತ್ತು ಗಲ್ಲ ಎರಡು ನೋಡಲು ಸುಂದರವಾಗಿದ್ದಲ್ಲಿ ಅವರ ಜೀವನದಲ್ಲಿ ಅನೇಕ ಒಳ್ಳೆಯ ಕೆಲಸ ಕಾರ್ಯಗಳು ನಡೆಯುತ್ತವೆ ಎಂದು ಹೇಳಲಾಗುತ್ತದೆ. ಇವರ ಜೀವನದಲ್ಲಿ ಅನೇಕ ಶುಭಫಲಗಳು ದೊರೆಯುತ್ತವೆ. ಗಲ್ಲದಿಂದ ಒಬ್ಬ ವ್ಯಕ್ತಿಯ ಗುಣ ಧರ್ಮವನ್ನು ನಿರ್ಧರಿಸಬಹುದಾಗಿದೆ.

ಗಲ್ಲದಲ್ಲಿ ಗುಳಿ ಇದ್ದರೆ 

ಗಲ್ಲದ ಮಧ್ಯಬಾಗದಲ್ಲಿ ಕೆಲವರಿಗೆ ಕೆನ್ನೆಯಲ್ಲಿ ಇರುವಂತೆ ಗುಳಿ ಇರುತ್ತದೆ. ಇವರು ಜೀವನದಲ್ಲಿ ಯಾವುದಾದರು ದೊಡ್ಡಪ್ರಮಾಣದ ಕೆಲಸವನ್ನು ಮಾಡುತ್ತಾರೆ. ಜನೋಪಕಾರಿ ಕೆಲಸಗಳಲ್ಲಿ ಆಸಕ್ತಿ ವಹಿಸುತ್ತಾರೆ. ಇವರು ಅದೃಷ್ಟವಂತರೆಂದರೂ ತಪ್ಪಿಲ್ಲ. ಬೇರೆಯವರಿಗೆ ಕಠಿಣ ಎನಿಸುವಂತಹ ಕೆಲಸವನ್ನು ಇವರು ಸುಲಭವಾಗಿ ಮಾಡಬಲ್ಲರು. ಹೊಂದಾಣಿಕೆಯ ಗುಣ ಇರುವ ಕಾರಣ ವಿರೋಧಿಗಳು ಕಡಿಮೆ. ಉದ್ಯೋಗದಲ್ಲಿ ಉನ್ನತ ಮಟ್ಟ ದೊರೆಯುತ್ತದೆ. ಸ್ವಂತ ಉದ್ಧಿಮೆ ಸ್ಥಾಪಿಸುವ ಸಾಧ್ಯತೆಗಳು ಕಂಡುಬರುತ್ತವೆ. ಆದರೆ ಪಾಲುಗಾರಿಕೆಯಲ್ಲಿ ಯಾವುದೇ ಕೆಲಸವನ್ನು ಮಾಡಲು ಇಚ್ಚಿಸುವುದಿಲ್ಲ. ಕುಟುಂಬದವರರೊಡನೆ ಉತ್ತಮ ಒಡನಾಟ ಇರುತ್ತದೆ.

ಗಲ್ಲದ ಮಧ್ಯ ಭಾಗದಲ್ಲಿ ರೇಖೆ ಇದ್ದರೆ 

ಗಲ್ಲದ ಮಧ್ಯಭಾಗದಲ್ಲಿ ರೇಖೆ ಇರುತ್ತದೆ. ಈ ರೇಖೆಯು ಗಲ್ಲವನ್ನು ಬಲಭಾಗ ಮತ್ತು ಎಡಭಾಗಗಳಾಗಿ ಇಬ್ಬಾಗಿಸುತ್ತದೆ. ಇಂತಹ ಗಲ್ಲವಿದ್ದವರ ಜೀವನದಲ್ಲಿ ಅನೇಕ ರೀತಿಯ ಬದಲಾವಣೆಗಳು ಉಂಟಾಗುತ್ತವೆ. ಇವರು ಯಾವುದೇ ಕೆಲಸವನ್ನು ಸಂಪೂರ್ಣವಾಗಿ ಮಾಡುವುದಿಲ್ಲ. ತಮಗೆ ಇಷ್ಟವೆನಿಸುವಂತಹ ಮತ್ತು ಲಾಭವಾಗುವಂತಹ ಕೆಲಸವನ್ನಷ್ಟೇ ಆಯ್ಕೆ ಮಾಡುತ್ತಾರೆ. ಇವರು ಎಲ್ಲರ ಜೊತೆ ಸ್ನೇಹವನ್ನು ಬೆಳೆಸುವುದಿಲ್ಲ. ಇವರ ಮಾತನ್ನು ಕೇಳುವ, ಇವರ ತೀರ್ಮಾನಕ್ಕೆ ಬದ್ದರಾಗುವ ಜನರನ್ನು ಆಯ್ಕೆ ಮಾಡುತ್ತಾರೆ. ದಾಂಪತ್ಯ ಜೀವನದಲ್ಲಿಯೂ ಸಹ ಇವರದ್ದೇ ಯಜಮಾನಿಕೆ. ಪುರುಷರಾಗಲಿ ಅಥವಾ ಸ್ತ್ರೀಯಾಗಲಿ ಇವರು ತೆಗೆದುಕೊಳ್ಳುವ ತೀರ್ಮಾನಗಳೇ ಅಂತಿಮವಾಗುತ್ತದೆ. ಆದರೆ ಇವರು ತೆಗೆದುಕೊಂಡ ತೀರ್ಮಾನವನ್ನು ಇವರು ಮಾತ್ರ ಬದಲಾಯಿಸಬಹುದು. 

ಗಲ್ಲದ ಬಲ ಭಾಗ ಉಬ್ಬಿದ್ದರೆ

ಗಲ್ಲದ ಬಲಭಾಗವು ಎಡಭಾಗಕ್ಕಿಂತ ಉಬ್ಬಿದಂತೆ ಅಥವಾ ಅಗಲವಾಗಿದ್ದಲ್ಲಿ ಅವರ ಮನದಲ್ಲಿ ಸದಾ ಧನಾತ್ಮಕ ಚಿಂತನೆಗಳು ಇರುತ್ತವೆ. ಜೀವನದಲ್ಲಿ ಸೋಲಿನ ಭಯ ಇರುವುದಿಲ್ಲ. ಉದ್ಯೋಗದಲ್ಲಿ ಇವರ ಇಚ್ಛೆಯಂತೆ ಬದಲಾವಣೆಗಳು ಉಂಟಾಗುತ್ತವೆ. ಉತ್ತಮ ಆರೋಗ್ಯ ಇರುತ್ತದೆ. ಇವರಿಗೆ ವಯಸ್ಸಾದರೂ ಸಹ ವಯಸ್ಸಿನ ಲಕ್ಷಣಗಳು ಗೋಚರವಾಗುವುದಿಲ್ಲ. ಹಣಕಾಸಿನ ವ್ಯವಹಾರದಲ್ಲಿ ಬೇರೆಯವರನ್ನು ಆಶ್ರಯಿಸುವುದಿಲ್ಲ. ನಂಬುವುದೂ ಇಲ್ಲ. ಸ್ವತಂತ್ರವಾಗಿ ಜೀವನ ನಡೆಸುವಲ್ಲಿ ಆಸಕ್ತಿ ತೋರುತ್ತಾರೆ. ಸಾಲದ ವ್ಯವಹಾರದಲ್ಲಿ ಆಸಕ್ತಿ ತೊರುವುದಿಲ್ಲ. ಚಿಕ್ಕ ವಯಸ್ಸಿನಲ್ಲಿಯೇ ನಾಯಕತ್ವದ ಗುಣವಿರುತ್ತದೆ. ಕುಟುಂಬದ ಪೂರ್ಣ ಜವಾಬ್ದಾರಿ ಇವರದಾಗುತ್ತದೆ. ಉತ್ತಮ ಪ್ರಯತ್ನದ ಮೇಲೆ ನಂಬಿಕೆಯನ್ನು ಹೊಂದಿರುತ್ತಾರೆ. ಇವರಲ್ಲಿ ಅಪರೂಪದ ಪ್ರತಿಭೆಯೊಂದು ಇರುತ್ತದೆ. ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಇರುತ್ತದೆ. ಅನಾವಶ್ಯಕ ಖರ್ಚುವೆಚ್ಚಗಳನ್ನು ಇಷ್ಟಪಡುವುದಿಲ್ಲ. ಪ್ರವಾಸಪ್ರಿಯರು. ಯಾವುದೇ ವಿಚಾರದಲ್ಲಿ ಪ್ರಬುದ್ಧತೆ ಗಳಿಸುತ್ತಾರೆ.

ಗಲ್ಲದ ಎಡಭಾಗ ಉಬ್ಬಿದ್ದರೆ 

ಬಲಭಾಗಕ್ಕಿಂತ ಗಲ್ಲದ ಎಡಬಾಗವು ಬಲಭಾಗಕ್ಕಿಂತಲೂ ಉಬ್ಬಿದಂತೆ ಅಥವಾ ದೊಡ್ಡದಾಗಿದ್ದರೆ ಅವರ ಮನಸಿನಲ್ಲಿ ಅಳುಕಿನ ಭಾವನೆ ಇರುತ್ತದೆ. ತಮ್ಮ ಸ್ವಂತ ಕೆಲಸ ಕಾರ್ಯಗಳಿಗೂ ಬೇರೆಯವರ ಸಹಾಯವನ್ನು ನಿರೀಕ್ಷಿಸುತ್ತಾರೆ. ವಿದ್ಯಾರ್ಥಿಗಳು ಸುಲಭವಾಗಿ ತಮ್ಮ ಗುರಿ ತಲುಪುತ್ತಾರೆ. ಉತ್ತಮ ವಿದ್ಯೆಯು ಇವರಿಗೆ ಲಭಿಸುತ್ತದೆ. ಉದ್ಯೋಗದಲ್ಲಿ ಪರಿಪೂರ್ಣತೆ ಕಂಡುಬರುವುದಿಲ್ಲ. ಹಿರಿಯ ಅಧಿಕಾರಿಗಳ ಕೃಪಾಶೀರ್ವಾದ ಇವರಿಗೆ ದೊರೆಯುತ್ತದೆ. ಆದ್ದರಿಂದ ಉದ್ಯೋಗದಲ್ಲಿ ಯಾವುದೇ ತೊಂದರೆ ಕಂಡುಬರುವುದಿಲ್ಲ. ಹಣದ ವ್ಯಾಮೋಹ ಇದ್ದರೂ ತಪ್ಪು ದಾರಿ ಹಿಡಿಯುವುದಿಲ್ಲ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೋರುತ್ತಾರೆ. ಆತ್ಮೀಯರ ಜೊತೆಯಲ್ಲಿ ಪಾಲುದಾರಿಕೆಯ ವ್ಯಾಪಾರದಲ್ಲಿ ನಿರತರಾಗುತ್ತಾರೆ. ಚಿಕ್ಕವಯಸ್ಸಿನಲ್ಲಿ ವಿವಾಹವಾಗುತ್ತದೆ. ದಂಪತಿಗಳ ನಡುವೆ ಅನ್ಯೋನ್ಯತೆ ನೆಲೆಸುತ್ತದೆ. ದುಡುಕಿನಿಂದ ತಪ್ಪನ್ನು ಮಾಡಿದರೂ ಒಪ್ಪಿಕೊಳ್ಳುವ ಗುಣವಿರುತ್ತದೆ. ಬುದ್ಧಿವಂತಿಕೆಯಿಂದ ಇವರು ಸುಖಜೀವನ ನಡೆಸುತ್ತಾರೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

HT Kannada Desk

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.