Puja Rules: ದೇವರ ಪೂಜೆಗೆ ಹೂಗಳನ್ನು ಇರಿಸಲು ನಿಯಮಗಳೇನು, ಯಾವ ಹೂವನ್ನು ಪೂಜೆಗೆ ಬಳಸುವಂತಿಲ್ಲ, ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Puja Rules: ದೇವರ ಪೂಜೆಗೆ ಹೂಗಳನ್ನು ಇರಿಸಲು ನಿಯಮಗಳೇನು, ಯಾವ ಹೂವನ್ನು ಪೂಜೆಗೆ ಬಳಸುವಂತಿಲ್ಲ, ಇಲ್ಲಿದೆ ಮಾಹಿತಿ

Puja Rules: ದೇವರ ಪೂಜೆಗೆ ಹೂಗಳನ್ನು ಇರಿಸಲು ನಿಯಮಗಳೇನು, ಯಾವ ಹೂವನ್ನು ಪೂಜೆಗೆ ಬಳಸುವಂತಿಲ್ಲ, ಇಲ್ಲಿದೆ ಮಾಹಿತಿ

ಹಿಂದೂ ಧರ್ಮದಲ್ಲಿ ಯಾವುದೇ ಪೂಜೆ, ಪುನಸ್ಕಾರಕ್ಕೂ ಹೂವುಗಳಿಲ್ಲ ಎಂದರೆ ಅದು ಪರಿಪೂರ್ಣ ಎನ್ನಿಸಿಕೊಳ್ಳುವುದಿಲ್ಲ. ಆದರೆ ಪೂಜೆಗೆ ಯಾವ ರೀತಿಯ ಹೂವುಗಳನ್ನು ಬಳಸಬೇಕು ಎಂಬ ಬಗ್ಗೆ ಕೆಲವು ನಿಯಮಗಳಿವೆ. ಪೂಜೆಗೆ ಹೂವುಗಳನ್ನು ಬಳಸುವಾಗ ಯಾವ ನಿಯಮಗಳನ್ನು ಪಾಲಿಸಬೇಕು, ದೇವರಿಗೆ ಇರಿಸುವ ಹೂವಿನ ಪರಿಮಳ ನೋಡಬಾರದು ಏಕೆ ಎಂಬಿತ್ಯಾದಿ ವಿವರ ಇಲ್ಲಿದೆ.

ದೇವರ ಪೂಜೆಗೆ ಹೂಗಳನ್ನು ಇರಿಸುವ ನಿಯಮಗಳೇನು
ದೇವರ ಪೂಜೆಗೆ ಹೂಗಳನ್ನು ಇರಿಸುವ ನಿಯಮಗಳೇನು

ದೇವರನ್ನು ಆರಾಧಿಸುವುದರಿಂದ ನಮ್ಮಲ್ಲಿ ಸಕಾರಾತ್ಮಕ ಶಕ್ತಿ ತುಂಬುತ್ತದೆ, ಇದರಿಂದ ಮನೆ–ಮನದಲ್ಲಿ ಸಂತೋಷ ನೆಲೆಸುತ್ತದೆ ಎಂಬುದು ನಂಬಿಕೆ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಮನೆಯಲ್ಲಿ ದೇವರಿಗೆ ಹೂ ಇಟ್ಟು, ದೀಪ ಬೆಳಗಿಸುವ ಸಂಪ್ರದಾಯ ಬಹಳಷ್ಟು ಕಡೆಗಳಲ್ಲಿದೆ. ಈ ರೀತಿ ಮಾಡುವುದರಿಂದ ನಕಾರಾತ್ಮಕ ಶಕ್ತಿ ದೂರಾಗಿ, ಸಕಾರಾತ್ಮಕ ಶಕ್ತಿ ಹರಡುತ್ತದೆ ಎಂದು ಹೇಳಲಾಗುತ್ತದೆ.

ಹಿಂದೂ ಧರ್ಮದಲ್ಲಿ ಯಾವುದೇ ಪೂಜೆ ಇರಲಿ, ಪ್ರತಿ ಪೂಜೆಗೂ ಹೂವು ಸೇರಿ ಕೆಲವು ವಸ್ತುಗಳು ಇರಲೇಬೇಕು ಎನ್ನುವ ನಿಯಮಗಳಿವೆ. ಆದರೆ ಪೂಜೆಗೆ ಹೂಗಳನ್ನು ಬಳಸುವ ಮುನ್ನ ಕೆಲವು ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಆ ನಿಯಮಗಳನ್ನು ಪಾಲಿಸುವುದು ಅವಶ್ಯ. ಅವುಗಳಲ್ಲಿ ದೇವರಿಗೆ ಯಾವ ಹೂ ಇಡಬಾರದು, ಪೂಜೆಗೂ ಮುನ್ನ ಹೂವಿನ ಸುವಾಸನೆಯನ್ನು ಅಘ್ರಾಣಿಸುವುದು ತಪ್ಪು ಎಂಬ ನಿಯಮಗಳೂ ಸೇರಿವೆ.

ದೇವರ ಪೂಜೆಗೆ ಕಟ್ಟುನಿಟ್ಟಿನ ನಿಯಮಗಳಿರುವಂತೆ, ಹೂಗಳ ಬಳಕೆಗೂ ಕೆಲವು ನಿಯಮಗಳಿವೆ. ಇವು ಕಟ್ಟುನಿಟ್ಟಿನ ನಿಯಮಗಳಾಗಿದ್ದು, ದೇವರು ಸಂತುಷ್ಠಿಗೊಂಡು ಆಶೀರ್ವಾದ ಪಡೆಯಲು ಕೆಲವು ನಿಯಮಗಳನ್ನು ತಪ್ಪದೇ ಪಾಲಿಸಬೇಕು.

ದೇವರನ್ನು ಮೆಚ್ಚಿಸಲು ನಾವು ಹೂವುಗಳನ್ನು ಅರ್ಪಿಸುತ್ತೇವೆ. ಇದರಿಂದ ಸುತ್ತಲೂ ಸುವಾಸನೆ ಹರಡುತ್ತದೆ. ಅದು ಮನಸ್ಸಿಗೆ ಸಂತೋಷವನ್ನು ನೀಡುತ್ತದೆ. ಹೂವಿನ ಪರಿಮಳ ಸಕಾರಾತ್ಮಕ ಶಕ್ತಿಯನ್ನು ನೀಡುತ್ತವೆ. ಹೂ ಕೂಡ ನಕಾರಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ.

ಪೂಜೆಗೆ ಹೂ ಇಡುವ ನಿಯಮಗಳು

ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ಪೂಜೆ ಮಾಡುವ ಮೊದಲು ಯಾವಾಗಲೂ ಸಣ್ಣದಾದ ಅರಳಿರುವ ಹೂವುಗಳನ್ನು ಅರ್ಪಿಸಬೇಕು. ಈ ಹೂವನ್ನು ದೇವರ ವಿಗ್ರಹದ ಮಧ್ಯ ಭಾಗದಲ್ಲಿ ಇರಿಸಬೇಕು. ಅದರ ನಂತರ ದೊಡ್ಡ ಬಿಳಿ ಹೂವುಗಳನ್ನು ಅರ್ಪಿಸಬೇಕು. ನಂತರ ಹೂವಿನ ಮಾಲೆ ಅಥವಾ ದೊಡ್ಡ ಹೂವನ್ನು ಇಡಬೇಕು. ಅದೇ ರೀತಿ, ಹೂವುಗಳನ್ನು ದೇವರಿಗೆ ಅರ್ಪಿಸುವಾಗ ಕಾಂಡವನ್ನು ದೇವರ ಕಡೆಗೆ ಇಡಬೇಕು ಮತ್ತು ಹೂವಿನ ದಳಗಳು ನಮ್ಮ ಕಡೆಗೆ ಅಂದರೆ ಮುಂಭಾಗಕ್ಕೆ ಬರುವಂತೆ ಇರಿಸಬೇಕು. 

ಮೂಸಿ ನೋಡಿದ ಹೂಗಳನ್ನು ದೇವರಿಗೆ ಇಡಬಾರದು ಏಕೆ?

ದೇವರಿಗೆ ಅರ್ಪಿಸಿದ ಹೂಗಳ ಪರಿಮಳದ ಮೂಲಕ ದೇವರು ಮನೆಯಲ್ಲಿ ಅಥವಾ ಪೂಜೆ ಮಾಡಿದ ಸ್ಥಳದಲ್ಲಿ ಸಕಾರಾತ್ಮಕ ಶಕ್ತಿಯನ್ನು ಹರಡುತ್ತಾನೆ ಎಂದು ಹೇಳಲಾಗುತ್ತದೆ. ದೇವತೆಗಳ ವಿಗ್ರಹಗಳಿಂದ ದಳಗಳಿಗೆ ಅಲೆಗಳು ಹರಡಿ, ಅವುಗಳ ಪರಿಮಳದ ಮೂಲಕ ಆರಾಧಕರನ್ನು ತಲುಪುತ್ತವೆ.

ದಳಗಳ ಸುವಾಸನೆಯ ಸಹಾಯದಿಂದ ಸಕಾರಾತ್ಮಕ ಅಲೆಗಳಾಗಿ ರೂಪಾಂತರಗೊಂಡು ಶಕ್ತಿಯನ್ನು ಒದಗಿಸುತ್ತವೆ. ಹೂವುಗಳ ಮೂಲಕ ನಾವು ಸಾಕಷ್ಟು ಒಳ್ಳೆಯ ಶಕ್ತಿಯನ್ನು ಪಡೆಯುತ್ತೇವೆ. ಆದ್ದರಿಂದ, ಹೂವುಗಳನ್ನು ಮೂಸಿ ನೋಡದೇ ದೇವರಿಗೆ ಅರ್ಪಿಸಬೇಕು ಎಂದು ಹೇಳಲಾಗುತ್ತದೆ.

ಚೆಂಡು ಹೂವನ್ನು ದೇವರಿಗೆ ಇಡಬಾರದು ಏಕೆ?

ಅನೇಕ ಜನರು ಚೆಂಡು ಹೂ ಹಾಗೂ ಅದರ ದಳಗಳಿಂದ ದೇವರನ್ನು ಅಲಂಕರಿಸುತ್ತಾರೆ,  ಈ ಹೂಗಳು ಬಹಳ ಸುಂದರವಾಗಿವೆ ಎಂದು ನಂಬುತ್ತಾರೆ. ಆದರೆ ನಿಯಮಗಳ ಪ್ರಕಾರ ಈ ಹೂವುಗಳನ್ನು ದೇವರಿಗೆ ಅರ್ಪಿಸಬಾರದು ಎಂದು ಹೇಳಲಾಗುತ್ತದೆ. ಯಾಕೆಂದರೆ ಈ ಹೂವು ಶಾಪಗ್ರಸ್ತವಾಗಿದೆ. 

ನೀವು ಚೆಂಡು ಹೂಗಳಿಂದ ಪೂಜೆ ಮಾಡಿದರೆ, ಆ ಪೂಜೆಯ ಫಲಿತಾಂಶ ಸಿಗುವುದಿಲ್ಲ. ಅದರ ಬದಲು ಪೂಜೆಯ ಸಮಯದಲ್ಲಿ ನೀವು ಬಾಗಿಲಿಗೆ ಚೆಂಡು ಹೂವಿನ ಮಾಲೆಗಳನ್ನು ಕಟ್ಟುವುದು ಅಥವಾ ಚೆಂಡು ಹೂವಿನಿಂದ ಅಲಂಕರಿಸಬಹುದು. ಪೂಜೆಗೆ ಯಾವುದೇ ಕಾರಣಕ್ಕೂ ಚೆಂಡು ಹೂ ಬಳಸಬೇಡಿ. 

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ) 

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.