ಸುಖಿ ದಾಂಪತ್ಯಕ್ಕೆ ಶ್ರೀ ಲಕ್ಷ್ಮೀ ನಾರಾಯಣ ಯಂತ್ರ; ಸಾಂಸಾರಿಕ ತೊಂದರೆಗಳಿಗೆ ಮುಕ್ತಿ ನೀಡುವ ಈ ಯಂತ್ರವನ್ನು ಪೂಜಿಸುವ ಕ್ರಮವಿದು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸುಖಿ ದಾಂಪತ್ಯಕ್ಕೆ ಶ್ರೀ ಲಕ್ಷ್ಮೀ ನಾರಾಯಣ ಯಂತ್ರ; ಸಾಂಸಾರಿಕ ತೊಂದರೆಗಳಿಗೆ ಮುಕ್ತಿ ನೀಡುವ ಈ ಯಂತ್ರವನ್ನು ಪೂಜಿಸುವ ಕ್ರಮವಿದು

ಸುಖಿ ದಾಂಪತ್ಯಕ್ಕೆ ಶ್ರೀ ಲಕ್ಷ್ಮೀ ನಾರಾಯಣ ಯಂತ್ರ; ಸಾಂಸಾರಿಕ ತೊಂದರೆಗಳಿಗೆ ಮುಕ್ತಿ ನೀಡುವ ಈ ಯಂತ್ರವನ್ನು ಪೂಜಿಸುವ ಕ್ರಮವಿದು

ಸುಖೀದಾಂಪತ್ಯ ಯಂತ್ರ ಅಂತಲೂ ಕರೆಯುವ ಲಕ್ಷ್ಮೀನಾರಾಯಣ ಯಂತ್ರವನ್ನು ಬುಧವಾರ, ಶುಕ್ರವಾರದಂದು ಪೂಜಿಸುವುದು ಒಳ್ಳೆಯದು. ಈ ಯಂತ್ರವನ್ನು ಮೂರು ಬಗೆಗಳಲ್ಲಿ ರಚಿಸುತ್ತಾರೆ. (ಬರಹ: ಸತೀಶ್ ಎಸ್., ಜ್ಯೋತಿಷಿ)

ಸುಖಿ ದಾಂಪತ್ಯಕ್ಕೆ ಶ್ರೀ ಲಕ್ಷ್ಮೀ ನಾರಾಯಣ ಯಂತ್ರ
ಸುಖಿ ದಾಂಪತ್ಯಕ್ಕೆ ಶ್ರೀ ಲಕ್ಷ್ಮೀ ನಾರಾಯಣ ಯಂತ್ರ (PC: IndiaMART)

ಲಕ್ಷ್ಮೀನಾರಾಯಣ ಯಂತ್ರವನ್ನು ವಸಂತ ಲಕ್ಷ್ಮೀ ನಾರಾಯಣ ಯಂತ್ರ ಮತ್ತು ಸುಖೀದಾಂಪತ್ಯ ಯಂತ್ರ ಎಂದೂ ಕರೆಯುತ್ತಾರೆ. ವಿವಾಹದ ಸಂದರ್ಭದಲ್ಲಿ ನೂತನ ವಧೂ ವರರನ್ನು ಶ್ರೀ ಲಕ್ಷ್ಮಿ ಮತ್ತು ಶ್ರೀ ನಾರಾಯಣರಿಗೆ ಹೋಲಿಸುತ್ತಾರೆ. ಈ ಕಾರಣದಿಂದಲೇ ಬಂಧು ಬಳಗದವರು ನೂತನ ವಧುವರರನ್ನು ಮನೆಗೆ ಆಮಂತ್ರಿಸಿ ಹೊಸ ಬಟ್ಟೆ ಅಥವಾ ಇನ್ನಿತರ ಕಾಣಿಕೆಗಳನ್ನು ನೀಡುತ್ತಾರೆ. ದಾಂಪತ್ಯದಲ್ಲಿ ದಂಪತಿಗಳ ನಡುವೆ ವಾದ ವಿವಾದಗಳು ಮತ್ತು ಬಿನ್ನಾಭಿಪ್ರಾಯಗಳು ಸಹಜ. ಆದರೆ ಅವು ಎಲ್ಲೆ ಮೀರಿದಾಗ ಜೀವನದಲ್ಲಿ ಯಾವುದೇ ಆಸೆ ಆಸಕ್ತಿಗಳು ಉಳಿಯುವುದಿಲ್ಲ.

ಈ ಯಂತ್ರವನ್ನು ಪೂಜಿಸುವುದರಿಂದ ದಂಪತಿಗಳ ನಡುವಿನ ವಿರಸವು ದೂರವಾಗುತ್ತದೆ. ಅವರ ನಡುವೆ ಇರುವ ಅಪನಂಬಿಕೆಯು ಕೊನೆಗೊಳ್ಳುತ್ತದೆ. ಅನಾವಶ್ಯಕವಾದ ವಾದ ವಿವಾದಗಳಿಂದ ದೂರವಾಗಲು ಸಾಧ್ಯವಾಗುತ್ತದೆ. ಇದರಿಂದಾಗಿ ದಂಪತಿಗಳ ನಡುವಿನ ಪ್ರೀತಿ-ವಿಶ್ವಾಸವು ಹೆಚ್ಚುತ್ತದೆ. ಪರಸ್ಪರ ಆಕರ್ಷಣೆಯು ಉಂಟಾಗುತ್ತದೆ. ಆದ್ದರಿಂದ ದಾಂಪತ್ಯದಲ್ಲಿ ವಿರಸ ಹೊಂದಿರುವ ದಂಪತಿಗಳು ಈ ಯಂತ್ರವನ್ನು ಪೂಜಿಸುವುದು ಒಳ್ಳೆಯದು.

ಲಕ್ಷ್ಮೀನಾರಾಯಣ ಯಂತ್ರದ ಮಹತ್ವ

ಈ ಯಂತ್ರವನ್ನು ಪರಿಶುದ್ಧವಾದ ನಿಗದಿತವಾದ ಬೇರಿನಿಂದಲೂ ತಯಾರಿಸುತ್ತಿದ್ದರು. ಈ ಯಂತ್ರವನ್ನು ಬೆಳ್ಳಿಯ ತಗಡಿನಲ್ಲಿ ಮಾಡುವುದು ಒಳ್ಳೆಯದು. ತಾಮ್ರದ ತಗಡಿನಲ್ಲಿಯೂ ಈ ಯಂತ್ರವನ್ನು ತಯಾರಿಸಬಹುದು. ಯಾವುದೋ ಒಂದು ರೀತಿಯ ಒತ್ತಡದಿಂದ ವಿವಾಹವಾದ ದಂಪತಿಗಳ ನಡುವೆ ಉತ್ತಮ ಸೌಹಾರ್ದತೆ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಮನೆಯ ಹಿರಿಯರು ಈ ಯಂತ್ರವನ್ನು ಮನೆದೇವರ ಮುಂದೆ ಅಥವಾ ಪೂಜಿಸುವ ಮನೆಯ ಕಳಸದ ಮುಂದೆ ಇಟ್ಟು ಕೆಂಪು ಮತ್ತು ಹಳದಿ ಹೂವಿನಿಂದ ಪೂಜಿಸಬೇಕು. ಇದರಿಂದ ದಂಪತಿಗಳಲ್ಲಿ ಪರಸ್ಪರ ಉತ್ತಮ ಭಾವನೆ ಬೆಳೆಯುತ್ತದೆ. ಮನಸ್ಸಿನ ಬೇಸರ ದೂರಾಗುತ್ತದೆ. ಆದರೆ ಈ ಯಂತ್ರವನ್ನು ಪತ್ರೆಗಳಿಂದ ಪೂಜಿಸಬಾರದು. ಪಂಚಾಮೃತದ ನೈವೇದ್ಯವನ್ನು ಮಾಡಬಹುದು. ಇದರೊಂದಿಗೆ ಮನೆದೇವರ ಕಲ್ಯಾಣೋತ್ಸವವನ್ನು ಮಾಡಿದರೆ ದಂಪತಿಗಳಲ್ಲಿ ಉತ್ತಮ ಒಡನಾಟ ಮೂಡುತ್ತದೆ.

ಓಂಕಾರ ಮತ್ತು ಶ್ರೀಕಾರಗಳಿಗೆ ಇರುವೆ ಶಕ್ತಿಯು ಸ್ವಸ್ತಿಕ್ ಚಿಹ್ನೆಗೂ ವೇದಗಳಲ್ಲಿ ಇದೆ. ಈ ಚಿಹ್ನೆಯು ಗಣಪತಿಯನ್ನು ಸೂಚಿಸುತ್ತದೆ. ಯಂತ್ರದಲ್ಲಿ ಓಂಕಾರ, ಶ್ರೀಕಾರ ಮತ್ತು ಸ್ವಸ್ತಿಕ್ ಚಿಹ್ನೆಗಳನ್ನು ಬಳಸುತ್ತಾರೆ. ಓಂಕಾರದಿಂದ ಜನರ ದೃಷ್ಟಿ ಮುಂತಾದವುಗಳಿಂದ ರಕ್ಷಣೆ ದೊರೆಯುತ್ತದೆ ಮತ್ತು ಭಗವಾನ್ ವಿಷ್ಣುವಿನ ಅನುಗ್ರಹವು ದೊರೆಯುತ್ತದೆ. ಶ್ರೀಕಾರದಿಂದ ಮಹಾಲಕ್ಷ್ಮಿಯ ಅನುಗ್ರಹವು ಅಲ್ಲದೆ ದುರ್ಗಾ ಮಾತೆಯಿಂದ ದಂಪತಿಗಳಿಗೆ ರಕ್ಷಣೆಯು ದೊರೆಯುತ್ತದೆ. ಸ್ವಸ್ತಿಕ್ ಚಿಹ್ನೆಯು ಗಣಪತಿಯನ್ನು ಸೂಚಿಸುತ್ತದೆ. ಆದ್ದರಿಂದ ವಾಸ್ತುವಿಗೂ ಈ ಯಂತ್ರವು ಮುಖ್ಯವಾಗುತ್ತದೆ. ಈ ಚಿಹ್ನೆಯನ್ನು ವಾಹನಗಳ ಮೇಲೂ ಬರೆಯುತ್ತಾರೆ. ಈ ಕಾರಣದಿಂದಾಗಿ ದಂಪತಿಗಳಿಗೆ ಎದುರಾಗುವ ಅಡೆ ತಡೆಗಳು ದೂರವಾಗುತ್ತವೆ. ಈ ಕಾರಣದಿಂದಾಗಿ ಕೇವಲ ದಂಪತಿಗಳಿಗೆ ಮಾತ್ರವಲ್ಲದೆ ಇಡೀ ಕುಟುಂಬ ವರ್ಗಕ್ಕೆ ಸಂಪೂರ್ಣ ರಕ್ಷಣೆ ದೊರೆಯುತ್ತದೆ. ಆದ್ದರಿಂದ ಸಾಮಾನ್ಯವಾಗಿ ಈ ಯಂತ್ರವನ್ನು ಪ್ರತಿಯೊಂದು ಮನೆಯಲ್ಲಿಯೂ ಪೂಜಿಸುವುದು ಒಳ್ಳೆಯದು.

ಲಕ್ಷ್ಮೀನಾರಾಯಣ ಯಂತ್ರದ ಪೂಜೆ 

ಈ ಯಂತ್ರವನ್ನು ಮೂರು ಬಗೆಗಳಲ್ಲಿ ರಚಿಸುತ್ತಾರೆ. ಆದರೆ ಪ್ರತಿಯೊಂದು ಯಂತ್ರದಲ್ಲಿಯೂ ವೇದಮಂತ್ರಗಳಿರುತ್ತವೆ. ಆದ್ದರಿಂದ ಯಂತ್ರದ ಬಗ್ಗೆ ತಿಳಿದವರಿಂದ ಇದನ್ನು ಪಡೆಯುವುದು ಒಳ್ಳೆಯದು. ಕೇವಲ ಒಂದು ಅಕ್ಷರದಿಂದ ಅನೇಕ ಬದಲಾವಣೆಗಳು ಕಂಡು ಬರುತ್ತವೆ. ಈ ಯಂತ್ರವನ್ನು ಬುಧವಾರ ಶುಕ್ರವಾರದಂದು ಪೂಜಿಸುವುದು ಒಳ್ಳೆಯದು. ಆದರೆ ಪೂಜೆಯ ನಂತರ ಆತ್ಮೀಯರಿಗೆ ಹಣ್ಣು ಮತ್ತು ನಿಂಬೆ ಹಣ್ಣಿನಿಂದ ತಯಾರಿಸಿದ ಶರಬತ್ತನ್ನು ನೀಡಬೇಕು. ಅನುಕೂಲವಿದ್ದಲ್ಲಿ ವಸ್ತ್ರದಾನದಿಂದಲೂ ಹೆಚ್ಚಿನ ಫಲಗಳು ದೊರೆಯುತ್ತವೆ. ಇದರೊಂದಿಗೆ ಪ್ರತಿ ದಿನವು ಶ್ರೀ ವಿಷ್ಣುಸಹಸ್ರನಾಮ ಮತ್ತು ಹರಿವಂಶದ ಪಾರಾಯಣೆಯಿಂದ ಹೆಚ್ಚಿನ ಶುಭಫಲಗಳು ದೊರೆಯುತ್ತವೆ.

HT Kannada Desk

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.