ಶ್ರೀ ಮಹಾಮೃತ್ಯುಂಜಯ ಯಂತ್ರದ ಮಹತ್ವ, ಪ್ರಯೋಜನಗಳೇನು, ಇದನ್ನು ಪೂಜಿಸುವ ಕ್ರಮ ಹೇಗೆ; ಇಲ್ಲಿದೆ ವಿವರ
ಶ್ರೀ ಮಹಾಮೃತ್ಯುಂಜಯ ಯಂತ್ರವನ್ನು ಸ್ಥಾಪಿಸಿದ ನಂತರದ ಸೋಮವಾರಗಳಂದು ಮರೆಯದೇ ಯಂತ್ರವನ್ನು ಪೂಜಿಸಬೇಕು. ಮೂರು ಅಮಾವಾಸ್ಯೆಗಳಂದು ಮೆನೆಯ ಸುತ್ತಮುತ್ತಲಿರುವ ಶಿವನ ದೇಗುಲಕ್ಕೆ ಬಿಲ್ವಪತ್ರೆಯನ್ನು ನೀಡಿ, ಬಿಲ್ವಾಷ್ಟಕದಿಂದ ಪೂಜೆ ಮಾಡಿಸಬೇಕು. (ಬರಹ: ಸತೀಶ್ ಎಚ್., ಜ್ಯೋತಿಷಿ)

ಶ್ರೀ ಮಹಾಮೃತ್ಯುಂಜಯ ಮಂತ್ರಕ್ಕೆ ವಿಶೇಷವಾದ ಶಕ್ತಿ ಇದೆ. ಈ ಮಂತ್ರದ ಸಹಾಯದಿಂದ ರಚಿಸಿದ ಯಂತ್ರವು ಉತ್ತಮ ಫಲಗಳನ್ನು ಮಾತ್ರವಲ್ಲದೆ ನಿತ್ಯಜೀವನದಲ್ಲಿ ಮಹತ್ತರ ಬದಲಾವಣೆಗಳನ್ನು ಸಹ ನೀಡುತ್ತದೆ. ಈ ಯಂತ್ರದ ಬಿಂದು ಅಥವಾ ಕೇಂದ್ರಭಾಗದಲ್ಲಿ ‘ಓಂ‘ಕಾರ ಇರುತ್ತದೆ. ಶ್ರೀ ಪರಮೇಶ್ವರನಿಗೆ ಇಷ್ಟವಾದ ಮಂತ್ರವಾಗಿದೆ. ಇದರ ಪರಮಾರ್ಥವನ್ನು ತಿಳಿಸಲು ಸಾಕ್ಷಾತ್ ಬ್ರಹ್ಮದೇವನಿಗೆ ಸಾಧ್ಯವಾಗುವುದಿಲ್ಲ. ಆ ಸಂದರ್ಭದಲ್ಲಿ ಶ್ರೀಸುಬ್ರಹ್ಮಣ್ಯಸ್ವಾಮಿಯು ಪರಮೇಶ್ವರನಿಗೆ ತಿಳಿಸುತ್ತಾನೆ. ಓಂಕಾರದಲ್ಲಿ ಸಕಲ ಲೋಕಗಳ ವಿಚಾರಗಳು ಇದರಲ್ಲಿ ಅಡಕವಾಗಿವೆ. ಇದರ ನಂತರ ಪಂಚಭುಜಾಕೃತಿ ಇರುತ್ತದೆ. ಇದು ಪಂಚ ದಾತು ಮತ್ತು ಪಂಚಭೂತಗಳನ್ನು ಸೂಚಿಸುತ್ತದೆ. ಈ ಯಂತ್ರವು ಋಷಿಮುನಿಗಳಿಂದ ಬಳುವಳಿಯಾಗಿ ಜೋತಿಷ್ಯ ವಿದ್ವಾಂಸರಿಗೆ ದೊರೆತ ಕಾಣಿಕೆಯಾಗಿದೆ. ಪಂಚ ದಾತುಗಳಿಂದ ರಕ್ಷಣೆ ದೊರೆತರೆ, ಪಂಭೂತಗಳಿಂದ ಉಂಟಾಗಬಹುದಾದ ಆಪತ್ತಿನಿಂದ ಪಾರಾಗಲು ಸಾಧ್ಯವಾಗುತ್ತದೆ. ಈ ಪಂಚಭುಜಾಕೃತಿಯ ಅಂಚಿನಲ್ಲಿ ಓಂ ನಮಃ ಶಿವಾಯ ಎಂಬ ಮಂತ್ರವನ್ನು ಬರೆಯಲಾಗುತ್ತದೆ. ಚಿಕ್ಕದಾದರೂ ಈ ಮಂತ್ರದಲ್ಲಿ ಅಗಾದ ಶಕ್ತಿಯೇ ತುಂಬಿದೆ. ಯಮರಾಜನನ್ನು ಶಿವನ ಭಕ್ತರು ಈ ಮಂತ್ರವನ್ನು ಪಠಿಸಿ ಸಾವನ್ನೇ ಗೆದ್ದಿರುವ ಅನೇಕ ಕತೆಗಳು ಪುರಾಣದಲ್ಲಿ ನಮಗೆ ದೊರೆಯುತ್ತವೆ.
ಶ್ರೀ ಮಹಾಮೃತ್ಯುಂಜಯ ಯಂತ್ರದ ಪ್ರಯೋಜನ
ಈ ಯಂತ್ರದಲ್ಲಿ ಅಷ್ಟದಳದ ಪದ್ಮವು ಕಂಡುಬರುತ್ತದೆ. ಕೆಲವರ ನಂಬಿಕೆಯ ಪ್ರಕಾರ ಇದು ಅಷ್ಟದಿಕ್ಪಾಲಕರನ್ನು ಸೂಚಿಸುತ್ತದೆ. ಇದರ ಪ್ರಕಾರ ಈ ಯಂತ್ರವನ್ನು ಪೂಜಿಸಿದಲ್ಲಿ ಯವುದೇ ಮನೆಯ ವಾಸ್ತುವಿನಲ್ಲಿ ದೋಷವಿದ್ದಲ್ಲಿ ಪರಿಹಾರ ದೊರೆಯುತ್ತದೆ. ಮನದಲ್ಲಿ ಇರುವ ದುಗುಡವೂ ದೂರವಾಗುತ್ತದೆ. ಮೂರು ವೃತ್ತಾಕಾರದ ರೇಖೆಗಳು ತ್ರಿದೋಷಗಳನ್ನು ನಮ್ಮಿಂದ ದೂರಮಾಡುತ್ತದೆ. ಈ ಯಂತ್ರದ ಪೂಜೆಯಿಂದ ತೊಂದರೆಗಳಿಗೆ ಪರಿಹಾರ ದೊರೆಯುವುದಲ್ಲದೆ, ಎಲ್ಲಾ ರೀತಿಯ ಕಷ್ಟ ನಷ್ಟಗಳಿಂದ ಕಾಪಾಡುತ್ತದೆ. ಉತ್ತಮ ಆರೋಗ್ಯ ಮತ್ತು ದೀರ್ಘಾಯಸ್ಸನ್ನು ಗಳಿಸಲು ಈ ಯಂತ್ರವು ಸಹಕಾರಿಯಾಗುತ್ತದೆ. ದೋಷವಿಲ್ಲದ ಮಹಾಮೃತ್ಯುಂಜಯ ಯಂತ್ರವನ್ನು ಪೂರ್ಣಜ್ಞಾನ ಉಳ್ಳವರಿಂದ ಪರೀಕ್ಷೆಗೆ ಒಳಪಡಿಸಿ ಅನಂತರ ದಿನನಿತ್ಯ ಬಳಸುವ ಕೈಚೀಲದಲ್ಲಿ ಇರಿಸಬಹುದು. ಕುತ್ತಿಗೆಯಲ್ಲಿಯೂ ಧರಿಸಬಹುದು. ಆದರೆ ಪೂಜಾಗೃಹದಲ್ಲಿ ಇರಿಸಿ ಪ್ರತಿನಿತ್ಯ ಪೂಜಿಸುವುದು ಒಳ್ಳೆಯದು. ಇದನ್ನು ಕತ್ತಿನಲ್ಲಿ ಧರಿಸಿದಲ್ಲಿ ಮಾಡಿದ ಪಾಪಗಳಿಂದ ಮುಕ್ತಿಯನ್ನು ಪಡೆಯಬಹುದು. ಇದರಿಂದ ಅಪಘಾತಗಳಿಂದ ಪಾರಾಗಬಹುದು. ಪೂಜಾಗೃಹದಲ್ಲಿರಿಸಿ ಪೂಜಿಸಿದಲ್ಲಿ ಮನೆಯ ಸದಸ್ಯರನ್ನು ಅಪಮೃತ್ಯುವಿನಿಂದ ಪಾರುಮಾಡುತ್ತದೆ. ವಿರೋಧಿಗಳ ಉಪಟಳದಿಂದ ಪಾರಾಗಬಹುದು.
ಮಹಾಮೃತ್ಯುಂಜಯ ಯಂತ್ರವನ್ನು ವೇದಮಂತ್ರಗಳಿಂದ ಪೂಜಿಸುವುದು ಬಲುಮುಖ್ಯ. ಇದರಿಂದ ಉದ್ದೇಶಿತ ಫಲಿತಾಂಶಗಳನ್ನು ಪಡೆಯಬಹುದು. ಮಹಾಮೃತ್ಯುಂಜಯ ಶಿವನ ಒಂದು ಹೆಸರಾಗಿದೆ. ಈ ಪದದ ಅರ್ಥವು ಮರಣವನ್ನು ಗೆದ್ದವನು ಎಂದಾಗುತ್ತದೆ. ಅಂದರೆ ಈ ಯಂತ್ರದ ಆರಾದನೆಯಿಂದ ಅಸಹಜ ಸಾವನ್ನು ಗೆಲ್ಲಬಹುದಾಗಿದೆ. ದಿನ ನಿತ್ಯದ ಕೆಲಸ ಕಾರ್ಯಗಳಲ್ಲಿ ಎದುರಾಗುವ ವಿವಿಧ ರೀತಿಯ ಅಡೆತಡೆಗಳಿಂದ ಪಾರಾಗಲು ಈ ಯಂತ್ರಸಾಧನೆಯ ಅಗತ್ಯವಿದೆ. ವಿವಾಹದ ವೇಳೆಯಲ್ಲಿಯೂ ಜಾತಕ ಹೊಂದಾಣಿಕೆಯಲ್ಲಿ ಯಾವುದೆ ದೋಷವು ಕಂಡುಬಂದಲ್ಲಿ ಶ್ರೀ ಮಹಾಮೃತ್ಯುಂಜಯ ಯಂತ್ರದ ಪೂಜೆಯಿಂದ ದೂರವಾಗುತ್ತದೆ. ಪ್ರತಿಯೊಂದು ಮನೆ, ವ್ಯಾಪಾರಸ್ಥಳ, ಶಾಲಾ ಕಾಲೇಜುಗಳಲ್ಲಿ ಈ ಯಂತ್ರವನ್ನು ಸ್ಥಾಪಿಸುವುದು ಅತ್ಯವಶ್ಯಕ. ಆದರೆ ದೋಷರಹಿತ ಯಂತ್ರವಾದಷ್ಟೂ ಅನುಕೂಲಕರ.
ಶ್ರೀ ಮಹಾಮೃತ್ಯುಂಜಯ ಯಂತ್ರ ಪೂಜಾ ಕ್ರಮ
ಮೊದಲ ಬಾರಿ ಈ ಯಂತ್ರವನ್ನು ಸೋಮವಾರ ಅಥವ ಭಾನುವಾರ ಸ್ಥಾಪಿಸುವುದು ಒಳ್ಳೆಯದು. ಶುದ್ಧ ತ್ರಯೋದಶಿಯ ದಿನದಂದು ವಿಶೇಷವಾದ ಫಲಗಳು ದೊರೆಯುತ್ತವೆ. ಯಂತ್ರವನ್ನು ಸ್ಥಾಪಿಸಿದ ನಂತರದ ಸೋಮವಾರಗಳಂದು ಮರೆಯದೇ ಯಂತ್ರವನ್ನು ಪೂಜಿಸಬೇಕು. ಮೂರು ಅಮಾವಾಸ್ಯೆಗಳಂದು ಮೆನೆಯ ಸುತ್ತಮುತ್ತಲಿರುವ ಶಿವನ ದೇಗುಲಕ್ಕೆ ಬಿಲ್ವಪತ್ರೆಯನ್ನು ನೀಡಿ, ಬಿಲ್ವಾಷ್ಟಕದಿಂದ ಪೂಜೆ ಮಾಡಿಸಬೇಕು. ಯಂತ್ರವಿರುವ ಮನೆಯಲ್ಲಿ ಪ್ರತಿದಿನ ಕನಿಷ್ಠ ಪಕ್ಷ 48 ಬಾರಿ ಶಿವ ಪಂಚಾಕ್ಷರಿ ಮಂತ್ರವನ್ನು ಮತ್ತು 18 ಬಾರಿ ಮಹಾಮೃತ್ಯುಂಜಯ ಮಂತ್ರವನ್ನು ಜಪಿಸಬೇಕು.
