Vastu Tips: ಮನೆಯಲ್ಲಿ ಎಂದಿಗೂ ಈ ತಪ್ಪುಗಳನ್ನು ಮಾಡಬಾರದು, ನೆಮ್ಮದಿ ಕೆಡೋದು ಖಂಡಿತ; ಕೌಟುಂಬಿಕ ಸಂತೋಷಕ್ಕೆ ವಾಸ್ತು ನಿಯಮಗಳು
ವಾಸ್ತು ನಿಯಮಗಳ ಪ್ರಕಾರ ಮನೆಯಲ್ಲಿ ನಾವು ಮಾಡುವ ಈ ಕೆಲವು ತಪ್ಪುಗಳು ಕೌಟುಂಬಿಕ ಸಮಸ್ಯೆಗಳು ಹಾಗೂ ನೆಮ್ಮದಿ ಕೆಡಲು ಕಾರಣವಾಗಬಹುದು. ಹಾಗಾದರೆ ಮನೆಯಲ್ಲಿ ಯಾವ ತಪ್ಪು ಮಾಡಬಾರದು ನೋಡಿ. (ಬರಹ: ಸತೀಶ್ ಎಚ್. ಜ್ಯೋತಿಷಿ)

ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಬಾರಿ ಕಷ್ಟ ನಷ್ಟಗಳು ಬಂದೇ ಬರುತ್ತದೆ. ಕುಟುಂಬ ಸದಸ್ಯರು ಸಮಸ್ಯೆಗೆ ಸಿಲುಕಿದಾಗ ಉಳಿದ ಸದಸ್ಯರು ಸಹಾಯ ಮಾಡುವುದು ಸಹಜ. ಆದರೆ ಕೆಲವೊಮ್ಮೆ ಕುಟುಂಬದ ಎಲ್ಲರೂ ತೊಂದರೆಗೆ ಸಿಲುಕುತ್ತಾರೆ. ಇಂತಹ ಸಂದರ್ಭದಲ್ಲಿ ವಾಸ್ತುವಿನ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದು. ಕೆಲವೊಂದು ವಿಶೇಷ ಪೂಜೆಗಳಿಂದಲೂ ಶುಭಫಲಗಳನ್ನು ಪಡೆಯಬಹುದು. ಧಾರ್ಮಿಕ ವಿಧಿವಿಧಾನಗಳು ನಮ್ಮ ನೆರವಿಗೆ ಬರುತ್ತದೆ. ಮನೆಯ ನೆಮ್ಮದಿ ಕೆಡಿಸುವ, ಕುಟುಂಬದ ತೊಂದರೆಗೆ ಕಾರಣವಾಗುವ ವಿಚಾರದಲ್ಲಿ ಸಾಮಾನ್ಯವಾಗಿ ನಾವು ಮಾಡುವ ತಪ್ಪುಗಳು ಮತ್ತು ಸೂಕ್ತ ಪರಿಹಾರಗಳನ್ನು ತಿಳಿಯೋಣ.
ಮನೆಯಲ್ಲಿ ನಮ್ಮ ಹೆಬ್ಬೆರಳಿಗಿಂತಲೂ ಹೆಚ್ಚಿನ ಗಾತ್ರದ ದೇವರ ವಿಗ್ರಹಗಳಿದ್ದರೆ, ವಾರಕ್ಕೆ ಎರಡು ದಿನವಾದರೂ ಪೂಜೆಯನ್ನು ಸಲ್ಲಿಸಬೇಕು. ಇಲ್ಲದೆ ಹೋದಲ್ಲಿ ಕುಟುಂಬವನ್ನು ನಿರ್ವಹಿಸಲು ಅಗತ್ಯ ಇರುವಷ್ಟು ಆದಾಯ ದೊರೆಯುವುದಿಲ್ಲ. ಆದ್ದರಿಂದ ಮನೆಯಲ್ಲಿನ ದೇವರಿಗೆ ಪೂಜೆ ಸಲ್ಲಿಸುವುದು ಬಹುಮುಖ್ಯ.
ವಯಸ್ಸಾದವರನ್ನ ಎಂದಿಗೂ ಉಪವಾಸ ತಳ್ಳದಿರಿ
ಕುಟುಂಬದಲ್ಲಿರುವ ವಯೋವೃದ್ದರು ರಾತ್ರಿಯ ವೇಳೆಯಲ್ಲಿ ಉಪವಾಸ ಮಲಗಬಾರದು. ಭಗವಾನ್ ಶ್ರೀಕೃಷ್ಣನೇ ಉಪವಾಸ ಮಾಡಲು ಸಾಧ್ಯವಾಗದೇ ಇರುವವರು ಭೋಜನ ಸ್ವೀಕರಿಸುವುದೇ ನನಗೆ ಪ್ರಿಯವಾಗುತ್ತದೆ ಎಂದು ಬೋಧಿಸಿದ್ದಾನೆ. ಇದರಿಂದ ಕುಟುಂಬದಲ್ಲಿನ ಜನರಿಗೆ ಅನಾರೋಗ್ಯ ಉಂಟಾಗುತ್ತದೆ. ಇದು ಶ್ರೇಯಸ್ಕರವಲ್ಲ.
ಕುಟುಂಬದ ಹಿರಿಯರು ಧರಿಸಿದ ಬಟ್ಟೆಯನ್ನು ಧರಿಸುವುದು ಶ್ರೇಯಸ್ಕರ. ಆದರೆ ಹರಿದು ಉಳಿದ ಬಟ್ಟೆಯಲ್ಲಿ ಮಕ್ಕಳಿಗೆ ಬಟ್ಟೆಯನ್ನು ಹೊಲಿಸುವುದು ಒಳ್ಳೆಯದಲ್ಲ. ಚಿಕ್ಕಮಕ್ಕಳು ಧರಿಸುತ್ತಿದ್ದ ಬಟ್ಟೆಯನ್ನು ಮನೆಯರ ಹಿರಿಯ ಸದಸ್ಯರು ಧರಿಸಬಾರದು. ಇದರಿಂದ ಕುಟುಂಬದಲ್ಲಿನ ಆರ್ಥಿಕ ಪರಿಸ್ಥಿತಿಯಲ್ಲಿ ತೊಂದರೆ ಕಂಡುಬರುವುದಿಲ್ಲ.
ದೇವರ ಕೋಣೆಯ ಬಾಗಿಲು ಮುಚ್ಚದಿರಿ
ದೇವರ ಕೋಣೆಯು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಇರುತ್ತದೆ. ಕೇವಲ ಪೂಜೆಯ ಸಮಯದಲ್ಲಿ ತೆರೆದು ಉಳಿದ ವೇಳೆ ದೇವರ ಕೋಣೆಯ ಬಾಗಿಲನ್ನು ಮುಚ್ಚಿರುತ್ತಾರೆ. ಇದರಿಂದ ಮನೆಯಲ್ಲಿನ ಧನಾತ್ಮಕ ಶಕ್ತಿಯು ಕಡಿಮೆಯಾಗುತ್ತದೆ. ದೇವರ ಕೋಣೆಯಲ್ಲಿ ಬಣ್ಣ ಬಣ್ಣದ ವಿದ್ಯುತ್ ದೀಪಗಳನ್ನು ಬೆಳಗಿಸಿದರೂ ಕುಟುಂಬದಲ್ಲಿ ತೊಂದರೆ ಬಹುಕಾಲ ಉಳಿಯುತ್ತದೆ.
ಮನೆಯೊಳಗೆ ಮುಳ್ಳಿನ ಗಿಡ ಇರಿಸಬೇಡಿ
ಕೆಲವರು ಅಲಂಕಾರಕ್ಕಾಗಿ ಮುಳ್ಳಿನ ಗಿಡಗಳನ್ನು ಮನೆಯ ಒಳಗೆ ಇಟ್ಟಿರುತ್ತಾರೆ. ಇಂತಹ ಗಿಡಗಳು ಉತ್ತರ ದಿಕ್ಕಿನಲ್ಲಿ ಇದ್ದಲ್ಲಿ ಕುಟುಂಬದ ಹಿರಿಯರ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಈ ಕಾರಣದಿಂದಾಗಿ ಅತಿ ಮುಖ್ಯವಾದ ವಿಚಾರದಲ್ಲಿ ತಪ್ಪಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇದರಿಂದ ಕುಟುಂಬದ ತೊಂದರೆಯು ಮಿತಿ ಮೀರುತ್ತದೆ. ಮುಳ್ಳಿನ ಗಿಡಗಳನ್ನು ಮನೆಯ ಮುಂಬಾಗಿಲಿನಲ್ಲಿಯೂ ಇಡಬಾರದು. ಆಹಾರ ತಯಾರಿಸುವ ವೇಳೆಯಲ್ಲಿ ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸಿರಬೇಕು. ಅನಾವಶ್ಯಕವಾದ ಕೆಟ್ಟ ಮಾತುಗಳಿಂದ ದೂರ ಉಳಿಯಬೇಕು.
ನಮ್ಮ ಸುತ್ತಮುತ್ತಲಿನ ಪ್ರಾಣಿಗಳಿಗೆ ವೇದ ಜೋತಿಷ್ಯದಲ್ಲಿ ವಿಶೇಷವಾದ ಸ್ಥಾನವಿದೆ. ಉದಾಹರಣೆ ಹಸುವನ್ನು ಕಾಮದೇನು ಎಂದು ಪೂಜಿಸುತ್ತೇವೆ. ಕಪ್ಪು ಬಿಳಿ ಮಿಶ್ರಿತ ಬಣ್ಣದ ನಾಯಿಗೆ ಆಹಾರ ನೀಡಿದಲ್ಲಿ ಕೇತುವಿನ ಶಾಂತಿ ಆಗುತ್ತದೆ. ಕಪ್ಪುಬಣ್ಣದ ಹಸುವಿಗೆ ಆಹಾರ ನೀಡಿದಲ್ಲಿ ಶುಕ್ರನ ಶಾಂತಿ ಆಗುತ್ತದೆ. ಆದ್ದರಿಂದ ಮನೆಯಲ್ಲಿ ಸಾಕಿರುವ ಪ್ರಾಣಿಗಳನ್ನು ಪ್ರೀತಿಯಿಂದ ಕಾಣಬೇಕು. ಉತ್ತಮ ಆಹಾರ ನೀಡಬೇಕು. ಇಲ್ಲದ ಪಕ್ಷದಲ್ಲಿ ಕುಟುಂಬದಲ್ಲಿ ಶಾಂತಿ ನೆಮ್ಮದಿ ಇರುವುದಿಲ್ಲ. ಅಗೋಚರ ರೀತಿಯ ತೊಂದರೆಗಳು ಸದಾಕಾಲ ಇರುತ್ತವೆ.
ದೇವರಿಗೆ ಕೆಲವರು ಹೂವಿನಿಂದ ಪೂಜೆ ಮಾಡುತ್ತಾರೆ. ಇನ್ನೂ ಕೆಲವರು ಕೇವಲ ಆರತಿಯನ್ನು ಬೆಳಗಿ ಸುಮ್ಮನಾಗುತ್ತಾರೆ. ಇದರಿಂದ ಕುಟುಂಬದ ಸಮಸ್ಯೆಗಳು ಬಗೆ ಹರಿಯಲಾರವು. ದೇವರಿಗೆ ಅರಿಸಿನ, ಕುಂಕುಮ, ಅಕ್ಷತೆ (ನೀರಿನಿಂದ ಕಲೆಸಬಾರದು), ಊದಿನಕಡ್ಡಿ ಬೆಳಗಬೇಕು. ಕಾಯಿಸದ ಹಾಲು ಅಥವ ಕಲ್ಲು ಸಕ್ಕರೆಯನ್ನಾದರೂ ದೇವರಿಗೆ ನೇವೇದ್ಯವನ್ನಾಗಿ ಅರ್ಪಿಸಬೇಕು. ಆನಂತರವಷ್ಟೇ ಆರತಿ ಬೆಳಗಬೇಕು. ಇದರಿಂದ ಶುಭಫಲಗಳು ದೊರೆಯುತ್ತವೆ.
ವಾಹನದ ವಿಚಾರದಲ್ಲಿ ಈ ತಪ್ಪು ಮಾಡದಿರಿ
ನಮ್ಮ ಅವಶ್ಯಕತೆಗೆ ಬಳಸುವ ವಾಹನವು ಚಂದ್ರ ಮತ್ತು ಶನಿಗ್ರಹಗಳ ಸಂಯೋಗವನ್ನು ತೋರಿಸುತ್ತದೆ. ಆದ್ದರಿಂದ ವಾಹನಗಳ ಮೇಲೆ ಒದ್ದೆ ಬಟ್ಟೆಯನ್ನು ಒಣಗಿ ಹಾಕಬಾರದು. ಇದರಿಂದ ಕುಟುಂಬದ ಖರ್ಚುವೆಚ್ಚಗಳು ಹೆಚ್ಚುತ್ತವೆ. ಮನೆಯಲ್ಲಿನ ಐಕ್ಯತೆಗೆ ಧಕ್ಕೆ ಬರುತ್ತದೆ. ಒಟ್ಟಾರೆ ಕುಟುಂಬಕ್ಕೆ ಬಗೆಹರಿಯದ ಕಷ್ಟ ಕಾರ್ಪಣ್ಯಗಳು ಆರಂಭವಾಗುತ್ತವೆ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

ವಿಭಾಗ