ಧರ್ಮ, ಕರ್ಮ ಮತ್ತು ಜೀವನದ ಸಾರ ಭಗವದ್ಗೀತೆಯ‌ ಈ ಮೂರು ಶ್ಲೋಕಗಳಲ್ಲಿದೆ: ಶ್ರೀಕೃಷ್ಣನ ಉಪದೇಶಗಳ ಅರ್ಥ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಧರ್ಮ, ಕರ್ಮ ಮತ್ತು ಜೀವನದ ಸಾರ ಭಗವದ್ಗೀತೆಯ‌ ಈ ಮೂರು ಶ್ಲೋಕಗಳಲ್ಲಿದೆ: ಶ್ರೀಕೃಷ್ಣನ ಉಪದೇಶಗಳ ಅರ್ಥ ತಿಳಿಯಿರಿ

ಧರ್ಮ, ಕರ್ಮ ಮತ್ತು ಜೀವನದ ಸಾರ ಭಗವದ್ಗೀತೆಯ‌ ಈ ಮೂರು ಶ್ಲೋಕಗಳಲ್ಲಿದೆ: ಶ್ರೀಕೃಷ್ಣನ ಉಪದೇಶಗಳ ಅರ್ಥ ತಿಳಿಯಿರಿ

ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಅರ್ಜುನನು ತನ್ನ ಎಲ್ಲಾ ಅಸ್ತ್ರಗಳನ್ನು ತ್ಯಜಿಸಿ ಸೋಲನ್ನು ಒಪ್ಪಿಕೊಳ್ಳಲು ಮುಂದಾಗುತ್ತಾನೆ. ಆಗ ಭಗವಾನ್‌ ಶ್ರೀಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು ಬೋಧಿಸುತ್ತಾನೆ. ಅರ್ಜುನನ್ನು ಮತ್ತೆ ಯುದ್ಧ ಮಾಡಲು ಸಜ್ಜುಗೊಳಿಸುತ್ತಾನೆ.

ಧರ್ಮ, ಕರ್ಮ ಮತ್ತು ಜೀವನದ ಸಾರ ಭಗವದ್ಗೀತೆಯ‌ ಈ ಮೂರು ಶ್ಲೋಕಗಳಲ್ಲಿದೆ: ಶ್ರೀಕೃಷ್ಣನ ಉಪದೇಶಗಳ ಅರ್ಥ ತಿಳಿಯಿರಿ
ಧರ್ಮ, ಕರ್ಮ ಮತ್ತು ಜೀವನದ ಸಾರ ಭಗವದ್ಗೀತೆಯ‌ ಈ ಮೂರು ಶ್ಲೋಕಗಳಲ್ಲಿದೆ: ಶ್ರೀಕೃಷ್ಣನ ಉಪದೇಶಗಳ ಅರ್ಥ ತಿಳಿಯಿರಿ (PC: HT File Photo)

ಕೃಷ್ಣಾವತಾರವು ಶ್ರೀ ವಿಷ್ಣುವಿನ ಎಂಟನೇ ಅವತಾರವಾಗಿದೆ. ಅಧರ್ಮವನ್ನು ನಾಶಪಡಿಸಲು ಮತ್ತು ಧರ್ಮವನ್ನು ಸ್ಥಾಪಿಸಲು ಸಾಕ್ಷಾತ್‌ ಮಹಾ ವಿಷ್ಣುವೇ ಶ್ರೀಕೃಷ್ಣನಾಗಿ ಭೂಮಿಯ ಮೇಲೆ ಅವತರಿಸಿದನು. ಭಗವದ್ಗೀತೆಯ ಉಪದೇಶವು ಶ್ರೀಕೃಷ್ಣನಿಗೆ ಸಂಬಂಧಿಸಿದ ಕಥೆಗಳ ಪ್ರಮುಖ ಭಾಗವೆಂದು ಪರಿಗಣಿಸಲಾಗಿದೆ. ಪ್ರಪಂಚದ ಎಲ್ಲ ಪ್ರಶ್ನೆಗಳಿಗೂ ಉತ್ತರದ ರೂಪದಲ್ಲಿ ಗೀತೆಯು ಕಂಡುಬರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಸನ್ಮಾರ್ಗದಲ್ಲಿ ನಡೆಯಲು ಭಗವದ್ಗೀತೆಯನ್ನು ಪಠಿಸಬೇಕು. ಕುರಕ್ಷೇತ್ರದ ಯುದ್ಧಭೂಮಿಯಲ್ಲಿ ಅರ್ಜುನನು ತನ್ನ ಎಲ್ಲಾ ಅಸ್ತ್ರಗಳನ್ನು ತ್ಯಜಿಸಿ ಸೋಲನ್ನು ಒಪ್ಪಿಕೊಳ್ಳಲು ಮುಂದಾಗುತ್ತಾನೆ. ಆಗ ಶ್ರೀಕೃಷ್ಣನು ಅರ್ಜುನನಿಗೆ ಗೀತಾ ಜ್ಞಾನವನ್ನು ನೀಡಿದನು. ಅಷ್ಟೇ ಅಲ್ಲದೆ ಅರ್ಜುನನ ಗೊಂದಲವನ್ನು ದೂರಮಾಡಲು ಶ್ರೀಕೃಷ್ಣನು ತನ್ನ ದಿವ್ಯವಾದ ವಿಶ್ವರೂಪವನ್ನು ತೋರಿಸಿದನು. ಈ ಜಗತ್ತಿನ ಪ್ರತಿಯೊಂದು ಜೀವಿಯು ತನ್ನಿಂದಲೇ ಹುಟ್ಟಿ ತನ್ನೊಳಗೆ ಬಂದು ಸೇರುತ್ತದೆ ಎಂದು ತೋರಿಸಿದನು. ಮತ್ತೆ ಯುದ್ಧಕ್ಕೆ ಸಜ್ಜುಗೊಳಿಸಿದನು. ಶ್ರೀಕೃಷ್ಣನು ಈ ಮೂರು ಶ್ಲೋಕಗಳ ಮೂಲಕ ತಾನು ಯಾರು ಮತ್ತು ಈ ಅವತಾರಕ್ಕೆ ಕಾರಣವೇನು ಎಂದು ಅರ್ಜುನನಿಗೆ ಬೋಧಿಸಿದನು.

ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ |

ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಶ್ರೀಜಾಮ್ಯಮ್‌ ||

ಈ ಶ್ಲೋಕದಲ್ಲಿ, ಶ್ರೀ ಕೃಷ್ಣನು ಧರ್ಮಕ್ಕೆ ಹಾನಿಯಾದಾಗ, ಅಧರ್ಮವು ಹೆಚ್ಚಾದಾಗ, ಭೂಮಿಯಿಂದ ದುಷ್ಟಶಕ್ತಿಗಳನ್ನು ತೊಡೆದುಹಾಕಲು ಮತ್ತು ಧರ್ಮವನ್ನು ಪುನಃ ಸ್ಥಾಪಿಸಲು ನಾನು ಮತ್ತೆ ಮತ್ತೆ ಭೂಮಿಗೆ ಬರುತ್ತೇನೆ ಎಂದು ಹೇಳುತ್ತಾನೆ. ನಾನು ಭೂಮಿಯ ಮೇಲೆ ಅವತರಿಸುತ್ತಲೇ ಇರುತ್ತೇನೆ. ಪ್ರತಿ ಯುಗದಲ್ಲಿ ಧರ್ಮವನ್ನು ಅಧರ್ಮದಿಂದ ರಕ್ಷಿಸುವುದು ಮತ್ತು ಜನರನ್ನು ರಕ್ಷಿಸುವುದು ಮತ್ತು ಧರ್ಮವನ್ನು ಪುನಃಸ್ಥಾಪಿಸುವುದು ನನ್ನ ಕರ್ತವ್ಯವಾಗಿದೆ ಎಂದು ಹೇಳಿದ್ದಾನೆ.

ಕರ್ಮಣ್ಯೆವಾದಿಕಾರಸ್ತೆ ಮಾ ಫಲೇಷು ಕದಾಚನ |

ಮಾಂ ಕರ್ಮಫಲಹೇತುರ್ಭುರ್ಮಾ ತೇ ಸಂಗೋಸ್ತವಕರ್ಮಣಿ ||

ಈ ಶ್ಲೋಕದಲ್ಲಿ, ಶ್ರೀ ಕೃಷ್ಣನು ನಮ್ಮ ಕರ್ತವ್ಯವನ್ನು ಮಾಡಲು ನಮಗೆ ಹಕ್ಕಿದೆ ಎಂದು ಹೇಳುತ್ತಾನೆ. ಆದರೆ ಫಲಿತಾಂಶಗಳು ನಮ್ಮ ಪ್ರಯತ್ನಗಳ ಮೇಲೆ ಮಾತ್ರ ಅವಲಂಬಿತವಾಗಿರುವುದಿಲ್ಲ. ಫಲಿತಾಂಶವನ್ನು ನಿರ್ಧರಿಸುವಲ್ಲಿ ಅನೇಕ ಅಂಶಗಳು ಪಾತ್ರವಹಿಸುತ್ತವೆ. ಉದಾಹರಣೆಗೆ, ನಮ್ಮ ಪ್ರಯತ್ನಗಳು, ಅದೃಷ್ಟ, ದೇವರು, ಇತರರ ಪ್ರಯತ್ನಗಳು, ನಮ್ಮ ಸುತ್ತಲಿನ ಜನರು, ಸ್ಥಳ ಮತ್ತು ಸಂದರ್ಭಗಳು ಇತ್ಯಾದಿ. ಈ ಶ್ಲೋಕದಲ್ಲಿ, ಶ್ರೀಕೃಷ್ಣನು ಅರ್ಜುನನಿಗೆ ಫಲಿತಾಂಶಗಳ ಬಗ್ಗೆ ಚಿಂತಿಸುವುದನ್ನು ನಿಲ್ಲಿಸಬೇಕು ಮತ್ತು ಒಳ್ಳೆಯ ಕಾರ್ಯಗಳನ್ನು ಮಾಡುವುದರ ಮೇಲೆ ಮಾತ್ರ ಗಮನಹರಿಸಬೇಕೆಂದು ವಿವರಿಸುತ್ತಾನೆ. ಫಲಿತಾಂಶಗಳ ಬಗ್ಗೆ ಚಿಂತಿಸದಿದ್ದಾಗ, ನಾವು ನಮ್ಮ ಪ್ರಯತ್ನಗಳ ಮೇಲೆ ಸಂಪೂರ್ಣವಾಗಿ ಗಮನಹರಿಸಬಹುದು ಮತ್ತು ಮೊದಲಿಗಿಂತ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು ಎಂದು ಹೇಳಿದ್ದಾನೆ.

ರಸೋಹಂಪಸು ಕೌಂತೇಯ ಪ್ರಭಾಸ್ಮಿ ಶಶಿಸೂರ್ಯೋಹ |

ಪ್ರಣವಃ ಸರ್ವವೇದೇಷು ಶಬ್ದಃ ಖೇ ಪೌರುಷಃ ನೃಶು ||

ಈ ಶ್ಲೋಕದಲ್ಲಿ ಕೃಷ್ಣನು ಅರ್ಜುನನಿಗೆ, ಜಗತ್ತಿನ ಎಲ್ಲಾ ಶಕ್ತಿಯ ಮೂಲಗಳಲ್ಲಿ ನಾನಿದ್ದೇನೆ ಎಂದು ವಿವರಿಸುತ್ತಾನೆ. ಹೇ, ಕುಂತಿಯ ಪುತ್ರನೇ, ಸೂರ್ಯ ಮತ್ತು ಚಂದ್ರರು ನನ್ನಿಂದ ತಮ್ಮ ಪ್ರಕಾಶವನ್ನು ಪಡೆದಿದ್ದಾರೆ. ನಾನು ವೇದ ಮಂತ್ರಗಳಲ್ಲಿ ಪವಿತ್ರ ಅಕ್ಷರವಾದ ಓಂಕಾರವಾಗಿದ್ದೇನೆ, ನಾನು ಆಕಾಶದಲ್ಲಿ ಧ್ವನಿಯಾಗಿದ್ದೇನೆ. ಮನುಷ್ಯನಲ್ಲಿ ಪ್ರಕಟವಾಗುವ ಎಲ್ಲ ಸಾಮರ್ಥ್ಯಗಳಿಗೂ ನಾನೇ ಶಕ್ತಿಯ ಮೂಲ. ಅಂದರೆ ಜಗತ್ತಿನ ಚರಾಚರಗಳಲ್ಲಿಯೂ ನಾನು ಇದ್ದೇನೆ ಎಂದು ಹೇಳುತ್ತಾನೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟಿಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.