ಅಯ್ಯಪ್ಪ ಮಾಲೆ ಧರಿಸಿದವರು ಈರುಳ್ಳಿ, ಬೆಳ್ಳುಳ್ಳಿಯಿಂದ ತಯಾರಿಸಿದ ಆಹಾರ ಸೇವಿಸುವುದಿಲ್ಲ ಏಕೆ? ಕಾರಣ ಹೀಗಿದೆ
ಈರುಳ್ಳಿ ಮತ್ತು ಬೆಳ್ಳುಳ್ಳಿ ಭಾರತೀಯ ಪಾಕಪದ್ಧತಿಯಲ್ಲಿ ಪ್ರಮುಖ ಪದಾರ್ಥಗಳಾಗಿವೆ. ಉಪವಾಸದ ಸಮಯದಲ್ಲಿ ಇವುಗಳಿಂದ ಮಾಡಿದ ಆಹಾರ ಪದಾರ್ಥಗಳನ್ನು ಏಕೆ ತಿನ್ನಬಾರದು? ಇದರ ಹಿಂದಿರುವ ಅಧ್ಯಾತ್ಮಿಕ ನಂಬಿಕೆ ಏನು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ಭಾರತೀಯ ಪಾಕಪದ್ಧತಿಯಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಬಹಳ ಮುಖ್ಯ. ಇವು ಆಹಾರಕ್ಕೆ ಉತ್ತಮ ರುಚಿ ಮತ್ತು ಸುವಾಸನೆಯನ್ನು ನೀಡುತ್ತವೆ. ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಆದರೆ, ಹಿಂದೂ ನಂಬಿಕೆಗಳ ಪ್ರಕಾರ, ಅಯ್ಯಪ್ಪ ಮಾಲೆ, ಹನುಮ ಮಾಲೆ, ಶಿವ ಮಾಲೆ ಮುಂತಾದ ಹಬ್ಬಗಳಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯಿಂದ ಮಾಡಿದ ಆಹಾರವನ್ನು ಸೇವಿಸುವುದಿಲ್ಲ. ಹಬ್ಬ ಹರಿದಿನಗಳಲ್ಲಿ ಮತ್ತು ವಿಶೇಷ ಪೂಜೆಗಳಲ್ಲಿ ಉಪವಾಸ ಮಾಡುವವರೂ ಕೂಡ ಆ ದಿನ ಈರುಳ್ಳಿ ಮತ್ತು ಬೆಳ್ಳುಳ್ಳಿಯ ಆಹಾರ ಪದಾರ್ಥಗಳನ್ನು ಸೇವಿಸಬಾರದು ಎಂದು ಹೇಳಲಾಗುತ್ತದೆ. ಅಧ್ಯಾತ್ಮಿಕವಾಗಿ ಹೇಳುವುದಾದರೆ, ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ತಾಮಸಿಕ ಆಹಾರಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಉಪವಾಸದ ಸಮಯದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯಿಂದ ಮಾಡಿದ ಆಹಾರಗಳನ್ನು ಏಕೆ ಸೇವಿಸಬಾರದು ಎಂಬುದನ್ನು ಕಂಡುಹಿಡಿಯೋಣ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈರುಳ್ಳಿ ಮತ್ತು ಬೆಳ್ಳುಳ್ಳಿ ದುಷ್ಟ ಗ್ರಹಗಳಾದ ರಾಹು ಮತ್ತು ಕೇತುಗಳೊಂದಿಗೆ ಸಂಬಂಧ ಹೊಂದಿವೆ. ಮಾಲಾಧಾರಣೆ, ವಿಶೇಷ ಪೂಜೆ ಮತ್ತು ಉಪವಾಸದ ಸಮಯದಲ್ಲಿ ಇವುಗಳನ್ನು ಸೇವಿಸುವುದರಿಂದ ಭಕ್ತನ ಶಕ್ತಿಗೆ ಭಂಗ ಉಂಟಾಗುತ್ತದೆ. ಪರಿಣಾಮವಾಗಿ ಮಾಲೆ ಅಥವಾ ಉಪವಾಸ ಮತ್ತು ಪ್ರಾರ್ಥನೆಯ ಪರಿಣಾಮಕಾರಿತ್ವವು ಕಡಿಮೆಯಾಗುತ್ತದೆ. ಇದೇ ಕಾರಣದಿಂದ ಇಂಥ ಭಕ್ತರು ಅಧ್ಯಾತ್ಮಿಕವಾಗಿ ಹೆಚ್ಚು ಸಮಯವನ್ನು ಕಳೆಯಲು ಸಾಧ್ಯವಿಲ್ಲ. ಹಾಗಾಗಿ ದೇವದೀಕ್ಷೆ ಮತ್ತು ಉಪವಾಸ ದೀಕ್ಷೆಯಲ್ಲಿರುವಾಗ ಈರುಳ್ಳಿ ಮತ್ತು ಬೆಳ್ಳುಳ್ಳಿಯಿಂದ ಮಾಡಿದ ಆಹಾರ ಪದಾರ್ಥಗಳನ್ನು ಸೇವಿಸಬಾರದು ಎಂದು ಹೇಳಲಾಗುತ್ತದೆ.
ದೀಕ್ಷೆಯ ಸಮಯದಲ್ಲಿ ಮಾತ್ರವಲ್ಲದೆ ಸಾಮಾನ್ಯವಾಗಿ ಪ್ರತಿ ತಿಂಗಳು ನಾಲ್ಕು ದಿನಗಳ ಕಾಲ ಈರುಳ್ಳಿ ಮತ್ತು ಬೆಳ್ಳುಳ್ಳಿಯಿಂದ ತಯಾರಿಸಿದ ಆಹಾರವನ್ನು ತಿನ್ನಬಾರದು ಎಂದು ಪುರಾಣಗಳು ಹೇಳುತ್ತವೆ. ಆ ದಿನಗಳ ವಿಶೇಷತೆ ಏನು ಗೊತ್ತಾ?
1. ಅಮಾವಾಸ್ಯೆ
ಪ್ರತಿ ತಿಂಗಳು ಅಮಾವಾಸ್ಯೆಯಂದು ತಮ್ಮ ಪೂರ್ವಜರಿಗೆ ಸಂಬಂಧಿಸಿದ ಆಚರಣೆಗಳನ್ನು ಮತ್ತು ದಾನ-ಧರ್ಮವನ್ನು ಮಾಡುತ್ತಾರೆ. ಅಂದಿನ ಊಟ ಸರಳವಾಗಿರಬೇಕು. ಆದ್ದರಿಂದ ಅಮಾವಾಸ್ಯೆಯ ದಿನದಂದು ಬೆಳ್ಳುಳ್ಳಿ ಮತ್ತು ಈರುಳ್ಳಿಯಿಂದ ಮಾಡಿದ ಆಹಾರವನ್ನು ತ್ಯಜಿಸಬೇಕು.
2. ಹುಣ್ಣಿಮೆ
ಹುಣ್ಣಿಮೆಯು ಚಂದ್ರನ ಶಕ್ತಿಯೊಂದಿಗೆ ಸಂಬಂಧಿಸಿದೆ. ಪುರಾಣಗಳ ಪ್ರಕಾರ, ಪೌರ್ಣಮಿ ತಿಥಿ ಅತ್ಯಂತ ಶುದ್ಧವಾಗಿದೆ. ಹುಣ್ಣಿಮೆಯ ದಿನ ಈರುಳ್ಳಿ ಮತ್ತು ಬೆಳ್ಳುಳ್ಳಿಯಿಂದ ಮಾಡಿದ ಭಕ್ಷ್ಯಗಳನ್ನು ತಿನ್ನುವುದು ಆ ಶಕ್ತಿಯನ್ನು ತಡೆಯುತ್ತದೆ ಎಂದು ನಂಬಲಾಗಿದೆ.
3. ಏಕಾದಶಿ
ಪುರಾಣಗಳ ಪ್ರಕಾರ ಏಕಾದಶಿಯು ವಿಷ್ಣು ದೇವರಿಗೆ ಸಮರ್ಪಿತವಾದ ದಿನವಾಗಿದೆ. ಈ ದಿನ ವಿಷ್ಣು ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸುವುದು ಅತ್ಯಂತ ಮಂಗಳಕರವೆಂದು ಹೇಳಲಾಗುತ್ತದೆ. ಏಕಾದಶಿಯಂದು ತಾಮಸಿಕ ಆಹಾರವನ್ನು ಸೇವಿಸುವುದರಿಂದ ಪ್ರಾರ್ಥನೆಯ ಶಕ್ತಿ ಮತ್ತು ಧ್ಯಾನದ ಮೇಲೆ ಏಕಾಗ್ರತೆ ಕಡಿಮೆಯಾಗುತ್ತದೆ.
4. ಪ್ರದೋಷ ವ್ರತ
ಹಿಂದೂ ಪುರಾಣಗಳಲ್ಲಿ ಪ್ರದೋಷ ವ್ರತಕ್ಕೆ ಹೆಚ್ಚಿನ ಮಹತ್ವವಿದೆ. ಈ ದಿನದಂದು, ಶಿವ ಮತ್ತು ಆತನ ಕುಟುಂಬ ಸದಸ್ಯರನ್ನು ಭಕ್ತಿ ಮತ್ತು ಉಪವಾಸದಿಂದ ಪೂಜಿಸುವುದರಿಂದ ಆರ್ಥಿಕ, ದೈಹಿಕ ಹಾಗೂ ಮಾನಸಿಕ ಯೋಗಕ್ಷೇಮವನ್ನು ತರುತ್ತದೆ ಎಂದು ನಂಬಲಾಗಿದೆ. ಈ ದಿನ ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಬೇಕು. ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇವನೆಯು ಮಾನಸಿಕ ಗಮನವನ್ನು ಕಡಿಮೆ ಮಾಡುತ್ತದೆ ಎಂದು ನಂಬಲಾಗಿದೆ. ಇದೇ ಕಾರಣಕ್ಕಾಗಿ ಪ್ರತಿ ತಿಂಗಳ ಈ ನಾಲ್ಕು ದಿನಗಳಂದು ಈರುಳ್ಳಿ ಮತ್ತು ಬೆಳ್ಳುಳ್ಳಿಯಿಂದ ತಯಾರಿಸಿದ ಆಹಾರವನ್ನು ಸೇವಿಸಬಾರದು ಎಂದು ಹೇಳಲಾಗುತ್ತದೆ.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.