Vaikunta Ekadashi 2025: ತುಮಕೂರಿನಲ್ಲಿ ಸಂಭ್ರಮದ ವೈಕುಂಠ ಏಕಾದಶಿ; ಸರತಿ ಸಾಲಿನಲ್ಲಿ ನಿಂತು ವೆಂಕಟೇಶ್ವರನ ದರ್ಶನ ಪಡೆದ ಭಕ್ತರು
ನಾಡಿನಾದ್ಯಂತ ಸಂಭ್ರಮ, ಸಡಗರದಿಂದ ಇಂದು (ಜನವರಿ 10, ಶುಕ್ರವಾರ) ವೈಕುಂಠ ಏಕಾದಶಿಯನ್ನು ಆಚರಿಸಲಾಯಿತು. ತುಮಕೂರಿನ ವಿವಿಧ ದೇವಾಲಯಗಳಿಗೆ ಆಗಮಿಸಿದ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದಿದ್ದಾರೆ.
ತುಮಕೂರು: ಕಲ್ಪತರು ನಾಡಿನಲ್ಲಿ ವೈಕುಂಠ ಏಕಾದಶಿಯನ್ನು ಇಂದು (ಜನವರಿ 10, ಶುಕ್ರವಾರ) ಸಡಗರ ಸಂಭ್ರದೊಂದಿಗೆ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ನಗರದ ವಿವಿಧ ಬಡಾವಣೆಗಳಲ್ಲಿರುವ ಹಾಗೂ ಜಿಲ್ಲೆಯ ವಿವಿಧೆಡೆಯ ವೆಂಕಟೇಶ್ವರ ಸ್ವಾಮಿ ದೇವಾಲಯಗಳಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಶೇಷ ಪೂಜಾ ಕೈಂಕರ್ಯ ನೆರವೇರಿದವು.
ಜಿಲ್ಲೆಯಲ್ಲಿರುವ ವೆಂಕಟೇಶ್ವರಸ್ವಾಮಿ ದೇವಾಲಯ, ರಂಗನಾಥಸ್ವಾಮಿ ದೇವಾಲಯ, ವಿಷ್ಣು ದೇವಾಲಯಗಳಲ್ಲಿ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಇಲ್ಲಿನ ಬಟವಾಡಿಯ ವೆಂಕಟೇಶ್ವರ ಸ್ವಾಮಿ ದೇವಾಲಯ, ಶಿರಾಗೇಟ್ ಸಮೀಪವಿರುವ ವೆಂಕಟೇಶ್ವಸ್ವಾಮಿ ದೇವಾಲಯ, ಜಯನಗರ ರಿಂಗ್ ರಸ್ತೆಯ ತಿರುಮಲ ನಗರ ದಕ್ಷಿಣದ ಕೆಹೆಚ್‌ಬಿ ಕಾಲೋನಿಯಲ್ಲಿರುವ ತಿರುಮಲ ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಾಲಯ, ಸರಸ್ವತಿ ಪುರಂನ ವೆಂಕಟೇಶ್ವರ ಸ್ವಾಮಿ ದೇಗುಲ, ಜಯನಗರ ಪಶ್ಚಿಮದ ಪದ್ಮಾವತಿ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಅಲಂಕಾರ ಗಮನ ಸೆಳೆಯಿತು.
ಟಿಜಿಎಂಸಿ ಬ್ಯಾಂಕ್ ಮುಂಭಾಗದ ಮಹಾಲಕ್ಷ್ಮಿ ದೇವಾಲಯ, ಸೋಮೇಶ್ವರ ಪುರಂನ ಗೋಪಾಲಕೃಷ್ಣ ದೇವಾಲಯ, ಶಾಂತಿನಗರದ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ದೇವಾಲಯ, ತುರುವೇಕೆರೆ ತಾಲೂಕು ಮುದುಗೆರೆ ಸಮೀಪದ ಶ್ರೀಕೋಡಿ ರಂಗನಾಥ ಸ್ವಾಮಿ ದೇವಾಲಯ, ಸಂಪಿಗೆಯ ವೆಂಕಟೇಶ್ವರ ಸ್ವಾಮಿ ದೇವಾಲಯ ಹಾಗೂ ಗುಬ್ಬಿಯ ಬೇಟೆರಾಯ ಸ್ವಾಮಿ ದೇವಾಲಯ, ತಿರುಮಲ ವೆಂಕಟೇಶ್ವರ ಸ್ವಾಮಿ ದೇವಾಲಯ ಸೇರಿದಂತೆ ಜಿಲ್ಲೆಯಾದ್ಯಂತ ವೈಕುಂಠ ಏಕಾದಶಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಮುಂಜಾನೆಯಿಂದಲೇ ಭಕ್ತಾದಿಗಳು ವೆಂಕಟೇಶ್ವರ ಸ್ವಾಮಿ ದೇವಾಲಯಗಳಿಗೆ ತೆರಳಿ ಸರತಿ ಸಾಲಿನಲ್ಲಿ ನಿಂತು ವೈಕುಂಠ ದರ್ಶನದೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಶಿರಾ ಗೇಟ್ ಸಮೀಪದ ವೆಂಕಟೇಶಪುರದಲ್ಲಿರುವ ಶ್ರೀವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ಕುಟುಂಬ ಸಮೇತರಾಗಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ವೈಕುಂಠ ದರ್ಶನ ಪಡೆದರು.
ವೈಕುಂಠ ಏಕಾದಶಿ ಅಂಗವಾಗಿ ಮುಂಜಾನೆಯಿಂದಲೇ ದೇವಾಲಯಗಳಲ್ಲಿ ಪಂಚಾಮೃತ ಅಭಿಷೇಕ, ಅಲಂಕಾರ, ಉಯ್ಯಾಲೆ ಸೇವೆ, ಪ್ರಾಕಾರೋತ್ಸವ ನೆರವೇರಿದವು. ವೈಕುಂಠ ಏಕಾದಶಿ ಪ್ರಯುಕ್ತ ವೆಂಕಟೇಶ್ವರ ಸ್ವಾಮಿ ದೇವಾಲಯಗಳನ್ನು ಬಗೆ ಬಗೆಯ ಹೂವುಗಳಿಂದ ಅಲಂಕರಿಸಲಾಗಿತ್ತು, ಹಾಗೆಯೇ ದೇವರ ಮೂರ್ತಿಗಳಿಗೂ ವೈಭವೋಪೇತ ಅಲಂಕಾರ ಮಾಡಲಾಗಿತ್ತು, ಭಕ್ತರ ದರ್ಶನಕ್ಕಾಗಿ ಯಾವುದೇ ರೀತಿಯ ತೊಂದರೆಗಳಾಗದಂತೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು.
ಭಕ್ತಾದಿಗಳು ಮುಂಜಾನೆಯಿಂದಲೇ ದೇವಾಲಯಗಳಿಗೆ ತೆರಳಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಈ ಎಲ್ಲಾ ದೇವಾಲಯಗಳಲ್ಲೂ ಭಕ್ತಾದಿಗಳಿಗೆ ವೈಕುಂಠ ಏಕಾದಶಿ ಅಂಗವಾಗಿ ವಿಶೇಷ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು, ವೆಂಕಟೇಶ್ವರನ ದೇವಾಲಯಗಳಲ್ಲಿ ಮುಂಜಾನೆಯಿಂದಲೇ ಗೋವಿಂದನ ನಾಮಸ್ಮರಣೆ ಮೊಳಗಿದವು.