ಪೊಳಲಿ ಶ್ರೀರಾಜರಾಜೇಶ್ವರಿ ದೇವರ ಜಾತ್ರೆಗೆ ಕಲ್ಲಂಗಡಿಯೇ ಪ್ರಸಾದ; ಏನಿದರ ಮಹತ್ವ, ಆಸಕ್ತಿಕರ ಮಾಹಿತಿ ಇಲ್ಲಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಪೊಳಲಿ ಶ್ರೀರಾಜರಾಜೇಶ್ವರಿ ದೇವರ ಜಾತ್ರೆಗೆ ಕಲ್ಲಂಗಡಿಯೇ ಪ್ರಸಾದ; ಏನಿದರ ಮಹತ್ವ, ಆಸಕ್ತಿಕರ ಮಾಹಿತಿ ಇಲ್ಲಿದೆ

ಪೊಳಲಿ ಶ್ರೀರಾಜರಾಜೇಶ್ವರಿ ದೇವರ ಜಾತ್ರೆಗೆ ಕಲ್ಲಂಗಡಿಯೇ ಪ್ರಸಾದ; ಏನಿದರ ಮಹತ್ವ, ಆಸಕ್ತಿಕರ ಮಾಹಿತಿ ಇಲ್ಲಿದೆ

ದಕ್ಷಿಣ ಕನ್ನಡ ಜಿಲ್ಲೆಯ ಪುರಾತನ ದೇವಸ್ಥಾನ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾದ ವಾರ್ಷಿಕ ಜಾತ್ರೋತ್ಸವದಲ್ಲಿ ಪ್ರಸಾದಕ್ಕೆ ಕಲ್ಲಂಗಡಿಯನ್ನೇ ಯಾಕೆ ಬಳಸುತ್ತಾರೆ. ಇದರ ಹಿಂದಿನ ಕಥೆಯನ್ನು ತಿಳಿಯಿರಿ.

ಪೊಳಲಿ ಶ್ರೀ ರಾಜರಾಜೇಶ್ವರಿ ಜಾತ್ರಾ ಮಹೋತ್ಸವದಲ್ಲಿ ಕಲ್ಲಂಗಡಿ ಹಣ್ಣನ್ನು ಪ್ರಸಾದವಾಗಿ ವಿತರಿಸಲಾಗುತ್ತದೆ.
ಪೊಳಲಿ ಶ್ರೀ ರಾಜರಾಜೇಶ್ವರಿ ಜಾತ್ರಾ ಮಹೋತ್ಸವದಲ್ಲಿ ಕಲ್ಲಂಗಡಿ ಹಣ್ಣನ್ನು ಪ್ರಸಾದವಾಗಿ ವಿತರಿಸಲಾಗುತ್ತದೆ.

ಮಂಗಳೂರು: ಬೇಸಿಗೆಯ ಧಗೆಗೆ ಕಲ್ಲಂಗಡಿ ಹಣ್ಣು ಸಿಕ್ಕಿದರೆ ದೇಹಕ್ಕೆ ಮುದ ನೀಡುತ್ತದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ದೇವಾಲಯ ಪೊಳಲಿ ಜಾತ್ರೆಯಲ್ಲಿ ಕಲ್ಲಂಗಡಿ ಹಣ್ಣನ್ನು ಪ್ರಸಾದವಾಗಿ ಹಂಚುವ ಸಂಪ್ರದಾಯವಿದೆ. ಇದಕ್ಕೆ ವಿಶೇಷವಾದ ಮಹತ್ವವಿದೆ. ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಪುರಾತನ ದೇವಸ್ಥಾನ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾದಲ್ಲಿ ನಡೆಯುವ ವಾರ್ಷಿಕ ಜಾತ್ರೋತ್ಸವಕ್ಕೆ ಕಲ್ಲಂಗಡಿ ಹಣ್ಣೇ ಪ್ರಸಾದವೆಂಬ ನಂಬಿಕೆ ಇದೆ. ಮಾರ್ಚ್ ನಿಂದ ಎಪ್ರಿಲ್ ವರೆಗೆ ನಡೆಯುವ ಒಂದು ತಿಂಗಳ ಜಾತ್ರೆಯ ವೇಳೆ ಸಂತೆಯಲ್ಲಿ ಕಲ್ಲಂಗಡಿ ಹಣ್ಣಿನದ್ದೇ ಭರ್ಜರಿ ವ್ಯಾಪಾರ. ದೇವಸ್ಥಾನಕ್ಕೆ ಬರುವ ಭಕ್ತರು ಇಲ್ಲಿ ಕಲ್ಲಂಗಡಿ ಹಣ್ಣನ್ನು ಎಷ್ಟು ಹಣಕೊಟ್ಟಾದರೂ ಖರೀದಿಸುತ್ತಾರೆ.

ಕಲ್ಲಂಗಡಿ ಹಣ್ಣು ಪ್ರಸಾದವಾಗಿ ವಿತರಿಸುವುದರ ಹಿಂದಿರುವ ಪುರಾಣ

ಇಲ್ಲಿನ ಕಲ್ಲಂಗಡಿ ಹಣ್ಣನ್ನು ಪುರಾಣದ ರಕ್ತಬೀಜಾಸುರನೆಂದೇ ನಂಬಲಾಗುತ್ತದೆ. ಅದರೊಳಗಿನ ಕೆಂಪು ತಿರುಳು ರಾಕ್ಷಸನ ರಕ್ತವನ್ನು ಸಂಕೇತಿಸಿದರೆ, ಅದರೊಳಗಿನ ಬೀಜಗಳು ಬೀಜಾಸುರಾದಿಗಳನ್ನು ಸಂಕೇತಿಸುತ್ತದೆ. ಪೊಳಲಿ ವ್ಯಾಪ್ತಿಯ 10 ಗ್ರಾಮಗಳಲ್ಲಿ ಈ ಹಣ್ಣನ್ನು ಬೆಳೆಯಲಾಗುತ್ತಿದ್ದು, ಇದು ಇತ್ತೀಚೆಗೆ ಕಡಿಮೆಯಾಗಿದೆ. ಪೊಳಲಿ, ಮಳಲಿ, ಕರಿಯಂಗಳ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಬೆಳೆಸಲಾಗುವ ಕಲ್ಲಂಗಡಿ ಹಣ್ಣುಗಳನ್ನು ಮಾತ್ರ ಇಲ್ಲಿ ಮಾರಾಟ ಮಾಡಲಾಗುತ್ತದೆ. ಸ್ಥಳೀಯ ಕೃಷಿಕರೇ ಈ ಹಣ್ಣು ಬೆಳೆದು ಮಾರಾಟ ಮಾಡುತ್ತಾರೆ. ಇವರು ವೃತ್ತಿಪರ ಕೃಷಿಕರಲ್ಲ, ಇದು ಅವರ ಹವ್ಯಾಸವಷ್ಟೇ.

ಹೊರಗಿನ ಕೃಷಿಕರು ಇಲ್ಲಿ ಕಲ್ಲಂಗಡಿ ಹಣ್ಣಿನ ವ್ಯಾಪಾರಕ್ಕೆ ಬಂದರೆ ಆ ಕಲ್ಲಂಗಡಿ ಮಾರಾಟವಾಗುವುದೂ ಇಲ್ಲ. ಏಕೆಂದರೆ ಸ್ಥಳೀಯ ತಳಿಯ ಆಕಾರ, ಬಣ್ಣಕ್ಕಿಂತ ಇತರ ತಳಿಯ ಕಲ್ಲಂಗಡಿ ಭಿನ್ನವಾಗಿರುತ್ತದೆ. ಇತರೆಡೆಯ ಕಲ್ಲಂಗಡಿ ಮೊಟ್ಟೆಯಾಕಾರವನ್ನು ಹೋಲುತ್ತಿದ್ದರೆ, ಪೊಳಲಿಯಲ್ಲಿ ಮಾರುವ ಕಲ್ಲಂಗಡಿ ಮಾನವನ ತಲೆಯ ಆಕಾರವನ್ನು ಹೋಲುತ್ತದೆ. ಪೊಳಲಿಯ ಜೀವನದಿ ಫಲ್ಗುಣಿ ನದಿಯ ಸುತ್ತಮುತ್ತಲಿನ ಮರಳು ಮಣ್ಣು ಕಲ್ಲಂಗಡಿ ಬೆಳೆಯಲು ಉತ್ತಮ ಪ್ರದೇಶವಾಗಿದೆ. ಇಲ್ಲಿನ ಕಲ್ಲಂಗಡಿ ರಾಸಾಯನಿಕಗಳ ಬಳಕೆಯಿಲ್ಲದೆ ಬೆಳೆಯಲಾಗುತ್ತದೆ.

ಪೊಳಲಿ ಜಾತ್ರೆ ನಡೆಯುವ ದಿನ ಹಾಗೂ ಬೆಳೆಯುವ ಅವಧಿಯನ್ನು ಲೆಕ್ಕ ಹಾಕಿ ಕಲ್ಲಂಗಡಿ ಬೆಳೆಗೆ ಬೀಜ ಬಿತ್ತನೆ ಮಾಡಲಾಗುತ್ತದೆ. ಅಂದರೆ ಡಿಸೆಂಬರ್ ಅಂತ್ಯದಿಂದ ಜನವರಿ 25ರೊಳಗೆ ಬೀಜ ಹಾಕಲಾಗುತ್ತದೆ. ಬಳ್ಳಿ ಬೆಳೆದು ಮಾರ್ಚ್ ಅಂತ್ಯಕ್ಕೆ ಕಾಯಿ ಬಲಿತು ಕಲ್ಲಂಗಡಿ ಹಣ್ಣುಗಳು ದೊರೆಯುತ್ತದೆ. ಈ ಹಣ್ಣುಗಳು ಪೊಳಲಿ ಜಾತ್ರೆಯ ವೇಳೆಗೆ ಮಾರಾಟವಾಗುತ್ತವೆ. ವಿಶೇಷವೆಂದರೆ ಪೊಳಲಿ ಜಾತ್ರೆಯ ಹೊರತಾಗಿ ಬೇರೆ ಯಾವ ಸಮಯದಲ್ಲಿ ಬೀಜ ಹಾಕಿದರೂ ಇಲ್ಲಿ ಬಳ್ಳಿ ಬೆಳೆಯೋದಿಲ್ಲ, ಕಾಯಿ ಬಿಡೋದಿಲ್ಲ. ಧಾರ್ಮಿಕ ನಂಬಿಕೆಯೊಂದಿಗೆ ಕೃಷಿಕರು ಬೆಳೆಯುತ್ತಿರುವ ಕಲ್ಲಂಗಡಿ ಹಣ್ಣನ್ನು ಭಕ್ತರು ಪ್ರಸಾದ ರೂಪದಲ್ಲಿ ಮನೆಗೆ ಒಯ್ಯುತ್ತಿರುವುದು ಇಲ್ಲಿನ ವಿಶೇಷ.

ಕಲ್ಲಂಗಡಿ ಹಣ್ಣನ್ನು ಇಲ್ಲಿ ಮಾರಟ ಮಾಡುವ ರೈತರು ಮತ್ತು ಖರೀದಿಸುವ ಗ್ರಾಹಕರು ಪ್ರಸಾದದ ರೂಪದಲ್ಲಿ ಇದರ ವ್ಯವಹಾರ ಮಾಡುತ್ತಾರೆ. ಇಲ್ಲಿ ಕಲ್ಲಂಗಡಿಯನ್ನು ಕೆ ಜಿ ಲೆಕ್ಕದಲ್ಲಿ ಮಾರಾಟ ಮಾಡದೆ, ಕೇವಲ ಗಾತ್ರ ನೋಡಿ ಮಾರಾಟ ಮಾಡಲಾಗುತ್ತದೆ. 50 ರೂ ನಿಂದ 700 ರೂ ವರೆಗೆ ಕಲ್ಲಂಗಡಿಗೆ ದರವಿದ್ದು, ಈ ದರದಲ್ಲಿ ವ್ಯವಹಾರ ನಡೆಯುತ್ತದೆ. ಆದರೆ ಈ ಯಾವುದೇ ವ್ಯವಹಾರಕ್ಕೆ ತೂಕ ಮಾಪನವನ್ನು ಬಳಸಲಾಗುವುದಿಲ್ಲ.

ಕಲ್ಲಂಗಡಿ ಬೆಳೆಯುವ ರೈತರು, ಗ್ರಾಹಕರು ಏನು ಹೇಳಿದರು

ಈ ಬಗ್ಗೆ ಮಾತನಾಡಿದ ಕಲ್ಲಂಗಡಿ ಬೆಳೆದ ಸವಿತಾ, ಇದು ನಮ್ಮ ಊರಿನಲ್ಲಿ ಬೆಳೆಯುವ ಕಲ್ಲಂಗಡಿ. ಪೊಳಲಿ ಜಾತ್ರೆಗಾಗಿ ಬೆಳೆದಿದ್ದೇವೆ. ಡಿಸೆಂಬರ್ ನಲ್ಲಿ ಕಲ್ಲಂಗಡಿ ಬೀಜವನ್ನು ಪೊಳಲಿ ದೇವರ ಮುಂದೆ ಪ್ರಾರ್ಥಿಸಿ ಬಿತ್ತಲಾಗುತ್ತದೆ. ಇದು ಪೊಳಲಿ ಜಾತ್ರೆಯ ಪ್ರಸಾದ. ನಾವು ವರ್ಷದಲ್ಲಿ ಒಂದು ಬಾರಿ ಮಾತ್ರ ಈ ಬೆಳೆಯನ್ನು ಮಾಡುತ್ತೇವೆ ಎನ್ನುತ್ತಾರೆ.

ಕಲ್ಲಂಗಡಿ ರೈತ ಸೀತಾರಾಮ ಮಾತನಾಡಿ, ಜನರು ಇದನ್ನು ಪ್ರಸಾದವಾಗಿ ಸ್ವೀಕರಿಸುತ್ತಾರೆ. ಜನವರಿಯಲ್ಲಿ ಉಳುಮೆ ಮಾಡಿ ಪೊಳಲಿ ಜಾತ್ರೆ ಆರಂಭವಾಗುವ ಎಪ್ರಿಲ್ ನಲ್ಲಿ ಇದನ್ನು ಕೊಯ್ದು ಮಾರಾಟ ಮಾಡುತ್ತೇವೆ. ತೂಕದಲ್ಲಿ ಕೊಡುವುದಿಲ್ಲ. ಅಂದಾಜು ಗಾತ್ರ ದಲ್ಲಿ ಇದನ್ನು ಮಾರಾಟ ಮಾಡುತ್ತೇವೆ. ಪೊಳಲಿ, ಮಳಲಿ, ಅಮ್ಮುಂಜೆ, ಕರಿಯಂಗಳದಲ್ಲಿ ಇದನ್ನು ಬೆಳೆಯುತ್ತಾರೆ . ಅಂದಾಜು 250 ಮಂದಿ ಕಲ್ಲಂಗಡಿ ಬೆಳೆಯುತ್ತಾರೆ ಎನ್ನುತ್ತಾರೆ. ಪೊಳಲಿ ಜಾತ್ರೆಯಲ್ಲಿ ಕಲ್ಲಂಗಡಿ ಖರೀದಿಸಿದ ಭಕ್ತ ಪ್ರವೀಣ್ ಕುಮಾರ್ ಮಾತನಾಡಿ, ಪೊಳಲಿ ಜಾತ್ರೆಗೆ ಪ್ರತಿ ವರ್ಷ ಬರುತ್ತೇವೆ. ಇಲ್ಲಿಗೆ ಬಂದಾಗ ಕಲ್ಲಂಗಡಿ ಖರೀದಿಸುತ್ತೇವೆ. ಇದನ್ನು ಪ್ರಸಾದ ರೂಪದಲ್ಲಿ ಕೊಂಡೋಗಿ ಮನೆಯಲ್ಲಿ ಹಂಚುತ್ತೇವೆ ಎನ್ನುತ್ತಾರೆ. (ಬರಹ: ಹರೀಶ್ ಮಾಂಬಾಡಿ)

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.