Soma Pradosha: ಮಾಘ ಮಾಸದ ಸೋಮ ಪ್ರದೋಷ ಆಚರಣೆಯಿಂದ ಏನೆಲ್ಲಾ ಲಾಭಗಳಿವೆ, ಸಂಪೂರ್ಣ ಮಾಹಿತಿ ಇಲ್ಲಿದೆ
ಸೋಮ ಪ್ರದೋಷ ದಿನ ಬಡವರಿಗೆ ಕಪ್ಪು ಬಟ್ಟೆ ಮತ್ತು ಎಳ್ಳಿನಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ದಾನವಾಗಿ ನೀಡಿದರೆ ಅಸುನೀಗಿದ ವಂಶದ ಹಿರಿಯರ ಆಶೀರ್ವಾದವು ದೊರೆಯುತ್ತದೆ ಎಂಬ ನಂಬಿಕೆ ಇದೆ. ಮಹತ್ವ ತಿಳಿಯಿರಿ.

ಮಾಘ ಮಾಸದಲ್ಲಿ ಯಾವುದೇ ಪೂಜೆಯನ್ನು ಮಾಡಿದರು ವಿಶೇಷವಾದ ಫಲಗಳು ದೊರೆಯುತ್ತವೆ. ಶಿವ ಪಾರ್ವತಿಯರ ಪೂಜೆಯಿಂದ ಮನದ ಆಸೆ ಆಕಾಂಕ್ಷಿಗಳು ಪೂರ್ಣಗೊಳ್ಳುತ್ತವೆ. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ. ಫೆಬ್ರವರಿ ತಿಂಗಳ 10ನೇ ದಿನಾಂಕದಂದು ಪ್ರದೋಷವಿರುತ್ತದೆ. ಸೋಮವಾರ ಆದ ಕಾರಣ ಇದನ್ನು ಸೋಮ ಪ್ರದೋಷ ಕರೆಯುತ್ತೇವೆ. ಈ ದಿನದಂದು ತ್ರಯೋದಶಿಯು 7.08 ರವರೆಗು ಇರುತ್ತದೆ. ಆದ್ದರಿಂದ 7.08ಕ್ಕೆ ಮುನ್ನ ಪೂಜೆಯನ್ನು ಆರಂಭಿಸಬೇಕು. ಪುಷ್ಯ ನಕ್ಷತ್ರವು ಆರಂಭವಾಗಿರುತ್ತದೆ. ಆದ್ದರಿಂದ ಇಂದಿನ ಪೂಜೆಯಿಂದ ಉತ್ತಮ ಆರೋಗ್ಯ ದೊರೆಯುತ್ತದೆ. ಅಪಮೃತ್ಯು ಪರಿಹಾರವಾಗುತ್ತದೆ. ಅಗತ್ಯ ಇರುವವರಿಗೆ ಕಪ್ಪು ಬಟ್ಟೆ ಮತ್ತು ಎಳ್ಳಿನಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ದಾನವಾಗಿ ನೀಡಿದರೆ ಅಸುನೀಗಿದ ವಂಶದ ಹಿರಿಯರ ಆಶೀರ್ವಾದವು ದೊರೆಯುತ್ತದೆ. ಶ್ರೀ ಮಹಾ ಮೃತ್ಯುಂಜಯ ಮಂತ್ರದ ಜಪವನ್ನು ಮಾಡಲು ಸೂಕ್ತವಾದ ದಿನವಾಗಿದೆ.
ಈ ದಿನ ರುದ್ರಪಾರಾಯಣದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ. ಕುಟುಂಬದಲ್ಲಿನ ಭಿನ್ನಾಭಿಪ್ರಾಯಗಳು ದೂರವಾಗುತ್ತವೆ. ಇದರಿಂದ ಶಾಂತಿ ನೆಮ್ಮದಿಯ ಜೀವನ ದೊರೆಯುತ್ತದೆ. ಇಂದಿನ ಶಿವನ ಆರಾಧನೆಯಿಂದ ಉದ್ಯೋಗದಲ್ಲಿನ ಅಡೆತಡೆಗಳು ದೂರವಾಗುತ್ತವೆ. ವಿರೋಧಿಗಳು ಸೋಲನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಶ್ರೀ ಪರಮೇಶ್ವರನು ಪ್ರತಿಯೊಂದು ವಿದ್ಯೆಗೂ ಮೂಲ ಎಂದು ವೇದಮಂತ್ರಗಳಿಂದ ತಿಳಿದುಬರುತ್ತದೆ. ಸೋಮವಾರದಂದು ಚಂದ್ರನ ಪ್ರಭಾವವು ಹೆಚ್ಚಿನದಾಗಿರುತ್ತದೆ. ಆದ್ದರಿಂದ ಕಲಿಕೆಯಲ್ಲಿ ತೊಂದರೆ ಅನುಭವಿಸುವವರು ಈ ದಿನ ಶಿವನ ಪೂಜೆಯನ್ನು ಮಾಡುವುದು ಬಲುಮುಖ್ಯ. ಇದರಿಂದ ವಿದ್ಯಾರ್ಥಿಗಳ ಏಕಾಗ್ರತೆ ಹೆಚ್ಚುತ್ತದೆ.
ಸಹಪಾಠಿಗಳ ಜೊತೆಯಲ್ಲಿ ಸ್ನೇಹದಿಂದ ಇರಲು ಸಾಧ್ಯವಾಗುತ್ತದೆ. ಸತತ ಪರಿಶ್ರಮದಿಂದ ನಿರೀಕ್ಷಿತ ಮಟ್ಟವನ್ನು ತಲುಪವಲ್ಲಿ ಯಶಸ್ವಿಯಾಗುತ್ತಾರೆ. ವೇದ ಮತ್ತು ಜೋತಿಷ್ಯಶಾಸ್ತ್ರಗಳ ಕಲಿಕೆಯ ಆರಂಭಕ್ಕೆ ಈ ದಿನವು ಶ್ರೇಷ್ಠಕರವಾಗಿದೆ. ಇಂದಿನ ಪೂಜೆಯಿಂದ ಹಣಕಾಸಿನ ವ್ಯವಹಾರದಲ್ಲಿ ಹೆಚ್ಚಿನ ಜ್ಞಾನವು ಲಭಿಸುತ್ತದೆ. ಕುಟುಂಬದಲ್ಲಿನ ಹಣಕಾಸಿನ ಸಮಸ್ಯೆಗೆ ಪರಿಹಾರ ದೊರೆಯುತ್ತದೆ.
ವಿಶಾಲವಾದ ರಾಜ್ಯವೊಂದಿರುತ್ತದೆ. ಆ ರಾಜ್ಯದ ಮಹಾರಾಜನು ಅನಿರೀಕ್ಷಿತವಾಗಿ ಪ್ರಾಣತ್ಯಾಗ ಮಾಡುತ್ತಾನೆ. ಅವನಿಗೊಬ್ಬ ಮಗನಿರುತ್ತಾನೆ. ಆದರೆ ಅವನು ಅಪ್ರಾಪ್ತ ವಯಸ್ಕನಾಗಿರುತ್ತಾನೆ. ಈ ಕಾರಣದಿಂದಾಗಿ ಆ ರಾಜ್ಯದ ಮಂತ್ರಿಯು ಆ ಕುವರನ್ನು ರಾಜನನ್ನಾಗಿ ಪಟ್ಟಾಭಿಷೇಕ ಮಾಡುತ್ತಾನೆ. ಅವನು ಅಪ್ರಾಪ್ತನಾದ ಕಾರಣ ಅವನ ಪರವಾಗಿ ರಾಜ್ಯದ ಜವಾಬ್ದಾರಿಯನ್ನು ವಹಿಸಿಕೊಂಡಿರುತ್ತಾನೆ. ಆದರೆ ದುರಾಸೆಯಿಂದ ನೆರೆಹೊರೆಯ ರಾಜ್ಯಗಳ ಅರಸರು ಒಗ್ಗಟ್ಟಿನಿಂದ ಯುದ್ಧ ಮಾಡಿ ಅವನ ರಾಜ್ಯವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಾರೆ. ಆ ಹುಡುಗನು ಅನಾಥನಾಗಿ ಬೀದಿಯ ಬದಿಯಲ್ಲಿ ಗಾಯಗೊಂಡು ಬಿದ್ದಿರುತ್ತಾನೆ.
ಕಲ್ಯಾಣಿ ಎಂಬ ಓರ್ವ ಗೃಹಿಣಿಯು ತನ್ನ ಚಿಕ್ಕ ವಯಸ್ಸಿನಲ್ಲಿಯೇ ತನ್ನ ಪತಿಯನ್ನು ಕಳೆದುಕೊಂಡಿರುತ್ತಾಳೆ. ತನ್ನ ನಿತ್ಯಜೀವನಕ್ಕಾಗಿ ಬಿಕ್ಷಾಟನೆಯ ಮಾರ್ಗವನ್ನು ಅನುಸರಿಸುತ್ತಾಳೆ. ಆ ದಿನ ಅವಳಿಗೆ ಅವಶ್ಯಕವಿದ್ದಷ್ಟು ಆಹಾರ ದೊರೆಯುವುದಿಲ್ಲ. ನಿರಾಸೆ ಮತ್ತು ಆಯಾಸದಿಂದ ನಡೆದು ಹೋಗುತ್ತಿದ್ದಳು. ಹಾದಿಯಲ್ಲಿ ಗಾಯಗೊಂಡ ಈ ರಾಜಕುಮಾರನನ್ನು ಕಾಣುತ್ತಾಳೆ. ಮೈಯಲ್ಲಿ ಆದ ಗಾಯದ ನೋವಿನಿಂದ ಆ ರಾಜಕುಮಾರನು ನರಳುತ್ತಾ ರಸ್ತೆಯಲ್ಲಿಯೇ ಮಲಗಿರುತ್ತಾನೆ. ಜನಸಾಗುವ ದಾರಿಯಾದರೂ ಯಾರೊಬ್ಬರೂ ಇವನನ್ನು ನೋಡಿದರೂ ಕನಿಕರದಿಂದ ಸಹಾಯಕ್ಕೆ ಬರುವುದಿಲ್ಲ.
ಇದನ್ನು ಗಮನಿಸಿದ ಕಲ್ಯಾಣಿಗೆ ಆ ರಾಜಕುಮಾರನ ಮೇಲೆ ಕರುಣೆ ಮೂಡುತ್ತದೆ. ಅವನನ್ನು ತನ್ನ ಮನೆಗೆ ಕರೆತಂದು ತನಗೆ ತಿಳಿದ ಔಷಧಗಳಿಂದ ಉಪಚರಿಸುತ್ತಾಳೆ. ದಿನ ಕಳೆದಂತೆ ರಾಜಕುಮಾರನು ಆರೋಗ್ಯವಂತನಾಗುತ್ತಾನೆ. ಆ ನಂತರ ರಾಜಕುಮಾರನು ಮಗನಂತೆ ಆಕೆಯೊಂದಿಗೆ ಜೀವನ ಆರಂಭಿಸುತ್ತಾನೆ. ಇವನಿಗೆ ಶಿವದತ್ತ ಎಂಬ ಹೆಸರಿನಿಂದ ಎಲ್ಲರೂ ಕರೆಯುತ್ತಾರೆ. ಅದೊಂದು ಸೋಮವಾರ ತಿನ್ನಲು ಆಹಾರ ದೊರೆಯುವುದಿಲ್ಲ. ಇದರಿಂದ ಬೇಸರಗೊಂಡ ಅವಳು ಕಾಡಿಗೆ ತೆರಳಿ ಅಲ್ಲಿದ್ದ ಹೂವನ್ನು ತಂದು ಪೂಜಿಸುತ್ತಾಳೆ. ಕಾಡಿನಲ್ಲಿ ದೊರೆತ ಹಣ್ಣನ್ನು ಪರಮೇಶ್ವರನಿಗೆ ಅರ್ಪಿಸುತ್ತಾಳೆ. ಇನ್ನಾದರೂ ತನ್ನ ಕಷ್ಟನಷ್ಟಗಳನ್ನು ನೀಗಿಸಿ ಸಂತೋಷದ ಜೀವನವನ್ನು ನೀಡೆಂದು ಶಿವನಲ್ಲಿ ಬೇಡುತ್ತಾಳೆ.
ಪರಮೇಶ್ವರನಿಗೆ ಸೋಮ ಪ್ರದೋಷದ ದಿನ ತನಗೆ ಅರಿವಿಲ್ಲದಂತೆ ಪೂಜೆ ಮಾಡುತ್ತಾಳೆ. ಇದರಿಂದ ರಾಜಕುಮಾರನನ್ನು ಗಂಧರ್ವ ಕನ್ಯೆ ಒಬ್ಬಳು ವಿವಾಹವಾಗುತ್ತಾಳೆ. ಆನಂತರ ರಾಜಕುಮಾರನು ಹೆಣ್ಣುಕೊಟ್ಟ ಮಾವನ ಸಹಾಯದಿಂದ ಯುದ್ಧವನ್ನು ಮಾಡಿ ತನ್ನ ರಾಜ್ಯವನ್ನು ಮರಳಿ ಪಡೆಯುತ್ತಾನೆ. ತನ್ನ ಸಾಕುತಾಯಿ ಮತ್ತು ಪತ್ನಿಯ ಜೊತೆಯಲ್ಲಿ ಸಂತೋಷದಿಂದ ಜೀವನ ನಡೆಸುತ್ತಾನೆ. ಆದ್ದರಿಂದ ಸೋಮಪ್ರದೋಷದ ಪೂಜೆಯಿಂದ ಜೀವನದಲ್ಲಿನ ಸುಖ ಸಂತೋಷವು ನೆಲೆಯುತ್ತದೆ ಎಂದು ಗ್ರಂಥಗಳಿಂದ ತಿಳಿದು ಬರುತ್ತದೆ.
