ಶುಕ್ಲ ಪಕ್ಷದಲ್ಲಿ ಮದುವೆಯಾದರೆ ಏನೆಲ್ಲಾ ಶುಭ ಫಲಗಳು ಸಿಗುತ್ತವೆ? ವಿವಾಹ ಮತ್ತು ತಿಥಿಯ ಫಲ ತಿಳಿಯಿರಿ
ಶಾಸ್ತ್ರೀಯ ಗ್ರಂಥಗಳ ಪ್ರಕಾರ ಯಾವ ಶುಭ ಮುಹೂರ್ತದಲ್ಲಿ ವಿವಾಹವಾದರೆ ಒಳ್ಳೆಯದು, ಜೀವನದಲ್ಲಿ ದಂಪತಿ ಸಂತೋಷವಾಗಿ ಜೀವಿಸಲು ಶುಕ್ಲ ಪಕ್ಷ ಮತ್ತು ತಿಥಿಯ ಫಲಗಳು ಎಷ್ಟು ಪರಿಣಾಮಕಾರಿಯಾಗಿರುತ್ತವೆ ಎಂಬುದನ್ನು ತಿಳಿಯೋಣ. (ಬರಹ: ಎಚ್. ಸತೀಶ್, ಜ್ಯೋತಿಷಿ)
ವಿವಾಹದ ಮುಹೂರ್ತವು ವೈವಾಹಿಕ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದೇ ರೀತಿ ವಿವಾಹ ದಿನದ ತಿಥಿ ಸಹ ಬಹು ಮುಖ್ಯವಾಗುತ್ತದೆ. ವಿವಾಹಕ್ಕೆ ಶುಕ್ಲ ಪಕ್ಷವು ಸಂಪೂರ್ಣ ಶುಭಕರವಾಗಿರುತ್ತದೆ. ಈ ಅವಧಿಯಲ್ಲಿ ವಿವಾಹವಾದಲ್ಲಿ ದಂಪತಿಗೆ ಧನ ಧಾನ್ಯದ ಆದಿಯಾಗಿ ಅನುಕೂಲತೆಗಳು ಕಂಡುಬರುತ್ತವೆ. ಜೀವನದಲ್ಲಿ ಉತ್ತಮ ಪ್ರಗತಿಯು ದೊರೆಯುತ್ತದೆ. ಕೃಷ್ಣ ಪಕ್ಷದಲ್ಲಿ ಪಂಚಮಿ ಬರುವವರೆಗೂ ವಿವಾಹವನ್ನು ಮಾಡಬಹುದು ಯಾವುದೇ ತೊಂದರೆ ಇರುವುದಿಲ್ಲ. ಪಾಡ್ಯದಲ್ಲಿ ವಿವಾಹ ಮಾಡಬಾರದೆಂಬ ನಂಬಿಕೆ ಇದೆ. ಆದರೆ ಶಾಸ್ತ್ರೀಯ ಗ್ರಂಥಗಳ ಪ್ರಕಾರ ಯಾವುದೇ ತೊಂದರೆ ಉಂಟಾಗುವುದಿಲ್ಲ. ಅನಿವಾರ್ಯವಾದಲ್ಲಿ ಶುಕ್ರ ಪಕ್ಷದ ಪಾಡ್ಯದಂದು ವಿವಾಹ ಮಾಡಬಹುದು. ಇದರಿಂದ ಸುಖ ಸಂತೋಷದ ಜೀವನ ದಂಪತಿಗೆ ದೊರೆಯುತ್ತದೆ. ಬಿದಿಗೆಯ ದಿನ ವಿವಾಹವಾದಲ್ಲಿ ದಂಪತಿ ಒಮ್ಮತದಿಂದ ಸಂತೋಷದ ಜೀವನ ನಡೆಸುತ್ತಾರೆ. ಉತ್ತಮ ಸಂತಾನ ಲಭಿಸುವುದಲ್ಲದೆ ಕುಟುಂಬದಲ್ಲಿ ಎಲ್ಲರ ಮನಸ್ಸನ್ನು ಗೆಲ್ಲುತ್ತಾರೆ.
ಸಪ್ತಮಿಯ ದಿನದಂದು ವಿವಾಹವಾದಲ್ಲಿ ವರ ಅಥವಾ ವಧುವಿನ ಜೀವನದಲ್ಲಿ ಇದ್ದ ಕಷ್ಟ ನಷ್ಟಗಳು ದೂರವಾಗುತ್ತವೆ. ನಿಧಾನವಾದರೂ ಅಗತ್ಯವಾದಂತಹ ಶುಭಫಲಗಳನ್ನು ಪಡೆಯುತ್ತಾರೆ. ಅನಾರೋಗ್ಯದ ಸಮಸ್ಯೆ ಇದ್ದಲ್ಲಿ ಚೇತರಿಕೆ ಕಂಡು ಬರುತ್ತದೆ. ಕುಟುಂಬದ ಹಿರಿಯರ ಮನಸ್ಸನ್ನು ಗೆದ್ದು ಬಾಳುತ್ತಾರೆ. ಆದರೆ ನವಮಿಯ ದಿನದಂದು ವಿವಾಹವನ್ನು ಮಾಡಬಾರದು. ಚೌತಿಯ ದಿನದಂದು ವಿವಾಹ ಮಾಡಬಾರದು. ವರ ಪೂಜೆಯನ್ನು ಮಾಡಬಹುದು. ಆದರೆ ಕೆಲವರು ಉಪನಯವನ್ನು ಮದುವೆಯ ಜೊತೆಯಲ್ಲಿ ಮಾಡುತ್ತಾರೆ. ಅಂಥಹ ಸಂದರ್ಭದಲ್ಲಿ ಚೌತಿಯು ನಿಷಿದ್ದವಾಗುತ್ತದೆ. ನವಮಿಯ ದಿನದಂದು ಸೊಸೆಯಾಗಲಿ ಅಥವಾ ಮಗಳಾಗಲಿ ಮನೆತೊರೆದು ಹೊರನಡೆಯ ಬಾರದು. ಆದ್ದರಿಂದ ನವಮಿಯ ದಿನದಂದು ವಿವಾಹ ಮಾಡಬಾರದು.
ತದಿಗೆಯ ತಿಥಿಯ ದಿನದಂದು ವಿವಾಹವನ್ನು ಮಾಡಿದರೆ ವಧುವಿನ ಜೀವನದಲ್ಲಿ ಆಕೆಗೆ ಇಷ್ಟವೆನಿಸುವ ಎಲ್ಲಾ ರೀತಿಯ ಅನುಕೂಲತೆಗಳು ದೊರಕುತ್ತವೆ. ಈ ದಿನದಂದು ವಿವಾಹ ಮಾಡಿದ್ದಲ್ಲಿ ಗಂಡನ ಮನೆ ಮತ್ತು ತವರು ಮನೆಯ ನಡುವೆ ಉತ್ತಮ ಬಾಂಧವ್ಯವು ರೂಪು ಗೊಳ್ಳುತ್ತದೆ. ಜೀವನದಲ್ಲಿ ಹಣದ ತೊಂದರೆ ಇಲ್ಲದೆ ದಂಪತಿ ಜೀವನವನ್ನು ನಡೆಸುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಮದುವೆಗೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ಚೌತಿಯ ದಿನದಂದು ಮುಂದುವರೆಸಬಾರದು. ಚೌತಿಯ ದಿನದಂದು ಬಿಡುವು ಕೊಟ್ಟು ಪಂಚಮಿ ಪಂಚಮಿಯ ದಿನದಿಂದ ಮದುವೆಯ ಉಳಿದ ಕಾರ್ಯಗಳನ್ನು ನಡೆಸಬಹುದು. ಈ ದಿನದಂದು ಮದುವೆಯಲ್ಲದೆ ಹೆಣ್ಣು ಮಕ್ಕಳಿಗೆ ನೀಡುವ ಉಡುಗೊರೆಯಿಂದಲೂ ಸಹ ಉತ್ತಮ ಪ್ರತಿಫಲವನ್ನು ಪಡೆಯಬಹುದಾಗಿದೆ.
ಪಂಚಮಿಯ ತಿಥಿಯಂದು ಮಾಡುವ ವಿವಾಹ ಕಾರ್ಯವು ಯಾವುದೇ ತೊಂದರೆ ಇಲ್ಲದೆ ಸರಾಗವಾಗಿ ನಡೆಯಲ್ಪಡುತ್ತವೆ. ವಧು ವರರ ಮೊಗದಲ್ಲಿ ವಿಶೇಷ ತೇಜಸ್ಸು ಮೂಡುತ್ತದೆ. ಪಂಚಮಿಯ ವಿವಾಹದಿಂದ ದಂಪತಿ ಸುಖ ಸಂತೋಷದಿಂದ ಜೀವನ ನಡೆಸುತ್ತಾರೆ. ಹಣಕಾಸಿನ ತೊಂದರೆ ಬರುವುದಿಲ್ಲ. ಮಾತ್ರವಲ್ಲದೆ ಆಸ್ತಿಯನ್ನು ಗಳಿಸಲು ಕಷ್ಟಪಡುವುದು ಇಲ್ಲ. ಷಷ್ಟಿ ಮತ್ತು ಸಪ್ತಮಿ ತಿಥಿಗಳು ಉಪರಿಯಾಗಿದ್ದಲ್ಲಿ ಮರು ವಿವಾಹ ಮಾಡಬೇಕಾಗುತ್ತದೆ. ಹಾಗೆಯೇ ಸಪ್ತಮಿ ಮತ್ತು ಅಷ್ಟಮಿ ತಿಥಿಗಳು ಉಪರಿಯಾಗಿದ್ದಲ್ಲಿ ದಂಪತಿ ನಡುವೆ ಉತ್ತಮ ಅನುಬಂಧ ಇರುವುದಿಲ್ಲ. ಆದ್ದರಿಂದ ಪಂಚಮಿ ಮತ್ತು ಸಪ್ತಮಿ ತಿಥಿಗಳಂದು ಹೆಚ್ಚಿನ ಎಚ್ಚರಿಕೆಯಿಂದ ಮುಹೂರ್ತವನ್ನು ನಿಶ್ಚಯಿಸಬೇಕಾಗುತ್ತದೆ.
ಇಂದಿನ ದಿನಗಳಲ್ಲಿ ಲಗ್ನಪತ್ರಿಕೆಯನ್ನು ಸಂಜೆಯ ವೇಳೆ ನೆರವೇರಿಸುತ್ತಾರೆ. ಆದರೆ ಶಾಸ್ತ್ರದ ಪ್ರಕಾರ ಲಗ್ನ ಪತ್ರಿಕೆಯನ್ನು ಹಗಲಿನಲ್ಲಿ ನೆರವೇರಿಸಬೇಕು. ದ್ವಾದಶಿಯ ದಿನದಂದು ವಿವಾಹ ಮಾಡಬಾರದು. ಇದರಿಂದ ದಂಪತಿಗೆ ಹಣಕಾಸಿನ ತೊಂದರೆ ಉಂಟಾಗಬಹುದು. ಅನಿವಾರ್ಯವಾದಲ್ಲಿ ಮಾತ್ರ ಶುಕ್ಲ ಪಕ್ಷದ ತ್ರಯೋದಶಿಯ ದಿನ ವಿವಾಹ ಮಾಡಬಾರದು. ಆದರೆ ಚತುರ್ದಶಿಯ ದಿನದಂದು ವಿವಾಹದ ಉಳಿದ ಕಾರ್ಯಕ್ರಮಗಳನ್ನು ಮಾಡಬಾರದು.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.