ಮನುಷ್ಯ ಸಂತೋಷವಾಗಿರಲು ಏನು ಮಾಡಬೇಕು? ಶ್ರೀಕೃಷ್ಣನು ಅರ್ಜುನನಿಗೆ ಹೇಳಿದ ಅದ್ಭುತ ವಾಣಿಯಲ್ಲಿದೆ ಇದಕ್ಕೆ ಉತ್ತರ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮನುಷ್ಯ ಸಂತೋಷವಾಗಿರಲು ಏನು ಮಾಡಬೇಕು? ಶ್ರೀಕೃಷ್ಣನು ಅರ್ಜುನನಿಗೆ ಹೇಳಿದ ಅದ್ಭುತ ವಾಣಿಯಲ್ಲಿದೆ ಇದಕ್ಕೆ ಉತ್ತರ

ಮನುಷ್ಯ ಸಂತೋಷವಾಗಿರಲು ಏನು ಮಾಡಬೇಕು? ಶ್ರೀಕೃಷ್ಣನು ಅರ್ಜುನನಿಗೆ ಹೇಳಿದ ಅದ್ಭುತ ವಾಣಿಯಲ್ಲಿದೆ ಇದಕ್ಕೆ ಉತ್ತರ

ಭಗವದ್ಗೀತೆಯು ಮನುಷ್ಯನ ಕತ್ತಲೆಯ ಜೀವನದಲ್ಲಿ ಬೆಳಕು ಮೂಡಿಸುವಂತಹ ಕೆಲಸ ಮಾಡುತ್ತದೆ. ಹತಾಶೆ, ನಿರಾಸೆ ಮತ್ತು ದುಃಖ ಮನಸ್ಸನ್ನು ಆವರಿಸಿದಾಗ, ಮುಂದೇನು ಮಾಡಬೇಕೆಂದು ತಿಳಿಯದೇ ಇದ್ದಾಗ, ಶ್ರೀಕೃಷ್ಣನು ನಮಗೆ ನೀಡಿರುವ ಈ ಅದ್ಭುತ ವಾಣಿಯನ್ನೊಮ್ಮೆ ನೆನಪಿಸಿಕೊಳ್ಳಿ.

ಮನುಷ್ಯ ಸಂತೋಷವಾಗಿರಬೇಕಾದರೆ ಏನು ಮಾಡಬೇಕು? ಶ್ರೀಕೃಷ್ಣನು ಅರ್ಜುನನಿಗೆ ಹೇಳಿದ ಅದ್ಭುತ ವಾಣಿಯಲ್ಲಿದೆ ಇದಕ್ಕೆ ಉತ್ತರ
ಮನುಷ್ಯ ಸಂತೋಷವಾಗಿರಬೇಕಾದರೆ ಏನು ಮಾಡಬೇಕು? ಶ್ರೀಕೃಷ್ಣನು ಅರ್ಜುನನಿಗೆ ಹೇಳಿದ ಅದ್ಭುತ ವಾಣಿಯಲ್ಲಿದೆ ಇದಕ್ಕೆ ಉತ್ತರ (PC: HT File Photo)

ಮನುಷ್ಯ ಉತ್ತಮನಾಗಿ ಬದಕಲು ಶ್ರೀಕೃಷ್ಣನು ನೀಡಿದ ಬೋಧನೆಗಳ ಸಂಗ್ರಹವೇ ಭಗವದ್ಗೀತೆ. ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ತನ್ನ ಬಂಧು-ಬಾಂಧವರನ್ನು ಕಂಡು ಅರ್ಜುನನು ಹತಾಶನಾಗುತ್ತಿರುವಾಗ, ಶ್ರೀಕೃಷ್ಣನು ಅವನಿಗೆ ಗೀತೆಯನ್ನು ಬೋಧಿಸುತ್ತಾನೆ. ದ್ವಾಪರ ಯುಗದಲ್ಲಿ ಶ್ರೀಕೃಷ್ಣನಿಂದಲೇ ಹೇಳಲ್ಪಟ್ಟ ಗೀತೆಯು ಪ್ರಸ್ತುತ ಕಲಿಯುಗದಲ್ಲಿಯೂ ಬಹಳ ಮಹತ್ವದ್ದಾಗಿದೆ. ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅದೆಷ್ಟೋ ನೀತಿಗಳು ಅದರಲ್ಲಿವೆ. ಮನುಷ್ಯನ ಜೀವನದಲ್ಲಿ ಅಂಧಕಾರ ತುಂಬಿದಾಗ ಬೆಳಕು ಚೆಲ್ಲುವ ಕೆಲಸವನ್ನು ಇದು ಮಾಡುತ್ತದೆ. ಹತಾಶೆ, ಖಿನ್ನತೆ ಮತ್ತು ದುಃಖ ಆವರಿಸಿದಾಗ ಭಗವದ್ಗೀತೆಯು ದಾರಿ ತೋರಿಸುತ್ತದೆ. ಸಂತೋಷದಿಂದ ಬದುಕಲು ಬೇಕಾಗುವ ಜ್ಞಾನವನ್ನು ಅದು ಕೊಡುತ್ತದೆ. ಮನುಷ್ಯನು ಏನನ್ನು ತ್ಯಜಿಸಿದಾಗ ಸಂತೋಷ ಅವನದ್ದಾಗುತ್ತದೆ? ಮತ್ತು ಯಾವ ಚಿಂತೆಯನ್ನು ಬಿಡುವುದರಿಂದ ಭವಿಷ್ಯ ಸುಂದರವಾಗಿರುತ್ತದೆ? ಮನುಷ್ಯನು ತನ್ನನ್ನು ತಾನು ಸರಿಪಡಿಸಿಕೊಳ್ಳುವುದು ಹೇಗೆ? ಮುಂತಾದ ವಿಷಯಗಳು ಭಗವದ್ಗೀತೆಯಲ್ಲಿವೆ. ಸುಂದರ ಜೀವನ ನಡೆಸಲು ಬೇಕಾದ ಶಾಂತಿ, ಸಂತೋಷಗಳನ್ನು ಪಡೆಯುವ ಮಾರ್ಗವನ್ನು ಶ್ರೀಕೃಷ್ಣನು ಈ ರೀತಿಯಾಗಿ ಹೇಳುವುದರ ಮೂಲಕ ದಾರಿ ತೋರಿಸಿದ್ದಾನೆ.

ಸಂತೋಷದ ಗುಟ್ಟು ಶ್ರೀಕೃಷ್ಣನ ಈ ಉಪದೇಶಗಳಲ್ಲಿದೆ

ಇತರರನ್ನು ಎಂದಿಗೂ ದೂರಬೇಡಿ

ಸಂತೋಷವಾಗಿರಬೇಕಾದರೆ ಇತರರನ್ನು ಎಂದಿಗೂ ಟೀಕಿಸಬಾರದು ಎಂದು ಶ್ರೀಕೃಷ್ಣನು ಗೀತೆಯ ಮೂಲಕ ವಿವರಿಸುತ್ತಾನೆ. ಅಲ್ಲದೆ ಇತರರ ಬಗ್ಗೆ ಯಾವಾಗಲೂ ದೂರು ನೀಡುವುದನ್ನು ಬಿಡಬೇಕು. ವ್ಯಕ್ತಿಯು ಇತರರನ್ನು ದೂರುವುದು ಮತ್ತು ಟೀಕಿಸುವುದನ್ನು ಮಾಡುವ ಸಮಯವನ್ನು ತನ್ನ ಸ್ವಂತ ಅಭ್ಯುದಯದ ಕಡೆಗೆ ನೀಡಿದರೆ ಅವನು ದಿನದಿಂದ ದಿನಕ್ಕೆ ಉತ್ತಮನಾಗುತ್ತಾನೆ. ಆಗ ಪ್ರಶಂಸೆಗೆ ಅರ್ಹನಾಗುತ್ತಾ ಹೋಗುತ್ತಾನೆ. ಪ್ರತಿಯೊಬ್ಬ ವ್ಯಕ್ತಿಯು ಯಾವಾಗಲೂ ಆತ್ಮ ಪರೀಕ್ಷೆಯನ್ನು ಮಾಡಿಕೊಳ್ಳಬೇಕು.

ಹೋಲಿಕೆ ಮಾಡಿಕೊಳ್ಳುವುದನ್ನು ಬಿಡಬೇಕು

ವ್ಯಕ್ತಿಯು ತನ್ನನ್ನು ಬೇರೆಯವರೊಂದಿಗೆ ಹೋಲಿಸಿಕೊಳ್ಳಬಾರದು ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಹೇಳುತ್ತಾನೆ. ಒಬ್ಬ ವ್ಯಕ್ತಿಯು ತನ್ನನ್ನು ಇತರರೊಂದಿಗೆ ಹೋಲಿಸಿಕೊಂಡರೆ, ಅವನು ಎಂದಿಗೂ ಸಂತೋಷವಾಗಿರುವುದಿಲ್ಲ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯು ತನ್ನನ್ನು ಇತರರೊಂದಿಗೆ ಹೋಲಿಸಿಕೊಳ್ಳುವ ಅಭ್ಯಾಸವನ್ನು ಸಾಧ್ಯವಾದಷ್ಟು ಬೇಗ ತ್ಯಜಿಸಬೇಕು. ಹೋಲಿಕೆ ನಿಮ್ಮ ಯಶಸ್ಸಿಗೆ ಅಡ್ಡಿಯಾಗುವುದಷ್ಟೇ ಅಲ್ಲ ನಿಮ್ಮ ಸಂತೋಷವನ್ನು ದೂರಮಾಡುತ್ತದೆ. ಸ್ವಯಂ ಹೋಲಿಕೆಯನ್ನೆ ಮಾಡಿಕೊಳ್ಳಬೇಕು. ನಿನ್ನೆಗಿಂತ ಇಂದು ಉತ್ತಮನಾಗಿ ಬದುಕುವ ಮಾರ್ಗದಲ್ಲಿ ಸಾಗಬೇಕು.

ಹಿಂದೆ ಆಗಿದ್ದಕ್ಕೆ ಚಿಂತಿಸಿ ಫಲವಿಲ್ಲ

ಶ್ರೀಕೃಷ್ಣನ ಪ್ರಕಾರ, ವ್ಯಕ್ತಿಯು ಸಂತೋಷವಾಗಿರಲು ಬಯಸಿದರೆ, ಅವನು ಹಿಂದಿನ ಘಟನೆಗಳ ಕುರಿತು ಚಿಂತಿಸುವುದನ್ನು ನಿಲ್ಲಿಸಬೇಕು. ಭೂತಕಾಲದಲ್ಲಿ ಸಿಲುಕಿಕೊಂಡ ವ್ಯಕ್ತಿಯು ಜೀವನದಲ್ಲಿ ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ವ್ಯಕ್ತಿಯು ತನ್ನ ಹಿಂದೆ ನಡೆದ ಸಂಗತಿಗಳನ್ನು ಬಿಟ್ಟು ಮುಂದೆ ಸಾಗಬೇಕು ಎಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ. ಹಿಂದಿನದನ್ನು ಬಿಟ್ಟರೆ ಮಾತ್ರ ಮನುಷ್ಯ ಭವಿಷ್ಯದ ಬಗ್ಗೆ ಯೋಚಿಸಬಹುದು. ಇಲ್ಲದಿದ್ದರೆ, ಆ ವ್ಯಕ್ತಿ ಭವಿಷ್ಯದಲ್ಲಿ ಪ್ರಗತಿ ಸಾಧಿಸುವುದು ಕಷ್ಟ.

ಫಲದ ಚಿಂತೆ ಬಿಟ್ಟು ಕರ್ತವ್ಯವನ್ನು ಮಾಡಬೇಕು

ಭಗವದ್ಗೀತೆಯಲ್ಲಿ ಮನುಷ್ಯನು ಸಂತೋಷವಾಗಿರಬೇಕಾದರೆ, ಅವನು ತನ್ನ ಕರ್ಮವನ್ನು ಅಂದರೆ ಕೆಲಸವನ್ನು ಮಾತ್ರ ನೆನಪಿಸಿಕೊಳ್ಳಬೇಕು. ತನ್ನ ಕ್ರಿಯೆಗಳ ಪರಿಣಾಮಗಳ ಬಗ್ಗೆ ಚಿಂತಿಸಬಾರದು. ಫಲಿತಾಂಶದ ಬಗ್ಗೆ ಚಿಂತಿಸದೆ, ಕೆಲಸ ಮಾಡುವ ವ್ಯಕ್ತಿಯು ಜೀವನದಲ್ಲಿ ಎಂದಿಗೂ ನಿರಾಶೆಗೊಳಗಾಗುವುದಿಲ್ಲ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.