ಒಳ್ಳೆಯ ಜನರೇ ಯಾಕೆ ಯಾವಾಗಲೂ ನೋವನ್ನು ಅನುಭವಿಸುತ್ತಾರೆ: ಪಾರ್ಥನ ಪ್ರಶ್ನೆಗೆ ಶ್ರೀಕೃಷ್ಣನು ಕಥೆಯ ಮೂಲಕ ನೀಡಿದ ಉತ್ತರ ಹೀಗಿದೆ
Bhagavad Gita: ಒಳ್ಳೆಯ ಜನರು ನೋವನ್ನು ಅನುಭವಿಸುತ್ತಾರೆ, ಅದೇ ಕೆಟ್ಟ ಕೆಲಸಗಳನ್ನು ಮಾಡುವವರು ಸಂತೋಷದಿಂದ ಇರುತ್ತಾರೆ ಎಂಬುದು ಸಾಮಾನ್ಯವಾಗಿ ಎಲ್ಲರನ್ನು ಕಾಡುವ ವಿಷಯ. ಆದರೆ ಹಾಗೆ ಏಕೆ ಅನಿಸುತ್ತದೆ? ಅರ್ಜುನನ ಪ್ರಶ್ನೆಗೆ ಶ್ರೀಕೃಷ್ಣನ ಉತ್ತರ ಹೀಗಿದೆ. ಮಾಧವನು ಪಾರ್ಥನಿಗೆ ಹೇಳಿದ ಈ ಕಥೆಯನ್ನು ಓದಿ. (ಬರಹ: ಅರ್ಚನಾ ವಿ. ಭಟ್)

ಒಂದು ದಿನ ಅರ್ಜುನನು ಶ್ರೀಕೃಷ್ಣನ ಬಳಿಗೆ ಬಂದು, ಹೇ ಮಾಧವ! ನನ್ನಲ್ಲಿ ಕೆಲವು ಪ್ರಶ್ನೆಗಳು ಇವೆ. ಅದಕ್ಕೆ ನೀವು ಮಾತ್ರ ಉತ್ತರಿಸಬಹುದು. ನನ್ನಲ್ಲಿ ಗೊಂದಲವನ್ನು ಸೃಷ್ಟಿಸಿರುವ ಆ ಪ್ರಶ್ನೆಗಳಿಗೆ ದಯವಿಟ್ಟು ಉತ್ತರವನ್ನು ತಿಳಿಸಿ ಎಂದು ಹೇಳಿದನು. ಒಳ್ಳೆಯ ಜನರು ಯಾವಾಗಲೂ ಏಕೆ ನೋವನ್ನು ಅನುಭವಿಸುತ್ತಾರೆ? ಆಗ ಕೃಷ್ಣನು ಅರ್ಜುನನಿಗೆ ನಿನ್ನ ಈ ಪ್ರಶ್ನೆಗೆ ನಾನು ಕಥೆಯ ಮೂಲಕ ನಿನಗೆ ವಿವರಿಸುತ್ತೇನೆ ಎಂದು ಹೇಳಿದನು.
ಶ್ರೀಕೃಷ್ಣ ಹೇಳಿದ ಕಥೆ
ಒಂದಾದನೊಂದು ಕಾಲದಲ್ಲಿ, ಒಂದು ಊರಿನಲ್ಲಿ ಇಬ್ಬರು ವಾಸಿಸುತ್ತಿದ್ದರು. ಅವರಲ್ಲಿ ಒಬ್ಬನು ಉದ್ಯಮಿ, ಮತ್ತೊಬ್ಬ ಕಳ್ಳ. ಉದ್ಯಮಿಯು ಪ್ರತಿದಿನ ದೇವಸ್ಥಾನಕ್ಕೆ ತೆರಳಿ ದೇವರಿಗೆ ಪೂಜೆ ಸಲ್ಲಿಸುತ್ತಿದ್ದನು. ಪ್ರತಿದಿನ ಬಡವರಿಗೆ ಆಹಾರವನ್ನು ನೀಡುತ್ತಿದ್ದನು. ಜೊತೆಗೆ ಸಾಕಷ್ಟು ಹಣವನ್ನು ಕಾಣಿಕೆ, ದಾನವಾಗಿ ನೀಡುತ್ತಿದ್ದನು. ಹೀಗಾಗಿ ಕಳ್ಳರು ದೇವಸ್ಥಾನಕ್ಕೆ ಹೋದರೂ ಕಾಣಿಕೆ ಹಣವನ್ನು ಕದಿಯುತ್ತಿದ್ದರು. ಒಮ್ಮೆ ಆ ಊರಿನಲ್ಲಿ ಭಾರೀ ಮಳೆಯಾಯಿತು. ಮಳೆಯಿಂದಾಗಿ ಅಂದು ದೇವಸ್ಥಾನದಲ್ಲಿ ಅರ್ಚಕನನ್ನು ಬಿಟ್ಟರೆ ಯಾರೂ ಇರಲಿಲ್ಲ. ಮಳೆ ಬರುತ್ತಿರುವುದನ್ನು ಕಂಡೂ ಸಹ ಕಳ್ಳನೊಬ್ಬ ದೇವಸ್ಥಾನ ತಲುಪಿದನು. ಸ್ವಲ್ಪ ಸಮಯದ ನಂತರ, ಅರ್ಚಕನೂ ಹೋದ. ಕಳ್ಳನು ದೇವಾಲಯದ ಎಲ್ಲಾ ಹಣವನ್ನು ಕದ್ದನು.
ಮಳೆ ನಿಂತ ನಂತರ ಉದ್ಯಮಿಯು ಕೂಡಾ ದೇವಸ್ಥಾನಕ್ಕೆ ಹೋದನು. ಅದಾಗಲೇ ದೇವಸ್ಥಾನದಲ್ಲಿ ಕಳ್ಳತನ ನಡೆದು ಹೋಗಿತ್ತು. ಆದರೆ ದುರಾದೃಷ್ಟವಶಾತ್, ದೇವಸ್ಥಾನದ ಅರ್ಚಕರು ಆ ಉದ್ಯಮಿಯನ್ನೇ ಕಳ್ಳನೆಂದು ಭಾವಿಸಿದರು. ಕಳ್ಳ-ಕಳ್ಳ ಎಂದು ಕೂಗುತ್ತಾ ಜನರನ್ನು ಕರೆಯತೊಡಗಿದರು. ಅದನ್ನು ಕೇಳಿ ಸುತ್ತಮುತ್ತಲಿನ ಜನರು ದೇವಸ್ಥಾನಕ್ಕೆ ಧಾವಿಸಿ ಬಂದರು. ಎಲ್ಲರು ಒಳ್ಳೆಯ ಉದ್ಯಮಿಯನ್ನೇ ಕಳ್ಳ ಎಂದು ಕರೆಯತೊಡಗಿದರು. ಇದನ್ನು ನೋಡಿದ ಉದ್ಯಮಿಗೆ ಆಶ್ಚರ್ಯವಾಯಿತು. ನಂತರ ಹೇಗೋ ದೇವಸ್ಥಾನದಿಂದ ಉದ್ಯಮಿಯು ಹೊರಬಂದನು. ಅಲ್ಲಿಂದ ತನ್ನ ಗಾಡಿಯನ್ನು ಏರಿ ಹೊರಟನು. ದಾರಿಮಧ್ಯದಲ್ಲಿ ಗಾಡಿ ಅಪಘಾತವಾಗಿ ಉದ್ಯಮಿ ಗಾಯಗೊಂಡನು. ಮನೆಗೆ ಬಂದ ಮೇಲೆ ಅವನು ಯೋಚಿಸತೊಡಗಿದನು. ನಾನು ಪ್ರತಿನಿತ್ಯ ಪೂಜೆ ಮಾಡುತ್ತೇನೆ, ಮತ್ತು ಬಡವರಿಗೆ ದಾನ ಮಾಡುತ್ತೇನೆ, ಆದರೂ ನನಗೇಕೆ ಹೀಗಾಯಿತು ಎಂದು ದುಃಖಿತನಾದನು.
ಕೆಲವು ದಿನಗಳ ನಂತರ, ಕಳ್ಳ ಮತ್ತು ವ್ಯಾಪಾರಿ ಇಬ್ಬರೂ ಸತ್ತರು. ಮರಣಾನಂತರ ಇಬ್ಬರೂ ಯಮರಾಜನ ಬಳಿ ತಲುಪಿದರು. ಎದುರಿಗಿದ್ದ ಕಳ್ಳನನ್ನು ಕಂಡು ವ್ಯಾಪಾರಿಯು ಯಮನನ್ನು ಕೇಳಿದನು, ಹೇ ಯಮರಾಜನೇ! ನಾನು ನನ್ನ ಜೀವನದುದ್ದಕ್ಕೂ ಒಳ್ಳೆಯ ಕೆಲಸಗಳನ್ನು ಮಾಡಿದ್ದೇನೆ. ಆದರೂ ನನಗೆ ಅವಮಾನವಾಯಿತು. ದಾನ ಮಾಡಿದ ನಂತರೂ ಜೀವನಪೂರ್ತಿ ಕಳ್ಳನೆನಿಸಿಕೊಂಡು ದುಃಖದಿಂದ ನರಳಬೇಕಾಯಿತು. ಆದರೆ ಈ ಪಾಪಿ ಕಳ್ಳನು, ಜೀವನದುದ್ದಕ್ಕೂ ಕಳ್ಳತನ ಮಾಡಿಕೊಂಡು ಸಂತೋಷವಾಗಿಯೇ ಇದ್ದನು. ಆಗ ಯಮರಾಜನು ಹೇಳಿದನು, ಓ ಮಗನೇ ನೀನು ತಪ್ಪಾಗಿ ಯೋಚಿಸುತ್ತಿರುವೆ. ನಿನ್ನ ಗಾಡಿ ಅಪಘಾತವಾದ ದಿನ ನಿನ್ನ ಜೀವನದ ಕೊನೆಯ ದಿನವಾಗಿತ್ತು. ಆದರೆ ನೀನು ಮಾಡಿದ ಒಳ್ಳೆಯ ಕರ್ಮದಿಂದ ಅಂದು ನೀನು ಉಳಿದುಕೊಂಡೆ. ಈ ಪಾಪಿ ಕಳ್ಳನ ಜಾತಕದಲ್ಲಿ ರಾಜಯೋಗ ಬರೆದಿದ್ದರೂ ದುಷ್ಕೃತ್ಯಗಳಿಂದ ಅವನಿಗೆ ಅದು ಸಿಗಲಿಲ್ಲ. ಕೇವಲ ಕಳ್ಳತನ ಹಣದಿಂದ ಬಂದ ಸಂತೋಷವನ್ನಷ್ಟೇ ಅವನು ಅನುಭವಿಸಿದನು. ಆದರೆ ನೀನು ನಿನ್ನದಲ್ಲದ ತಪ್ಪಿಗೆ ನೋವನ್ನು ಅನುಭವಿಸಿದರೂ ನಿನ್ನ ಜೀವ ಉಳಿದುಕೊಂಡಿತ್ತು. ನಂತರ ಶ್ರೀಕೃಷ್ಣನು ಅರ್ಜುನನಿಗೆ ಹೇಳಿದನು, ನೋಡಿದೆಯಾ ಪಾರ್ಥ! ಒಳ್ಳೆಯ ಕಾರ್ಯಗಳನ್ನು ಮಾಡುವವನು ಏಕೆ ನೋವನ್ನು ಅನುಭವಿಸುತ್ತಾನೆ ಎಂಬುದು ಈಗ ನಿನಗೆ ಅರ್ಥವಾಗುತ್ತದೆ. ಏಕೆಂದರೆ ಪ್ರತಿಯೊಬ್ಬರೂ ಅವರವರ ಕರ್ಮದ ಫಲವನ್ನು ಬೇರೆ ಬೇರೆಯಾಗಿಯೇ ಅನುಭವಿಸಬೇಕಾಗುತ್ತದೆ. ಎಲ್ಲ ಕರ್ಮಗಳಿಗೂ ಒಂದೇ ರೀತಿಯ ಫಲ ದೊರೆಯುವುದಿಲ್ಲ ಎಂದು ಶ್ರೀಕೃಷ್ಣನು ವಿವರಿಸಿದನು.
