ಸತ್ಯನಾರಾಯಣಸ್ವಾಮಿ ದೇವಸ್ಥಾನದಲ್ಲಿ ಪೂಜೆ ಮಾಡಿದರೆ ಅಶುಭ ಫಲಗಳು ದೂರವಾಗುತ್ತವೆ; ಆಂಧ್ರದಲ್ಲಿರುವ ಈ ದೇವಾಲಯದ ಮಹತ್ವ ಹೀಗಿದೆ
ಆಂಧ್ರ ಪ್ರದೇಶದ ಕಾಕಿನಾಡ ಜಿಲ್ಲೆಯ ಅನ್ನಾವರಂನಲ್ಲಿರುವ ಶ್ರೀ ವೀರ ವೆಂಕಟ ಸತ್ಯನಾರಾಯಣಸ್ವಾಮಿ ದೇವಾಲಯ ತುಂಬಾ ಜನಪ್ರಿಯವಾಗಿದೆ. ಇಲ್ಲಿ ಪೂಜೆ ಮಾಡಿದರೆ ಅಶುಭ ಫಲಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ. ಈ ದೇವಾಲಯ ಕುರಿತ ಆಸಕ್ತಿಕರ ಮಾಹಿತಿ ಇಲ್ಲಿದೆ.

ನಾವು ಆಚರಿಸುವ ಪೂಜೆ ಪುನಸ್ಕಾರದಲ್ಲಿ ಶ್ರೀ ಸತ್ಯನಾರಾಯಣ ಸ್ವಾಮಿ ಮತ್ತು ಶ್ರೀ ಅನಂತ ಪದ್ಮನಾಭ ಸ್ವಾಮಿಯ ಪೂಜೆಯು ಅತಿ ಮುಖ್ಯವಾಗುತ್ತದೆ. ಈ ಪೂಜೆಗಳಿಂದ ಮಾತ್ರ ನಾವು ಮಾಡುವ ಸಣ್ಣ ಪುಟ್ಟ ಲೋಪ ದೋಷಗಳಿಂದ ಪಾರಾಗಬಹುದು. ಕುಟುಂಬದ ಯಾವುದೇ ಮಂಗಳ ಕಾರ್ಯವಾದರೂ ಅದು ಪರಿ ಪೂರ್ಣವಾಗುವುದು ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆಯಿಂದ ಮಾತ್ರ. ಕಾರಣವೆಂದರೆ ಜೀವನದಲ್ಲಿ ಪ್ರತಿಯೊಬ್ಬರೂ ತಿಳಿದೊ ತಿಳಿಯದೆಯೋ ಸಾಮಾನ್ಯವಾಗಿ ಯಾವುದಾದರೊಂದು ತಪ್ಪನ್ನು ಮಾಡಿರುತ್ತಾರೆ. ಅದೇ ರೀತಿ ಕುಟುಂಬದಲ್ಲಿ ಆಚರಿಸುವ ಶುಭಕಾರ್ಯಗಳಲ್ಲಿ ಒಂದಿಲ್ಲೊಂದು ಲೋಪ ಉಂಟಾಗಿರುತ್ತದೆ. ಇದರಿಂದ ದೊರೆಯುವ ಅಶುಭ ಫಲಗಳಿಂದ ದೂರವಾಗಬೇಕೆಂದರೆ ಅದು ಶ್ರೀ ಸತ್ಯನಾರಾಯಣ ಪೂಜೆಯಿಂದ ಮಾತ್ರ ಸಾಧ್ಯ.
ಇಂತಹ ಲೋಪ ದೋಷಗಳನ್ನು ತೊರೆದು ಶುಭಫಲಗಳನ್ನು ನೀಡುವ ಶ್ರೀ ಸತ್ಯನಾರಾಯಣ ಸ್ವಾಮಿ ದೇವಸ್ಥಾನವು ಆಂಧ್ರಪ್ರದೇಶದಲ್ಲಿದೆ. ಈ ದೇವಾಲಯವು ಕಾಕಿನಾಡ ಜಿಲ್ಲೆಯ ಅನ್ನಾವರಂನಲ್ಲಿ ನೆಲೆಗೊಂಡಿದೆ. ಈ ದೇವಾಲಯವನ್ನು ಶ್ರೀ ವೀರ ವೆಂಕಟ ಸತ್ಯನಾರಾಯಣ ಸ್ವಾಮಿ ದೇವಾಲಯ ಎಂದು ಕರೆಯಲಾಗುತ್ತದೆ. ಭಗವ್ವಾನ್ ಶ್ರೀವಿಷ್ಣುವಿನ ಅವತಾರವಾದ ಸತ್ಯನಾರಾಯಣ ಸ್ವಾಮಿಗೆ ಈ ದೇವಾಲಯವು ಸಮರ್ಪಿತವಾವಾಗಿದೆ. ಈ ದೇವಸ್ಥಾನವು ರತ್ನಗಿರಿ ಬೆಟ್ಟದ ಮೇಲೆ ನೆಲೆಗೊಂಡಿದೆ. ಈ ದೇವಸ್ಥಾನವು ಪ್ರಮುಖ ಯಾತ್ರಾ ಕೇಂದ್ರವಾಗಿ ಗಮನಾರ್ಹ ಪ್ರಾಮುಖ್ಯವನ್ನು ಹೊಂದಿದೆ. ಪ್ರಪಂಚದ ನಾನಾ ಮೂಲೆಗಳಿಂದ ಈ ದೇವಾಲಯಕ್ಕೆ ಜನರು ಆಗಮಿಸುತ್ತಾರೆ. ನಮ್ಮ ದೇಶದಲ್ಲಿ ತಿರುಮಲ ಶ್ರೀ ವೆಂಕಟೇಶ್ವರ ದೇವಸ್ಥಾನದ ನಂತರದ ಸ್ಥಾನವನ್ನು ಈ ದೇವಾಲಯವು ಪಡೆದಿದೆ. ಈ ದೇವಸ್ಥಾನದಲ್ಲಿ ಒಳ್ಳೆಯ ಮನಸ್ಸಿನಿಂದ ಪೂಜೆಯನ್ನು ಸಲ್ಲಿಸಿದಲ್ಲಿ ವಿಶೇಷವಾದ ಸಂಪತ್ತು, ಆರೋಗ್ಯ ಲಭಿಸುತ್ತದೆ. ಸಾರ್ವಜನಿಕರ ಒಟ್ಟಾರೆ ಸಮಾಜದ ಸಮೃದ್ಧಿಗಾಗಿ ನಡೆಸುವ ಆಚರಣೆಯಾದ ಸತ್ಯನಾರಾಯಣ ವ್ರತಕ್ಕಾಗಿ ಈ ದೇವಾಲಯವನ್ನು 1891 ರಲ್ಲಿ ಪವಿತ್ರಗೊಳಿಸಲಾಯಿತು. ಆನಂತರ ದ ಈ ದೇವಸ್ಥಾನವನ್ನು 1930 ರ ದಶಕದಲ್ಲಿ ಪುನರ್ನಿರ್ಮಾಣ ಮಾಡಲಾಗಿದೆ.
ಈ ದೇವಾಲಯವು ಅನ್ನಾವರಂನಿದ 18 ಕಿ.ಮೀ ದೂರದಲ್ಲಿದೆ. ಅನ್ನಾವರಂ ಗ್ರಾಮದ ಆಡಳಿತವು ಪ್ರಕಾಶ್ ರಾವ್ ಮತ್ತು ಮತ್ತೊಬ್ಬರ ಪಾಲಿನದಾಗಿದ್ದು. ಇವರು ಸ್ವಾಮಿನಿಷ್ಠೆಗೆ ಹೆಸರಾದವರಾಗಿದ್ದರು. ಜನಸಾಮಾನ್ಯರ ಕಷ್ಟ ನಷ್ಟಗಳಲ್ಲಿ ಸಹಾಯ ಮಾಡುತ್ತ ಜನಮನ ಗೆದ್ದಿದ್ದರು. ಇವರಲ್ಲಿ ದೇವರಲ್ಲಿ ಅದರಲ್ಲಿಯೂ ಭಗವಾನ್ ವಿಷ್ಣುವಿನಲ್ಲಿ ಸಂಪೂರ್ಣವಾದ ಭಕ್ತಿ ಮತ್ತು ನಂಬಿಕೆ ಇತ್ತು. ಆ ಊರಿನ ಸುತ್ತಮುತ್ತಲು ಎಲ್ಲೆ ಶ್ರಿ ವಿಷ್ಣುವಿನ ಪೂಜೆಯನ್ನು ಮಾಡಿದರೂ ಅದರಲ್ಲಿ ಇವರಿಬ್ಬರೂ ಭಾಗವಹಿಸಿ ಹಣದ ಸಹಾಯವನ್ನು ಮಾಡುತ್ತಿದ್ದರು. ಈ ನಡುವೆ ಇಬ್ಬರಿಗೂ ಏಕಕಾಲದಲ್ಲಿ ಕನಸಿನಲ್ಲಿ ಭಗವಾನ್ ವಿಷ್ಣುವು ಪ್ರತ್ಯಕ್ಷನಾಗುತ್ತಾನೆ. ಅವರಿಗೆ ಶ್ರಾವಣ ಮಾಸದ ಶುಕ್ಲ ಪಕ್ಷದ ಮಖ ನಕ್ಷತ್ರವಿರುವ ಗುರುವಾರದಂದು ರತ್ನಗಿರಿ ಬೆಟ್ಟದ ಮೇಲೆ ನನ್ನನ್ನು ಪ್ರತಿಷ್ಠಾಪಿಸಿ ನನ್ನ ಸೇವೆ ಮಾಡಬೇಕು ಎಂದು ತಿಳಿಸುತ್ತಾನೆ.
ಇಲ್ಲಿ ಪೂಜೆ ಸಲ್ಲಿಸಿದರೆ ಸಂತಾನ ಭಾಗ್ಯ ಸಿಗುತ್ತೆ ಎಂಬ ನಂಬಿಕೆ ಇದೆ
1891ರ ಆಗಸ್ಟ್ 6 ರಂದು ಕಾಶಿಯಿಂದ ತರಲಾದ ಶ್ರೀ ಮಾತೃಪಾದ ವಿಭೂತಿ ಮಹಾ ವೈಕುಂಠ ನಾರಾಯಣ ಯಂತ್ರದ ಸ್ಥಾಪನೆಯೊಂದಿಗೆ, ಸಾಂಪ್ರದಾಯಿಕ ವಿಷ್ಣು ಪಂಚಾಯತನ ಪದ್ಧತಿಯನ್ನು ಅನುಸರಿಸಿ ವಿಗ್ರಹವನ್ನು ಪುನಃ ಪ್ರತಿಷ್ಠಾಪಿಸಲಾಯಿತು. ಮೂಲ ಕಲ್ಲಿನಲ್ಲಿ ಪುನರ್ನಿರ್ಮಿಸಲಾಯಿತು. ಇಂದಿಗೂ ಈ ದೇವಾಲಯದಲ್ಲಿ ಶ್ರಾವಣ ಮಾಸದಲ್ಲಿ ವಿಶೇಷವಾದ ಪೂಜೆಯನ್ನು ಸಲ್ಲಿಸಲಾಗುತ್ತದೆ. ಪ್ರತಿ ತಿಂಗಳ ಹುಣ್ಣಿಮೆಯ ದಿನದಂದು ಈ ದೇವಾಲಯದಲ್ಲಿ ದಿನವಿಡೀ ವಿಶೇಷವಾದ ಪೂಜೆಯನ್ನು ಸಲ್ಲಿಸಲಾಗುತ್ತದೆ. ಈ ದೇವಾಲಯದಲ್ಲಿ ದಂಪತಿ ಪೂಜೆ ಸಲ್ಲಿಸಿದಲ್ಲಿ ಉತ್ತಮ ಸಂತಾನ ಲಭಿಸುತ್ತದೆ ಎಂಬ ನಂಬಿಕೆ ಇದೆ. ವಿದ್ಯಾರ್ಥಿಗಳ ಉತ್ತಮ ಸಾಧನೆಗೆ ಇಲ್ಲಿ ವಿಶೇಷವಾದ ಪೂಜೆಯನ್ನು ಸಲ್ಲಿಸಲಾಗುತ್ತದೆ. ಈ ದೇವಾಲಯದಲ್ಲಿ ಪೂಜೆ ಸಲ್ಲಿಸುವುದರಿಂದ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ.
ಬರಹ: ಹೆಚ್. ಸತೀಶ್, ಜ್ಯೋತಿಷಿ, ಬೆಂಗಳೂರು
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ಮಾಹಿತಿಯನ್ನು ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).