ಎಲ್ಲಿದ್ದಾನೆ? ಹೇಗಿದ್ದಾನೆ? ಏನು ಮಾಡುತ್ತಿದ್ದಾನೆ ದೇವರು; ಇಲ್ಲಿದ್ದಾನೆ, ಹೀಗಿದ್ದಾನೆ ದೇವರು - ಅನುದಿನ ಅಧ್ಯಾತ್ಮ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಎಲ್ಲಿದ್ದಾನೆ? ಹೇಗಿದ್ದಾನೆ? ಏನು ಮಾಡುತ್ತಿದ್ದಾನೆ ದೇವರು; ಇಲ್ಲಿದ್ದಾನೆ, ಹೀಗಿದ್ದಾನೆ ದೇವರು - ಅನುದಿನ ಅಧ್ಯಾತ್ಮ

ಎಲ್ಲಿದ್ದಾನೆ? ಹೇಗಿದ್ದಾನೆ? ಏನು ಮಾಡುತ್ತಿದ್ದಾನೆ ದೇವರು; ಇಲ್ಲಿದ್ದಾನೆ, ಹೀಗಿದ್ದಾನೆ ದೇವರು - ಅನುದಿನ ಅಧ್ಯಾತ್ಮ

ದೇವರ ರೂಪವನ್ನು ಋಷಿಗಳು ಪದಗಳಲ್ಲಿ ಹಿಡಿದಿಡಲು ಪ್ರಯತ್ನಿಸಿದ್ದಾರೆ. ರುದ್ರಪ್ರಶ್ನ ಪಾರಾಯಣಕ್ಕೆ ಮೊದಲು ಹೇಳುವ ಧ್ಯಾನಶ್ಲೋಕದಲ್ಲಿ ಕಂಡು ಬರುವ ಶಿವರೂಪದ ಚಿಂತನೆ ಇಲ್ಲಿದೆ.

ಅನುದಿನ ಅಧ್ಯಾತ್ಮ
ಅನುದಿನ ಅಧ್ಯಾತ್ಮ

"ಆ ದೇವರು ಅನ್ನೋನು ನಿಜಕ್ಕೂ ಇದ್ದಾನಾ? ಇದ್ರೆ ನನಗೇಕೆ ಇಷ್ಟೊಂದು ಕಷ್ಟ ಕೊಟ್ಟು ಉಳಿದವರನ್ನೆಲ್ಲಾ ಸುಖವಾಗಿಟ್ಟಿದ್ದಾನೆ. ಅವನೇನಾದರೂ ಕೈಗೆ ಸಿಗಲಿ, ಸರಿಯಾಗಿ ಮಾಡ್ತೀನಿ" - ಹೀಗೆ ದೇವರನ್ನು ಪ್ರಶ್ನಿಸುವುದು ಮತ್ತು ಬೈಯ್ಯುವ ಹಲವರನ್ನು ನಮ್ಮ ಸುತ್ತ ಕಾಣಬಹುದು. ಒಂದು ವಿಶೇಷ ಅಂದ್ರೆ, ದೇವರನ್ನು ಬೈಯ್ಯುವುದು ಕೂಡಾ ಒಂದು ಸ್ತುತಿಯೇ ಆಗುತ್ತದೆ. ಅದನ್ನೇ ದಾಸರು "ನಿಂದಾಸ್ತುತಿ" ಎಂದಿದ್ದು. ದೇವರು ಇಲ್ಲ ಎಂದಾಗಲೀ, ಇದ್ದಾನೆ ಎಂದಾಗಲಿ ಸಾಧಿಸುವವರಿಗೆ ಒಂದು ಬದ್ಧತೆ ಇರಬೇಕು. ಆದರೆ ನಮ್ಮ ಸುತ್ತಲಿನ ಬಹಳಷ್ಟು ಜನರಿಗೆ ದೇವರು ಇದ್ದಾನೆ ಎನ್ನುವ ಭರವಸೆಯೂ ಇರುವುದಿಲ್ಲ, ಇಲ್ಲ ಎನ್ನುವ ಧೈರ್ಯವೂ ಇರುವುದಿಲ್ಲ. 'ಹಂಗೂ ಸೈ, ಹಿಂಗೂ ಸೈ' ಎನ್ನುವ ದ್ವಂದ್ವದಲ್ಲಿಯೇ ದಿನ ದೂಡುತ್ತಿರುತ್ತಾರೆ.

ಇಂಥವರು ತಾವು ಅಂದುಕೊಂಡಿದ್ದು ಕೈಗೂಡಿದಾಗ ಅದು "ನನ್ನ ಸಾಮರ್ಥ್ಯ, ನನ್ನ ಪ್ರಯತ್ನಕ್ಕೆ ಸಿಕ್ಕ ಫಲ, ನನ್ನ ಅದೃಷ್ಟ" ಎಂದೆಲ್ಲಾ ಬೀಗುತ್ತಾರೆ. ಒಂದು ವೇಳೆ ಅಂದುಕೊಂಡಿದ್ದು ಆಗದೆ ಭ್ರಮನಿರಸನವಾದರೆ, "ದೇವರಿಗೆ ಎಷ್ಟೆಲ್ಲಾ ಪೂಜೆ ಮಾಡಿದೆ, ಏನೂ ಆಗಲೇ ಇಲ್ಲವಲ್ಲ" ಎಂದು ಬೈದಾಟ ಆರಂಭಿಸುತ್ತಾರೆ. ಪಾಪದ ದೇವರಿಗೆ ಇವರ ಕೋರಿಕೆಗಳನ್ನು ಈಡೇರಿಸುವುದು ಬಿಟ್ಟರೆ ಬೇರೆ ಕೆಲಸವೇ ಇರಬಾರದು ಎನ್ನುವ ನಿರೀಕ್ಷೆ ಇವರದ್ದು.

ಇವತ್ತು ನಾವು ಚಿಂತನೆ ಮಾಡಬೇಕಿರುವ ವಿಷಯ ದೇವರೆಂದು ಪರಿಕಲ್ಪನೆಯೇ ಆದ ಕಾರಣ ಮನುಷ್ಯ ಸ್ವಭಾವದ ಎರಡು ಉದಾಹರಣೆಗಳನ್ನು ಪ್ರಸ್ತಾಪಿಸಿದೆ. "ದೇವರನ್ನು ನೋಡಿದವರು ಯಾರಾದರೂ ಇದ್ದಾರೆಯೇ? ಯಾರೂ ಇಲ್ಲ, ಹೀಗಿದ್ದಾನೆ ದೇವರು ಎಂದು ಸಾಧಿಸಿದರೆ ಒಪ್ಪುತ್ತೇನೆ" ಎಂದು ಕೆಲವರು ಹೇಳುತ್ತಿರುತ್ತಾರೆ. ಇಂಥ ಪ್ರಶ್ನೆಗಳಿಗೆ ಸಾವಿರಾರು ವರ್ಷಗಳ ಹಿಂದೆಯೇ ದ್ರಷ್ಟಾರ ಋಷಿಗಳು ಧ್ಯಾನಶ್ಲೋಕಗಳ ರೂಪದಲ್ಲಿ ಉತ್ತರಿಸಿದ್ದಾರೆ. "ಇದಮಿತ್ಥಂ" ಎನ್ನುವಂತೆ, "ಇಲ್ಲಿದ್ದಾನೆ ದೇವರು, ಹೀಗಿದ್ದಾನೆ ದೇವರು" ಎಂದು ತಾವು ಕಂಡ ದೇವರ ರೂಪವನ್ನು ಪದಗಳಲ್ಲಿ ಹಿಡಿದಿಡಲು ಪ್ರಯತ್ನಿಸಿದ್ದಾರೆ.

ರುದ್ರಪ್ರಶ್ನದ ಧ್ಯಾನ ಶ್ಲೋಕವು ಸಹ ದೇವರ ರೂಪವನ್ನು ಅದ್ಭುತವಾಗಿ ವರ್ಣಿಸುತ್ತದೆ. ಈ ಶ್ಲೋಕ ಹೀಗಿದೆ...

"ಬ್ರಹ್ಮಾಂಡವ್ಯಾಪ್ತದೇಹಾ ಭಸಿತಹಿಮರುಚಾ ಭಾಸಮಾನಾ ಭುಜಂಗೈಃ |
ಕಂಠೇ ಕಾಲಾಃ ಕಪರ್ದಾಃ ಕಲಿತ ಶಶಿಕಲಾಶ್ಚಂಡಕೋದಂಡಹಸ್ತಾಃ ||
ತ್ರ್ಯಕ್ಷಾರುದ್ರಾಕ್ಷಭೂಷಾಃ ಪ್ರಣತಭಯಹರಾಃ ಶಾಂಭವಾ ಮೂರ್ತಿಭೇದಾತ್ |
ರುದ್ರಾಶ್ರೀರುದ್ರಸೂಕ್ತಪ್ರಕಟಿತವಿಭವಾ ನಃ ಪ್ರಯಚ್ಛನ್ತು ಸೌಖ್ಯಮ್ ||"

ವಿದ್ವಾಂಸರಾದ ಶ್ರೀಯುತ ಲಕ್ಷ್ಮೀನರಸಿಂಹಶಾಸ್ತ್ರಿಗಳು ಈ ಶ್ಲೋಕದ ಭಾವವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. "ಮಹಿಮೆಯುಳ್ಳ ರುದ್ರರು ಬ್ರಹ್ಮಾಂಡವನ್ನೆಲ್ಲಾ ವ್ಯಾಪಿಸಿಕೊಂಡಿದ್ದಾರೆ. ಪಂಚಭೂತಗಳೂ ನಕ್ಷತ್ರಾದಿಗಳೂ ಹದಿನಾಲ್ಕುಲೋಕಗಳು ಎಲ್ಲವೂ ರುದ್ರರ ವಾಸಸ್ಥಾನಗಳೇ ಆಗಿವೆ. ರುದ್ರರು ಹಿಮದಂತೆ ಬಿಳುಪಾದ ವಿಭೂತಿಯಿಂದಲೂ ಹಾವುಗಳಿಂದಲೂ ಅಲಂಕೃತರಾಗಿದ್ದಾರೆ. ಕಂಠದಲ್ಲಿ ಕಪ್ಪುಳ್ಳವರು, ಜಟಾಜೂಟವನ್ನು ಧರಿಸಿದವರು, ತಲೆಯಲ್ಲಿ ಚಂದ್ರಕಲೆಯನ್ನುಳ್ಳವರು, ತೀಕ್ಷ್ಣವಾದ ಬಿಲ್ಲುಗಳನ್ನು ಹಿಡಿದ ಕೈಗಳುಳ್ಳವರು, ಮೂರುಕಣ್ಣುಗಳನ್ನು ಹೊಂದಿದ್ದಾರೆ. ನಮಸ್ಕಾರ ಮಾಡಿದವರನ್ನು ಭಯದಿಂದ ಪಾರು ಮಾಡುತ್ತಾರೆ. ಶರೀರಗಳಿಂದ ಭಿನ್ನರಾಗಿ ಕಂಡರೂ ಎಲ್ಲರೂ ಶಂಭುಸ್ವರೂಪರೇ ಆಗಿದ್ದಾರೆ. ಇಂಥವರು ನಮಗೆ ಸೌಖ್ಯವನ್ನುಂಟು ಮಾಡಲಿ" ಎನ್ನುವುದು ಈ ಧ್ಯಾನ ಶ್ಲೋಕದ ಪ್ರಾರ್ಥನೆಯಾಗಿದೆ.

ಮೇಲ್ನೋಟಕ್ಕೇ ಗೊತ್ತಾಗುವಂತೆ ಈ ಶ್ಲೋಕವು ಪರಮಾತ್ಮನನ್ನು ರುದ್ರ ರೂಪದಲ್ಲಿ ಅದರಲ್ಲೂ ಬಹುವಚನದಲ್ಲಿ ವರ್ಣಿಸಿದೆ. ಈಶ್ವರನಿಗೆ ಜನಪ್ರಿಯವಾಗಿರುವ ತ್ರಿಶೂಲದ ಬದಲು ಬಿಲ್ಲು-ಬಾಣಗಳನ್ನು ಹಿಡಿದವರನ್ನು ಚಿತ್ರಿಸಿರುವುದು ವಿಶೇಷ. ಮುಂದಿನ ದಿನಗಳಲ್ಲಿ ನಾವು ಪರಿಶೀಲಿಸಲಿರುವ ರುದ್ರಪ್ರಶ್ನದ ಇತರ ಮಂತ್ರಗಳಿಗೆ ಇದು ಪೀಠಿಕೆಯೂ ಹೌದು. "ಹತ್ತಿರದ ಕಷ್ಟಗಳನ್ನಷ್ಟೇ ಅಲ್ಲ, ದೂರದಲ್ಲಿರುವ (ಮುಂದಿನ ಜನ್ಮಗಳು ಆದರೂ ಆದೀತು) ಸಂಕಷ್ಟಗಳನ್ನೂ ನಿವಾರಿಸಬಲ್ಲವನು ಪರಶಿವ" ಎನ್ನುವ ವರ್ಣನೆಯೂ ಮುಂದೆ ಬರುತ್ತದೆ. ಅದಕ್ಕೇ ಈ ಧ್ಯಾನ ಶ್ಲೋಕದಲ್ಲಿ ಬಹುದೂರದ ಶತ್ರುವನ್ನು ನಾಶಪಡಿಸುವ ಸಾಮರ್ಥ್ಯವಿರುವ ಬಿಲ್ಲು-ಬಾಣಗಳನ್ನು ಹಿಡಿದೇ ದೇವರು ಋಷಿಗಳಿಗೆ ದರ್ಶನ ಕೊಟ್ಟಿದ್ದಾನೆ.

ದೇವರ ಪೂಜೆ ಎನ್ನುವ ಪರಿಕಲ್ಪನೆಯಲ್ಲಿರುವ ವಿಶಾಲ ಅರ್ಥಗಳಿಗೂ ಈ ಶ್ಲೋಕವು ಮುನ್ನುಡಿಯಾಗಿದೆ. ದೇಗುಲದಲ್ಲಷ್ಟೇ ದೇವರಿಲ್ಲ, ಅವನು ಎಲ್ಲೆಲ್ಲಿಯೂ ವ್ಯಾಪಿಸಿದ್ದಾನೆ, ಎಲ್ಲರಲ್ಲಿಯೂ ಇದ್ದಾನೆ. ಅವನು ಒಬ್ಬನೂ ಹೌದು, ಅನೇಕನೂ ಹೌದು. ಎಲ್ಲೆಲ್ಲಿಯೂ ವ್ಯಾಪಿಸಿರುವ ಅವನು ನಮ್ಮ ಕೆಲಸಗಳನ್ನು ಸದಾ ನೋಡುತ್ತಿದ್ದಾನೆ. ಅವನು ಹೇಳಿದಂತೆ ಸತ್ಯ, ನ್ಯಾಯ, ಧರ್ಮದ ಅನುಸಾರ ನಡೆದುಕೊಂಡರೆ ನಮ್ಮನ್ನು ಸದಾ ಕಾಪಾಡುತ್ತಾನೆ ಎನ್ನುವ ಭರವಸೆಯೂ ಈ ಶ್ಲೋಕದಲ್ಲಿದೆ.

(ಶ್ಲೋಕ ಮತ್ತು ಅನುವಾದವು ಹೊಳೆನರಸಿಪುರ ಅಧ್ಯಾತ್ಮ ಪ್ರಕಾಶ ಕಾರ್ಯಾಲಯ ಪ್ರಕಟಿಸಿರುವ “ರುದ್ರಭಾಷ್ಯಪ್ರಕಾಶ” ಪುಸ್ತಕವನ್ನು ಆಧರಿಸಿದೆ)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.